ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳನ ಅಂಗಳದಿ ಹಾರಲಿದೆ ಹೆಲಿಕಾಪ್ಟರ್

Last Updated 11 ಜುಲೈ 2020, 19:31 IST
ಅಕ್ಷರ ಗಾತ್ರ

ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ತೋರುವುದರಲ್ಲಿ ಅಮೆರಿಕದ ‘ನಾಸಾ’ ಸಂಸ್ಥೆಯದ್ದು ಎತ್ತಿದ ಕೈ! ಚಂದ್ರನ ಮೇಲೆ ಮನುಷ್ಯ ನಡೆಯುವುದನ್ನು ಯಾರೊ ಊಹಿಸದೇ ಇದ್ದಾಗ, 1969ರಲ್ಲಿ ನೀಲ್‌ ಆರ್ಮಸ್ಟ್ರಾಂಗ್‌ ಚಂದ್ರನ ಮೇಲೆ ನಡೆದಾಡಿದರು. ಇದರ ಹಿಂದೆ ಇದ್ದದ್ದು ಇದೇ ಸಂಸ್ಥೆಯ ಅವಿರತ ಶ್ರಮ. ಈಗ ಅಂತಹುದೇ ಒಂದು ವಿಶಿಷ್ಟ ಸಾಧನೆಗೆ ಸಜ್ಜಾಗಿದೆ ನಾಸಾ. ತನ್ನ ಮುಂದಿನ ಮಂಗಳ ಯಾತ್ರೆಯ ಅಂಗವಾಗಿ ಒಂದು ಚಿಕ್ಕ ಹೆಲಿಕಾಪ್ಟರ್‌ ಅನ್ನು ಮಂಗಳನ ಅಂಗಳದಿ ಹಾರಿಸಿ ನೋಡುವ ಸಂಭ್ರಮದಲ್ಲಿದೆ.

ನೋಡಲು ಒಂದು ಚಿಕ್ಕ ಡ್ರೋನ್‌ನಂತೆ ಕಾಣುವ ‘ಇಂಜೆನ್ಯೂಟಿ’ (Ingenuity) ಹೆಸರಿನ ಈ ಹೆಲಿಕಾಪ್ಟರ್, ನಾಸಾದ ‘ಮಂಗಳ-2020 ರೋವರ್’ನೊಂದಿಗೆ ಜುಲೈ ತಿಂಗಳಿನ ಕೊನೆಯಲ್ಲಿ ಅಥವಾ ಆಗಸ್ಟ್‌ ಮೊದಲ ವಾರದಲ್ಲಿ ಫ್ಲೋರಿಡಾದ ‘ಕೇಪ್‌ ಕ್ಯಾನವರೆಲ್‌ ಏರ್‌ಫೋರ್ಸ್‌ ಸ್ಟೇಷನ್’ನಿಂದ ಉಡಾವಣೆಯಾಗಲಿದೆ.

ಭಾರತೀಯರ ಕೊಡುಗೆ: ನಿಮಗೆ ಗೊತ್ತೆ? ಈ ಹೆಲಿಕಾಪ್ಟರ್‌ಗೆ ಹೆಸರು ನೀಡಿದ್ದು ಮತ್ತು ಅದರ ವಿನ್ಯಾಸವನ್ನು ಮಾಡಿದವರು ಇಬ್ಬರು ಭಾರತೀಯ ಮೂಲದವರು. ನಾಸಾ ಸಂಸ್ಥೆಯವರು ಹೆಲಿಕಾಪ್ಟರ್‌ಗೆ ಹೆಸರನ್ನಿಡಲು ಅಮೆರಿಕದ ಶಾಲಾ ಮಕ್ಕಳಿಗೆ ಕರೆಕೊಟ್ಟಾಗ ಬಂದ ಸಾವಿರಾರು ಪ್ರಬಂಧಗಳಲ್ಲಿ ಕೊನೆಗೆ ಆಯ್ಕೆ ಮಾಡಿಕೊಂಡಿದ್ದು ಅಲಬಾಮಾ ರಾಜ್ಯದ ಹೈಸ್ಕೂಲೊಂದರಲ್ಲಿ 11ನೇ ತರಗತಿ ಓದುತ್ತಿರುವ ಭಾರತೀಯ ಮೂಲದ ವನೀತಾ ರೂಪಾನಿ ನೀಡಿದ ‘ಇಂಜೆನ್ಯೂಟಿ’ ಹೆಸರನ್ನು. ಈ ಹೆಸರನ್ನು ಕನ್ನಡದಲ್ಲಿ ಜಾಣ್ಮೆ ಎಂದು ಅರ್ಥೈಸಿಕೊಳ್ಳಬಹುದು. ಬೇರೊಂದು ಗ್ರಹದಲ್ಲಿ ಹೆಲಿಕಾಪ್ಟರ್‌ ಹಾರಾಟ ನಡೆಸುವ ಕುರಿತಾಗಿ ಕನಸು ಕಂಡು ಅದನ್ನು ಈಗ ಈ ಯೋಜನೆಯ ಮುಖ್ಯ ಎಂಜಿನಿಯರ್ ಆಗಿ ನನಸು ಮಾಡಿಕೊಳ್ಳಲು ಹೊರಟಿರುವವರು ಬಾಬ್‌ ಬಲರಾಮ್‌. ಇವರು ಐಐಟಿ ಮದ್ರಾಸ್‌ನಲ್ಲಿ ಬಿ.ಟೆಕ್‌ ಪದವಿ ಪಡಿದಿದ್ದಾರೆ.

ಮಂಗಳನಲ್ಲಿ ಸಾಧ್ಯವೇ?
ಮಾನವನ ಆವಿಷ್ಕಾರ ಹೆಲಿಕಾಪ್ಟರ್. ಇದನ್ನು ನಮ್ಮಲ್ಲಿ ಎಲ್ಲರೂ ಬಳಸದೇ ಇದ್ದರೂ ಅದರ ಹಾರಾಟವನ್ನಂತೂ ನೋಡಿರುತ್ತೇವೆ. ಇಂತಹ ಹೆಲಿಕಾಪ್ಟರ್‌ ಅನ್ನು ಸೌರಮಂಡಲದ ಇತರೆ ಗ್ರಹಗಳು ಮತ್ತು ಭೂಮಿಯ ಉಪಗ್ರಹವಾದ ಚಂದ್ರನ ಮೇಲೆ ಹಾರಿಸಲು ಸಾಧ್ಯವೇ? ಚಂದ್ರನ ಮೇಲಂತೂ ಸಾಧ್ಯವೇ ಇಲ್ಲ; ಏಕೆಂದರೆ ಅಲ್ಲಿ ಭೂಮಿಯಲ್ಲಿ ಇರುವಂತೆ ಗಾಳಿಯೇ ಇಲ್ಲ! ನಮಗೆ ಸಮೀಪವಿರುವ ಮಂಗಳ ಗ್ರಹದ ಮೇಲೆ? ಮಂಗಳ ಗ್ರಹದ ಮೇಲೆ ಬೇಕಾದರೆ ಒಂದು ಚಿಕ್ಕ, ಹಗುರವಾದ ಹೆಲಿಕಾಪ್ಟರ್‌ಅನ್ನು ನೆಲಮಟ್ಟದಿಂದ ಅತ್ಯಂತ ಕಡಿಮೆ ಎತ್ತರದಲ್ಲಿ ಹಾರಿಸಿ ನೋಡಬಹುದು; ಆದರೆ ಯಶಸ್ಸು ಖಂಡಿತ ಎಂದು ಹೇಳಲಾಗದು.

ಈಗ ನಾಸಾ ಕೂಡಾ ಇದನ್ನೇ ಮಾಡಿ ನೋಡಲು ಹೊರಟಿದೆ. ಮಂಗಳ ಗ್ರಹದ ಮೇಲೆ ಇಂತಹ ಪ್ರಯೋಗ ಕಷ್ಟಸಾಧ್ಯ. ಏಕೆಂದರೆ, ಆ ಗ್ರಹದ ಮೇಲೆ ತುಂಬಾ ತೆಳುವಾದ ಗಾಳಿಯ (ಹೆಚ್ಚಾಗಿ ಇಂಗಾಲದ ಡೈ ಆಕ್ಸೈಡ್‌) ಪದರವಿದೆ. ಮಂಗಳನ ಮೇಲ್ಮೈ ಗಾಳಿಯ ಸಾಂದ್ರತೆ, ನಮ್ಮ ಭೂಮಿಯ ಮೇಲ್ಮೈ ಗಾಳಿಯ ಸಾಂದ್ರತೆಯ ಶೇಕಡ 1ರಷ್ಟು ಮಾತ್ರ. ಇಂತಹ ವಾತಾವರಣದಲ್ಲಿ ಹೆಲಿಕಾಪ್ಟರ್‌ಗೆ ಬೇಕಾಗುವ ಮೇಲ್ಮುಖ ಒತ್ತಡ ಲಭಿಸದು. ವಿಜ್ಞಾನಿಗಳಿಗೆ ಅಲ್ಲಿನ ಗಾಳಿಯ ಸಾಂದ್ರತೆಯು ಸವಾಲಾಗಿ ಪರಿಣಮಿಸಿದರೆ, ಮಂಗಳನ ಕಡಿಮೆ ಗುರುತ್ವಾಕರ್ಷಣೆಯು (ಭೂಮಿಯ ಗುರುತ್ವಾಕರ್ಷಣೆಯ ಮೂರನೆಯ ಒಂದರಷ್ಟು) ಸಹಾಯಕ್ಕೆ ಬರುತ್ತದೆ. ಒಟ್ಟಾರೆಯಾಗಿ ಇಂಥದೊಂದು ಪ್ರಯತ್ನ, ಭೂಮಿಯ ಮೇಲಿನ ಸುಮಾರು 30 ಕಿ.ಮೀ. ಎತ್ತರದಲ್ಲಿನ ಹಾರಾಟಕ್ಕೆ ಸಮ. ಆದರೆ, ಭೂಮಿಯ ಮೇಲೆ ವಿಶೇಷ ಹೆಲಿಕಾಪ್ಟರ್‌ನ ದಾಖಲೆಯ ಹಾರಾಟದ ಎತ್ತರ ಸುಮಾರು 12 ಕಿ.ಮೀ ಮಾತ್ರ. ಹೀಗಾಗಿ ಇದೊಂದು ಭಾರಿ ಸವಾಲಿನ ಯೋಜನೆ.

ಈ ಯೋಜನೆಯಲ್ಲಿ ಯಶಸ್ವಿಯಾಗಬೇಕಾದರೆ ಹೊಸ ರೀತಿಯ, ತುಂಬಾ ಹಗುರ ಮತ್ತು ಅಷ್ಟೇ ಪ್ರಬಲವಾದ ಹೆಲಿಕಾಪ್ಟರ್‌ನ್ನು ನಿರ್ಮಿಸಬೇಕಾಗುತ್ತದೆ. ಈಗ ಸಿದ್ಧವಾಗಿರುವ ಹೆಲಿಕಾಪ್ಟರ್‌ನ ನಿರ್ಮಾಣಕ್ಕೆ ಆರು ವರ್ಷಗಳು ಬೇಕಾದವು. ಇಂಜೆನ್ಯೂಟಿ ಹೆಲಿಕಾಪ್ಟರ್‌ 1.8 ಕೆ.ಜಿ. ತೂಕವಿದ್ದು, 49 ಸೆಂ.ಮೀ. ಎತ್ತರವಿದೆ. ಅತ್ಯಂತ ವೇಗವಾಗಿ ತಿರುಗುವ ಅದರ ರೆಕ್ಕೆಗಳ ವ್ಯಾಸವು 1.2 ಮೀಟರ್ ಇದೆ. ಇಂಜೆನ್ಯೂಟಿಯನ್ನು, ರೋವರ್‌ನ ಉದರದ ಕೆಳಭಾಗದಲ್ಲಿ ಅಳವಡಿಸಲಾಗುತ್ತದೆ. ಇದು ಸೌರಶಕ್ತಿ ಚಾಲಿತ, ಪೈಲಟ್‌ರಹಿತ ಹೆಲಿಕಾಪ್ಟರ್.

ಪರೀಕ್ಷಾರ್ಥ ಹಾರಾಟ
ಇತ್ತೀಚೆಗೆ ಇದರ ಪರೀಕ್ಷಾರ್ಥ ಹಾರಾಟವು ಯೋಜನೆಯ ಮ್ಯಾನೇಜರ್‌ ಆಗಿರುವ ಮಿಮಿ ಆಂಗ್ ಅವರ ಉಸ್ತುವಾರಿಯಲ್ಲಿ ಕ್ಯಾಲಿಪೋರ್ನಿಯಾದಲ್ಲಿರುವ ಜೆಟ್‌ ಪ್ರೊಪಲೇಶನ್‌ ಲ್ಯಾಬೋರೇಟರಿಯ ಬೃಹತ್ತಾದ ನಿರ್ವಾತ ಕೋಣೆಯಲ್ಲಿ ನಡೆದಿದೆ. ಸುಮಾರು ಒಂದು ನಿಮಿಷ ಕಾಲ, ಐದು ಸೆಂ.ಮೀ. ಎತ್ತರದಲ್ಲಿ ಹೆಲಿಕಾಪ್ಟರ್‌ ಯಶಸ್ವಿ ಹಾರಾಟ ನಡೆಸಿದೆ. ಇದಕ್ಕಾಗಿ ನಿರ್ವಾತ ಕೋಣೆಯಲ್ಲಿನ ಗಾಳಿಯನ್ನು ಹೊರತೆಗೆದು ಭೂ ವಾತಾವರಣದ ಶೇ 1ರಷ್ಟು ಸಾಂದ್ರತೆಯ ಇಂಗಾಲದ‌ ಡೈಆಕ್ಸೈಡ್‌ ಅನಿಲವನ್ನು ಅದರೊಳಗೆ ತುಂಬಿ ಮಂಗಳನ ವಾತಾವರಣವನ್ನು ಕೃತಕವಾಗಿ ಸೃಷ್ಟಿಸಲಾಗಿತ್ತು. ಮಂಗಳನ ಅಂಗಳದಲ್ಲಿ ಇರುವಷ್ಟೇ ಗುರುತ್ವಾಕರ್ಷಣೆಯನ್ನು ಅಲ್ಲಿ ಕೃತಕವಾಗಿ ಸೃಷ್ಟಿಸಲಾಗಿತ್ತು.

ಎಲ್ಲಾ ಅಂದುಕೊಂಡಂತೆ ನಡೆದರೆ ಪರ್ಸೆವೆರನ್ಸ್‌ ಹೆಸರಿನ, ಒಂದು ಕಾರಿನ ಗಾತ್ರದ ರೋವರ್, ಮಂಗಳನ ಜಝೆರೊ ಎಂಬ ವಿಸ್ತಾರವಾದ ಕುಳಿಯಾಕಾರದ ಪ್ರದೇಶದಲ್ಲಿ ಮುಂದಿನ ವರ್ಷದ ಫೆಬ್ರವರಿ ತಿಂಗಳಿನ 18ರಂದು ಇಳಿಯಲಿದೆ. ಮಂಗಳನಲ್ಲಿ ಇಳಿಯುವ ರೋವರ್‌, ಅಲ್ಲಿ ಹಿಂದೆ ಸೂಕ್ಷ್ಮಾಣು ಜೀವಿಗಳು ಇದ್ದಿರಬಹುದಾದ ಕುರುಹುಗಳ ಬಗ್ಗೆ ಹುಡುಕಾಟ ನಡೆಸಲಿದೆ. ಅಲ್ಲಿನ ವಾತಾವರಣದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದೆ. ಮಂಗಳನ ನೆಲದ ಮಣ್ಣು ಮತ್ತು ಕಲ್ಲಿನ ಚೂರುಗಳನ್ನು ಸಂಗ್ರಹಿಸಲಿದೆ.

ರೋವರ್‌ ಇಳಿದ ಸುಮಾರು ಎರಡು ತಿಂಗಳಿನ ನಂತರ ಹೆಲಿಕಾಪ್ಟರ್‌ ತನ್ನ ಹಾರಾಟ ನಡೆಸಲಿದೆ. ಇಂಜೆನ್ಯೂಟಿಯನ್ನು ಒಂದು ಸಮತಟ್ಟಾದ ಜಾಗದಲ್ಲಿ ತನ್ನ ಉದರದ ಕೆಳಭಾಗದಿಂದ ಇಳಿಸುವ ರೋವರ್‌, ನಂತರ ಅಲ್ಲಿಂದ ಹೊರಟುಹೋಗುತ್ತದೆ; ಅದು ಇಂಜೆನ್ಯೂಟಿಯನ್ನು ಪುನಃ ಸೇರುವುದೇ ಇಲ್ಲ. ಇಂಜೆನ್ಯೂಟಿ ಹೆಲಿಕಾಪ್ಟರ್ ತನ್ನ‌ 30 ದಿನಗಳ ಕಾಲಾವಧಿಯಲ್ಲಿ ಐದು ಹಾರಾಟವನ್ನು ನಡೆಸಲಿದೆ. ಮೊದಲ ಹಾರಾಟ 30 ಸೆಕೆಂಡುಗಳ ಕಾಲ ಕೆಲವೇ ಅಡಿಗಳ‌ ಎತ್ತರವಿರಲಿದೆ; ನಂತರದ ಹಾರಾಟಗಳಲ್ಲಿ ಸಮಯ ಮತ್ತು ಹಾರಾಟದ ಎತ್ತರವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಲಿದೆ. ಐದನೆಯ ಹಾರಾಟದಲ್ಲಿ ಒಂದೂವರೆ ನಿಮಿಷಗಳ ಕಾಲ, 15 ಅಡಿ ಎತ್ತರ ಮತ್ತು 500 ಅಡಿ‌ ದೂರದವರೆಗೆ ಹಾರುತ್ತದೆ ಎಂಬ ವಿಶ್ವಾಸ ವಿಜ್ಞಾನಿಗಳದ್ದು.

ಒಂದು ವೇಳೆ ಹೆಲಿಕಾಪ್ಟರ್‌ ಹಾರಾಟ ಮಂಗಳನಲ್ಲಿ ಯಶಸ್ವಿಯಾದರೆ, ನೆಲದ ಮೇಲೆ ಸಾಗುವ ರೋವರ್‌ಗಳಿಗೆ ಅಸಾಧ್ಯವೆನಿಸುವ ಕಣಿವೆಯಂತಹ ಪ್ರದೇಶಗಳ ವೀಕ್ಷಣೆ ಮತ್ತು ಇತರೆ ಸಂಶೋಧನೆಗಳಲ್ಲಿ ಅವುಗಳನ್ನು ಮುಂದೆ ಬಳಸಿಕೊಳ್ಳಲು ಸ್ಪೂರ್ತಿ ಸಿಗುತ್ತದೆ. ಇಂಜೆನ್ಯೂಟಿಯ ಸಾಹಸ ಯಾನಕ್ಕೆ ನಾವು ಕೂಡಾ ಇಲ್ಲಿಂದಲೇ ಶುಭ ಹಾರೈಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT