ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟಿಫಿಕೇಶನ್ ಅನಿರೀಕ್ಷಿತ ಅತಿಥಿ

Last Updated 13 ಜುಲೈ 2021, 19:30 IST
ಅಕ್ಷರ ಗಾತ್ರ

ನೀವು ನಿಮ್ಮ ಗ್ರಾಹಕರ ಜೊತೆಗೆ ಮಾತನಾಡುತ್ತಿದ್ದೀರಿ. ಪಕ್ಕದಲ್ಲೇ ಗ್ರಾಹಕರ ಕಣ್ಣಳತೆಯಲ್ಲೇ ನಿಮ್ಮ ಸ್ಮಾರ್ಟ್‌ಫೋನ್ ಟೇಬಲ್‌ ಮೇಲೆ ಇದೆ. ಏನೋ ಮಾತನಾಡುತ್ತಿರುವಾಗಲೇ ಒಂದು ವಾಟ್ಸ್‌ಆ್ಯಪ್‌ ಮೆಸೇಜ್‌ ನಿಮ್ಮ ಸ್ನೇಹಿತನಿಂದ ಬಂದಿದೆ. ವಾಟ್ಸ್‌ಆ್ಯಪ್‌ನಲ್ಲಿ ನಿಮಗೆ ಮೆಸೇಜ್ ಕಳಿಸಿದ ಸ್ನೇಹಿತ ಅತ್ಯಂತ ಆತ್ಮೀಯ. ಬೈಗುಳದಿಂದಲೇ ಮಾತು ಶುರು ಮಾಡುವವ. ಅವನು ಕಳಿಸಿದ ಮೊದಲ ಶಬ್ದವೇ ಶುದ್ಧ ಬೈಗುಳ! ನೋಟಿಫಿಕೇಶನ್ ಬರುತ್ತಿದ್ದಂತೆಯೇ ಸ್ಮಾರ್ಟ್‌ಫೋನ್‌ ಒಮ್ಮೆ ಬೆಳಗುತ್ತದೆ. ನೋಟಿಫಿಕೇಶನ್ ತೋರಿಸಿ ನಾಲ್ಕೈದು ಸೆಕೆಂಡುಗಳಲ್ಲಿ ಮೌನವಾಗುತ್ತದೆ. ಆದರೆ, ಒಂದು ಶಬ್ದ ಓದಲು ಒಂದು ಸೆಕೆಂಡ್ ಸಾಕು. ನಿಮ್ಮ ಗ್ರಾಹಕರು ಅದನ್ನು ಓದಿದರೆ ನಿಮಗೆ ಮುಜುಗರ!

ಈ ನೋಟಿಫಿಕೇಶನ್ ಎಂಬುದು ಎರಡು ಅಲಗಿನ ಕತ್ತಿ. ಅದರಲ್ಲಿ ಬೇಕಾದ್ದೂ ಇರುತ್ತದೆ, ಬೇಡವಾದದ್ದೂ ಇರುತ್ತದೆ. ಅವೆರಡನ್ನೂ ಸರಿಯಾಗಿ ನಿಭಾಯಿಸಬೇಕಾದ್ದು ಅತ್ಯಂತ ಮುಖ್ಯ.

ನೋಟಿಫಿಕೇಶನ್‌ಗಳಲ್ಲಿ ಹಲವು ರೀತಿಯವು ಇರುತ್ತವೆ. ಅವುಗಳ ಮೂಲವೂ ಒಂದೊಂದಾಗಿರುತ್ತವೆ. ಒಂದೊಂದು ಆ್ಯಪ್‌ಗಳಲ್ಲೂ ಒಂದೊಂದು ವಿಧದ ನೋಟಿಫಿಕೇಶನ್‌ಗಳು ಬರುತ್ತವೆ. ನಮ್ಮ ನಮ್ಮ ಅಗತ್ಯಕ್ಕೆ ಅವುಗಳಿಗೆ ಅನುಮತಿ ನೀಡಬೇಕು. ಹೀಗೆ ಅನುಮತಿ ನೀಡುವಾಗ ಆ್ಯಪ್‌ಗಳ ಉದ್ದೇಶವೇನು ಎನ್ನುವುದು ಅತ್ಯಂತ ಮುಖ್ಯ.

ಕೆಲವು ಸುದ್ದಿ ಆ್ಯಪ್‌ಗಳಂತೂ ಸಣ್ಣ ಸಣ್ಣ ಸುದ್ದಿಗಳಿಗೂ ಪುಶ್ ನೋಟಿಫಿಕೇಶನ್‌ಗಳನ್ನು ಕಳುಹಿಸುತ್ತವೆ. ಇನ್ನೂ ಕೆಲವು ಆ್ಯಪ್‌ಗಳು ಬೇಕು ಬೇಡದ್ದಕ್ಕೆಲ್ಲ ಪುಶ್ ನೋಟಿಫಿಕೇಶನ್ ಕಳುಹಿಸುತ್ತವೆ. ಅವುಗಳೆಲ್ಲದರ ಮಧ್ಯೆ ನಿಜಕ್ಕೂ ಬೇಕಿರುವ, ಗಮನಿಸಬೇಕಿರುವ ಸುದ್ದಿಯೋ, ಮಾಹಿತಿಯೋ ಕಣ್ಮರೆಯಾಗುತ್ತದೆ. ಇಲ್ಲವಾದರೆ, ಈ ಎಲ್ಲ ಆ್ಯಪ್ ನೋಟಿಫಿಕೇಶನ್ ಎಂಬ ಸಮುದ್ರದಲ್ಲಿ ಒಳ್ಳೆಯದು ಬೇಡದ್ದನ್ನೆಲ್ಲ ಪ್ರತ್ಯೇಕಿಸಲಾಗದೆ ಎಲ್ಲವನ್ನೂ ಒಟ್ಟಿಗೆ ಕ್ಲಿಯರ್ ಮಾಡಿ ಕುಳಿತುಬಿಡುತ್ತೇವೆ.

ನೋಟಿಫಿಕೇಶನ್ ಎಂಬುದು ಸ್ಮಾರ್ಟ್‌ಫೋನ್‌ಗಳಲ್ಲಿ ಆ್ಯಪ್‌ಗಳು ತಮ್ಮ ವಿಸಿಟ್ ಹೆಚ್ಚಿಸಿಕೊಳ್ಳುವುದಕ್ಕೆ ಹೂಡುವ ತಂತ್ರ. ಆದರೆ, ಇದು ಬಳಕೆದಾರರ ವಿಚಾರಕ್ಕೆ ಬಂದರೆ ಉಂಟುಮಾಡುವ ಕಿರಿಕಿರಿಯೇ ಹೆಚ್ಚು. ಅದರಲ್ಲೂ ಕ್ರೋಮ್‌ ಬ್ರೌಸರ್‌ ಬಳಸಿ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ, ಅಲ್ಲಿ ಕೇಳುವ ನೋಟಿಫಿಕೇಶನ್‌ಗೆ ಅನುಮತಿ ಕೊಟ್ಟರಂತೂ ಕ್ರೋಮ್‌ನಿಂದ ಒಂದರ ಹಿಂದೊಂದು ನೋಟಿಫಿಕೇಶನ್‌ಗಳು ಬರಲಾರಂಭಿಸುತ್ತವೆ.

ನೋಟಿಫಿಕೇಶನ್‌ಗಳನ್ನು ಎರಡು ರೀತಿಯಲ್ಲಿ ನಿಯಂತ್ರಿಸಬಹುದು. ಆ್ಯಪ್‌ಗಳಲ್ಲಿ ಬೇಕಾದ್ದಕ್ಕೆ ಮಾತ್ರ ಅನುಮತಿ ನೀಡುವುದು ಒಂದು ವಿಧಾನವಾದರೆ, ನಿರ್ದಿಷ್ಟ ಆ್ಯಪ್‌ಗಳ ಎಲ್ಲ ನೋಟಿಫಿಕೇಶನ್‌ಗಳನ್ನು ಫೋನ್ ಸೆಟ್ಟಿಂಗ್ಸ್‌ಗೆ ಹೋಗಿ ನಿರ್ಬಂಧಿಸುವುದು ಒಂದು ವಿಧಾನ. ಆ್ಯಪ್‌ಗಳ ಒಳಗೆ ಹೋಗಿ, ಸೆಟ್ಟಿಂಗ್ಸ್‌ನಲ್ಲಿ ಬೇಕಾದ ನೋಟಿಫಿಕೇಶನ್‌ಗೆ ಮಾತ್ರ ಅನುಮತಿ ನೀಡುವುದು ಹೆಚ್ಚು ಉತ್ತಮವಾದ ವಿಧಾನ. ಏಕೆಂದರೆ, ಇಲ್ಲಿ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡ ಮೂಲ ಉದ್ದೇಶಕ್ಕೆ ಪೂರಕವಾಗಿ ಬಳಸಲು ಇದರಿಂದ ಅನುಕೂಲವಾಗುತ್ತದೆ.

ಇದಲ್ಲವಾದರೆ, ಫೋನ್‌ನ ಸೆಟ್ಟಿಂಗ್ಸ್‌ಗೆ ಹೋಗಿ ಅದರಲ್ಲಿ ನಿರ್ದಿಷ್ಟ ಆ್ಯಪ್‌ಗಳಿಂದ ಎಲ್ಲ ನೋಟಿಫಿಕೇಶನ್‌ಗಳನ್ನೂ ಸ್ಥಗಿತಗೊಳಿಸುವುದು ಇನ್ನೊಂದು ವಿಧಾನ. ಇದರಲ್ಲಿ ಆ ಆ್ಯಪ್‌ನಿಂದ ಬರುವ ಎಲ್ಲ ನೋಟಿಫಿಕೇಶನ್ ಸ್ಥಗಿತಗೊಳ್ಳುತ್ತವೆ.

ಇದೆಲ್ಲಕ್ಕಿಂತ ಅತ್ಯಂತ ಮುಜುಗರಕ್ಕೀಡು ಮಾಡುವ ಇನ್ನೊಂದು ನೋಟಿಫಿಕೇಶನ್ ಎಂದರೆ, ಲಾಕ್‌ ಸ್ಕ್ರೀನ್‌ನಲ್ಲಿ ಕಾಣಿಸುವಂಥದ್ದು.‌ ಫೋನ್ ಲಾಕ್ ಆಗಿದ್ದಾಗಲೂ ಇದು ಕಾಣಿಸುತ್ತದೆ. ಕೆಲವು ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿದಾಗಲೇ ಇದನ್ನು ಆನ್ ಆಗಿರುತ್ತವೆ. ಅದರಲ್ಲೂ ವಾಟ್ಸ್‌ಆ್ಯಪ್‌ನಲ್ಲಂತೂ ಲಾಕ್‌ ಸ್ಕ್ರೀನ್ ನೋಟಿಫಿಕೇಶನ್ ಎರಡು ರೀತಿಯಲ್ಲಿರುತ್ತವೆ. ಕೇವಲ ಮೆಸೇಜ್ ಬಂದಿದೆ ಎಂದಷ್ಟೇ ಹೇಳುವ ಮತ್ತು ಯಾರಿಂದ ಯಾವ ಮೆಸೇಜ್ ಬಂದಿದೆ ಎಂದು ಹೇಳುವ ನೋಟಿಫಿಕೇಶನ್ ಕೂಡ ಇರುತ್ತದೆ. ಇವನ್ನು ಅಗತ್ಯಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬೇಕಾಗುತ್ತದೆ.

ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಇದ್ದು, ತುಂಬ ಸಮಯ ಫೋನ್ ಲಾಕ್ ಮಾಡಿದ್ದಾಗ, ಮಲಗುವ ಸಮಯದಲ್ಲಿ ನೋಟಿಫಿಕೇಶನ್‌ಗಳು ಬಂದು ಕಿರಿಕಿರಿ ಮಾಡುವುದಿಲ್ಲ. ಬದಲಿಗೆ ಲಾಕ್ ಓಪನ್ ಮಾಡುತ್ತಿದ್ದ ಹಾಗೆ ಅವೆಲ್ಲ ಒಟ್ಟಿಗೆ ಕಾಣಿಸಿಕೊಳ್ಳುತ್ತವೆ. ಇದು ಬ್ಯಾಟರಿ ನಿರ್ವಹಣೆಯ ವಿಚಾರದಲ್ಲಿ ಉತ್ತಮ ವಿಧಾನವೂ ಹೌದು. ಪ್ರತಿ ಬಾರಿ ನೋಟಿಫಿಕೇಶನ್ ಬಂದು ಸ್ಕ್ರೀನ್ ಲೈಟ್‌ ಬೆಳಗುವುದರಿಂದ ಬ್ಯಾಟರಿ ಬೇಗ ಖಾಲಿಯಾಗುತ್ತದೆ.

ಟೇಬಲ್ ಮೇಲೆ ಫೋನ್ ಇಟ್ಟುಕೊಂಡು ಕೆಲಸಕ್ಕೆ ಕುಳಿತರೆ ಪ್ರತಿ ಬಾರಿ ನೋಟಿಫಿಕೇಶನ್ ಬಂದಾಗಲೂ ನಮ್ಮ ಗಮನ ಅತ್ತ ಕಡೆಗೆ ಸೆಳೆಯುತ್ತದೆ. ಇದು ಕೆಲಸದ ಮೇಲೆ ಗಮನ ಹರಿಸುವಲ್ಲಿ ಲೋಪವಾಗಬಹುದು. ಹೀಗಾಗಿ, ಮನೆಗೆ ಬರುವ ಅನಪೇಕ್ಷಿತ ಅತಿಥಿಗಳನ್ನು ನಿಯಂತ್ರಿಸುವ ರೀತಿಯಲ್ಲೇ ನಮ್ಮ ಸ್ಮಾರ್ಟ್‌ಫೋನ್‌ಗೆ ಬರುವ ಅನಗತ್ಯ ನೋಟಿಫಿಕೇಶನ್‌ಗಳನ್ನೂ ಸರಿಯಾಗಿ ನಿಯಂತ್ರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT