ಖಾಸಗಿತನದ ರಕ್ಷಣೆ ಕಷ್ಟ ಕಷ್ಟ!

ಬುಧವಾರ, ಜೂನ್ 19, 2019
26 °C

ಖಾಸಗಿತನದ ರಕ್ಷಣೆ ಕಷ್ಟ ಕಷ್ಟ!

Published:
Updated:

ಇತ್ತೀಚಿನ ದಿನಗಳಲ್ಲಿ ಜನಪ್ರಿಯ ಸಾಮಾಜಿಕ ಮಾಧ್ಯಮಗಳು ವೈಯಕ್ತಿಕ ಮಾಹಿತಿ ಸೋರಿಕೆಗೆ ಸಂಬಂಧಿಸಿದಂತೆ ಹೆಚ್ಚು ಪ್ರಚಲಿತದಲ್ಲಿವೆ. ಅದರಲ್ಲಿಯೂ ಸುಳ್ಳು ಸುದ್ದಿ, ಆಶ್ಲೀಲ ಚಿತ್ರ, ವಿಡಿಯೊ ಪ್ರಸರಣ, ಮಾಹಿತಿ ಕಳವು ವಿಷಯಗಳಿಗೆ ಸಂಬಂಧಿಸಿದಂತೆ ಫೇಸ್‌ಬುಕ್‌ ಸದಾ ಸುದ್ದಿಯಲ್ಲಿರುತ್ತದೆ. ಇದೀಗ ಅದರ ಒಡೆತನದಲ್ಲಿರುವ ಅದಕ್ಕಿಂತಲೂ ಹೆಚ್ಚಿನ ಜನಪ್ರಿಯತೆ ಗಳಿಸಿಕೊಂಡಿರುವ ವಾಟ್ಸ್‌ಆ್ಯಪ್‌ ಸುರಕ್ಷತಾ ಸಮಸ್ಯೆ ಎದುರಿಸಿದ್ದು, ಬಳಕೆದಾರನ ವೈಯಕ್ತಿಕ ಮಾಹಿತಿ ಸೋರಿಕೆಯ ಆತಂಕ ತಂದೊಡ್ಡಿದೆ.

ಭಾರತದಲ್ಲಿಯೂ 20 ಕೋಟಿ ಜನರು ಇದನ್ನು ಬಳಸುತ್ತಿದ್ದಾರೆ. ಆದರೆ, ಭಾರತದಲ್ಲಿನ ಬಳಕೆದಾರರ ಮಾಹಿತಿಗಳು ಸೋರಿಕೆಯಾಗಿವೆಯೇ? ಅಥವಾ ಯಾವುದಾದರೂ ಫೋನ್‌ಗೆ ಕುತಂತ್ರಾಂಶ ನುಸುಳಿದಿದೆಯೇ ಎನ್ನುವುದು ಖಾತರಿಯಾಗಿಲ್ಲ. ಆದರೆ ಕಂಪನಿಯಂತೂ ಎಲ್ಲರೂ ಅಪ್‌ಡೇಟ್‌ ಮಾಡಿಕೊಳ್ಳಿ ಎಂದು ಸೂಚನೆ ನೀಡಿಬಿಟ್ಟಿದೆ.

ಆಗಿದ್ದೇನು?

ವಾಟ್ಸ್‌ಆ್ಯಪ್‌ ತಂತ್ರಾಂಶದಲ್ಲಿ ಕಾರ್ಯವೈಖರಿಯನ್ನು ಬದಲಾಯಿಸಲಾಗಿದೆ. ಆ ಬಳಿಕ ವಾಟ್ಸ್‌ಆ್ಯಪ್‌ ವಾಯ್ಸ್‌ ಕಾಲ್ ಮೂಲಕ ಕುತಂತ್ರಾಂಶ (ಸ್ಪೈವೇರ್‌) ಇನ್‌ಸ್ಟಾಲ್‌ ಮಾಡಲಾಗಿದೆ. ಇದು ಆ ಫೋನ್‌ನ ಕರೆ, ಟೆಕ್ಸ್ಟ್‌ ಮತ್ತು ಇನ್ನಿತರ ಎಲ್ಲಾ ಮಾಹಿತಿಗಳನ್ನು ಕದಿಯುತ್ತದೆ. ಇಷ್ಟು ಮಾತ್ರವಲ್ಲ ಕ್ಯಾಮೆರಾ ಮತ್ತು ಮೈಕ್ರೊಫೋನ್‌ ಅನ್ನು ತನ್ನಷ್ಟಕ್ಕೇ ಸಕ್ರಿಯಗೊಳಿಸಿ ಬಳಕೆದಾರನ ಚಟುವಟಿಕೆಗಳನ್ನು ದಾಖಲಿಸಿಕೊಂಡು ದುರುಪಯೋಗಪಡಿಸಿಕೊಳ್ಳಲಾಗಿದೆ.

ವಾಟ್ಸ್‌ಆ್ಯಪ್‌ ಅಥವಾ ವಾಟ್ಸ್‌ಆ್ಯಪ್‌ ಬಿಸಿನೆಸ್‌ ಇನ್‌ಸ್ಟಾಲ್‌ ಮಾಡಿರುವ ಆ್ಯಪಲ್‌, ಆಂಡ್ರಾಯ್ಡ್‌, ವಿಂಡೋಸ್‌ ಒಳಗೊಂಡು ಎಲ್ಲಾ ಬಗೆಯ ಎಲ್ಲಾ ಸ್ಮಾರ್ಟ್‌ಫೋನ್‌ಗಳೂ ಈ ಕುತಂತ್ರಾಂಶದ ದಾಳಿಗೆ ತುತ್ತಾಗಿವೆ ಎಂದು ಫೇಸ್‌ಬುಕ್‌ ಹೇಳಿದೆ.

ದಾಳಿಯ ಹಿಂದಿರುವವರು ಯಾರು?

ಮೂಲಗಳ ಪ್ರಕಾರ, ಇಸ್ರೇಲ್‌ನ ಸೈಬರ್‌ ಇಂಟೆಲಿಜೆನ್ಸ್‌ ಕಂಪನಿ ಎನ್‌ಎಸ್‌ಒ ಗ್ರೂಪ್‌ ಈ ಸ್ಪೈವೇರ್‌ ಅಭಿವೃದ್ಧಿಪಡಿಸಿದೆ. ಬಳಕೆದಾರರು ವಾಟ್ಸ್‌ಆ್ಯಪ್‌ ಕರೆ ಸ್ವೀಕರಿಸಬೇಕು ಎಂದೇ ಇಲ್ಲ. ಇದು ಕಾಲ್‌ ಲಾಗ್‌ನಿಂದ ಹೈಡ್‌ ಆಗಿರುತ್ತದೆ. 

ಯಾರೆಲ್ಲಾ ದಾಳಿಗೆ ತುತ್ತಾಗಿದ್ದಾರೆ?

ಎಷ್ಟು ಮೊಬೈಲ್‌ ಫೋನ್‌ಗಳು ದಾಳಿಗೆ ತುತ್ತಾಗಿವೆ ಎನ್ನುವುದು ಖಚಿತವಾಗಿ ತಿಳಿದುಬಂದಿಲ್ಲ. ಆದರೆ, ಇಂಗ್ಲೆಂಡ್‌ ಮೂಲದ ಮಾನವ ಹಕ್ಕುಗಳ ರಕ್ಷಣೆಯ ಪರ ವಕೀಲ ಮತ್ತು ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ರಿಸರ್ಚರ್‌ ಅವರು ಈ ಕುತಂತ್ರಾಂಶದ ದಾಳಿಗೆ ಒಳಗಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ಯಾವುದೇ ವಾಟ್ಸ್‌ಆ್ಯಪ್‌ ಕಾಲ್‌ ಸ್ವೀಕರಿಸಿಲ್ಲ ಎಂದಾದರೆ ಅಥವಾ ಅಪರಿಚಿತ ಸಂಖ್ಯೆಯಿಂದ ವಾಟ್ಸ್‌ಆ್ಯಪ್‌ನಲ್ಲಿ ಮಿಸ್ಡ್‌ ಕಾಲ್‌ ಬಂದಿರದೇ ಇದ್ದರೆ ನಾವು ದಾಳಿಗೆ ಒಳಗಾಗಿಲ್ಲ ಎಂದುಕೊಳ್ಳಬಹುದು. ಆದರೆ ಒಂದೊಮ್ಮೆ ನೀವು ಸೂಕ್ಷ್ಮವಾದ ವಹಿವಾಟು ಉದ್ದಿಮೆಯಲ್ಲಿ ಕೆಲಸ ಮಾಡುತ್ತಿದ್ದರೆ, ವಕೀಲರಾಗಿದ್ದರೆ, ವೃತ್ತಿಪರ ವರದಿಗಾರರಾಗಿದ್ದು ವಾಟ್ಸ್‌ಆ್ಯಪ್‌ ಬಳಸುತ್ತಿದ್ದರೆ ನೀವು ಇಂತಹ ಕುತಂತ್ರಾಂಶಗಳ ಹದ್ದಿನಗಣ್ಣಿನಲ್ಲಿ ಇರುತ್ತೀರಿ ಎಂದು ಎಚ್ಚರಿಕೆ ನೀಡಿವೆ.

ಬಳಕೆದಾರರನ್ನು ರಕ್ಷಿಸಲು ಫೇಸ್‌ಬುಕ್‌ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವಿವಿಧ ಸ್ಮಾರ್ಟ್‌ಫೋನ್‌ಗಳಿಗೆ ವಾಟ್ಸ್‌ಆ್ಯಪ್‌ನ ಅಪ್‌ಡೇಟೆಡ್‌ ವರ್ಷನ್‌ ಅನ್ನು ಬಿಡುಗಡೆ ಮಾಡಿದೆ.

ಬಳಕೆದಾರರು ಪ್ಲೇಸ್ಟೋರ್‌ಗೆ ಹೋಗಿ ವಾಟ್ಸ್‌ಆ್ಯಪ್‌ ಅಪ್‌ಡೇಟ್‌ ಪರಿಶೀಲಿಸಿಕೊಳ್ಳುವಂತೆ ಸಲಹೆ ನೀಡಿದೆ. ಹಾಗೊಂದುವೇಳೆ ಅಪ್‌ಡೇಟ್‌ ಇರದೇ ಇದ್ದರೆ ಅನ್‌ಇನ್‌ಸ್ಟಾಲ್‌ ಮಾಡುವುದರಿಂದ ದಾಳಿಗೆ ತುತ್ತಾಗುವುದನ್ನು ತಪ್ಪಿಸಿಕೊ‌ಳ್ಳಬಹುದು ಎಂದು ಹೇಳಿದೆ.

ಆ್ಯಪ್‌ ಪರಿಶೀಲನೆ ಹೇಗೆ?

ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸ್‌ಆಪ್‌ ಐಕಾನ್‌ ಮೇಲೆ ಲಾಂಗ್‌ ಪ್ರೆಸ್‌ ಮಾಡಿ ಆ್ಯಪ್‌ ಇನ್ಫೊ ಸೆಲೆಕ್ಟ್‌ ಮಾಡಿದರೆ ಇತ್ತೀಚಿನ ವರ್ಷನ್‌ ಬಳಸುತ್ತಿದ್ದೇವೆಯೇ ಎನ್ನುವುದನ್ನು ತಿಳಿದುಕೊಳ್ಳಬಹುದು. ಕೆಲವು ಫೋನ್‌ಗಳಲ್ಲಿ mobile settings-apps ಮೇಲೆ ಕ್ಲಿಕ್‌ ಮಾಡಿದಾಗ downloaded ಆ್ಯಪ್‌ಗಳ ಪಟ್ಟಿ ಕಾಣಿಸುತ್ತದೆ. ಅಲ್ಲಿ ವಾಟ್ಸ್‌ಆ್ಯಪ್‌ ಐಕಾನ್‌ ಮೇಲೆ ಕ್ಲಿಕ್‌ ಮಾಡಿದರೆ ಆ್ಯಪ್‌ನ ವಿವರ ತೆರೆದುಕೊಳ್ಳುತ್ತದೆ.
ಇನ್ನೂ ಸರಳವಾದ ಮಾರ್ಗ ಎಂದರೆ, ಅತ್ಯಗತ್ಯ ಇರುವ ಎಲ್ಲಾ ಆ್ಯಪ್‌ಗಳನ್ನು ಆಗಾಗ್ಗೆ ಅಪ್‌ಡೇಟ್‌ ಮಾಡುವುದು. ಹೀಗೆ ಮಾಡುವುದರಿಂದ ಹ್ಯಾಕಿಂಗ್‌ ಮತ್ತು ಮಾಹಿತಿ ಕಳವು ತಡೆಯಬಹುದು.

ಬಹಳ ಮುಖ್ಯವಾಗಿ ಫೋನ್‌ನ ಕಾರ್ಯಾಚರಣೆ ವ್ಯವಸ್ಥೆ (ಒಎಸ್‌) ಅಪ್‌ಡೇಟ್‌ ಆಗಿರಬೇಕು. ಲೇಟೆಸ್ಟ್‌ ಒಎಸ್‌ ಅಪ್‌ಡೇಟ್‌ ಮಾಡಿಕೊಳ್ಳುವುದರಿಂದ ಹೆಚ್ಚಿನ ಸುರಕ್ಷತೆ ಸಿಗುತ್ತದೆ. ಒಎಸ್‌ ಅಪ್‌ಡೇಟ್‌ ಆಯಾ ಕಂಪನಿಗಳ ಮೇಲೆ ನಿರ್ಧಾರವಾಗುತ್ತದೆ. ಉದ್ಯಮದ ಬೆಳವಣಿಗೆಗಾಗಿ ವಾಟ್ಸ್‌ಆ್ಯಪ್‌ ಬಳಕೆ ಸಾಮಾನ್ಯವಾಗಿದೆ. ಹೀಗಾಗಿ ಉದ್ಯಮ ವಲಯದಲ್ಲಿಯೂ ಮಾಲ್‌ವೇರ್‌ ದಾಳಿಯ ಬಗ್ಗೆ ಆತಂಕ ಶುರುವಾಗಿದೆ.

ತಜ್ಞರು ಹೇಳುವುದೇನು?

‘ಯಾವುದೇ ಅಪ್ಲಿಕೇಷನ್‌ (ಆ್ಯಪ್‌) ಆದರೂ ಕುತಂತ್ರಾಂಶ ದಾಳಿಯಿಂದ ತಡೆಯುವುದು ಕಷ್ಟ. ಕುತಂತ್ರಾಂಶಗಳು ದಾಳಿ ಮಾಡದೆಯೇ ಇರುವಂತೆ ಸಾಫ್ಟ್‌ವೇರ್‌ ಬರೆಯಲು ಆಗಿಲ್ಲ’ ಎಂದು ಡಿಜಿಟಲ್‌ ರೈಟ್ಸ್‌ ಗ್ರೂಪ್‌ ಸೆಂಟರ್‌ ಫಾರ್‌ ಡೆಮಾಕ್ರಸಿ ಆ್ಯಂಡ್‌ ಟೆಕ್ನಾಲಜಿಯ ಮುಖ್ಯ ತಂತ್ರಜ್ಞ ತಿಳಿಸಿದ್ದಾರೆ.

ವಾಟ್ಸ್‌ಆ್ಯಪ್‌ನಲ್ಲಿರುವ ಎನ್‌ಕ್ರಿಪ್ಷನ್‌ ಮುರಿಯಲು ಆಗಿಲ್ಲ. ಏಕೆಂದರೆ ಫೇಸ್‌ಬುಕ್‌ ತಕ್ಷಣವೇ ಪ್ರತಿಕ್ರಿಯಿಸಿ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಿದೆ ಎಂದು ಅವರು ಹೇಳಿದ್ದಾರೆ. 

ಖಾಸಗಿತನದ ರಕ್ಷಣೆಗೆ ಎನ್‌ಕ್ರಿಪ್ಷನ್‌ ಒಂದೇ ಮುಖ್ಯವಲ್ಲ. ಆ್ಯಪ್‌ ನಂಬಿಕೆಗೂ ಅರ್ಹವಾಗಿರುವುದು ಮುಖ್ಯವಾಗುತ್ತದೆ ಎಂದು ಇನ್ನೊಬ್ಬ ತಜ್ಞ ಅಭಿಪ್ರಾಯಪಟ್ಟಿದ್ದಾರೆ. 

ಎನ್‌ಕ್ರಿಪ್ಷನ್‌ ಇರುವುದರಿಂದ ಒಬ್ಬರಿಗೆ ಕಳುಹಿಸುವ ಸಂದೇಶ ಅಥವಾ ಇನ್ಯಾವುದೇ ಮಾಹಿತಿಯನ್ನು ಇನ್ನೊಬ್ಬರು ಕದ್ದು ನೋಡಲು ಅಥವಾ ಕೇಳಲು ಸಾಧ್ಯವಿಲ್ಲ. ಆದರೆ, ಎನ್‌ಕ್ರಿಪ್ಷನ್‌ನಿಂದ ಹ್ಯಾಂಡ್‌ಸೆಟ್‌ ಮೇಲೆ ಆಗುವ ದಾಳಿಯನ್ನು ತಡೆಯಲು ಸಾಧ್ಯವಿಲ್ಲ ಎನ್ನುವುದು ಸಂಶೋಧಕರ ವಾದ.

‘ಜಗತ್ತಿನ ಅತ್ಯಂತ ಜನಪ್ರಿಯೆ ಮೆಸೆಜಿಂಗ್‌ ಆ್ಯಪ್‌ ಆಗಿರುವ ವಾಟ್ಸ್‌ಆ್ಯಪ್‌ ಸುರಕ್ಷಿತವಾಗಿಲ್ಲ. ಅದರ ಮೇಲೆ ನಿಗಾ ಇಡುವ ಅಗತ್ಯ ಇದೆ’ ಎಂದು ಟೆಲಿಗ್ರಾಂ ಮೆಸೆಜಿಂಗ್‌ ಆ್ಯಪ್‌ ಅಭಿವೃದ್ಧಿಕಾರ ಪಾವೆಲ್‌ ಡೊರೋವ್‌ ಹೇಳಿದ್ದಾರೆ.

 

ಬಳಕೆದಾರರ ವಿವರ

180ಕ್ಕೂ ಅಧಿಕ ವಾಟ್ಸ್‌ಆ್ಯಪ್‌ ಬಳಸುತ್ತಿರುವ ದೇಶಗಳು 150 ಕೋಟಿಗೂ ಹೆಚ್ಚು ಒಂದು ತಿಂಗಳಿನಲ್ಲಿ ವಿಶ್ವದಲ್ಲಿ ವಾಟ್ಸ್‌ಆ್ಯಪ್‌ನ ಸಕ್ರಿಯ ಬಳಕೆದಾರರ ಸಂಖ್ಯೆ 20 ಕೋಟಿ ಒಂದು ತಿಂಗಳಿನಲ್ಲಿ ಭಾರತದಲ್ಲಿ ವಾಟ್ಸ್‌ಆ್ಯಪ್‌ನ ಸಕ್ರಿಯ ಬಳಕೆದಾರರ ಸಂಖ್ಯೆ
***
ಪ್ರಮುಖ ಅಂಶಗಳು

ಬಳಕೆದಾರನ ಅರಿವಿಲ್ಲದೇ ಕೃತ್ಯ ವಾಟ್ಸ್‌ಆ್ಯಪ್‌ ಕರೆ ಮಾಡಿದ ತಕ್ಷಣವೇ ಕಾಲ್‌ ಹಿಸ್ಟರಿ ಡೀಲೀಟ್‌ ಮಾಡುವ ದಾಳಿ ಕೋರರು

ಮಾನವ ಹಕ್ಕುಗಳ ಹೋರಾಟಗಾರರು ಮತ್ತು ವಕೀಲರನ್ನು ಗುರಿಯಾಗಿಸಿಕೊಂಡು ದಾಳಿ ಬಳಕೆದಾರನ ಕಾಂಟ್ಯಾಕ್ಟ್‌ ಲಿಸ್ಟ್‌, ಜಿಪಿಎಸ್‌ ಲೊಕೇಷನ್, ಮೊಬೈಲ್‌ನಲ್ಲಿ ಸ್ಟೋರ್‌ ಆಗಿರುವ ವೈ–ಪೈ ಮತ್ತು ರೌಟರ್‌ ಪಾಸ್‌ವರ್ಡ್‌ ಕಳವು
***

ಆಂಡ್ರಾಯ್ಡ್‌ ಫೋನ್‌ನಲ್ಲಿ ಅಪ್‌ಡೇಡ್‌ ಮಾಡಲು
Google Play Store-Menu-'My Apps & Games'-Update-WhatsApp Messenger
ಆ್ಯಪಲ್‌ ಫೋನ್‌ನಲ್ಲಿ ಅಪ್‌ಡೇಡ್‌ ಮಾಡಲು
App Store-Search for WhatsApp Messenger-Tap Update

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !