ಕನ್ನಡ, ಇರಲಿ ತಂತ್ರಜ್ಞಾನದ ಸಂಗಡ

7

ಕನ್ನಡ, ಇರಲಿ ತಂತ್ರಜ್ಞಾನದ ಸಂಗಡ

Published:
Updated:
Deccan Herald

‘ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಎನ್ನುವುದನ್ನು ಪ್ರತಿ ಬಾರಿ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನೆನೆಯುತ್ತೇವೆ. ಆದರೆ ತಂತ್ರಜ್ಞಾನ ಜಗತ್ತಿಗೆ ಬಂದಾಗ ಕನ್ನಡ ಇಂದಿಗೂ ಅನಾಮಿಕನಷ್ಟು ದೂರ ಉಳಿದಿರುವುದು ಸತ್ಯ. ಕೆಲವು ಪ್ರಚಲಿತ ತಂತ್ರಾಂಶಗಳನ್ನು ಕನ್ನಡಕ್ಕೆ ತರುವ ಪ್ರಯತ್ನಗಳೂ ನಡೆದಿವೆ. ಅಂಥವುಗಳಲ್ಲಿ ತುಸು ಯಶಸ್ಸು ಕಂಡ ತಂತ್ರಜ್ಞಾನಗಳಲ್ಲಿ ‘ಧ್ವನಿ ಗುರುತಿಸುವಿಕೆ’ ಸಹ ಒಂದು.

ಟೈಪ್ ಮಾಡುವ ಕೀಬೋರ್ಡ್‌ನಿಂದ ಹಿಡಿದು ಫೇಸ್ಬುಕ್-ವಾಟ್ಸ್ಯಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ರಾರಾಜಿಸುತ್ತಿರುವ ಈ ಹೊತ್ತಿನಲ್ಲಿ ‘ಧ್ವನಿ ಗುರುತಿಸುವಿಕೆ’ ಕನ್ನಡಿಗರಿಗೊಂದು ವರದಾನವೆಂದೇ ಹೇಳಬಹುದು. ಇದರ ಸಹಾಯದಿಂದ ನಿತ್ಯದ ಅನೇಕ ಡಿಜಿಟಲ್ ಕೆಲಸಗಳನ್ನು ಸುಲಭವಾಗಿಸಿಕೊಳ್ಳಬಹುದು. ಮೆಸೇಜ್ ಕಳುಹಿಸಲು, ನೋಟ್ಸ್ ಟೈಪ್ ಮಾಡಲು, ಡಿಕ್ಟೇಷನ್ ತೆಗೆದುಕೊಳ್ಳಲು ಇದು ಸಹಾಯಕ.

ತಂತ್ರಜ್ಞಾನ ದಿನದಿಂದ ದಿನಕ್ಕೆ ಸ್ಥಳೀಯ ಭಾಷೆಗಳಿಗೆ ಹತ್ತಿರವಾಗುತ್ತಿದೆ. ಧ್ವನಿ ಗುರುತಿಸುವಿಕೆಯಂತಹ ವಿಶಿಷ್ಟ ತಂತ್ರಜ್ಞಾನಗಳು ಕನ್ನಡವೂ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ಸಿಗುತ್ತಿವೆ. ಕೆಲವು ಇತಿಮಿತಿಗಳ ನಡುವೆಯೂ ಇವು ಅನೇಕ ರೀತಿಯಲ್ಲಿ ನಮ್ಮ ಬರವಣಿಗೆಯನ್ನು ಸುಲಭವಾಗಿಸುತ್ತಿರುವುದೂ ನಿಜ. ಇದು ಜಾಗತಿಕ ಭಾಷೆಯಾದ ಇಂಗ್ಲಿಷ್‍ನಲ್ಲಿ ಹುಟ್ಟಿ ಕನ್ನಡದಲ್ಲಿ ತನ್ನ ಅಸ್ತಿತ್ವ ಪಡೆಯುತ್ತಿದೆ.

ಧ್ವನಿ ಗುರುತಿಸುವಿಕೆ (voice recognition or speech recognition) ಹೊಸ ಬೆಳವಣಿಗೆ ಅಲ್ಲ. ನಾವು ಬಾಯಿಯಿಂದ ಹೇಳಿದ್ದನ್ನು ಕಂಪ್ಯೂಟರ್ ತಾನೇ ಟೈಪಿಸುವ ಈ ವಿನೂತನ ಸೇವೆ ಆರಂಭವಾಗಿ ಸುಮಾರು ಏಳು ದಶಕಗಳೇ ಆಗಿವೆ. ಮೊದಲು ಇಂಗ್ಲಿಷ್‍ನಲ್ಲಿ ಧ್ವನಿ ಗುರುತಿಸಿ ಟೈಪಿಸುವ ಕುಸುರಿ ಕೆಲಸ ಆರಂಭವಾದದ್ದು 1950ರ ಆಸುಪಾಸಿನಲ್ಲಿ. ಆಗ ‘ಬೆಬಿ ಟಾಕ್’, ‘ಆಡ್ರಿ’ ಎನ್ನುವ ಸಾಧನಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಆರಂಭದಲ್ಲಿ ಇಂಗ್ಲಿಷ್‍ನಲ್ಲಿ 16 ಅಕ್ಷರಗಳನ್ನು ಮತ್ತು ಕೆಲವು ಸಂಖ್ಯೆಗಳನ್ನು ಮಾತ್ರ ಈ ತಂತ್ರಜ್ಞಾನ ಅರ್ಥೈಸಿಕೊಳ್ಳುತ್ತಿತ್ತು. 1970ರಲ್ಲಿ ಅಮೆರಿಕದ ರಕ್ಷಣಾ ಇಲಾಖೆ ಧ್ವನಿ ಗುರುತಿಸುವಿಕೆಯಲ್ಲಿ ಬಹುದೊಡ್ಡ ಕಾಣಿಕೆ ನೀಡಿತು. ಸ್ಪೀಚ್ ಅಂಡರ್‌ಸ್ಟ್ಯಾಂಡಿಂಗ್‌ ರಿಸರ್ಚ್ (Speech Understanding Research) ಕಾರ್ಯಕ್ರಮದ ಮೂಲಕ ಸುಮಾರು 1011 ಪದಗಳನ್ನು ಗುರುತಿಸುವ ಹಂತವನ್ನು ತಲುಪಿತು. 1990ರಲ್ಲಿ ಡ್ರ್ಯಾಗನ್ ಎನ್ನುವ ಕಂಪನಿ ಜಗತ್ತಿನಲ್ಲಿಯೇ ಮೊಟ್ಟಮೊದಲಬಾರಿಗೆ ‘ಡ್ರ್ಯಾಗನ್ ಡಿಟೆಕ್ಟ್’ ಎಂಬ ತಂತ್ರಾಂಶವನ್ನು ಪರಿಚಯಿಸಿತು. ಒಂದು ನಿಮಿಷಕ್ಕೆ 100 ಪದಗಳನ್ನು ಇಲ್ಲಿ ಉಚ್ಛರಿಸಬಹುದಾಗಿತ್ತು.

ಅಂತರ್ಜಾಲ ಜಗತ್ತಿನಲ್ಲಿ ಗೂಗಲ್ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುತ್ತಿರುವ ಸಮಯದಲ್ಲಿ, ಅಂದರೆ 2001ರಲ್ಲಿ ಮೊಟ್ಟಮೊದಲಬಾರಿಗೆ ‘ಧ್ವನಿ ಆಧಾರಿತ ಹುಡುಕಾಟವನ್ನು’ ಆರಂಭಿಸಿತು. 2010ರಲ್ಲಿ ಗೂಗಲ್ ಸುಧಾರಿತ ಧ್ವನಿ ಮಾದರಿಗಳನ್ನು ಆಂಡ್ರಾಯ್ಡ್ ಗೆ ವಿಸ್ತರಿಸಿತು. ಸದ್ಯ ಗೂಗಲ್ ಹತ್ತಿರ ವಿವಿಧ ಭಾಷೆಯ ಸುಮಾರು 23000 ಕೋಟಿಗೂ ಮಿಗಿಲಾದ ಪದ ಭಂಡಾರವಿದೆ.

ಇಂಗ್ಲಿಷ್ ಜಾಗತಿಕ ಭಾಷೆಯಾಗಿರುವುದರಿಂದ ಜಗತ್ತಿನ ಮೂಲೆ ಮೂಲೆಗಳಲ್ಲಿ ಆಗುತ್ತಿರುವ ಅವಿಷ್ಕಾರಗಳಿಗೆ ಇದೇ ಮೂಲ ಭಾಷಾ ಸರಕು ಎಂದು ಹೇಳಬಹುದು. ಧ್ವನಿ ಗುರುತಿಸುವಿಕೆಯಲ್ಲೂ ಅದೇ ಆದದ್ದು. ಇದು ಇಂಗ್ಲಿಷ್‍ನಲ್ಲಿ ಗಟ್ಟಿಯಾದ ನೆಲೆ ಕಂಡುಕೊಂಡ ನಂತರವೇ ನಿಧಾನವಾಗಿ ಇತರ ಭಾಷೆಗಳತ್ತ ಒಲವು ತಾಳಿದ್ದು. ಕಳೆದ ಒಂದು ದಶಕದಲ್ಲಿ ಮೊಬೈಲ್ ಮತ್ತು ಕಂಪ್ಯೂಟರ್‌ನಲ್ಲಿ ಕನ್ನಡ ಧ್ವನಿ ಆಧಾರಿತ ಬಳಕೆ ಪೂರ್ಣಪ್ರಮಾಣದಲ್ಲಿ ಆರಂಭವಾಗಿದೆ. ಕನ್ನಡವನ್ನು ಅರ್ಥ ಮಾಡಿಕೊಂಡು ಅದನ್ನು ಪದಗಳಿಗೆ ಪರಿವರ್ತಿಸುವ ಅಂತಹ ತಂತ್ರಾಂಶಗಳು ಈಗ ನಮ್ಮ ಮುಂದಿವೆ.

ಡಿಕ್ಟೇಶನ್ ಡಾಟ್ ಐಒ

ಮೈಕ್ರೋಫೋನ್ ಬಳಸಿಕೊಂಡು ನಿರರ್ಗಳವಾಗಿ ಮಾತನಾಡುತ್ತಾ ಹೋದಂತೆಲ್ಲ ಸರಾಗವಾಗಿ ಟೈಪ್ ಆಗುತ್ತದೆ. ನಿತ್ಯದ ಬರವಣಿಗೆಯ ಆಯಾಸವನ್ನು ಇದು ತಪ್ಪಿಸಬಲ್ಲದು. https://dictation.io/speech ಎನ್ನುವ ಈ ತಂತ್ರಾಂಶವನ್ನು ಭಾರತೀಯ ಮೂಲದ ಅಮಿತ್ ಅಗರವಾಲ್ ಎಂಬುವವರು ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಯಾವುದೇ ಬ್ರೌಸರ್‌ನಲ್ಲಿ ಓಪನ್ ಮಾಡಿಕೊಂಡು ಕೆಲಸ ಆರಂಭಿಸಬಹುದು. ರೂಲ್ಡ್ ಹಾಳೆಯಂತಿರುವ ಸ್ಥಳದಲ್ಲಿ ನಾವು ಮಾತನಾಡಿದ್ದು ತಕ್ಷಣದಲ್ಲಿ ಟೈಪ್ ಆಗುತ್ತಾ ಹೋಗುತ್ತದೆ. ಕೆಲಸ ಆರಂಭ ಮಾಡುವ ಮುನ್ನ ಭಾಷೆಯನ್ನು ಕನ್ನಡಕ್ಕೆ ಹೊಂದಿಸಿಕೊಳ್ಳಬೇಕು ಮತ್ತು ಅಲ್ಲಿಯೇ ಇರುವ ಮೈಕ್ರೋಫೋನ್ ಚಿಹ್ನೆಯನ್ನು ಕ್ಲಿಕ್ ಮಾಡಿ ಬ್ರೌಸರ್‌ನಲ್ಲಿ ಎನೆಬಲ್ ಮಾಡಿಕೊಳ್ಳಬೇಕು. ಟೈಪ್ ಮಾಡಿದ್ದನ್ನು ಅಲೈನ್ ಮಾಡುವ ಸೌಲಭ್ಯವೂ ಇಲ್ಲಿ ಲಭ್ಯವಿದೆ. ಧ್ವನಿಯಿಂದ ಅಕ್ಷರಗಳಿಗೆ ಬಂದ ಪಠ್ಯವನ್ನು ಇಲ್ಲಿಯೇ ಬೋಲ್ಡ್, ಇಟಾಲಿಕ್, ಅಂಡರ್‌ಲೈನ್ ಮಾಡಬಹುದು. ಬುಲೆಟ್ ಪಾಯಿಂಟ್ ಕೂಡ ಹಾಕಬಹುದು.

ಲಿಪಿಕಾರ್

ಇದು ಆಂಡ್ರಾಯ್ಡ್ ವೇದಿಕೆಯಲ್ಲಿ ಲಭ್ಯವಿದೆ. ಕನ್ನಡ ಸೇರಿದಂತೆ 14 ಭಾಷೆಗಳಲ್ಲಿ ಇದು ದೊರೆಯುತ್ತದೆ. ಆಂಡ್ರಾಯ್ಡ್ ಬಳಸುವವರು ಲಿಪಿಕಾರ್ ಕೀಬೋರ್ಡ್ ಪ್ಲೇ ಸ್ಟೋರ್ ಮೂಲಕ ಇನ್‍ಸ್ಟಾಲ್ ಮಾಡಿಕೊಂಡರೆ ಧ್ವನಿ ಆಧರಿಸಿ ಮೊಬೈಲ್‍ನ ಯಾವುದೇ ಅಪ್ಲೀಕೆಷನ್‍ನಲ್ಲಿ ಕನ್ನಡ ಮಾತನಾಡಿದರೆ ಸರಳವಾಗಿ ಟೈಪ್ ಮಾಡುತ್ತಾ ಹೋಗುತ್ತದೆ. ಕಂಪ್ಯೂಟರ್‌ನಲ್ಲಿ ಈ ತಂತ್ರಾಂಶವನ್ನು ಬಳಸಿಕೊಳ್ಳಬೇಕೆಂದರೆ ಮಾತ್ರ ಹಣ ಸಂದಾಯ ಮಾಡಬೇಕಾಗುತ್ತದೆ.

ಗೂಗಲ್ ವಾಯ್ಸ್‌

ಇತರೆ ತಂತ್ರಾಂಶಗಳಿಗೆ ಹೋಲಿಸಿದರೆ ಗೂಗಲ್ ವಾಯ್ಸ್‌ ಹೆಚ್ಚು ಕ್ಷಮತೆಯನ್ನು ಹೊಂದಿದೆ. ಇದರಲ್ಲಿರುವ ಪದ ಭಂಡಾರ ಅಗಾಧವಾದುದು. ಗೂಗಲ್ ವಾಯ್ಸ್‌ ಓಪನ್ ಮಾಡಿ ಭಾಷೆಯನ್ನು ಕನ್ನಡಕ್ಕೆ ಮಾತ್ರ ಹೊಂದಿಸಬೇಕು. ಅವಶ್ಯವಿದ್ದಲ್ಲಿ ಆಂಡ್ರಾಯ್ಡ್ ಅವಶ್ಯವಿದ್ದ ಭಾಷಾ ಪ್ಯಾಕ್ ಡೌನ್‌ಲೋಡ್‌ ಮಾಡುತ್ತದೆ. ಇಲ್ಲಿ ಅಸಂಬದ್ಧ ಪದಗಳನ್ನು ಬ್ಲಾಕ್ ಮಾಡುವ ಅವಕಾಶವನ್ನು ಸಹ ಕಲ್ಪಿಸಲಾಗಿದೆ. ಒಂದು ಬಾರಿ ಮುಖ್ಯವಾದ ಸೆಟ್ಟಿಂಗ್‍ಗಳು ಮುಗಿದ ನಂತರ ಯಾವ ಆ್ಯಪ್‍ನಲ್ಲಿ ಬೇಕಾದರೂ ಬಳಸಬಹುದು. ಗೂಗಲ್ ಅತ್ಯಂತ ಕ್ಷಮತೆಯಿಂದ ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತ, ಅಷ್ಟೇ ವೇಗದಲ್ಲಿ ಟೈಪ್ ಮಾಡುತ್ತ ಹೋಗುತ್ತದೆ.

ಸ್ಪೀಚ್ ಟೈಪಿಂಗ್

ಇದು ಬಳಕೆಗೆ ಉಚಿತವಾಗಿದ್ದು, (https://speechtyping.com) ಸರಳವಾಗಿ ಮತ್ತು ಸುಲಲಿತವಾಗಿ ನಮ್ಮ ಧ್ವನಿಯನ್ನು ಅಕ್ಷರಕ್ಕೆ ರೂಪಾಂತರಿಸುತ್ತದೆ. ಇಲ್ಲಿಯೂ ಭಾಷೆ ಮತ್ತು ಬ್ರೌಸರ್‌ನಲ್ಲಿ ಮೈಕ್ರೋಫೋನ್ ಆನ್ ಮಾಡಬೇಕು. ಇದಲ್ಲದೇ ಇನ್ನೂ ಕೆಲವು ತಂತ್ರಾಂಶಗಳು ಆಫ್‍ಲೈನ್‌ನಲ್ಲಿ ಲಭ್ಯವಿದ್ದು, ಹಣ ಸಂದಾಯ ಮಾಡಿದರೆ ಮಾತ್ರ ಸೇವೆಯನ್ನು ಒದಗಿಸುತ್ತವೆ.

ಇವಿಷ್ಟು ಹೆಚ್ಚು ಪ್ರಚಲಿತದಲ್ಲಿರುವ ಕೆಲವು ಆಯ್ಕೆಗಳಷ್ಟೆ. ಇನ್ನೂ ಅನೇಕ ತಂತ್ರಾಂಶಗಳು ಲಭ್ಯ ಇವೆ. ಅವುಗಳಲ್ಲಿ ಕೆಲವು ದುಬಾರಿಯೂ ಹೌದು. ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಜನಪ್ರಿಯತೆ ಗಳಿಸುತ್ತಿರುವ ‘ಅಮೆಜಾನ್ ಅಲೆಕ್ಸಾ’ ‘ಇಕೋ ಡಾಟ್’ ‘ಗೂಗಲ್ ಹೋಮ್’ ಮತ್ತು ‘ವರ್ಚುವಲ್ ವೈಸ್ ಅಸಿಸ್ಟಂಟ್‌’ಗಳಲ್ಲಿ ಇನ್ನೂ ಕನ್ನಡದ ಬಳಕೆ ಆಗಿಲ್ಲ. ಕನ್ನಡದಲ್ಲಿ ಒಸಿಆರ್ (optical character recognition)ನಲ್ಲಿಯೂ ಯಾವುದೇ ಬೆಳವಣಿಗೆಗಳು ಆಗಿಲ್ಲ ಈ ನಿಟ್ಟಿನಲ್ಲಿ ಕನ್ನಡವನ್ನು ತಂತ್ರಜ್ಞಾನಕ್ಕೆ ಜೋಡಿಸುವ ಕೆಲಸ ಇನ್ನೂ ಚುರುಕಾಗಬೇಕಿದೆ.‌

ಬಳಕೆಯ ಇತಿ-ಮಿತಿಗಳು

• ಅಂತರ್ಜಾಲ ಮತ್ತು ಆಂಡ್ರಾಯ್ಡ್‌ನಲ್ಲಿ ಲಭ್ಯವಿರುವ ತಂತ್ರಾಂಶಗಳು ಇಂಟರ್‌ನೆಟ್ ಸಂಪರ್ಕವಿದ್ದಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತವೆ.

• ಆಫ್‍ಲೈನ್ ತಂತ್ರಾಂಶಗಳು ತುಸು ದುಬಾರಿ

• ಗೌಜು ಗದ್ದಲದಲ್ಲಿ ಈ ತಂತ್ರಾಂಶಗಳನ್ನು ಬಳಸುವುದು ಕಷ್ಟ

• ಏರುಪೇರುಗಳಾದರೆ ತಪ್ಪಾಗಿ ಟೈಪ್ ಆಗುತ್ತದೆ

• ಉಚ್ಛಾರಣೆ ಸ್ಪಷ್ಟವಾಗಿರಬೇಕು

• ವಿರಾಮ ಚಿಹ್ನೆಗಳನ್ನು ಬಳಕೆ ಉಚ್ಛಾರದಲ್ಲಿ ಬರುವುದಿಲ್ಲ

ಧ್ವನಿ ಗುರುತಿಸುವಿಕೆ ಅನುಕೂಲಗಳು

• ಟೈಪ್ ಮಾಡುವ ಆಯಾಸವನ್ನು ಕಡಿಮೆ ಮಾಡುತ್ತದೆ

• ಸಮಯ ಉಳಿಯುತ್ತದೆ

• ಯಾವ ಆ್ಯಪ್‍ಗೆ ಬೇಕಾದರೂ ಹೊಂದಿಸಿಕೊಳ್ಳಬಹುದು.

• ಮೊಬೈಲ್ ಬಳಕೆದಾರರಿಗೆ ಸಹಾಯವಾಗುತ್ತದೆ

• ಕನ್ನಡ ಟೈಪ್ ಮಾಡಲು ಬರದಿರುವವರಿಗೆ ಅತ್ಯಂತ ಉಪಯುಕ್ತ

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !