ಶನಿವಾರ, ಸೆಪ್ಟೆಂಬರ್ 26, 2020
23 °C
ಮೈಕ್ರೊಸಾಫ್ಟ್‌ನಿಂದ ಹೊಸ ಮೊಬೈಲ್‌ ಆ್ಯಪ್‌

ಫೋಟೊ ತೆಗೆದು ಎಕ್ಸೆಲ್‌, ವರ್ಡ್‌ಗೆ ಮಾಹಿತಿ ಪರಿರ್ವತಿಸಿ; ಇದು ಹೊಸ 'ಆಫೀಸ್‌'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸ ಆಫೀಸ್‌ ಮೊಬೈಲ್‌ ಆ್ಯಪ್‌

ದಾಖಲೆಗಳನ್ನು ಸ್ಕ್ಯಾನ್‌ ಮಾಡಲು, ಪಿಡಿಎಫ್‌ ಫೈಲ್‌ಗಳನ್ನು ತೆರೆಯಲು, ಅಗತ್ಯ ಅಂಶಗಳನ್ನು ಪಟ್ಟಿ ಮಾಡಿಕೊಳ್ಳಲು, ಸಭೆಗಳಲ್ಲಿ ಪ್ರಸ್ತುತ ಪಡಿಸುವ ಚಿತ್ರಸಹಿತ ವಿವರಣೆ ಸಿದ್ಧಪಡಿಸಲು,..ಹೀಗೆ ಒಂದೊಂದು ಕೆಲಸಕ್ಕೂ ಒಂದೊಂದು ಪ್ರತ್ಯೇಕ ಮೊಬೈಲ್‌ ಆ್ಯಪ್‌ಗಳು ಲಭ್ಯ. ಆದರೆ, ಇಂಥ ಕೆಲಸಗಳೆಲ್ಲ ಒಂದೇ ಅಪ್ಲಿಕೇಷನ್‌ ಮೂಲಕ ಮಾಡಿ ಮುಗಿಸಬಹುದಾದರೆ?!

ಸ್ಮಾರ್ಟ್‌ಫೋನ್‌ ಬಳಕೆದಾರರನ್ನು ಗಮನದಲ್ಲಿರಿಸಿಕೊಂಡು ಮೈಕ್ರೊಸಾಫ್ಟ್‌ ಬಹುಬಳಕೆಯ 'ಆಫೀಸ್‌ ಆ್ಯಪ್‌'ನ್ನು ಪರಿಷ್ಕರಿಸಿದೆ. ಎಂಎಸ್‌ ವರ್ಡ್‌, ಎಕ್ಸೆಲ್‌ ಮತ್ತು ಪವರ್‌ಪಾಯಿಂಟ್‌ ಮೂರೂ ಅಪ್ಲಿಕೇಷನ್‌ಗಳನ್ನು ಸಂಯೋಜಿಸಿ ಹೊಸ ಆಫೀಸ್‌ ಆ್ಯಪ್‌ ಪರಿಚಯಿಸಿದೆ.  

ಪ್ರತ್ಯೇಕ ಆ್ಯಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುವುದು ಇದರಿಂದ ತಪ್ಪಲಿದೆ. ಸಮಯದ ಉಳಿತಾಯವೂ ಈ ಹೊಸ ಆ್ಯಪ್‌ ಮೂಲಕ ಸಾಧ್ಯವಾಗಲಿದೆ. ಆ್ಯಂಡ್ರಾಯ್ಡ್‌ ಮತ್ತು ಐಒಎಸ್‌ ಎರಡೂ ಆಪರೇಟಿಂಗ್‌ ಸಿಸ್ಟಮ್‌ಗಳಲ್ಲಿ ಆ್ಯಪ್‌ ದೊರೆಯಲಿದೆ. ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಹಾಗೂ ಟ್ಯಾಬ್‌ಗಳ ಮೂಲಕ ಸಾಧ್ಯವಾಗುವಷ್ಟೇ ಪರಿಣಾಮಕಾರಿಯಾಗಿ ಮೊಬೈಲ್‌ನಲ್ಲಿ 'ಆಫೀಸ್‌' ಬಳಕೆ ಮಾಡಲು ಅನುವಾಗುವಂತೆ ಮೈಕ್ರೊಸಾಫ್ಟ್‌ ಆ್ಯಪ್‌ ಅಭಿವೃದ್ಧಿ ಪಡಿಸಿದೆ. 

'ಮುಖ್ಯಾಂಶಗಳನ್ನು ಬರೆದುಕೊಳ್ಳುವುದು(ನೋಟ್‌), ಅಗತ್ಯ ಮಾಹಿತಿಯನ್ನು ಸ್ಕ್ಯಾನ್‌ ಮಾಡುವುದು, ಅಂಕಿ ಅಂಶಗಳ ಪಟ್ಟಿಯನ್ನು ಪರಿವರ್ತಿಸಿಕೊಳ್ಳುವುದು, ಪಿಡಿಎಫ್‌ ಪ್ರತಿಯನ್ನು ರೂಪಿಸುವುದು ಹಾಗೂ ಹಂಚಿಕೊಳ್ಳುವಂತಹ ಹಲವು ಕಾರ್ಯಗಳು ಈ ಆ್ಯಪ್‌ ಮೂಲಕ ಸಾಧ್ಯವಿದೆ' ಎಂದು ಮೈಕ್ರೊಸಾಫ್ಟ್‌ 365ನ ಕಾರ್ಪೊರೇಟ್‌ ವೈಸ್‌ ಪ್ರೆಸಿಡೆಂಟ್‌ ಜೇರ್ಡ್‌ ಸ್ಪೆಟಾರೊ ವಿವರಿಸಿದ್ದಾರೆ. 

ಇದನ್ನೂ ಓದಿ: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲ ಬದುಕು ಬದಲಿಸಿದ ಆ ಕ್ಷಣ...

ಪ್ರಸ್ತುತ ಸಾರ್ವಜನಿಕರಿಂದ ಪಡೆಯುವ ಪ್ರತಿಕ್ರಿಯೆಗಳ ಮೂಲಕ ಆ್ಯಪ್‌ನಲ್ಲಿನ ಲೋಪಗಳನ್ನು ಸರಿಪಡಿಸುವುದು, ಕಾರ್ಯಚಟುವಟಿಕೆಗಳನ್ನು ಸರಳಗೊಳಿಸುವುದು ಹಾಗೂ ಹೊಸ ಆಯ್ಕೆಗಳನ್ನು ಸೇರಿಸುವ ಕೆಲಸದಲ್ಲಿ ಮೈಕ್ರೊಸಾಫ್ಟ್ ತೊಡಗಿದೆ. ಆ್ಯಂಡ್ರಾಯ್ಡ್‌ ಬಳಕೆದಾರರು 'ಗೂಗಲ್‌ ಪ್ಲೇ ಸ್ಟೋರ್‌'ನಲ್ಲಿ ಮತ್ತು ಆ್ಯಪಲ್‌ ಐಫೋನ್‌ ಬಳಕೆದಾರರು ಆ್ಯಪಲ್‌ನ ಟೆಸ್ಟ್‌ಫ್ಲೈಟ್‌ ಪ್ರೊಗ್ರಾಮ್‌ನಿಂದ ಹೊಸ ಆ್ಯಪ್‌ ಬಳಕೆಗೆ ತೆರೆದುಕೊಳ್ಳಬಹುದಾಗಿದೆ. ಆ್ಯಂಡ್ರಾಯ್ಡ್‌ ಬಳಕೆದಾರರು ಮೊದಲು ಮೈಕ್ರೊಸಾಫ್ಟ್‌ ವೆಬ್‌ಸೈಟ್‌ನಿಂದ ಮುನ್ನೋಟ ಪಡೆಯುವ ಲಿಂಕ್‌ನಲ್ಲಿ ಪ್ರವೇಶಿಸಿ ಜಿಮೇಲ್‌ ಲಾಗಿನ್‌ ಆಗುವ ಮೂಲಕ ಹೊಸ ಆಫೀಸ್‌ ಆ್ಯಪ್‌ ಬಳಕೆಯ ಅನುಭವ ಪಡೆಯಬಹುದಾಗಿದೆ. ಸಾರ್ವಜನಿಕವಾಗಿ ಈ ಆ್ಯಪ್‌ ಈವರೆಗೂ ಬಿಡುಗಡೆಯಾಗದ ಕಾರಣ, ನೇರವಾಗಿ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಇದು ಲಭ್ಯವಿಲ್ಲ.

ಫೋಟೊ ಹಿಡಿದು ಮಾಹಿತಿ ಗ್ರಹಿಸಿ: ಮೊಬೈಲ್‌ ಬಳಕೆದಾರರು ಸಾಮಾನ್ಯವಾಗಿ ವಿಷಯ ಸಂಗ್ರಹಿಸಿಕೊಳ್ಳಲು ಅಥವಾ ಮಾಹಿತಿ ಹಂಚಿಕೊಳ್ಳಲು ದಾಖಲೆಗಳ ಫೋಟೊ ತೆಗೆದುಕೊಳ್ಳುತ್ತಾರೆ. ಹೊಸ ಆಫೀಸ್‌ ಆ್ಯಪ್‌ ಮೂಲಕ ತೆಗೆಯುವ ಚಿತ್ರಗಳಿಂದ ಸುಲಭವಾಗಿ ಮಾಹಿತಿಯನ್ನು ಪದ ರೂಪಕ್ಕೆ ಪರಿವರ್ತಿಸಿಕೊಳ್ಳಬಹುದು. ವರ್ಡ್‌ ಫೈಲ್‌ ಅಥವಾ ಎಕ್ಸೆಲ್‌ ಫೈಲ್‌ಗಳಲ್ಲಿ ಮಾಹಿತಿ ತೆರೆದು ಅಗತ್ಯ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಿದೆ. 

ಇನ್ನು ಮೈಕ್ರೊಸಾಫ್ಟ್‌ ತನ್ನ ಪರಿಷ್ಕೃತ ಎಡ್ಜ್‌ ಬ್ರೌಸರ್‌ನ್ನು ಜನವರಿ 15ರಿಂದ ಎಲ್ಲ ಅಂತರ್ಜಾಲ ಬಳಕೆದಾರರಿಗೂ ಸಿಗುವಂತೆ ಮಾಡಲಿದೆ. ಪ್ರಸ್ತುತ ವಿಂಡೋಸ್‌ 10, ವಿಂಡೋಸ್‌ 8ಎಕ್ಸ್‌, ಮ್ಯಾಕ್‌ಒಸ್‌, ಐಒಎಸ್ ಹಾಗೂ ಆ್ಯಂಡ್ರಾಯ್ಡ್‌ ಸಾಧನಗಳಲ್ಲಿ ಎಡ್ಜ್‌ ಬ್ರೌಸರ್‌ ಲಭ್ಯವಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು