ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವಾಭಿವ್ಯಕ್ತಿಗೆ ಬಣ್ಣಗಳ ಭಾಷೆ

Last Updated 13 ಮೇ 2018, 19:30 IST
ಅಕ್ಷರ ಗಾತ್ರ

‘ನಮ್ಮೊಳಗಿನ ಭಾವನೆಗಳು ಅಸ್ಪಷ್ಟವಾಗಿರುತ್ತವೆ. ಆ ಅಸ್ಪಷ್ಟತೆಯ ಅಭಿವ್ಯಕ್ತಿಯೇ ಪರಿಪೂರ್ಣ ಕಲಾಕೃತಿ’ ಎನ್ನುವ ಕ್ರೋಚೆ ಎಂಬ ಕಲಾಚಿಂತಕನ ಮಾತಿನಿಂದ ಪ್ರೇರೆಪಿತರಾದ ಕಲಾವಿದ ರಮೇಶ್‌ ತೇರದಾಳ ತನ್ನೆಲ್ಲಾ ಕಲಾಕೃತಿಗಳು ಅಸ್ಪಷ್ಟ ಹಾಗೂ ಸೂಚ್ಯ ಎನ್ನುತ್ತಾರೆ.

ಮೂಲತ ಗದಗದವರಾದ ರಮೇಶ್‌ ಸದ್ಯ ಜೆ.ಪಿ. ನಗರದ ನಿವಾಸಿ. ಅವರಿಗೆ ಕಲೆಯ ಒಲವು ಬಾಲ್ಯದಿಂದಲೇ ಒಲಿದಿದೆ. ತಂದೆ ಹಾಗೂ ಅಣ್ಣನ ಕಲಾಪ್ರೇಮ ರಮೇಶ್‌ ಅವರಿಗೂ ಬಳುವಳಿಯಾಗಿ ಬಂದಿದೆ. ಗದಗದ ‘ವಿಜಯಾ ಕಲಾ ಮಂದಿರ’ದಲ್ಲಿ ‘ಬ್ಯಾಚುಲರ್‌ ಆಫ್‌ ಫೈನ್‌ ಆರ್ಟ್ಸ್‌’ ಪದವಿ ಪೂರೈಸಿದರು. ಅವರಲ್ಲಿದ್ದ ಕಲಾಸಕ್ತಿಗೆ ಮತ್ತಷ್ಟು ಸ್ಪಷ್ಟತೆ ನೀಡಿದ್ದು ಬೆಂಗಳೂರಿನ ಚಿತ್ರಕಲಾ ಪರಿಷತ್ತು. ಫೈನ್‌ ಆರ್ಟ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿ ಕಳೆದ 30 ವರ್ಷಗಳಿಂದ ಚಿತ್ರಕಲೆಯನ್ನೇ ವೃತ್ತಿಯಾಗಿ ಸ್ವೀಕರಿಸಿದ್ದಾರೆ. ಸದ್ಯ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ‘ಭಾವಚಿತ್ರಗಳು’ ಎಂಬ ವಿಷಯದಲ್ಲಿ ಪಿಎಚ್‌.ಡಿ. ಮಾಡುತ್ತಿದ್ದಾರೆ.

ಅಕ್ರಿಲಿಕ್ ಮಾಧ್ಯಮದಲ್ಲಿ ಮೂಡಿರುವ ಅವರ ಕಲಾಕೃತಿಗಳಿಗೆ ಆಕರ್ಷಕವಾಗಿವೆ. ಕ್ಯಾನ್ವಾಸ್‌ ಮೇಲೆ ಚಿತ್ತಾಕರ್ಷಕ ಬಣ್ಣಗಳಿಂದ ರಚಿಸಿರುವ ಕಲಾಕೃತಿಗಳು ಪ್ರತಿ ಕಲಾರಸಿಕನ ಗ್ರಹಿಕೆಗೂ ಭಿನ್ನ ನೋಟ ನೀಡುತ್ತವೆ.

ಆರಂಭದಲ್ಲಿ ಆಕಾರಗಳುಳ್ಳ ಕಲಾಕೃತಿ ರಚಿಸುತ್ತಿದ್ದರು. ಆದರೆ ಇತ್ತೀಚಿಗೆ ಅಮೂರ್ತ ಕಲಾಕೃತಿಗಳತ್ತಲೇ ಹೆಚ್ಚು ಚಿತ್ತ ಕೇಂದ್ರೀಕರಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಇವರ ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿವೆ. ಚಿತ್ರಕಲೆಗೆ ಪೂರಕವಾಗುವಂತಹ ಅನೇಕ ಸಾಕ್ಷ್ಯಾಚಿತ್ರಗಳನ್ನು ನಿರ್ಮಿಸಿದ್ದಾರೆ. ‘ಕಲೆ ಮತ್ತು ಕಲಾವಿದರು’ ಶೀರ್ಷಿಕೆಯ ಸಾಕ್ಷ್ಯಾಚಿತ್ರದಲ್ಲಿ ಗಾಬ್ರಿಯಲ್‌ ಮಾರ್ಫಿ, ಬಸವರಾಜು ಜಾನಿ, ಕೆ.ಎನ್‌.ರಾಮಚಂದ್ರನ್‌, ಕಾರ್ತಿಕ ಮೊದಲಾದ ಕಲಾ ಆರಾಧಕರ ಜೀವನವನ್ನು ಕಟ್ಟಿಕೊಟ್ಟಿದ್ದಾರೆ.

ಇವರ ಕಲಾ ಸೇವೆಗೆ ಎರಡು ಬಾರಿ ಲಲಿತಾ ಕಲಾ ಅಕಾಡೆಮಿ, ಅಲ್‌ ಇಂಡಿಯಾ ಕ್ಯಾಮೆಲಿನ್ ಸ್ಪರ್ಧೆಯಲ್ಲಿ ಪ್ರಶಸ್ತಿ, ದೇಶದ ವಿವಿಧೆಡೆಗಳಲ್ಲಿ ನಡೆದ ಆಲ್‌ ಇಂಡಿಯಾ ಆರ್ಟ್‌ ಪ್ರದರ್ಶನದಲ್ಲಿ ಪ್ರಶಸ್ತಿ, ಹಂಗೇರಿ ಸರ್ಕಾರದಿಂದ ‘ಗ್ಲೋಬಲ್‌ ಆರ್ಟಿಸ್ಟ್ 2016’ ಪ್ರಶಸ್ತಿ ದೊರೆತಿದೆ.

‘ಆದುನಿಕ ಕಲೆಯ ಹುಟ್ಟಿಗೆ ಕಾರಣವಾದ ಅಮೃತ ಶೇರ್ಗಿಲ್‌ ನಂತರ ಹಂಗೇರಿ ಸರ್ಕಾರದಿಂದ ಗೌರವಕ್ಕೆ ಪಾತ್ರವಾದ ವ್ಯಕ್ತಿ ನಾನೊಬ್ಬನೇ’ ಎಂದು ಹೆಮ್ಮೆಯಿಂದ  ನುಡಿಯುತ್ತಾರೆ ರಮೇಶ್.

ಇದುವರೆಗಿನ ಕಲಾಬದುಕಿನಲ್ಲಿ 900 ಕ್ಕೂ ಹೆಚ್ಚು ಕಲಾಕೃತಿ ರಚಿಸಿರುವ ರಮೇಶ ಅವರಿಗೆ ಯಾವ ಕಲಾಕೃತಿಯೂ ಪೂರ್ಣತೆಯ ಸಮಾಧಾನ ನೀಡಿಲ್ಲವಂತೆ. ಪ್ರತಿ ಬಾರಿ ಹೊಸತನಕ್ಕೆ ಹಂಬಲಿಸುತ್ತಾರೆ. ಜಾಕ್ಸೆಲ್‌ ಫೊಲೆಕ್ಸ್‌ ಎಂಬ ಅಮೇರಿಕಾದ ಕಲಾವಿದನ ಬಣ್ಣ ಎರಚಾಡುವ ರೀತಿ, ಕ್ರೋಚೆಯ ಚಿಂತನೆಗಳು, ಅ್ಯಂಟೋನಿಯ ಟ್ಯಾಪಿಸ್‌ ಅವರ ಬೂದು ಬಣ್ಣದ ಮೇಲಿನ ಪ್ರೀತಿಯೇ ಅವರ ಕಲೆಗೆ ಸ್ಪೂರ್ತಿ.

‘ಬದುಕಿನ ಕೊನೆಯ ಉಸಿರಿರುವವರೆಗೂ ಬಣ್ಣಗಳ ಸಾಂಗತ್ಯವೇ ಬದುಕು’ ಎನ್ನುವ ರಮೇಶ್ ‘ನಿರ್ವಾಣ ಆರ್ಟ್‌ ಪ್ರತಿಷ್ಠಾನ’ದ ಮುಖೇನ ಯುವ ಕಲಾವಿದರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವೇದಿಕೆಯನ್ನು ಕಲ್ಪಿಸುತ್ತಿದ್ದಾರೆ. ಕಲೆಯಲ್ಲಿ ಆಸಕ್ತಿ ಇರುವವರಿಗೆ ಉಚಿತವಾಗಿ ತರಬೇತಿಯನ್ನೂ ನೀಡುತ್ತಾರೆ.

‘ಕಲೆಯನ್ನೇ ಆಸಕ್ತಿಯಿಂದ ವೃತ್ತಿಯಾಗಿ ತೊಡಗಿಸಿಕೊಂಡರೆ ಜೀವನ ನಿರ್ವಹಣೆಗೆ ಯಾವುದೇ ತೊಂದರೆಯಿಲ್ಲ’ ಎನ್ನುವ ರಮೇಶ್‌ ಅವರ ಕಲಾಕೃತಿಗಳು ಕನಿಷ್ಟ ₹ 40,000 ದಿಂದ ₹ 5 ಲಕ್ಷದವರೆಗೆ ಮಾರಾಟವಾಗುತ್ತದೆ. ವಿಶ್ವದ ಅನೇಕ ದೇಶಗಳು ಇವರ ಕಲಾಕೃತಿಗಳನ್ನು ಸಂಗ್ರಹಿಸಿವೆ.

ಪ್ರವಾಸವು ಕಲೆಗೆ ನವೀನ ಅನುಭವ ಕಟ್ಟಿಕೊಡುತ್ತದೆ ಎಂದು ನಂಬಿರುವ ರಮೇಶ್ ವಿಶ್ವದ ಬಹುತೇಕ ಕಲಾ ಸಂಗ್ರಹಾಲಯಗಳಿಗೆ ಭೇಟಿ ನೀಡಿದ್ದಾರೆ. ಕಲಾಜಗತ್ತಿನ ಆದರ್ಶಪ್ರಾಯ ವ್ಯಕ್ತಿ ಎಂದೇ ಕರೆಸಿಕೊಳ್ಳುವ ‘ರೆಮ್‌ರಾಲ್ಟ್‌’ ಅವರ ಮನೆಗೆ ಹುಡುಕಿಕೊಂಡು ಹೋಗಿದ್ದು ಅವರ ಕಲಾಸಕ್ತಿಗೆ ಕನ್ನಡಿ. ಮನೆಯೇ ನನ್ನ ಕಲಾಕೃತಿ ರಚನೆಗೆ ಸೂಕ್ತ ಪ್ರದೇಶ ಎನ್ನುವ ಇವರು ಸ್ಲೋವಾಕಿಯಾದಲ್ಲಿನ ತಮ್ಮ ಸ್ಟುಡಿಯೋದಲ್ಲಿಯೂ ಕುಳಿತು ಕ್ಯಾನ್ವಸ್‌ಗೆ ಬಣ್ಣ ಎರಚುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT