ಮಂಗಳವಾರ, ಸೆಪ್ಟೆಂಬರ್ 21, 2021
21 °C

ಕಿಸೆಯಲ್ಲಿ ‘ಮೈಕ್ರೋಸ್ಕೋಪ್’

ಹೇಮಂತ್ ಕುಮಾರ್ ಎಸ್ Updated:

ಅಕ್ಷರ ಗಾತ್ರ : | |

‘ಜೇಬು ಅಥವಾ ಜಾಮಿಟ್ರಿ ಪೆಟ್ಟಿಗೆಯಲ್ಲಿ ಪೆನ್ಸಿಲ್, ಪೆನ್, ರಬ್ಬರ್ ಇಟ್ಟುಕೊಂಡು ಓಡಾಡುವಂತೆ ವಿದ್ಯಾರ್ಥಿಗಳು ಮೈಕ್ರೋಸ್ಕೋಪ್ (ಸೂಕ್ಷ್ಮದರ್ಶಕ) ಅನ್ನು ತಮ್ಮ ಕಿಸೆಗಳಲ್ಲಿಟ್ಟು ಅನಾಯಾಸವಾಗಿ ತಿರುಗಾಡಬೇಕು. ಯಾವುದೇ ಜಾಗದಲ್ಲಿಯೂ ಅದನ್ನು ತೆಗೆದು ಉಪಯೋಗಿಸುವಂತಿರಬೇಕು...’ – ಸ್ಟ್ಯಾನ್‍ಫೋರ್ಡ್ ವಿಜ್ಞಾನಿ ಮನುಪ್ರಕಾಶ್ ಕಂಡ ಈ ಕನಸು ಜಗತ್ತಿನ 135ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಸಾಕಾರಗೊಂಡಿದೆ. ಒಂದು ಡಾಲರ್‌ಗೂ ಕಡಿಮೆ, ಅಂದರೆ 60 ರೂಪಾಯಿಗೂ ಕಡಿಮೆ ವೆಚ್ಚದಲ್ಲಿ ಕಾಗದ ಬಳಸಿ ರೂಪಿಸಿದ ಸೂಕ್ಷ್ಮದರ್ಶಕ ‘ಫೋಲ್ಡ್‌ಸ್ಕೋಪ್’ ಅಪಾರ ಸಾಧ್ಯತೆಗಳನ್ನು ತೆರೆದಿಟ್ಟಿದೆ.

ಪ್ರಯೋಗಾಲಯಗಳಲ್ಲಿ ಅತಿ ಜಾಗರೂಕವಾಗಿ ಬಳಸುವ ಸಾವಿರಾರು ರೂಪಾಯಿ ವೆಚ್ಚದ ಮೈಕ್ರೋಸ್ಕೋಪ್‍ಗಳಿಗೆ ಇದು ಪರ್ಯಾಯ ಅಲ್ಲವಾದರೂ; ಅಷ್ಟೇ ಸಮರ್ಥ ಪ್ರಯೋಜನ ಪಡೆಯಲು ಸಾಧ್ಯವಿದೆ. ‘ಫೋಲ್ಡ್‌ಸ್ಕೋಪ್’ನಲ್ಲಿ ರಕ್ತದ ಮಾದರಿಯನ್ನಿಟ್ಟು ರಕ್ತ ಕಣಗಳಲ್ಲಿ ಹರಡಿರುವ ಮಲೇರಿಯಾದಂತಹ ಕಾಯಿಲೆ ಪತ್ತೆಹಚ್ಚುವ ಸಾಧ್ಯತೆಯನ್ನು ಕಂಡುಕೊಳ್ಳಲಾಗಿದೆ. ಈ ವಿದ್ಯಾರ್ಥಿ ಮಿತ್ರ, ಬಹುಪಯೋಗಿ ಸೂಕ್ಷ್ಮದರ್ಶಕದ ಬಳಕೆ, ಪ್ರಯೋಜನಗಳ ಕುರಿತು ಭಾರತದಲ್ಲಿಯೂ ಅನೇಕ ಕಾರ್ಯಾಗಾರಗಳು ನಡೆದಿವೆ. ಆದರೆ, ಕರ್ನಾಟಕದಲ್ಲಿ ಇದರ ಪ್ರಯೋಜನ ಪಡೆದಿರುವವರ ಸಂಖ್ಯೆ ಅತಿ ಕಡಿಮೆ. ಶಿಕ್ಷಣ ಸಂಸ್ಥೆಗಳೂ ಸ್ವಯಂ ಪ್ರೇರಿತರಾಗಿ ‘ಫೋಲ್ಡ್‌ಸ್ಕೋಪ್’ ತರಿಸಿ ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿ ಆಸಕ್ತಿ ಬೆಳೆಸುವ ಕಾರ್ಯದಿಂದ ಹಿಂದೆ ಉಳಿದಿವೆ. ಇಂಥದೊಂದು ವೈಜ್ಞಾನಿಕ ಸಾಧನ ತರಿಸಿಕೊಳ್ಳುವುದು ಹೇಗೆ? ಸಿಗುವುದು ಎಲ್ಲಿ? ಬಳಕೆ ಹೇಗೆ? ಎಂಬುದರ ತಿಳಿವಳಿಕೆ ಇಲ್ಲದಿರುವುದೂ ಇದಕ್ಕೆ ಕಾರಣವಾಗಿರಬಹುದು.

ಕ್ಯಾಲಿಫೋರ್ನಿಯಾ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದ ಜೈವಿಕ ಎಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಭಾರತೀಯ ಮೂಲದ ಮನುಪ್ರಕಾಶ್ ಮತ್ತು ಸಂಶೋಧನಾ ವಿದ್ಯಾರ್ಥಿಯಾಗಿದ್ದ ಜಿಮ್ ಸೈಬಲ್‍ಸ್ಕಿ ಪ್ರಯೋಗಗಳಲ್ಲಿ ರೂಪುಗೊಂಡಿದ್ದು ‘ಫೋಲ್ಡ್‌ಸ್ಕೋಪ್’. 2010ರಲ್ಲಿ ಚಿಗುರಿದ ಕಾಗದದ ಸೂಕ್ಷ್ಮದರ್ಶಕದ ಯೋಜನೆ, 2015ರ ಹೊತ್ತಿಗೆ ಸಾವಿರಾರು ಮಾದರಿಗಳನ್ನು ತಯಾರಿಸುವ ಪ್ರೇರಣೆ ಪಡೆಯಿತು. ಹಲವು ರಾಷ್ಟ್ರಗಳಿಗೆ ಅವುಗಳನ್ನು ಕಳುಹಿಸಲಾಯಿತು. ಮನುಪ್ರಕಾಶ್ ತಂಡದ ಯೋಚನೆಗಿಂತಲೂ ಭಿನ್ನ, ಉಪಯುಕ್ತ ಸಾಧ್ಯತೆಗಳು ‘ಫೋಲ್ಡ್‌ಸ್ಕೋಪ್’ ಬಳಸಿದ ವಿದ್ಯಾರ್ಥಿಗಳಿಂದ ಹರಿದುಬಂದಿವೆ. ಈ ವರ್ಷದ ಅಂತ್ಯಕ್ಕೆ ಜಗತ್ತಿನಾದ್ಯಂತ ಹಂಚಿಕೆಯಾಗುವ ‘ಫೋಲ್ಡ್‌ಸ್ಕೋಪ್’ಗಳ ಸಂಖ್ಯೆ 10 ಲಕ್ಷ ದಾಟುವುದಾಗಿ ತಂಡ ಹೇಳಿಕೊಂಡಿದೆ.

ಕಾಣಲು ಮೂರು ಬಗೆ

‘ಪ್ರತಿಯೊಬ್ಬರೂ ವಿಜ್ಞಾನಿ, ವಿಜ್ಞಾನ ನಿರಂತರ ಪ್ರಕ್ರಿಯೆ’ ಎನ್ನುವ ಸಂಶೋಧಕರು, ಈ ಸೂಕ್ಷ್ಮದರ್ಶಕದಿಂದ 3 ಬಗೆಯಲ್ಲಿ ಸೂಕ್ಷ್ಮಜಗತ್ತನ್ನು ಕಾಣುವ ವ್ಯವಸ್ಥೆ ವಿವರಿಸಿದ್ದಾರೆ. 
1. ಕಾಣಬೇಕಾದ ವಸ್ತುವಿನ ಸ್ಯಾಂಪಲ್ (ಮಾದರಿ) ಅನ್ನು ಸ್ಲೈಡ್ ಮೂಲಕ ಲೆನ್ಸ್ ಮೇಲಿಟ್ಟು, ಬೆಳಕಿನ ಎದುರು ಹಿಡಿದು ಲೆನ್ಸ್ ಸಮೀಪಕ್ಕೆ ಕಣ್ಣು ದೃಷ್ಟಿಸಿ ಕಾಣುವುದು

2. ಸ್ಯಾಂಪಲ್ ಒಳಗೊಂಡ ‘ಫೋಲ್ಡ್‌ಸ್ಕೋಪ್’ನ ಒಂದು ಬದಿಗೆ ಎಲ್‍ಇಡಿ ಬೆಳಕು ಹರಿಸಿ, ಕತ್ತಲ ಕೋಣೆಯಲ್ಲಿ ಖಾಲಿ ಹಾಳೆಯ ಮೇಲೆ ಸೂಕ್ಷ್ಮಜೀವಿಗಳ ನೈಜ ಚಿತ್ರವನ್ನು ಮೂಡಿಸಿ ವೀಕ್ಷಿಸಬಹುದು

3. ಮೊಬೈಲ್‍ಫೋನ್ ಕ್ಯಾಮೆರಾಗೆ ನೀಡಲಾಗಿರುವ ಕಪ್ಲರ್ ಮೂಲಕ ‘ಫೋಲ್ಡ್‌ಸ್ಕೋಪ್’ ಜೋಡಿಸಿ, ಫೋನ್ ಪರದೆಯಲ್ಲಿ ಸೂಕ್ಷ್ಮಜೀವಿಗಳ ಓಡಾಟ ಗಮನಿಸಬಹುದು.

 ‘ಫೋಲ್ಡ್‌ಸ್ಕೋಪ್’ ಎಲ್ಲಿ ಸಿಗುತ್ತೆ?
ಕ್ಲಾಸ್‍ರೂಂ ಕಿಟ್, ಡಿಲಕ್ಸ್ ಕಿಟ್ ರೀತಿಯಲ್ಲಿ ‘ಫೋಲ್ಡ್‌ಸ್ಕೋಪ್’ ಲಭ್ಯವಿದೆ. www.foldscope.com ನಿಂದ ಆನ್‍ಲೈನ್‍ನಲ್ಲಿ ಬುಕ್ ಮಾಡಿ, ಅಲ್ಲಿಯೇ ಹಣ ಪಾವತಿಸಿ ಈ ಸೂಕ್ಷ್ಮದರ್ಶಕವನ್ನು ತರಿಸಿಕೊಳ್ಳಬಹುದು. ಪ್ರಾರಂಭದಲ್ಲಿ ಕಡಿಮೆ ವೆಚ್ಚದಲ್ಲಿಯೇ ಇದನ್ನು ರೂಪಿಸಿದರೂ, ಗುಣಮಟ್ಟ ಹೆಚ್ಚಿಸಿ ಉತ್ಪಾದನೆ ನಡೆಸಿರುವುದರಿಂದ ಇದರ ದರ ಹೆಚ್ಚಿದೆ. ಅಮೆರಿಕದಲ್ಲಿಯೇ ಇರುವವರಿಗೆ ಒಂದೂವರೆ ಡಾಲರ್‌ಗೆ (ಅಂದಾಜು 100 ರೂ.) ಬೇಸಿಕ್ ‘ಫೋಲ್ಡ್‌ಸ್ಕೋಪ್’ ಸಿಗುತ್ತದೆ. ಆದರೆ, ಕರ್ನಾಟಕಕ್ಕೆ ತರಿಸಿಕೊಳ್ಳುವಾಗ ಸಾಗಣೆ ವೆಚ್ಚವೂ ಸೇರುವುದರಿಂದ ಒಂದಕ್ಕೆ ಅಂದಾಜು 250 ರೂಪಾಯಿ ಆಗುತ್ತದೆ. ಕೇವಲ ಒಂದೇ ಸೂಕ್ಷ್ಮದರ್ಶಕ ತರಿಸುವುದು ಬಲು ದುಬಾರಿಯಾಗುತ್ತದೆ. ಒಟ್ಟಿಗೆ 20 ಅಥವಾ 100 ‘ಫೋಲ್ಡ್‌ಸ್ಕೋಪ್’ ತರಿಸುವ ಅವಕಾಶವಿದೆ. 

* ಬೇಸಿಕ್ ಕ್ಲಾಸ್‍ರೂಂ ಕಿಟ್ (20 ‘ಫೋಲ್ಡ್‌ಸ್ಕೋಪ್’)
ಸಾಗಣೆ ವೆಚ್ಚ ಸೇರಿ ಅಂದಾಜು, 4,400 ರೂ. (ಒಟ್ಟಿಗೆ ತರಿಸಿದರೆ ಒಂದಕ್ಕೆ 220 ರೂ. ಆಗುತ್ತದೆ)
* ಲಾರ್ಜ್ ಕ್ಲಾಸ್‍ರೂಂ ಕಿಟ್ (100 ‘ಫೋಲ್ಡ್‌ಸ್ಕೋಪ್’)
ಅಂದಾಜು 26 ಸಾವಿರ ರೂ., ಬೇಸಿಕ್ ಕಿಟ್‍ಗೂ ಹೆಚ್ಚು ಸ್ಲೈಡ್ ಹಾಗೂ ಇನ್ನಷ್ಟು ಅವಕಾಶ ಇರುತ್ತದೆ (ಒಂದಕ್ಕೆ 260 ರೂ.)
* ಡಿಲಕ್ಸ್ ಇಂಡಿವಿಶ್ಯುಯಲ್ ಕಿಟ್ (ಬಾಕ್ಸ್‌ನಲ್ಲಿ 1 ‘ಫೋಲ್ಡ್‌ಸ್ಕೋಪ್’)
ಅಂದಾಜು 4600 ರೂ.
* ಬೇಸಿಕ್ ಕ್ಲಾಸ್‍ರೂಂ (20) ಮತ್ತು ಡಿಲಕ್ಸ್ ಕಿಟ್ (1) ಒಟ್ಟಿಗೆ
ಅಂದಾಜು 6,700 ರೂ. 

ಭಾರತ ಸರ್ಕಾರದ ಸಹಯೋಗ

ಜೈವಿಕ ತಂತ್ರಜ್ಞಾನ ಇಲಾಖೆಯು ‘ಫೋಲ್ಡ್‌ಸ್ಕೋಪ್’ ಅನ್ನು ಎಲ್ಲ ವಿದ್ಯಾರ್ಥಿಗಳಿಗೆ ಪರಿಚಯಿಸುವ ಪ್ರಯತ್ನ ನಡೆಸುತ್ತಿದೆ. ಈಗಾಗಲೇ 445 ಸರ್ಕಾರಿ ಶಾಲೆ–ಕಾಲೇಜುಗಳ ಬೋಧಕರಿಗಾಗಿ ದೆಹಲಿಯಲ್ಲಿ ವಿಶೇಷ ಕಾರ್ಯಾಗಾರವನ್ನು ನಡೆಸಿದೆ. ಕರ್ನಾಟಕದ 40ಕ್ಕೂ ಹೆಚ್ಚು ಶಿಕ್ಷಕರು ಇದರಲ್ಲಿ ಭಾಗಿಯಾಗಿದ್ದರು. ಕೆಲವು ಶಾಲೆಗಳಿಗೆ ‘ಫೋಲ್ಡ್‌ಸ್ಕೋಪ್’ ಪೂರೈಸುವ ಹಾಗೂ ಶಾಲೆಗಳಲ್ಲಿಯೇ ಕಾರ್ಯಾಗಾರ ಆಯೋಜಿಸುವ ಕಾರ್ಯಕ್ರಮಗಳೂ ನಡೆದಿವೆ.

ಅಸ್ಸಾಂ, ದೆಹಲಿ, ತಮಿಳುನಾಡು ಹಾಗೂ ಮಹಾರಾಷ್ಟ್ರದಲ್ಲಿ ಅನೇಕ ಶಿಕ್ಷಕರು, ಶಿಕ್ಷಣ ಸಂಸ್ಥೆಗಳು ಇದನ್ನು ಅಭಿಯಾನದಂತೆ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ಇಂಥ ಕಾರ್ಯಾಗಾರಗಳ ಸಂಖ್ಯೆ ತೀರಾ ಕಡಿಮೆ. ಇಲಾಖೆಯೊಂದಿಗೆ ಸಂಪರ್ಕ ಸಾಧಿಸಿ 
(www.dbtindia.nic.in) ಮನವಿ ಮಾಡುವುದು ಅಥವಾ ಮನುಪ್ರಕಾಶ್ ತಂಡಕ್ಕೆ ಮನವಿ ಮಾಡುವ ಅವಕಾಶವೂ ಇದೆ. ಸಂಶೋಧಕರ ತಂಡವೂ ಉಚಿತವಾಗಿ ‘ಫೋಲ್ಡ್‌ಸ್ಕೋಪ್’ ನೀಡುವ ಕಾರ್ಯವನ್ನೂ ಮಾಡುತ್ತಿದೆ. ಈವರೆಗೆ 80 ಸಾವಿರ ‘ಫೋಲ್ಡ್‌ಸ್ಕೋಪ್’ ಹಂಚಿದ್ದು, ಇದಕ್ಕಾಗಿ ದೇಣಿಗೆಯನ್ನೂ ನೀಡಬಹುದಾಗಿದೆ.

ಸೃಜನಶೀಲರ ತಂಡ

ಸೃಜನಶೀಲ, ಕ್ರಿಯಾತ್ಮಕ ಯೋಚನೆಗಳಿಂದ ಅತಿ ಕಡಿಮೆ ವೆಚ್ಚದಲ್ಲಿ ಮನುಷ್ಯ ಆರೋಗ್ಯ ಸುಧಾರಣೆಗೆ ಅಗತ್ಯವಾದ ಹಲವು ಸಂಶೋಧನೆಗಳನ್ನು ಮನುಪ್ರಕಾಶ್ ಬಳಗ ನಡೆಸುತ್ತಿದೆ. ವಿಶ್ವದ 3 ಶತಕೋಟಿ ಜನರಿಗೆ ಕಾಯಿಲೆ ಹರಡುವಷ್ಟು ಪ್ರಭಾವ ಹೆಚ್ಚಿಸಿಕೊಂಡಿರುವ ಸೊಳ್ಳೆಗಳ ಭೌಗೋಳಿಕ ಮಾಹಿತಿ ಸಂಗ್ರಹದಲ್ಲಿಯೂ ಈ ತಂಡ ತೊಡಗಿಸಿಕೊಂಡಿದೆ. ಇದಕ್ಕಾಗಿ ಮೊಬೈಲ್‍ನಲ್ಲೇ ಸೊಳ್ಳೆಯ ಸದ್ದು ಸಂಗ್ರಹಿಸಿ, ಆರೋಗ್ಯ ರಕ್ಷಿಸು ಯೋಜನೆ ಕಾರ್ಯಗತವಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಚಿbuzz.sಣಚಿಟಿಜಿoಡಿಜ.eಜu ವೆಬ್‍ಪುಟದಿಂದ ಪಡೆಯಬಹುದು.

‘ಫೋಲ್ಡ್‌ಸ್ಕೋಪ್’ ಹೇಗಿದೆ?

ಪಠ್ಯಪುಸ್ತಕದ ಚಿತ್ರಗಳಲ್ಲಿ ಅಥವಾ ಕಲ್ಪನೆಯಲ್ಲಿ ಮಾತ್ರ ಕಾಣುತ್ತಿದ್ದ ಸೂಕ್ಷ್ಮಜೀವಿಗಳನ್ನು ನೈಜವಾಗಿ ಕಾಣುವ ಅನುಭವ ಪುಳಕಗೊಳಿಸುತ್ತದೆ. ಇಡೀ ಸೂಕ್ಷ್ಮಮಂಡಲವೇ ಕಣ್ಣಿಗೆ ಗೋಚರಿಸುತ್ತದೆ. ಪಾಲಿ–ಪ್ರೊಪಿಲೀನ್ ಪದರವನ್ನು ಒಳಗೊಂಡ ಕಾಗದದ ‘ಫೋಲ್ಡ್‌ಸ್ಕೋಪ್’, ದೊಡ್ಡ ಹಾಳೆಯ ರೂಪದಲ್ಲಿರುತ್ತದೆ. ಅದರೊಂದಿಗೆ ನೀಡಿರುವ ಸೂಚನೆಗಳನ್ನು ಅನುಸರಿಸಿ, ಸೂಕ್ಷ್ಮದರ್ಶಕದ ವಿವಿಧ ಭಾಗಗಳನ್ನು ಬಿಡಿಸಿಕೊಂಡು ಕ್ರಮವಾಗಿ ಜೋಡಿಸಿದರೆ ‘ಫೋಲ್ಡ್‌ಸ್ಕೋಪ್’ ಸಿದ್ಧ.

* ಬೇಸಿಕ್ ಕ್ಲಾಸ್‍ರೂಂ ಫೋಲ್ಡ್‌ಸ್ಕೋಪ್‌:

* ಪುಟ್ಟ ಗಾಜಿನ ಲೆನ್ಸ್ (140x ವರ್ಧಿಸುವ ಸಾಮರ್ಥ್ಯ, 2ಮೈಕ್ರಾನ್‌ ರೆಸ್ಯೂಲೂಷನ್‌)

* ಮೊಬೈಲ್‍ಫೋನ್ ಲೆನ್ಸ್‌ನೊಂದಿಗೆ ಕೂಡಿಸಲು ಕಪ್ಲರ್‌ಗಳು

* ಕಾಗದದ ಸ್ಲೈಡ್‍ಗಳು * ಸೂಚನಾ ಹಾಳೆಗಳು

* ‘ಫೋಲ್ಡ್‌ಸ್ಕೋಪ್’ ಇಡಲು ನೈಲಾನ್ ಚೀಲ 

* ವಿಶೇಷ ಗುರುತಿಗೆ ಐಡಿ ಸ್ಟಿಕ್ಕರ್

* ಎಲ್‍ಇಡಿ/ ವರ್ಧಕ

ಏನೆಲ್ಲ ಕಂಡಿದೆ?

ಪ್ರತಿಯೊಬ್ಬರಿಗೂ ವಿಜ್ಞಾನ ಸಿಗಬೇಕು, ವಿಜ್ಞಾನವನ್ನು ಸಮೂಹ ಹೇಗೆ ಬಳಸಿಕೊಳ್ಳುತ್ತದೆ, ಏನು ಪಡೆಯುತ್ತದೆ ಎಂಬುದನ್ನು ಸಂಗ್ರಹಿಸುವುದಕ್ಕಾಗಿಯೇ ‘ಮೈಕ್ರೊಕಾಸ್ಮೋಸ್’ (microcosmos.foldscope.com) ಪುಟವನ್ನು ಸಂಶೋಧಕರ ತಂಡ ತೆರೆದಿದೆ. ಈವರೆಗೂ ಕಂಡಿರುವ ಅನುಭವಗಳು ಹಲವು ರೀತಿ ವ್ಯಕ್ತವಾಗಿರುವುದನ್ನು ಇಲ್ಲಿ ಕಾಣಬಹುದು. ಎಲೆ ಮತ್ತು ಹುಳುಗಳ ಅಧ್ಯಯನಗಳ ಮೂಲಕ ಕೃಷಿ ಚಟುವಟಿಕೆಗಳಿಗೆ ಉಪಯೋಗ, ಬೆಳೆಗೆ ಹಾನಿ ಮಾಡುವ ಹುಳುಗಳ ಮೊಟ್ಟೆ ಗಮನಿಸುವುದು, ರಕ್ತ ಕಣ, ನೀರಿನ ಒಳಗಿನ ಸೂಕ್ಷ್ಮ ಜೀವಿಗಳನ್ನು ನೋಡುವುದು, ಗಾಳಿಯ ಗುಣಮಟ್ಟಕ್ಕೆ ಹಾನಿಕಾರಕ ವಸ್ತು ಪತ್ತೆ, ಮಾತ್ರೆ/ಔಷಧಿಗಳಲ್ಲಿ ನಕಲಿ ಪತ್ತೆ,... ಹೀಗೆ ಕಂಡಿರುವುದು ಅಪಾರ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು