ಬೆಂಗಳೂರಿನ ಒಪೇರಾ ಹೌಸ್‌ನಲ್ಲಿ ಸ್ಯಾಮ್‌ಸಂಗ್‌ ಸ್ಮಾರ್ಟ್‌ ಉತ್ಪನ್ನಗಳ ಅನುಭವ ಮಂಟಪ

7

ಬೆಂಗಳೂರಿನ ಒಪೇರಾ ಹೌಸ್‌ನಲ್ಲಿ ಸ್ಯಾಮ್‌ಸಂಗ್‌ ಸ್ಮಾರ್ಟ್‌ ಉತ್ಪನ್ನಗಳ ಅನುಭವ ಮಂಟಪ

Published:
Updated:
Deccan Herald

ಬೆಂಗಳೂರು: ಜುಲೈನಲ್ಲಿ ಅತಿ ದೊಡ್ಡ ಮೊಬೈಲ್‌ ಉತ್ಪಾದನಾ ಕಾರ್ಖಾನೆಯನ್ನು ನೋಯ್ಡಾದಲ್ಲಿ ಪ್ರಾರಂಭಿಸಿದ ’ಸ್ಯಾಮ್‌ಸಂಗ್‌ ಇಂಡಿಯಾ’, ಮಂಗಳವಾರ ತನ್ನ ಸ್ಮಾರ್ಟ್‌ ಉತ್ಪನ್ನಗಳ ಅನುಭವ ಪಡೆಯಬಹುದಾದ ಜಗತ್ತಿನ ಅತಿ ವಿಶಾಲವಾದ ಕೇಂದ್ರವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿದೆ. 

ಜಾಗತಿಕ ಮಾರುಕಟ್ಟೆಯಲ್ಲಿ ಆ್ಯಪಲ್‌ ಐಫೋನ್‌ನೊಂದಿಗೆ ಸದಾ ಪೈಪೋಟಿಯಲ್ಲಿರುವ ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್‌, ಭಾರತದಲ್ಲಿ ಇನ್ನಷ್ಟು ಮೊಬೈಲ್‌ ಎಕ್ಸ್‌ಪೀರಿಯನ್ಸ್‌ ಸೆಂಟರ್‌ಗಳನ್ನು ಪ್ರಾರಂಭಿಸುವ ಗುರಿ ಹೊಂದಿದೆ. ಹೊಸ ಸ್ಮಾರ್ಟ್‌ ಫೋನ್‌ಗಳ ಜತೆಗೆ ತಾನು ಅಭಿವೃದ್ಧಿ ಪಡಿಸಿರುವ ವರ್ಚುವಲ್‌ ರಿಯಾಲಿಟಿ(ವಿಆರ್‌), ಕೃತಕ ಬುದ್ಧಿಮತ್ತೆ(ಎಐ) ಹಾಗೂ ಇಂಟರ್‌ನೆಟ್‌ ಆಫ್‌ ಥಿಂಗ್ಸ್‌(ಐಒಟಿ)ನಂತಹ ತಂತ್ರಜ್ಞಾನಗಳನ್ನು ಒಳಗೊಂಡ ಉತ್ಪನ್ನಗಳ ಕಾರ್ಯ ಸಾಮರ್ಥ್ಯದ ಅನುಭವಗಳನ್ನು ಈ ಒಪೆರಾ ಸೆಂಟರ್‌ನಲ್ಲಿ ಪಡೆಯಬಹುದಾಗಿದೆ. 

(ಸ್ಯಾಮ್‌ಸಂಗ್‌ ಒಪೇರಾ ಹೌಸ್‌ ಒಳಗೆ)

ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವೃದ್ಧಿಸುವ ಯೋಜನೆಯ ಭಾಗವಾಗಿ ದೇಶದ ಪ್ರಮುಖ ನಗರಗಳಲ್ಲಿ ಇಂಥ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ ಎಂದು ಸ್ಯಾಮ್‌ಸಂಗ್‌ ಇಂಡಿಯಾ ಮೊಬೈಲ್‌ ಬಿಸ್‌ನೆಸ್‌ನ ಹಿರಿಯ ಉಪಾಧ್ಯಕ್ಷ ಮೋಹನ್‌ದೀಪ್‌ ಸಿಂಗ್‌ ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. 

ಬ್ರಿಟಿಷ್‌ ಆಳ್ವಿಕೆಯ ಕಾಲದಿಂದಲೂ ಹೆಸರಾಗಿರುವ ಬ್ರಿಗೇಡ್‌ ರಸ್ತೆಯ ’ಒಪೇರಾ ಹೌಸ್‌’ ಕಟ್ಟಡದಲ್ಲಿಯೇ ಸ್ಯಾಮ್‌ಸಂಗ್‌ ತನ್ನ ಮೊಬೈಲ್‌ ಎಕ್ಸ್‌ಪೀರಿಯನ್ಸ್‌ ಸೆಂಟರ್‌ ತೆರೆದಿದ್ದು, ಇದನ್ನು ’ಸ್ಯಾಮ್‌ಸಂಗ್‌ ಒಪೇರಾ ಹೌಸ್‌’ ಎಂದೇ ಕರೆಯಲಾಗಿದೆ. 

ಅನುಭವ ಅನುಭವಿಸಿ

ವಿಆರ್ ತಂತ್ರಜ್ಞಾನದ ತೂಗಾಡುವ 4ಡಿ ಕುರ್ಚಿ, 360 ಡಿಗ್ರಿ ತಿರುಗುವ ವಿಪ್‌ಲಾಷ್‌ ಪಲ್ಸರ್‌ 4ಡಿ ಚೇರ್‌ ಮೂಲಕ ಮತ್ತೊಂದು ಜಗತ್ತಿನ ಅನುಭವ ಪಡೆಯಬಹುದಾಗಿದೆ. ಎಲ್‌ಇಡಿ ಪರದೆಗಳ ಅಭಿವೃದ್ಧಿಯಲ್ಲಿ ಜಗತ್ತಿನ ಗಮನ ಸೆಳೆದಿರುವ ಸ್ಯಾಮ್‌ಸಂಗ್‌, ವಿಶಿಷ್ಟ ಅನುಭವ ನೀಡುವ ಕ್ಯುಎಲ್‌ಇಡಿ ಟಿವಿ, ಸ್ಮಾರ್ಟ್‌ ಟಿವಿ, ಬಣ್ಣದ ಚಿತ್ರಗಳನ್ನು ಪ್ರದರ್ಶಿಸುವ ’ದಿ ಫ್ರೇಮ್‌’, ಸ್ಮಾರ್ಟ್‌ ರೆಫ್ರಿಜಿರೇಟರ್‌ಗಳನ್ನು ಹತ್ತಿರದಿಂದ ನೋಡುವ ಮತ್ತು ಕಾರ್ಯ ವಿಧಾನವನ್ನು ತಿಳಿಯುವ ಅನುಕೂಲವಿದೆ. ಇದರೊಂದಿಗೆ ಸ್ಮಾರ್ಟ್‌ ಫೋನ್‌ಗಳ ಉಪಕರಣಗಳು, ಆಡಿಯೊ ಉತ್ಪನ್ನಗಳು, ಗ್ರಾಹಕರ ಸೇವಾ ಕೇಂದ್ರ ಹಾಗೂ ಹೈ–ಸ್ಪೀಡ್‌ ವೈ–ಫೈ ವ್ಯವಸ್ಥೆಯೂ ಒಪೇರಾ ಹೌಸ್‌ನಲ್ಲಿದೆ. 

ಇಲ್ಲೊಂದು ಅಡುಗೆ ಮನೆ

ತನ್ನ ಗೃಹ ಉಪಯೋಗಿ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ತಿಳಿಸಿಕೊಡಲು ಅಡುಗೆ ಮನೆಯ ವಿನ್ಯಾಸ ರೂಪಿಸಲಾಗಿದ್ದು, ಇಲ್ಲಿ ಅನುಭವಿ ಚೆಫ್‌ ಸ್ಯಾಮ್‌ಸಂಗ್‌ ಸ್ಮಾರ್ಟ್‌ ಓವನ್‌ ಬಳಸಿ ಅಡುಗೆ ತಯಾರಿಸಿ, ಗ್ರಾಹಕರಿಗೆ ಓವನ್‌ ಬಳಕೆಯ ವಿವರಣೆ ನೀಡುತ್ತಾರೆ. 

ಸ್ಯಾಮ್ಸಂಗ್‌ ಎಕ್ಸ್‌ಪೀರಿಯನ್ಸ್‌ ಸೆಂಟರ್‌

ಸ್ಯಾಮ್ಸಂಗ್‌ ಕಂಪನಿಯು ಬೆಂಗಳೂರಿನ ಒಪೆರಾ ಹೌಸ್‌ನಲ್ಲಿ ವಿಶ್ವದಲ್ಲಿಯೇ ಅತಿದೊಡ್ಡ ಮೊಬೈಲ್‌ ಎಕ್ಸ್‌ಪೀರಿಯನ್ಸ್‌ ಸೆಂಟರ್‌ ಆರಂಭಿಸಿದೆ.

ನಗರದ ಬ್ರಿಗೇಡ್‌ ರಸ್ತೆಯಲ್ಲಿನ 33 ಸಾವಿರ ಚದರ ಅಡಿಯ ಐತಿಹಾಸಿಕ ಕಟ್ಟಡ ‘ಒಪೆರಾ ಹೌಸ್‌’ ಇನ್ನುಮುಂದೆ ‘ಸ್ಯಾಮ್ಸಂಗ್‌ ಒಪೆರಾ ಹೌಸ್‌’ ಆಗಲಿದೆ.

ಹಳೆಯ ಕಟ್ಟಡದ ಮೂಲಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಹೊಸ ಮೆರುಗು ನೀಡಲಾಗಿದೆ. ತಂತ್ರಜ್ಞಾನ, ಜೀವನಶೈಲಿ ಮತ್ತು ನಾವಿನ್ಯತೆಯನ್ನು ಒಂದೇ ಸೂರಿನಡಿ ತರಲಾಗಿದೆ. ವಿವಿಧ ಮಾದರಿಯ ಸ್ಮಾರ್ಟ್‌ಫೋನ್‌ಗಳಲ್ಲದೆ, ವರ್ಚುವಲ್‌ ರಿಯಾಲಿಟಿ (ವಿಆರ್) ತಂತ್ರಜ್ಞಾನದ ತೂಗಾಡುವ 4ಡಿ ಕುರ್ಚಿ, ಕೃತಕ ಬುದ್ಧಿಮತ್ತೆ ಮತ್ತು ಅಂತರ್ಜಾಲ ಸಂಪರ್ಕಿತ ಸಾಧನಗಳು (ಐಒಟಿ), ಸ್ಮಾರ್ಟ್‌ಫೋನ್‌ ಮತ್ತು ವೇರೆಬಲ್‌ ಡಿವೈಸ್, ಕ್ಯೂಎಲ್‌ಇಡಿ ಟಿವಿ, ಸ್ಮಾರ್ಟ್‌ ಟಿವಿ, ರೆಫ್ರಿಜರೇಟರ್‌, ಸ್ಮಾರ್ಟ್ ಓವನ್‌, ಹರ್ಮನ್‌ ಕಾರ್ಡನ್‌, ಜೆಬಿಲ್‌ ಮತ್ತು ಸ್ಯಾಮ್ಸಂಗ್‌ ಆಡಿಯೊ ಸಾಧನಗಳ ಕಾರ್ಯವೈಖರಿಯನ್ನು ಗ್ರಾಹಕರು ಇಲ್ಲಿ ಪರಿಶೀಲಿಸಬಹುದು.

‘ಬಹಳಷ್ಟು ಗ್ರಾಹಕರು ಉತ್ಪನ್ನಗಳನ್ನು ಸ್ಪರ್ಶಿಸಿ ಅದರ ಅನುಭವ ಪಡೆದುಕೊಳ್ಳಲು ಬಯಸುತ್ತಾರೆ. ಅಂತಹ ವ್ಯವಸ್ಥೆ ಇಲ್ಲಿದೆ. ಎಲ್ಲ ವಯೋಮಾನದ ಜನರಿಗೂ ರೋಮಾಂಚನಕಾರಿ ಅನುಭವ ಇಲ್ಲಿ ಸಿಗಲಿದೆ' ಎಂದು ಸ್ಯಾಮ್ಸಂಗ್‌ನ ಆಗ್ನೇಯ ಏಷ್ಯಾದ ಅಧ್ಯಕ್ಷ ಎಚ್‌.ಸಿ. ಹಾಂಗ್‌ ಹೇಳಿದ್ದಾರೆ.

‘ಇಲ್ಲಿ 10ಕ್ಕೂ ಅಧಿಕ ಎಕ್ಸ್‌ಪೀರಿಯನ್ಸ್‌ ಝೋನ್‌ಗಳಿವೆ.  ಒಪೇರಾಹೌಸ್‍ನಲ್ಲಿ ಕಾರ್ಯಾಗಾರಗಳು, ಸಭೆ, ಸಮಾರಂಭಗಳನ್ನು ಕೂಡಾ ಆಯೋಜಿಸಲಾಗುವುದು. ಫಿಟ್ನೆಸ್, ಫೋಟೊಗ್ರಫಿ, ಗೇಮಿಂಗ್, ಮ್ಯೂಸಿಕ್, ಸಿನಿಮಾ, ಆಹಾರ, ಸ್ಟಾರ್ಟ್‌ಅಪ್‌ಗಳಿಗಾಗಿ ವಿಶೇಷ ಕಾರ್ಯಕ್ರಮಗಳು ವರ್ಷವಿಡೀ ಆಯೋಜನೆಗೊಳ್ಳಲಿವೆ’ ಎಂದು ತಿಳಿಸಿದ್ದಾರೆ.

ಸುಸಜ್ಜಿತವಾಗಿ ಕಾರ್ಯನಿರ್ವಹಿಸುವ ಸೇವಾ ಕೇಂದ್ರ ಕೂಡಾ ಇರುತ್ತದೆ. ಜತೆಗೆ ಅತ್ಯಧಿಕ ವೇಗದ ಸಾರ್ವಜನಿಕ ವೈಫೈ ಸೌಲಭ್ಯವ ಇದೆ.  

ಗೃಹ ಉಪಯೋಗಿ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲು ಅಡುಗೆ ಮನೆಯೂ ಇದೆ. ಇಲ್ಲಿರುವ ಬಾಣಸಿಗರು, ಸ್ಯಾಮ್ಸಂಗ್‌ ಸ್ಮಾರ್ಟ್‌ ಓವನ್‌ ಬಳಸಿ ಅಡುಗೆ ಸಿದ್ಧಪಡಿಸುವುದನ್ನು ಕಲಿಸಿಕೊಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !