ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ ಎಂ.ವಿಶ್ವೇಶ್ವರಯ್ಯ ಅವರ 158ನೇ ಜನ್ಮದಿನಾಚರಣೆ

ಅಂದೇ (ಸೆಪ್ಟೆಂಬರ್ 15) ಎಂಜಿನಿಯರ್ ದಿನಾಚರಣೆ
Last Updated 13 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಚಕ್ರಗಳ ತಯಾರಿಯಿಂದ ಹಿಡಿದು, ಆಧುನಿಕ ವಿಜ್ಞಾನಕ್ಕೆ ಕನ್ನಡಿ ಹಿಡಿದ ಡ್ರೋನ್‌ಗಳ ತಯಾರಿವರೆಗೆ ಎಂಜಿನಿಯರ್‌ಗಳ ಶ್ರಮ ಎದ್ದು ಕಾಣುತ್ತದೆ. ಎಂಜಿನಿಯರ್‌ಗಳ ಸಂಶೋಧನೆಗಳೆಲ್ಲಾ ನಾಗರಿಕತೆ ಮತ್ತು ವಿಕಾಸದ ಸಂಕೇತಗಳು. ದೇಶದ ಪ್ರಗತಿಗೆ ಮಹತ್ತರ ಕೊಡುಗೆ ನೀಡುವ ಎಂಜಿನಿಯರ್‌ಗಳನ್ನು ಸ್ಮರಿಸಿ ವಿಶ್ವದಾದ್ಯಂತ ವಿವಿಧ ದಿನಗಳಲ್ಲಿ ಎಂಜಿನಿಯರ್ ದಿನ ಆಚರಿಸಲಾಗುತ್ತದೆ. ಸೃಜನಶೀಲತೆ, ಬುದ್ಧಿವಂತಿಕೆಯಿಂದಲೇ ವಿಶ್ವದಾದ್ಯಂತ ಖ್ಯಾತಿ ಗಳಿಸಿದ ಸರ್‌ ಎಂ. ವಿಶ್ವೇಶ್ವರಯ್ಯನವರ ಜನ್ಮದಿನದಂದು (ಸೆಪ್ಟೆಂಬರ್‌ 15) ಭಾರತದಲ್ಲಿ ಪ್ರತಿ ವರ್ಷ ಎಂಜಿನಿಯರ್‌ ದಿನ ಆಚರಿಸಲಾಗುತ್ತದೆ. ಈ ದಿನದ ಅಂಗವಾಗಿ ಭಾರತದಲ್ಲಿನ ಕೆಲವು ಖ್ಯಾತ ಆಧುನಿಕ ನಿರ್ಮಾಣಗಳ ಬಗ್ಗೆ ಒಂದಿಷ್ಟು ಮಾಹಿತಿ...

ವಿಶ್ವೇಶ್ವರಯ್ಯನವರ ಸಾಧನೆಗಳು

ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ 1861 ಸೆಪ್ಟೆಂಬರ್‌ 15ರಂದು ವಿಶ್ವೇಶ್ವರಯ್ಯನವರು ಜನಿಸಿದರು. ಚಿಕ್ಕಬಳ್ಳಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು,1881ರಲ್ಲಿ ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಿಲ್ಲಿ (ಮದ್ರಾಸ್ ವಿಶ್ವವಿದ್ಯಾಲಯ) ಬಿ.ಎ. ಪದವಿ ಪಡೆದರು. ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್‌ ಎಜಿನಿಯರಿಂಗ್ ಪದವಿ ಪಡೆದರು. 23ನೇ ವಯಸ್ಸಿನಲ್ಲಿ ಬಾಂಬೆ ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್‌ಗೆ ವೃತ್ತಿ ಜೀವನ ಆರಂಭಿಸಿದರು.

ನೀರಿನ ಪ್ರವಾಹವನ್ನು ತಡೆದುಕೊಳ್ಳುವುದರ ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹ ಸಾಮರ್ಥ್ಯವಿರುವ ಅಣೆಕಟ್ಟುಗಳ ನಿರ್ಮಾಣ ಕಾರ್ಯದಲ್ಲಿ ದೇಶದಾದ್ಯಂತ ಅವರು ವಿಶಿಷ್ಟ ಛಾಪು ಮೂಡಿಸಿದರು. ಇಂದಿಗೂ ಅವರು ರೂಪಿಸಿದ ಹಲವು ತಂತ್ರಜ್ಞಾನಗಳನ್ನು ಬಳಸಿಕೊಳ್ಳಾಗುತ್ತಿದೆ.

* ಅಣೆಕಟ್ಟುಗಳಲ್ಲಿ ಸ್ವಯಂಚಾಲಿತ ಬಾಗಿಲುಗಳ ನಿರ್ಮಾಣಕ್ಕೆ ಹಕ್ಕುಸ್ವಾಮ್ಯ ಪಡೆದರು.

* ಕಾವೇರಿ ನದಿಗೆ ಅಡ್ಡಲಾಗಿ ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣ.

* ಮೂಸಿ ನದಿಯಿಂದ ಸದಾ ಪ್ರವಾಹ ಎದುರಿಸುತ್ತಿದ್ದ ಹೈದರಾಬಾದ್ ನಗರದಲ್ಲಿ ಪ್ರವಾಹ ಸಮಸ್ಯೆ ಎದುರಾಗದಂತೆ ವಿಶೇಷ ವ್ಯವಸ್ಥೆ ರೂಪಿಸಿದರು.

* ತಿರುಮಲ ತಿರುಪತಿ ದೇವಸ್ಥಾನಕ್ಕೆ ಉತ್ತಮವಾದ ರಸ್ತೆ ನಿರ್ಮಿಸಿದರು.

* ಆಂಧ್ರಪ್ರದೇಶದ ವಿಶಾಖಪಟ್ಟಣಂ ನಗರವನ್ನು ಕಡಲಕೊರೆತ ಸಮಸ್ಯೆ ಎದುರಾಗದಂತೆ ನಿರ್ಮಿಸಿದರು.

* 1909ರಲ್ಲಿ ಮೈಸೂರು ಸಂಸ್ಥಾನದ ಮುಖ್ಯ ಎಂಜಿನಿಯರ್‌ ಆಗಿ ಸೇವೆ ಸಲ್ಲಿಸಿದರು.

* 1912ರಿಂದ 1918ರ ವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು.

* ಮೈಸೂರು ಸಾಬೂನು ಕಾರ್ಖಾನೆ, ಭದ್ರವಾತಿ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಕಾಲೇಜು, ಮೈಸೂರು ಬ್ಯಾಂಕ್‌ (ಈಗ ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ ವಿಲೀನವಾಗಿದೆ) ಬೆಂಗಳೂರು ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.

* ಸತತ 50 ವರ್ಷಗಳ ಕಾಲ ಲಂಡನ್‌ನ ಸಿವಿಲ್‌ ಎಂಜಿನಿಯರ್ ಇನ್‌ಸ್ಟಿಟ್ಯೂಟ್‌ನ ಗೌರವ ಸದಸ್ಯರಾಗಿದ್ದರು.

* 1934ರಲ್ಲಿ ಭಾರತದ ಆರ್ಥಿಕ ವ್ಯವಸ್ಥೆ ರೂಪಿಸಲು ಪ್ರಮುಖ ಪಾತ್ರ ವಹಿಸಿದರು.

* 1955ರಲ್ಲಿ ಇವರ ಸಾಧನೆಗಳನ್ನು ಪರಿಗಣಿಸಿ ಭಾರತ ಸರ್ಕಾರ ಅತ್ಯುನ್ನತ ‘ಭಾರತರತ್ನ’ ಭಾರತ ಪುರಸ್ಕಾರದೊಂದಿಗೆ ಸತ್ಕರಿಸಿತು. ಅವರು 1962 ಏಪ್ರಿಲ್‌ 12ರಂದು ನಿಧನರಾದರು).

ಸಿವಿಲ್‌, ಎಲೆಕ್ಟ್ರಿಕಲ್, ಮೆಕಾನಿಕಲ್, ಟೆಕ್ನಿಕಲ್ ಸೇರಿದಂತೆ ಹಲವು ಎಂಜಿನಿಯರಿಂಗ್ ವಿಷಯಗಳಲ್ಲಿ ಪ್ರತಿ ವರ್ಷ ಭಾರತದಲ್ಲಿ ಸುಮಾರು 20 ಲಕ್ಷ ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳೆಲ್ಲರೂ ಸಂಶೋಧನೆಗಳನ್ನು ಮಾಡಿ ದೇಶದ ಅಭಿವೃದ್ಧಿಗೆ ನೆರವಾಗಬೇಕು ಎಂಬ ಉದ್ದೇಶದಿಂದ 1968ರಲ್ಲಿ ಎಂಜಿನಿಯರಿಂಗ್ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು.

ವಿವಿಧ ದೇಶಗಳಲ್ಲಿ ಎಂಜಿನಿಯರಿಂಗ್ ದಿನ

ಆಸ್ಟ್ರೇಲಿಯಾ; ಆಗಸ್ಟ್ 4

ಕೆನಡಾ; ಮಾರ್ಚ್‌ 1ರಿಂದ 31

ಫ್ರಾನ್ಸ್‌; ಏಪ್ರಿಲ್‌ 3

ಮಲೇಷ್ಯಾ; ಸೆಪ್ಟೆಂಬರ್ 15

ಪಾಕಿಸ್ತಾನ; ಜನವರಿ 10

ರಷ್ಯಾ; 22 ಡಿಸೆಂಬರ್

ಬ್ರಿಟನ್; ಮಾರ್ಚ್ 14

ಪ್ರತಿ ವರ್ಷ ಮೇ 3ರಂದು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಎಂಜಿನಿಯರ್ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ.

ಭಾರತದಪ್ರಮುಖ ಕಟ್ಟಡಗಳ ಬಗ್ಗೆ ಮಾಹಿತಿ

ಕೆಎಂವೈಎಫ್ ರಂಕಾ ಆಸ್ಪತ್ರೆ

ಬೆಂಗಳೂರಿನ ಜಯನಗರದಲ್ಲಿರುವ ಈ ಕಟ್ಟಡ 30 ಹಾಸಿಗೆಯ ಡಯಾಲಿಸಿಸ್ ಕೇಂದ್ರ. ಕೇವಲ 60X40 ವಿಸ್ತೀರ್ಣದಲ್ಲಿ ಈ ಕಟ್ಟಡವನ್ನು ನಿರ್ಮಿಸಿರುವುವು ವಿಶೇಷ. ಕಟ್ಟಡದ ಮುಂಭಾಗ ವಿಶೇಷವಾಗಿ ರಚನೆಯಾಗಿದ್ದು, ಪರದೆ ಬಿಟ್ಟಂತೆ ವಿವಿಧ ಆಕೃತಿಯ ಗೋಡೆಗಳನ್ನು ಮೆತ್ತಿಸಿದಂತೆ ಕಾಣುತ್ತದೆ. ಆಸ್ಪತ್ರೆ ಮುಂಭಾಗ ದೇವಸ್ಥಾನಗಳಿದ್ದು, ರೋಗಿಗಳ ಆರೈಕೆಗೆ ಉತ್ತಮ ವಾತಾವರಣವೂ ಇದೆ.

ಲೋಟಸ್ ಟೆಂಪಲ್

ಇರಾನ್‌–ಅಮೆರಿಕ ಶೈಲಿಯ ವಾಸ್ತುತಜ್ಞ ಫರಿಬೊರ್ಜ್ ಶಬ ಅವರು ಈ ಕಟ್ಟಡವನ್ನು ನಿರ್ಮಿಸಿದ್ದಾರೆ. ನವದೆಹಲಿಯಲ್ಲಿರುವ ಈ ಧ್ಯಾನಕೇಂದ್ರದ ನಿರ್ಮಾಣಕಾರ್ಯ 1986ರಲ್ಲಿ ಪೂರ್ಣಗೊಂಡಿತು. ವಿಕಸಿಸುತ್ತಿರುವ ಕಮಲದ ಆಕೃತಿಯಲ್ಲಿ ಈ ಕಟ್ಟಡವನ್ನು ನಿರ್ಮಿಸಿರುವುದು ವಿಶೇಷ. ಒಟ್ಟು 26 ಎಕರೆ ವಿಸ್ತೀರ್ಣದಲ್ಲಿ ಇದನ್ನು ನಿರ್ಮಿಸಲಾಗಿದ್ದು, 27 ದಳಗಳನ್ನು ಹೋಲುವಂತೆ ಕಟ್ಟಡದ ಗೋಡೆಗಳನ್ನು ಮೂರು ವೃತ್ತಗಳಲ್ಲಿ ನಿರ್ಮಿಸಲಾಗಿದೆ. ಮೊದಲನೇ ಭಾಗದಲ್ಲಿ 9 ಗೋಡೆಗಳಿದ್ದು, 9 ದಳಗಳಂತೆ ಕಾಣತ್ತವೆ. ಈ ಪ್ರತಿ ಗೋಡೆಯಲ್ಲೂ ಪ್ರವೇಶದ್ವರವಿದೆ. ಒಟ್ಟು 40 ಮೀಟರ್ ಎತ್ತರ ಇರುವ ಈ ಕಟ್ಟಡದಲ್ಲಿ ಸುಮಾರು 2,500 ಮಂದಿ ಇರಬಹುದು. ಕಟ್ಟಡದ ಹೊರ ಕವಚವನ್ನು ಅಮೃತ ಶಿಲೆಗಳಿಂದ ನಿರ್ಮಿಸಿರುವುದು ವಿಶೇಷ.

ಪಾರ್ಕ್ ಹೋಟೆಲ್‌

ಹೈದರಾಬಾದ್‌ನಲ್ಲಿರುವ ಈ ಕಟ್ಟಡದಲ್ಲಿ 270 ಕೋಣೆಗಳಿವೆ. ಸ್ಥಳೀಯ ಕರಕುಶಲ ಕಲೆ ಮತ್ತು ಆಧುನಿಕ ತಂತ್ರಜ್ಞಾನದ ಸಮ್ಮಿಲನವಾಗಿ ಈ ಕಟ್ಟಡ ನಿರ್ಮಾಣವಾಗಿದೆ. 3ಡಿ ತಂತ್ರಜ್ಞಾನ ಪ್ರತಿಬಿಂಬಿಸುವಂತೆ ನಿರ್ಮಾಣವಾಗಿರುವುದು ಆಯಾತಕಾರದ ಈ ಕಟ್ಟಡದ ವಿಶೇಷ. ನಗರದ ಹುಸೇನ್‌ ಸಾಗರ್ ಕೆರೆಗೆ ಸಮೀಪದಲ್ಲಿ ಇದನ್ನು ನಿರ್ಮಿಸಲಾಗಿದೆ. ರೆಸ್ಟೊರೆಂಟ್‌ಗಳು, ದೊಡ್ಡ ಸಭಾಂಗಣಗಳು, ಕರೆನ್ಸಿ ವಿನಿಮಯ ಕೇಂದ್ರ, ಈಜುಕೋಳ ಸೇರಿದಂತೆ ಹಲವು ಸೌಲಭ್ಯಗಳು ಇಲ್ಲಿವೆ.

ಕ್ಯಾಪಿಟಲ್ ಕಾಂಪ್ಲೆಕ್ಸ್

ಚಂಡೀಗಡದಲ್ಲಿರುವ ಈ ಕಟ್ಟಡವನ್ನು ಯುನೆಸ್ಕೊ ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿದೆ. ಮೂರು ಕಾಂಕ್ರೀಟ್‌ ಕಟ್ಟಡಗಳನ್ನು ಕೂಡಿಸಿ ಈ ಕಟ್ಟಡವನ್ನು ನಿರ್ಮಿಸಿರುವುದು ವಿಶೇಷ. ಈ ಕಟ್ಟಡದಲ್ಲಿ ವಿಧಾನಸಭೆ, ಹೈ ಕೋರ್ಟ್ ಮತ್ತು ಪಂಜಾಬ್ ಮತ್ತು ಹರ್ಯಾಣ ಸರ್ಕಾರದ ಶಾಸನ ಸಭೆಗಳು ಇವೆ. 8 ಅಂತಸ್ತಿನ ಈ ಕಟ್ಟಡ 250 ಮೀಟರ್ ಎತ್ತರವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT