ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ಕೃತಿಗಳ ಡಿಜಿಟಲೀಕರಣ

Last Updated 31 ಅಕ್ಟೋಬರ್ 2019, 14:55 IST
ಅಕ್ಷರ ಗಾತ್ರ

ಮಾಹಿತಿ ಮತ್ತು ತಂತ್ರಜ್ಞಾನ ವಲಯ ವಿಸ್ತಾರವಾದಂತೆ ಎಲ್ಲ ವಿಷಯಗಳು ಬೆರಳ ತುದಿಯಲ್ಲೇ ಸಿಗುತ್ತಿವೆ. ಯಾವುದೇ ವಿಷಯ ಹುಡುಕಲು ಥಟ್ಟನೆ ಗೂಗಲ್‌ ಮೊರೆ ಹೋಗುವ ನಮಗೆ, ಹಳೆಯ ಪುಸ್ತಕ ಅಥವಾ ಪತ್ರಿಕೆ ವಿಷಯ ಬಂದಾಗ ಮಾತ್ರ, ಲೈಬ್ರರಿಯನ್ನೇ ಆಶ್ರಯಿಸುತ್ತೇವೆ. ಅದರಲ್ಲಿಯೂ ಕನ್ನಡ ಸಾಹಿತ್ಯದ ಮಾಹಿತಿಗಳಿಗಾಗಿ, ಹಳೆಯ ಪುಸ್ತಕಗಳ ಪುಟಗಳನ್ನು ತಿರುವುತ್ತೇವೆ. ಇಂಥ ಪುಸ್ತಕಗಳು ಆನ್‌ಲೈನ್‌ನಲ್ಲಿ ಸಿಗುವಂತಾದರೆ? ಅಲ್ಲಿರುವ ಮಾಹಿತಿ ಸುಲಭವಾಗಿ ಸರ್ಚ್ ಮಾಡಲು ಅವಕಾಶವಿದ್ದಿದ್ದರೆ...?

ಇಂಥ ಹಲವು ಆಶಯ ಪ್ರಶ್ನೆಗಳಿಗೆ ಸಂಚಯ ಡಾಟ್‌ ಆರ್ಗ್‌ (sanchaya.org) ಉತ್ತರ ನೀಡಲು ಮುಂದಾಗಿದೆ. ಈ ಸಂಸ್ಥೆ ಕನ್ನಡದ ಹಳೆಯ ಪುಸ್ತಕ ಗಳನ್ನು ಡಿಜಟಲೀಕರಣಗೊಳಿಸುತ್ತಿದೆ. ಮುಕ್ತ ತಂತ್ರಾಂಶದ ಮೂಲಕ ಮುಕ್ತ ಮಾಹಿತಿ ಮತ್ತು ಮುಕ್ತ ಜ್ಞಾನದ ವಾತಾವರಣವನ್ನು ರೂಪಿಸುವ ನಿಟ್ಟಿನಲ್ಲಿ ಸದಾ ಕಾರ್ಯ ನಿರತವಾಗಿರುವ ಸಂಚಯವು ಸಾಹಿತ್ಯ, ಸಂಶೋಧನೆ, ಅಧ್ಯಯನ ಮತ್ತು ಸಮುದಾಯ (ಕ್ರೌಡ್ ಸೋರ್ಸಿಂಗ್) ಮೂಲಕ ಕನ್ನಡ ಭಾಷಾ ತಂತ್ರಜ್ಞಾನದ ಅವಶ್ಯಕತೆಗಳನ್ನು ಹುಡುಕಿ ಅವುಗಳನ್ನು ಪೂರೈಸುವ ಸಾಧ್ಯತೆಗಳನ್ನು ಕನ್ನಡಿಗರ ಮುಂದೆ ಇಡುತ್ತಿದೆ. Servants of knowledge ಸಮುದಾಯ ಯೋಜನೆಯಡಿಯಲ್ಲಿ ಕಾಪಿರೈಟ್ ಹೊರತಾದ ಕನ್ನಡದ ಅಮೂಲ್ಯ ಪುಸ್ತಕಗಳನ್ನು ಡಿಜಿಟಲೀಕರಿಸಿ ಇಂಟರ್ನೆಟ್ ಆರ್ಕೈವ್ ಮೂಲಕ ಲಭ್ಯವಾಗಿಸುವ ಕಾರ್ಯವನ್ನು ಸಂಚಯ ಮಾಡುತ್ತಿದೆ.

ಏನಿದು ಯೋಜನೆ?

ಕಾಪಿರೈಟ್ಸ್ ಇಲ್ಲದ ಪುಸ್ತಕಗಳನ್ನು ಸ್ಕ್ಯಾನ್ ಮಾಡುವ ಮೂಲಕ ಪುಸ್ತಕ ಡಿಜಿಟಲೀಕರಣ ಮಾಡುವ ಯೋಜನೆ ಇದು. ಹೀಗೆ ಡಿಜಿಟಲೀಕರಣಗೊಂಡ ಪುಸ್ತಕಗಳು http://archive.org ನಲ್ಲಿ ಲಭ್ಯವಾಗುತ್ತದೆ. ಗೂಗಲ್ ಸರ್ಚ್ ಮೂಲಕ ಅಥವಾ ಪುಸ್ತಕ ಸಂಚಯ ತಾಣದ (‌https://pustaka.sancahya.net) ಮೂಲಕವೂ ಈ ಪುಸ್ತಕಗಳು ಪುಸ್ತಕ ಪ್ರೇಮಿಗಳಿಗೆ ತಕ್ಷಣ ಸಿಗುವಂತಾಗುತ್ತದೆ. ಈ ಯೋಜನೆ ಮುಂದುವರೆಸಲು ಪುಸ್ತಕಗಳ ಸ್ಕ್ಯಾನಿಂಗ್, ನಿರ್ವಹಣೆ ಮತ್ತು ಅಗತ್ಯವಾದ ಮಾನವ ಸಂಪನ್ಮೂಲಗಳ ಜತೆ ಸಾಂಸ್ಥಿಕ ಬೆಂಬಲವನ್ನು ಸಂಚಿ ಫೌಂಡೇಶನ್ (‌https://sanchifoundation.org) ಒದಗಿಸುತ್ತಿದೆ.

2019 ಏಪ್ರಿಲ್‌ನಿಂದ ಐ.ಎ.ಎಸ್‌ಸಿಯಲ್ಲಿರುವ ಆರ್ಕೈವ್ ಡಾಟ್ ಓಆರ್‌ಜಿ ನ ಸ್ಕ್ಯಾನರ್ ಬಳಸಿ ಪುಸ್ತಕಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಕನ್ನಡ, ಇಂಗ್ಲಿಷ್‌, ಮಲಯಾಳಂ, ಸಿಂಧಿ ಭಾಷೆಗಳಲ್ಲಿ 800ಕ್ಕೂ ಹೆಚ್ಚು ಪುಸ್ತಕಗಳನ್ನು, ‌2.5 ಲಕ್ಷ ಪುಟಗಳನ್ನು ಇದುವರೆಗೆ ಸ್ಕ್ಯಾನ್ ಮಾಡಲಾಗಿದೆ.

ಕನ್ನಡದ ಮೊದಲ ಭೂಮಿಶಾಸ್ತ್ರ, ಕೃಷಿ, ‍ತೋಟಗಾರಿಕೆ, ಔಷಧಶಾಸ್ತ್ರ, ಜಿ.ಟಿ ನಾರಾಯಣ ರಾವ್ ಅವರ ಪುಸ್ತಕಗಳು ಸೇರಿದಂತೆ ಅನೇಕ ವಿಜ್ಞಾನ ಪುಸ್ತಕಗಳೂ, ನೀನಾಸಂ ಒದಗಿಸಿದ ಕೆ. ವಿ. ಸುಬ್ಬಣ್ಣ ಹಾಗೂ ಕೆ.ವಿ ಅಕ್ಷರ ಅವರ ಪುಸ್ತಕಗಳು, ‍ಕೈಲಾಸಂ ಅವರ ಪುಸ್ತಕಗಳು, ಪಂ. ಚನ್ನಪ್ಪ ಎರೇಸೀಮೆ ಅವರ ಕೃತಿಗಳು, ಸಿದ್ಧಗಂಗಾ ಮಠದ ಸಿದ್ಧಗಂಗಾ ತ್ರೈಮಾಸಿಕಗಳು, ಇದುವರೆಗೆ ಡಿಜಿಟೈಜ್ ಆಗಿವೆ.‍ ಕಸ್ತೂರಿ ಮಾಸಿಕ ಪತ್ರಿಕೆಗಳೂ, ಪ್ರಭುದ್ದ ಕರ್ನಾಟಕ, ‍ವಿಜ್ಞಾನ ಕರ್ನಾಟಕ, ‍ಪಾ. ವೆಂ. ಆಚಾರ್ಯ, ಪ್ರೊ ಓ.ಎಲ್. ನಾಗಭೂಷಣ ಸ್ವಾಮಿಯವರ ಕೃತಿಗಳ ಡಿಜಿಟಲೀಕರಣ ಕಾರ್ಯ ಪ್ರಗತಿಯಲ್ಲಿದೆ.

ಏನಿದು ಸಮೂಹ ಸಂಚಯ

ಕನ್ನಡದ ತಾಂತ್ರಿಕ ಬೆಳವಣಿಗೆಗೆ ಬೇಕಾಗಿರುವ ಕೆಲಸಗಳನ್ನು ಕ್ರೌಡ್ ಸೋರ್ಸಿಂಗ್ ಮೂಲಕ ಸಾಧ್ಯವಾಗಿಸುವ ವೇದಿಕೆಯೇ ಸಮೂಹ ಸಂಚಯ (‌https://samooha.sanchaya.net).

ಪುಸ್ತಕ ಸಂಚಯ

ಡಿಜಿಟಲ್ ಲೈಬ್ರರಿಗಳಲ್ಲಿನ ಕನ್ನಡ ಪುಸ್ತಕಗಳನ್ನು ಹುಡುಕುವುದನ್ನು ಸುಲಭವಾಗಿರಿಸಲು ರೂಪುಗೊಂಡ ತಾಣ ಪುಸ್ತಕ ಸಂಚಯ( https:// pustaka.sachaya.net ). ಡಿಜಿಟಲ್ ಲೈಬ್ರರಿ ಆಫ್ ಇಂಡಿಯ, ಓಸ್ಮಾನಿಯ ವಿಶ್ವ ವಿದ್ಯಾನಿಲಯದ ಡಿಜಿಟಲ್ ಲೈಬ್ರರಿ ಹಾಗೂ ಕಣಜ ಡಿಜಿಟಲ್ ಲೈಬ್ರರಿಯಲ್ಲಿರುವ ಪುಸ್ತಕಗಳನ್ನು ಇಲ್ಲಿ ಹುಡುಕಬಹುದು. ಇಲ್ಲಿ ಈವರೆಗೆ 3150 ಲೇಖಕ/ ಲೇಖಕಿಯರ, 2587 ಪ್ರಕಾಶಕರ 6294 ಪುಸ್ತಕಗಳು ಲಭ್ಯವಿದೆ. ಇದು ಕಾಪಿರೈಟ್ ಹೊರತಾದ ಪುಸ್ತಕಗಳನ್ನು ಹುಡುಕಿ ತೆಗೆಯಲು, ಪ್ರಿಂಟ್‌ನಲ್ಲಿ ಇಲ್ಲದಿರುವ ಪುಸ್ತಕಗಳನ್ನು ಜನರಿಗೆ ಪರಿಚಯಿಸಲು ಹೊಸ ಮಾರ್ಗವನ್ನು ಲೇಖಕ/ಪ್ರಕಾಶಕರಿಗೆ ಒದಗಿಸುತ್ತದೆ.

ಸ್ಕ್ಯಾನ್ ಮಾಡುವುದು ಹೇಗೆ?

ಆರ್ಕೈವ್ ಡಾಟ್ ಓಆರ್‌ಜಿಯ ಟೇಬಲ್ ಟಾಪ್ ಸ್ಕ್ರೈಬ್ (ttscribe) ಸ್ಕ್ಯಾನರ್ ಅನ್ನು ಪಬ್ಲಿಕ್ ರಿಸೋರ್ಸ್ ಡಾಟ್ ಓಆರ್‌ಜಿಯ ಕಾರ್ಲ್ ಮಲಮದ್ ಬೆಂಗಳೂರಿನ ಐಎ‌ಎಸ್‌ಸಿಯಲ್ಲಿ ಲಭ್ಯವಾಗಿಸಿದ್ದು – ಸಂಚಯದ ಸಮುದಾಯ ಸಹಭಾಗಿತ್ವ ಯೋಜನೆ ಅಡಿ ಈ ಸ್ಕ್ಯಾನರ್ ಮೂಲಕ ಪುಸ್ತಕಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ‌archive.org ಬೆಂಬಲದ ಮೂಲಕ ಪೋಸ್ಟ್ ಪ್ರಾಸೆಸಿಂಗ್ ಕೆಲಸ ಮುಗಿದು ಪುಸ್ತಕಗಳು ಜನರಿಗೆ ಲಭ್ಯವಾಗುತ್ತದೆ. ‘ಸಂಚಯ’ ಪುಸ್ತಕಗಳ ಮೆಟಾಡೇಟಾ ಮಾಹಿತಿಯನ್ನು ಕನ್ನಡೀಕರಿಸುವ ಕೆಲಸವನ್ನೂ ಕೂಡ ಮಾಡುತ್ತಿದೆ.

ಓಸಿಆರ್

ಮುಂದಿನ ಹಂತದಲ್ಲಿ ಓಸಿಆರ್ (optical character recognition) ತಂತ್ರಜ್ಞಾನದ ಮೂಲಕ ಪುಸ್ತಕಗಳನ್ನು ಪೂರ್ಣ ಪ್ರಮಾಣದಲ್ಲಿ ಯುನಿಕೋಡ್‌ನಲ್ಲಿ ಹಾಗೂ ‌epub ಮಾದರಿಯಲ್ಲಿ ಕೂಡ ಮುಂದಿನ ದಿನಗಳಲ್ಲಿ ಕಾಣಬಹುದಾಗಿದೆ. ‍ಸುಶಾಂತ್ ಸಿನ್ಹಾ ಅವರು ಟೆಸೆರಾಕ್ಟ್ ಮತ್ತು ಗೂಗಲ್ ವಿಷನ್ ಎಪಿಐ ಬಳಸಿ archive.org ಯಲ್ಲಿ ಈಗಾಗಲೇ ಕರ್ನಾಟಕದ ಗೆಜೆಟಿಯರ್‌ಗಳನ್ನು ಯುನಿಕೋಡ್‌ಗೆ ಓಸಿಆರ್ ಮಾಡಿರುವುದನ್ನು, ‌ಅದರ ‌epub ಆವೃತ್ತಿಯನ್ನೂ ನೋಡಬಹುದು. ಇದು ಇತರೆ ಪುಸ್ತಕಗಳಿಗೂ ದೊರೆಯುವಂತೆ ಮಾಡಲಾಗುತ್ತಿದೆ.‍

ಕನ್ನಡದಲ್ಲಿ ಸುಲಭವಾಗಿ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಟೆಸೆರಾಕ್ಟ್ ಮೂಲಕ ಓಸಿಆರ್ ಮಾಡುವ ಸಾಧ್ಯತೆಯನ್ನು ಮೊದಲಿಗೆ ತೋರಿಸಿಕೊಟ್ಟ ಸಂಚಯ ಈ ತಂತ್ರಾಂಶವನ್ನು ಎಲ್ಲ ಡಿಜಿಟಲೀಕರಣ ಕೆಲಸಗಳಲ್ಲಿ ಇದನ್ನು ಬಳಸಿಕೊಳ್ಳುವುದನ್ನು ಬಹುವಾಗಿ ಪ್ರಚುರಪಡಿಸುತ್ತಿದೆ.

‌VietOCR ಬಳಸಿ ಟೆಸೆರಾಕ್ಟ್ ಮೂಲಕ ಯಾವುದೇ ಭಾಷೆಯ ಕಡತಗಳನ್ನು ಓಸಿಆರ್ ಮಾಡುವುದು ಇಂದು ಸುಲಭ.

***

ಕನ್ನಡ ಪುಸ್ತಕಗಳ ಡಿಜಿಟಲೀಕರಣ ಕೆಲಸ, ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಪಿಡಿಎಫ್, ಇ–ಪಬ್ ರೂಪದಲ್ಲಿ ಲಭ್ಯವಾಗಿಸುವುದು ಮಾತ್ರವಲ್ಲ ಕನ್ನಡ ಸಾಹಿತ್ಯ ಲೋಕದ ಎಲ್ಲ ಲೇಖಕರು, ಪುಸ್ತಕಗಳು , ಪ್ರಕಾಶಕರ ಮಾಹಿತಿ ಮುಕ್ತವಾಗಿ ಜನರಿಗೆ ಲಭ್ಯವಾಗಬೇಕು. ಇದು ಡಿಜಿಟಲೀಕರಣ ಅವಶ್ಯವಿರುವ ಕೃತಿಗಳನ್ನು ಹೆಕ್ಕಿ ಹೊರತರಲು, ಮರು ಮುದ್ರಣ ಸಾಧ್ಯತೆಯನ್ನು ಪ್ರಕಾಶಕರಿಗೆ ಒದಗಿಸಲು ಕೂಡಾ ಮುನ್ನುಡಿ ಬರೆಯುವ ಕಾರ್ಯ. ಸಂಚಯ ಇದಕ್ಕೆ ಕೈ ಹಾಕಿದ್ದು ಎಲ್ಲರಿಂದಲೂ, ಎಲ್ಲ ರೀತಿಯ ಬೆಂಬಲ ಅವಶ್ಯವಿದೆ. ಡಿಜಿಟಲೀಕರಣ ಪುಸ್ತಕಗಳನ್ನು ಮುದ್ರಣವಾಗುವುದರಿಂದ ತಡೆಯುವುದಿಲ್ಲ, ಬದಲಿಗೆ ಪುಸ್ತಕ ಪ್ರಿಯರು ಮುದ್ರಿತ ಪುಸ್ತಕಗಳನ್ನು ಕೊಳ್ಳಲು ಹತ್ತು ಹಲವು ಕಾರಣಗಳನ್ನು ನೀಡುತ್ತದೆ ಎನ್ನುವುದನ್ನು ಮನಗಾಣಬೇಕು.

ಓಂಶಿವಪ್ರಕಾಶ್ಎಚ್.ಎಲ್.,ಸಂಚಯದರೂವಾರಿ

ನೀವೆಲ್ಲ ಬೆಂಬಲಿಸಬಹುದು..

ಕನ್ನಡದ ಹಳೆಯ ಪುಸ್ತಕಗಳು, ಆರ್ಕೈವ್ ಆಗಬೇಕಾದ ಐತಿಹಾಸಿಕ ದಾಖಲೆಗಳು, ತಾಳೆಗರಿಗಳು, ಮಾನ್ಯುಸ್ಕ್ರಿಪ್ಟ್‌ಗಳು ಇತ್ಯಾದಿಗಳನ್ನು ಸಂಚಯಕ್ಕೆ ತಲುಪಿಸುವ ಮೂಲಕ ಕನ್ನಡಿಗರು ಈ ಮಹತ್ತರ ಕಾರ್ಯಕ್ಕೆ ತಮ್ಮ ಪುಟ್ಟ ಕಾಣಿಕೆಯನ್ನು ನೀಡಬಹುದಾಗಿದೆ. ಸಂಚಯ ಇವುಗಳನ್ನು ಸ್ಕ್ಯಾನ್ ಮಾಡಿ ಜೋಪಾನವಾಗಿ ನಿಮಗೆ ಹಿಂದಿರುಗಿಸುವ ಭರವಸೆಯನ್ನು ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT