ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ.ವಿ.,ರೆಫ್ರಿಜರೇಟರ್ ಖರೀದಿಗೂ ಮುನ್ನ ಓದಿ; ಇದು ವಿದ್ಯುತ್ ಉಳಿತಾಯದ ಸ್ಟಾರ್!

ಬಿಇಇ ಸ್ಟಾರ್‌ ರೇಟಿಂಗ್‌
Last Updated 6 ನವೆಂಬರ್ 2019, 5:20 IST
ಅಕ್ಷರ ಗಾತ್ರ

'ಅತಿ ಕಡಿಮೆ ವಿದ್ಯುತ್‌ ಬಳಸಿ, ಅತಿ ಹೆಚ್ಚು ಕಾರ್ಯನಿರ್ವಹಿಸುತ್ತದೆ...ಇದು ನಮ್ಮ ಬ್ರಾಂಡ್‌ನಲ್ಲಿ ಮಾತ್ರ' ಎಂದು ಬಹುತೇಕ ಎಲ್ಲ ಗೃಹೋಪಯೋಗಿ ವಸ್ತುಗಳನ್ನು ತಯಾರಿಸುವ ಕಂಪನಿಗಳು ಜಾಹೀರಾತು ನೀಡುವುದು ಸಾಮಾನ್ಯವಾಗಿದೆ. ಎಷ್ಟು ವಿದ್ಯುತ್‌ ಉಳಿಸುತ್ತದೆ ಎಂಬುದನ್ನೇ ಹಲವು ಕಂಪನಿಗಳು ಮಾರಾಟಕ್ಕೆ ಪ್ರಮುಖ ಅಂಶವಾಗಿ ಉಲ್ಲೇಖಿಸುತ್ತಿವೆ. ಬಿಇಇ ಸ್ಟಾರ್‌ ರೇಟಿಂಗ್‌ಗಳ ಆಧಾರದಲ್ಲೇ ವಸ್ತುಗಳ ಆಯ್ಕೆ ಮಾಡುವುದು ಈಗಿನ ಟ್ರೆಂಡ್‌. ಟಿ.ವಿ., ರೆಫ್ರಿಜರೇಟರ್‌, ಏರ್‌ ಕಂಡೀಶನರ್‌ ಅಥವಾ ಗೀಸರ್‌ನಂತಹ ವಸ್ತುಗಳ ಮೇಲೆ ಸ್ಟಾರ್‌ ರೇಟಿಂಗ್‌ ಸ್ಟಿಕ್ಕರ್‌ ಅಂಟಿಸಲಾಗಿರುತ್ತದೆ. ಇದನ್ನು ಬಿಇಇ ಸ್ಟಾರ್‌ ಲೇಬಲ್‌ ಎಂದು ಕರೆಯಲಾಗುತ್ತದೆ.

ಗೃಹೋಪಯೋಗಿ ವಸ್ತುಗಳು ಒಂದು ವರ್ಷದಲ್ಲಿ ಬಳಸಿಕೊಳ್ಳುವ ವಿದ್ಯುತ್‌ ಪ್ರಮಾಣವನ್ನು ಆಧರಿಸಿಭಾರತ ಸರ್ಕಾರದ ಇಂಧನ ಕ್ಷಮತೆ ಮಂಡಳಿ(ಬಿಇಇ)ಯು ಸ್ಟಾರ್‌ ರೇಟಿಂಗ್‌ ನೀಡುತ್ತದೆ. ಒಂದರಿಂದ ಐದು ಸ್ಟಾರ್‌ಗಳನ್ನು ಹೊಂದಿರುವ ಲೇಬಲ್‌ನಲ್ಲಿ ಐದು ಸ್ಟಾರ್‌ ನೀಡಿದ್ದರೆ, ಅತಿ ಕಡಿಮೆ ವಿದ್ಯುತ್‌ ಬಳಸುವ ವಸ್ತು ಎಂದು ಪರಿಗಣಿಸಲಾಗುತ್ತದೆ. ಕಡಿಮೆ ಸ್ಟಾರ್‌ಗಳು ಕಡಿಮೆ ಇಂಧನ ಕ್ಷಮತೆಯನ್ನು ಸೂಚಿಸುತ್ತದೆ.

ಏಕೆ ನೋಡಬೇಕು ಬಿಇಇ ರೇಟಿಂಗ್‌?

ಅಧಿಕ ಸ್ಟಾರ್‌ ರೇಟಿಂಗ್‌ ಹೊಂದಿದೆ ಎಂದರೆ, ಅಧಿಕ ಇಂಧನ ಕ್ಷಮತೆ ಹೊಂದಿದೆ ಎಂದು ಅರ್ಥೈಸಿಕೊಳ್ಳಬಹುದು. ಉತ್ತಮ ರೇಟಿಂಗ್‌ ಹೊಂದಿರುವ ವಸ್ತುಗಳನ್ನು ಬಳಸಿದರೆ ತಿಂಗಳ ಕರೆಂಟ್‌ ಬಿಲ್‌ ಕಡಿಮೆಯಾಗುವುದು ಖಂಡಿತ. ಏರ್‌ ಕಂಡೀಶನರ್‌, ರೆಫ್ರಿಜರೇಟರ್‌ ಹಾಗೂ ಸೀಲಿಂಗ್‌ ಫ್ಯಾನ್‌ ಹೆಚ್ಚು ವಿದ್ಯುತ್‌ ಬಳಕೆ ಮಾಡಿಕೊಳ್ಳುತ್ತವೆ. ನಿತ್ಯ ಹೆಚ್ಚು ಸಮಯ ಬಳಕೆ ಮಾಡುವ ವಸ್ತುಗಳನ್ನು ಖರೀದಿಸುವಾಗ ಬಿಇಇ ಸ್ಟಾರ್‌ ರೇಟಿಂಗ್‌ ಗಮನಿಸುವುದು ಒಳ್ಳೆಯ ಸಂಗತಿ. ಹೀಗೆ ಮಾಡುವುದರಿಂದ ವಿದ್ಯುತ್‌ ಉಳಿತಾಯ ಸಾಧ್ಯವಾಗುತ್ತದೆ. ಉದಾಹರಣೆಗೆ: ಮನೆಯಲ್ಲಿ ಒಂದು ಏರ್‌ ಕಂಡೀಶನರ್‌ ಗಂಟೆಗೆ 1.5 ಯೂನಿಟ್‌ ವಿದ್ಯುತ್‌ ಉಪಯೋಗಿಸಿಕೊಂಡರೆ, ಅಧಿಕ ಸ್ಟಾರ್‌ ರೇಟಿಂಗ್‌ ಹೊಂದಿರುವ ಎಸಿ ಗಂಟೆಗೆ 0.5 ಯೂನಿಟ್‌ ಅಷ್ಟೇ ಬಳಸಿಕೊಳ್ಳುತ್ತವೆ.

ಸೀಲಿಂಗ್‌ ಫ್ಯಾನ್‌ಗಳನ್ನು ನಿತ್ಯ 10 ಗಂಟೆಗೂ ಹೆಚ್ಚು ಸಮಯ ಬಳಕೆ ಮಾಡಿದರೆ, ದಿನಕ್ಕೆ 4–5 ಯೂನಿಟ್‌ ವಿದ್ಯುತ್‌ ವ್ಯಯವಾಗುತ್ತದೆ. ಸದಾ ಆನ್‌ ಆಗಿಯೇ ಉಳಿಯುವ ರೆಫ್ರಿಜರೇಟರ್‌ ಮತ್ತು ಅಧಿಕ ವಿದ್ಯುತ್‌ ಬಳಕೆಯ ವಾಟರ್‌ ಹೀಟರ್‌ಗಳಿಂದಾಗಿ 3–4 ಯೂನಿಟ್‌ ವಿದ್ಯುತ್‌ ಬಳಕೆಯಾಗುತ್ತದೆ. ವಿದ್ಯುತ್‌ ವ್ಯಯದ ಪ್ರಮಾಣ ಕಡಿಮೆ ಮಾಡಲು ಅಧಿಕ ಸ್ಟಾರ್‌ ರೇಟಿಂಗ್‌ ಉಪಕರಣಗಳಿಂದ ಸಾಧ್ಯ.

ಅಂತರರಾಷ್ಟ್ರೀಯ ಮಾರುಕಟ್ಟೆ ಹೊಂದಿರುವ ಸಂಸ್ಥೆಗಳ ಉತ್ಪನ್ನಗಳಿಗೆ ಸಾಮಾನ್ಯವಾಗಿ ಎರಡು ವರ್ಷಗಳಿಗೊಮ್ಮೆ ಸ್ಟಾರ್ ರೇಟಿಂಗ್‌ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಭಾರತದಲ್ಲಿ ಎಲ್ಲ ಉತ್ಪನ್ನಗಳಿಗೂ ಅಥವಾ ಎಲ್ಲ ಗೃಹೋಪಯೋಗಿ ಉತ್ಪನ್ನಗಳೂ ಬಿಇಇ ಸ್ಟಾರ್‌ ರೇಟಿಂಗ್‌ ಹೊಂದಿರುವುದಿಲ್ಲ. ಉತ್ತಮ ಸ್ಟಾರ್‌ ರೇಟಿಂಗ್‌ ಹೊಂದಿರುವ ಉತ್ಪನ್ನಗಳ ಬೆಲೆಯೂ ಅಧಿಕ.

ಉದಾಹರಣೆಗೆ: ಮೂರು ಸ್ಟಾರ್‌ ರೇಟಿಂಗ್‌ ಹೊಂದಿರುವ 200 ಲೀಟರ್‌ ಸಾಮರ್ಥ್ಯದ ಸಿಂಗಲ್‌ ಡೋರ್‌ ರೆಫ್ರಿಜರೇಟರ್‌ಗೆ ₹15,500 ಇದ್ದರೆ; ಅಷ್ಟೇ ಸಂಗ್ರಹ ಸಾಮರ್ಥ್ಯ, ಬಣ್ಣ ಹಾಗೂ ಆಕಾರದ ನಾಲ್ಕು ಸ್ಟಾರ್‌ ರೇಟಿಂಗ್‌ ಹೊಂದಿರುವ ರೆಫ್ರಿಜರೇಟರ್‌ ಬೆಲೆ ₹17,700 ಆಗಿರುತ್ತದೆ (*ಬೆಲೆ ಕೆಲವು ಕಂಪನಿಗಳ ವೆಬ್‌ಸೈಟ್‌ಗಳಲ್ಲಿ ದಾಖಲಿರುವ ಪ್ರಕಾರ).

ಬಿಇಇ ಸ್ಟಾರ್‌ಹೇಗೆ ನೀಡಲಾಗುತ್ತೆ?

ಗೃಹೋಪಯೋಗಿ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಬಿಇಇ ನೇರವಾಗಿ ಪರಿಶೀಲನೆಗೆ ಒಳಪಡಿಸುವುದಿಲ್ಲ. ಉತ್ಪಾದಕರು ತಮ್ಮ ವಸ್ತುಗಳನ್ನು ಪರೀಕ್ಷೆಗೆ ಒಳಪಡಿಸಿ ಸಂಪೂರ್ಣ ಮಾಹಿತಿಯನ್ನು ಬಿಇಇಗೆ ರವಾನಿಸುತ್ತಾರೆ. ಹೊಸ ವಸ್ತುಗಳನ್ನು ಬಿಡುಗಡೆ ಮಾಡುವಾಗ ಕಂಪನಿಗಳುರಾಷ್ಟ್ರೀಯ ತಪಾಸಣೆ ಮತ್ತು ಪರೀಕ್ಷಾ ಮಾನದಂಡ ಮಂಡಳಿ(ಎನ್‌ಎಬಿಎಲ್‌)ಯಿಂದ ಅನುಮೋದಿತ ಪ್ರಯೋಗಾಲಗಳಲ್ಲಿ ಪರೀಕ್ಷೆಗೆ ಒಳಪಡಿಸಿ ಫಲಿತಾಂಶವನ್ನು ಬಿಇಇಗೆ ಕಳಿಸುತ್ತವೆ.

ಪ್ರಯೋಗಾಲಯಗಳಲ್ಲಿ ಒಂದೇ ದಿನದಲ್ಲಿ ಗೃಹೋಪಯೋಗಿ ವಸ್ತುಗಳ ಪರೀಕ್ಷೆ ನಡೆಸಲಾಗುತ್ತದೆ. ಶೇ 100ರಷ್ಟು ಕಾರ್ಯನಿರ್ವಹಣೆಯಲ್ಲಿ ಬಳಕೆಯಾಗುವ ವಿದ್ಯುತ್‌ ಹಾಗೂ ಕ್ಷಮತೆಯನ್ನು ಪರೀಕ್ಷಿಸಲಾಗುತ್ತದೆ. ಅದೇ ವಸ್ತು ಶೇ 50ರಷ್ಟು ಸಾಮರ್ಥ್ಯದಲ್ಲಿಯೂ ಪರೀಕ್ಷಿಸಲಾಗುತ್ತದೆ. ಉಳಿದಂತೆ ವಿವಿಧ ವಾತಾವರಣಗಳಿಗೆ ಅನುಗುಣವಾದ ಲೆಕ್ಕಾಚಾರಗಳನ್ನು ಅಂದಾಜಿಸಲಾಗುತ್ತದೆ.

ರೇಟಿಂಗ್‌ನಲ್ಲಿ ಇರುವಷ್ಟು ಇಂಧನ ಕ್ಷಮತೆಯನ್ನು ವಸ್ತು ಹೊಂದಿಲ್ಲ ಎಂಬುದನ್ನು ಗ್ರಾಹಕ ಪರಿಶೀಲಿಸಿದರೆ, ಆ ಬಗ್ಗೆ ಬಿಇಇಗೆ ಪತ್ರ ಮುಖೇನ ದೂರು ದಾಖಲಿಸಬಹುದು. ದೂರು ಬಂದಿರುವ ನಿರ್ದಿಷ್ಟ ಮಾದರಿಗಳನ್ನು ಬಿಇಇ ಪರೀಕ್ಷೆಗೆ ಒಳಪಡಿಸುತ್ತದೆ. ಹಿಂದೆ ಸಲ್ಲಿಕೆಯಾಗಿರುವ ಫಲಿತಾಂಶ ಹಾಗೂ ಪರೀಕ್ಷೆಯ ಮೂಲಕ ತಿಳಿದು ಬಂದಿರುವ ಫಲಿತಾಂಶದಲ್ಲಿ ವ್ಯತ್ಯಾಸ ಗಮನಿಸಲಾಗುತ್ತದೆ. ಅಕಸ್ಮಾತ್‌ ಫಲಿತಾಂಶ ಹೊಂದಾಣಿಕೆಯಾಗದಿದ್ದರೆ, ಕಂಪನಿಯ ಆ ನಿರ್ದಿಷ್ಟ ಮಾದರಿಯು ಬಿಇಇ ರೇಟಿಂಗ್‌ ಕಳೆದುಕೊಳ್ಳುತ್ತದೆ. ಉತ್ಪಾದಕರು ಆ ವಸ್ತುಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT