ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಕಗಳು ಕಾಣಿಸುವ ಹೊಸ ಜಗತ್ತು

Last Updated 5 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಮೊಬೈಲ್‌ಫೋನ್‌, ಕೈಗಡಿಯಾರ ಸೇರಿದಂತೆ ಹಲವು ವಸ್ತು, ಉಪಕರಣಗಳು ಸ್ಮಾರ್ಟ್‌ ತಂತ್ರಜ್ಞಾನವನ್ನು ಮೈಗೂಡಿಸಿಕೊಂಡು ಉಪಯೋಗವಾಗುತ್ತಿವೆ. ಕೇವಲ ದೃಷ್ಟಿಸಮಸ್ಯೆಗಳ ಪರಿಹಾರಕ್ಕೆ ಹಾಗೂ ಕಣ್ಣಿಗೆ ಹಾನಿಯಾಗದಂತೆ ರಕ್ಷಣೆ ಒದಗಿಸುತ್ತಿದ್ದ ಕನ್ನಡಕಗಳೂ ಈಗ ಸ್ಮಾರ್ಟ್‌ ತಂತ್ರಜ್ಞಾನ, ಎಆರ್‌ ತಂತ್ರಜ್ಞಾನ ಮೈಗೂಡಿಸಿಕೊಂಡು ವಿವಿಧ ರೀತಿಯಲ್ಲಿ ನೆರವಾಗುತ್ತಿವೆ. ಅಂತಹ ಕೆಲವು ವಿಶಿಷ್ಟ ಕನ್ನಡಕಗಳ ಮಾಹಿತಿ ಇಲ್ಲಿದೆ.

ನಾರ್ತ್‌ ಫೋಕಲ್ಸ್‌

ಕೆನಡಾದ ನಾರ್ತ್‌ ಸಂಸ್ಥೆ ಎಆರ್‌ ತಂತ್ರಜ್ಞಾನ ಆಧಾರಿತ ಕನ್ನಡಕಗಳನ್ನು ತಯಾರಿಸುವಲ್ಲಿ ಜನಪ್ರಿಯವಾಗಿದೆ. ಈವರೆಗೆ 230 ಪೆಟೇಂಟ್ಸ್‌ಗಳನ್ನೂ ಪಡೆದಿರುವ ಈ ಸಂಸ್ಥೆ ತಯಾರಿಸಿರುವ ‘ಫೋಕಲ್ಸ್‌’ ಹೆಸರಿನ ವಿಶೇಷ ಕನ್ನಡವನ್ನು ಸ್ಮಾರ್ಟ್‌ಫೋನ್‌ಗೆ ಜೋಡಿಸಿ ಬಳಸಿಕೊಳ್ಳಬಹುದು. ಇದನ್ನು ಧರಿಸಿದರೆ ಸಾಕು, ನಮ್ಮ ಮೊಬೈಲ್‌ಫೋನ್‌ಗೆ ಬರುವ ನೋಟಿಫಿಕೇಶನ್ಸ್‌ಗಳೆಲ್ಲಾ ಕನ್ನಡಕದ ಗಾಜಿನ ಪರದೆ ಮೇಲೆ ಮೂಡುತ್ತವೆ. ಇ-ಮೇಲ್‌ ಸಂದೇಶ, ಟ್ವೀಟ್‌ಗಳು, ಫೇಸ್‌ಬುಕ್‌ ಪೋಸ್ಟ್‌ಗಳು… ಹೀಗೆ ಎಲ್ಲವನ್ನೂ ಸ್ಮಾರ್ಟ್‌ಫೋನ್‌ ಧರಿಸದೆಯೇ ಕನ್ನಡಕದಲ್ಲಿ ನೋಡಬಹುದು. ಇವಲ್ಲದೆ ವಾತಾವರಣದ ಮಾಹಿತಿ, ದಿನಾಂಕ, ವಾರ, ಸನಿಹದಲ್ಲಿರುವ ಮುಖ್ಯ ಕಚೇರಿಗಳು, ಊಬರ್‌ ಟ್ಯಾಕ್ಸಿಗಳ ವಿವರ… ಹೀಗೆ ಎಲ್ಲವೂ ಕಣ್ಣ ಮುಂದೆಯೇ ಕಾಣಿಸಿಕೊಳ್ಳುತ್ತವೆ. ಈ ಎಲ್ಲ ಮಾಹಿತಿ ಗಾಜಿನ ಪರದೆ ಮೇಲೆ ಪದೇ ಪದೇ ಬದಲಾಯಿಸಿಕೊಂಡು ನೋಡಲು ನೆರವಾಗುವಂತೆ ಸಂಸ್ಥೆ ವಿಶೇಷ ಸ್ಮಾರ್ಟ್‌ ಉಂಗುರವನ್ನೂ ತಯಾರಿಸಿದೆ. ಜಾಯ್‌ಸ್ಟಿಕ್‌ ಮಾದರಿಯ ಈ ಉಂಗುರದ ನೆರವನಿಂದ ಕನ್ನಡಕದ ಗಾಜಿನ ಪರದೆ ಮೇಲೆ ನಮಗೆ ಬೇಕಾಗಿರುವ ಮಾಹಿತಿಗಳನ್ನು ನೋಡಿಕೊಳ್ಳಬಹುದು.

ಮೈಕ್ರೊಸಾಫ್ಟ್‌- ಹೋಲೊಲೆನ್ಸ್‌-2

ಮೈಕ್ರೊಸಾಫ್ಟ್‌ ಸಂಸ್ಥೆ 2015ರಲ್ಲಿ ಪರಿಚಯಿಸಿದ್ದ ಸ್ಮಾರ್ಟ್‌ ಕನ್ನಡಕಕ್ಕೆ ಹೋಲಿಸಿದರೆ ಹೋಲೊಲೆನ್ಸ್‌-2 ಕನ್ನಡಕ ವಿಶೇಷವಾದುದು. ಕೆಲವು ನಿರ್ದಿಷ್ಟ ಬಳಕೆದಾರರಿಗೆ ಮಾತ್ರ ನೆರವಾಗುವಂತೆ ಇದನ್ನು ತಯಾರಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಆರ್‌ ತಂತ್ರಜ್ಞಾನ ಆಧಾರಿತ ಕನ್ನಡಕಗಳಿಗಿಂತ ವಿಶೇಷವಾಗಿ ಇದರಲ್ಲಿ ಡೈನಮಿಕ್‌ 365 ರಿಮೋಟ್‌ ಅಸೆಸ್‌ ಟೆಕ್ನಾಲಜಿ ಅಳವಡಿಸಲಾಗಿದ್ದು ಬೇರೆ ಪ್ರದೇಶಗಳಲ್ಲಿ ಇರುವವರೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಲು ನೆರವಾಗುತ್ತದೆ. ವಸ್ತು, ಉಪಕರಣ ತಯಾರಿಕಾ ಕ್ಷೇತ್ರ, ಔಷಧ ತಯಾರಿಕಾ ಕ್ಷೇತ್ರ, ಶಿಕ್ಷಣ ಕ್ಷೇತ್ರಕ್ಕೆ ಈ ಕನ್ನಡಕ ಉಪಯೋಗವಾಗುತ್ತದೆ. ಸ್ಮಾರ್ಟ್‌ಫೋನ್‌ ಅಥವಾ ಕಂಪ್ಯೂಟರ್‌ ಬಳಸಿ ಮಾಡಬಹುದಾದ ಕೆಲವು ಕೆಲಸಗಳನ್ನು ಈ ಕನ್ನಡಕದ ಮೂಲಕವೇ ಮಾಡಿಕೊಳ್ಳಬಹುದು.

ಸ್ನ್ಯಾಪ್‌- ಸ್ಪೆಕ್ಟಿಕಲ್ಸ್‌ ಎಆರ್‌

ಎಆರ್‌ ತಂತ್ರಜ್ಞಾನ ಆಧಾರಿತ ನಾಲ್ಕನೇ ತಲೆಮಾರಿನ ಮೊದಲ ಸ್ಮಾರ್ಟ್‌ ಕನ್ನಡಕವನ್ನು ಸ್ನ್ಯಾಪ್‌ ಸಂಸ್ಥೆ ಪರಿಚಯಿಸಿದೆ. ಈ ಹಿಂದೆ ಪರಿಚಯಿಸಿರುವ ಕನ್ನಡಕಗಳಿಗಿಂತ ಈ ಕನ್ನಡಕ ವಿಶೇಷವಾದುದು ಎಂದು ಸಂಸ್ಥೆ ಹೇಳಿಕೊಂಡಿದೆ. ಇದನ್ನು ಸ್ನ್ಯಾಪ್‌ಚಾಟ್‌ ಸಾಫ್ಟ್‌ವೇರ್‌ ಟೂಲ್ಸ್‌ಗಳನ್ನು ಬಳಸಿ ವಿಭಿನ್ನವಾಗಿ ಆಕರ್ಷಕ ವಿನ್ಯಾಸದಲ್ಲಿ ತಯಾರಿಸಲಾಗಿದ್ದು, ಡ್ಯೂಯಲ್‌ ವೇವ್‌ಗೈಡ್‌ ಡಿಸ್‌ಪ್ಲೇ ಹೊಂದಿದೆ. ಕನ್ನಡಕದ ಫ್ರೇಮ್‌ನಲ್ಲಿ ಮೈಕ್ರೊಫೋನ್‌, ಎರಡು ಸ್ಟಿರಿಯೊ ಸ್ಪೀಕರ್ಸ್‌, ಟಚ್‌ಪ್ಯಾಡ್‌ ಅಳವಡಿಸಲಾಗಿದೆ. ಇನ್ನು ಇದರಲ್ಲಿನ ಫ್ರಂಟ್‌ ಫೇಸಿಂಗ್‌ ಕ್ಯಾಮೆರಾ ಎದುರಿನ ವಸ್ತು, ಉಪಕರಣಗಳ ಪರಿಶೀಲನೆಗೆ ನೆರವಾಗುತ್ತದೆ. ಇದಕ್ಕಾಗಿಯೇ ವಿಶೇಷ ಕಿರು ತಂತ್ರಾಂಶಗಳನ್ನೂ ಸಂಸ್ಥೆ ತಯಾರಿಸಿದ್ದು ಕನ್ನಡಕ ಧರಿಸಿಕೊಂಡು ಎದುರಿನ ಪರಿಸರವನ್ನು ನಿಮ್ಮಿಷ್ಟದ ಪ್ರಪಂಚದಂತೆ ಬದಲಾಯಿಸಿಕೊಂಡು ನೋಡಲು ನೆರವಾಗುತ್ತದೆ. ಕಾಲಕ್ಷೇಪಕ್ಕೆ ಕೆಲವು ಬಗೆಯ ಆಟಗಳನ್ನೂ ಆಡುವುದಕ್ಕೆ ಈ ಕನ್ನಡಕವನ್ನು ಉಪಯೋಗಿ ಸಿಕೊಳ್ಳಬಹುದು.

ವುಜಿಕ್ಸ್ ಸ್ಮಾರ್ಟ್‌ ಗ್ಲಾಸ್‌

ನಿತ್ಯಕೆಲಸಗಳಿಗೆ ನೆರವಾಗುವಂತೆ ವುಜಿಕ್ಸ್‌ ಸಂಸ್ಥೆ ವಿಶೇಷ ಕನ್ನಡಕವೊಂದನ್ನು ತಯಾರಿಸಿದೆ. ಈ ವರ್ಷ ನಡೆದ ಸಿಇಎಸ್‌ನಲ್ಲಿ ಈ ಕನ್ನಡಕವನ್ನು ಪರಿಚಯಿಸಿ ಪ್ರಶಸ್ತಿಯನ್ನೂ ಬಾಚಿಕೊಂಡಿದೆ. ಇದಕ್ಕೆ ನಿರ್ದಿಷ್ಟ ಹೆಸರು ಇಡದಿದ್ದರೂ ‘ವುಜಿಕ್ಸ್‌ ನೆಕ್ಸ್ಟ್‌ ಜನರೇಷನ್‌ ಸ್ಮಾರ್ಟ್‌ ಗ್ಲಾಸ್‌’ ಎಂದು ಪರಿಚಯಿಸಿದೆ. ಇದು ಎಆರ್‌ ತಂತ್ರಜ್ಞಾನ ಆಧಾರಿತ ಕನ್ನಡಕವಾಗಿದ್ದು, ಐ-ಫೋನ್‌ ಹಾಗೂ ಅಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಿಗೆ ಜೋಡಿಸಿ ಬಳಸಿಕೊಳ್ಳಬಹುದು. ವೈ-ಫೈ ತಂತ್ರಜ್ಞಾನ ನೆರವಿನಿಂದಲೂ ಕಾರ್ಯನಿರ್ವಹಿಸುವಂತೆ ಇದನ್ನು ತಯಾರಿಸಲಾಗಿದೆ. ಇದರಲ್ಲಿ ವಿಶೇಷ ಕ್ಯಾಮೆರಾ, ಹೊರಗಿನ ಗದ್ದಲ ಗ್ರಹಿಸದೆ ನಮ್ಮ ಮಾತುಗಳನ್ನು ಮಾತ್ರ ಕೇಳಿಸಿಕೊಳ್ಳುವಂತಹ ವಿಶೇಷ ಮೈಕ್ರೊಫೋನನ್ನು ಅಳವಡಿಸಲಾಗಿದೆ; ಇದು ಸ್ಟಿರಿಯೊ ಸ್ಪೀಕರ್ಸ್‌ಗಳನ್ನೂ ಹೊಂದಿದೆ. ಕನ್ನಡಕದ ಗಾಜುಗಳನ್ನೂ ವಿಶೇಷವಾಗಿ ತಯಾರಿಸಲಾಗಿದ್ದು ಎಲ್ಲ ಬಗೆಯ ಪಿಕ್ಸೆಲ್‌ ಡೆನ್ಸಿಟಿ ಹಾಗೂ ರೆಸಲ್ಯೂಷನ್‌ಗೆ ಹೊಂದಿಕೊಳ್ಳುತ್ತದೆ. ಇದರಿಂದ ಗುಣಮಟ್ಟದ ವರ್ಣಮಯ ಚಿತ್ರಗಳು ಗಾಜಿನ ಪರದೆ ಮೇಲೆ ಮೂಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT