ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆಗೆ ತಕ್ಕ ಸ್ಮಾರ್ಟ್‌ಪೋನ್‌

Last Updated 6 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ಕಡಿಮೆ ಬೆಲೆಗೆ ಹೆಚ್ಚಿನ ವೈಶಿಷ್ಟ್ಯಗಳಿರುವ ಸ್ಮಾರ್ಟ್‌ಫೋನ್‌ ನೀಡುವಲ್ಲಿ ಹಾಂಕಾಂಗ್‌ನ ಟ್ರಾನ್ಸಿಷನ್‌ ಕಂಪನಿ ಮುಂಚೂಣಿಯಲ್ಲಿದೆ. ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ ಫೇಸ್‌ ಅನ್‌ಲಾಕ್‌, ಫಿಂಗ್‌ಪ್ರಿಂಟ್‌ ಸ್ಕ್ಯಾನ್‌, ಗರಿಷ್ಠ ಸಂಗ್ರಹಣಾ ಸಾಮರ್ಥ್ಯ ಹೀಗೆ ಇನ್ನೂ ಹಲವು ಸೌಲಭ್ಯಗಳು ಟೆಕ್ನೊ ಕ್ಯಾಮನ್‌ ಐಏಸ್‌ 2ಎಕ್ಸ್‌ (Camon iAce 2x) ಫೋನ್‌ನಲ್ಲಿದೆ.

ಸ್ಮಾರ್ಟ್‌ಫೋನ್‌ ಹಗುರಾಗಿದ್ದು, 150 ಗ್ರಾಂ ಇದೆ. ಒಂದೇ ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡಬಹುದು. ಸ್ಕ್ರೀನ್‌ ಟು ಬಾಡಿ ರೇಷಿಯೊ 80.5 ಇದೆ. ಸೆಲ್ಫಿ ಕ್ಯಾಮೆರಾ ಮತ್ತು ಫ್ಲ್ಯಾಷ್‌ಗಾಗಿ ನಾಚ್‌ (notch) ಉಳಿಸಿಕೊಳ್ಳಲಾಗಿದೆ 8.48ಎಂಎಂ ದಪ್ಪವಿದೆ. ಪ್ಲಾಸ್ಟಿಕ್‌ ಬಾಡಿ ನೀಡಲಾಗಿದೆ. ಹೊರಗಿನಿಂದಲೇ ಸಿಮ್‌ ಮತ್ತು ಎಸ್‌ಡಿ ಕಾರ್ಡ್‌ ಹಾಕುವ ಅಥವಾ ತೆಗೆಯುವ ಆಯ್ಕೆ ಇಲ್ಲ. ಈ ವಿಷಯದಲ್ಲಿ ಹಳೆಯ ಫೋನ್‌ಗಳ ಮಾದರಿಯನ್ನೇ ಮುಂದುವರಿಸಲಾಗಿದೆ. ಹ್ಯಾಂಡ್‌ಸೆಟ್‌ನ ಹಿಂಭಾಗದ ಕವಚ ತೆಗೆದು ಸಿಮ್‌ ಮತ್ತು ಎಸ್‌ಡಿ ಕಾರ್ಡ್‌ ಹಾಕಬೇಕಾಗತ್ತದೆ. ಆದರೆ, ಸ್ಕ್ರೂ ಡ್ರೈವರ್‌ ಇಲ್ಲದೆ ಬ್ಯಾಟರಿ ತೆಗೆಯಲು ಸಾಧ್ಯವಿಲ್ಲ.

ಇದು 5.5 ಎಚ್‌ಡಿ + ಫುಲ್‌ ವೀವ್‌ ಡಿಸ್‌ಪ್ಲೇ ಹೊಂದಿದ್ದು, 18:9 ಆಸ್ಪೆಕ್ಟ್‌ ರೇಶಿಯೊ ಇದೆ. ಬ್ರೈಟ್‌ನೆಸ್‌ ಕಡಿಮೆ ಮಾಡಿಕೊಂಡರೂ ಡಿಸ್‌ಪ್ಲೇ ಕಣ್ಣಿಗೆ ಅಷ್ಟು ಹಿತ ಎನಿಸುವುದಿಲ್ಲ. ಆದರೆ, eyecare ಆಯ್ಕೆಯನ್ನು ಚಾಲನೆಗೊಳಿಸಿದರೆ ಹಿತ ಎನಿಸುತ್ತದೆ. ಈ ಆಯ್ಕೆಯನ್ನು ಸಕ್ರಿಯಗೊಳಿಸಿಟ್ಟುಕೊಳ್ಳುವುದು ಹೆಚ್ಚು ಸೂಕ್ತ. ಸೆಲ್ಫಿ ಕ್ಯಾಮೆರಾ ಮತ್ತು ಫ್ಲ್ಯಾಷ್‌ ಲೈಟ್‌ಗಾಗಿ ಪರದೆಯ ಮೇಲ್ಭಾಗದಲ್ಲಿ ನಾಚ್‌ (Notch) ಉಳಿಸಿಕೊಳ್ಳಲಾಗಿದೆ.

Anti-oil fingerprint sensor: ನೀವು ಬಜ್ಜಿ ಅಥವಾ ಇನ್ಯಾವುದೇ ಎಣ್ಣೆ ಪದಾರ್ಥವನ್ನು ತಿನ್ನುತ್ತಿದ್ದಾಗಲೂ ಫೋನ್‌ ಬಳಸಬಹುದು. ಕೈಬೆರಳು ಎಣ್ಣೆಯಾಗಿದ್ದರೂ ಫೋನ್‌ ಅನ್‌ಲಾಕ್‌ ಮಾಡಬಹುದು. ವಿಶೇಷವಾಗಿ ಭಾರತದ ಗ್ರಾಹಕರಿಗಾಗಿಯೇ ಈ ಆಯ್ಕೆ ನೀಡಿರುವುದಾಗಿ ಕಂಪನಿ ಹೇಳಿಕೊಂಡಿದೆ.

ವೈಶಿಷ್ಟ್ಯಗಳ ಬಗ್ಗೆ ಮಾತಾನಾಡುವುದಾದರೆ, ಇದರ ಫೇಸ್‌ ಅನ್‌ಲಾಕ್‌ ಆಯ್ಕೆಯು ಪ್ರೀಮಿಯಂ ಫೋನ್‌ಗಳಿಗೆ ಸರಿಸಾಟಿಯಾಗಿದೆ. ಹ್ಯಾಂಡ್‌ಸೆಟ್‌ ಕೈಯಲ್ಲಿ ಹಿಡಿದಾಕ್ಷಣ ಫೇಸ್‌ ರೀಡ್ ಆಗಿ ಫೋನ್‌ ಅನ್‌ಲಾಕ್‌ ಆಗುತ್ತದೆ. ಕಡಿಮೆ ಬೆಲೆಯ ಫೋನ್‌ನಲ್ಲಿ ಇಂತಹ ಉತ್ತಮ ಆಯ್ಕೆ ನೀಡಿರುವ ಕಂಪನಿಯ ತಾಂತ್ರಿಕ ತಂಡವನ್ನು ಮೆಚ್ಚಿಕೊಳ್ಳಲೇಬೇಕು.

Camon iAce ನಲ್ಲಿ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಇರಲಿಲ್ಲ. ಆದರೆ, ಈ ಹ್ಯಾಂಡ್‌ಸೆಟ್‌ನಲ್ಲಿ ಆ ಕೊರತೆಯನ್ನು ನೀಗಿಸಲಾಗಿದೆ. ಈಗ ಮಾರುಕಟ್ಟೆಗೆ ಬರುತ್ತಿರುವ ಫೋನ್‌ಗಳಲ್ಲಿ ಫಿಂಗರ್‌ ಪ್ರಿಂಟ್‌ ಆಯ್ಕೆ ಸ್ಕ್ರೀನ್‌ನ ಕೆಳಭಾಗದಲ್ಲಿ ನೀಡಲಾಗುತ್ತಿದೆ. ಆದರೆ, ಈ ಫೋನ್‌ನಲ್ಲಿ ಹಿಂಭಾಗದಲ್ಲಿಯೇ ಉಳಿಸಿಕೊಳ್ಳಲಾಗಿದೆ. ಬೆಲೆಯೊಂದಿಗೆ ಕಾಂಪ್ರಮೈಸ್‌ ಮಾಡಿಕೊಳ್ಳುವ ನಿಟ್ಟಿನಲ್ಲಿ ಇದೇನು ದೊಡ್ಡ ವಿಷಯವಾಗಲಾರದು.

ಕ್ಯಾಮೆರಾ ಸುಮಾರಾಗಿದೆ: 13 ಮೆಗಾಪಿಕ್ಸಲ್ ಪ್ರೈಮರಿ ಮತ್ತು 8 ಮೆಗಾಪಿಕ್ಸಲ್‌ ಸೆಲ್ಫಿ ಕ್ಯಾಮೆರಾಗಳಿವೆ. ನೈಟ್‌ ಅಲ್ಗಾರಿದಂ 2.0, ಎಐ ಆಡೊ ಸೀನ್‌ ಡಿಸ್ಟಿಂಗ್ವಿಷ್‌, ಎಐ ಬ್ಯೂಟಿ ಮೋಡ್‌, ಎಐ ಪೋರ್ಟ್ರೇಟ್‌ ಮೋಡ್, ಡಿಜಿಟಲ್‌ ಜೂಮ್‌, ಬ್ಯಾಕ್‌ಲೈಟ್‌ ಎಚ್‌ಡಿಆರ್‌... ಹೀಗೆ ಹಲವು ಆಯ್ಕೆಗಳಿವೆ. ಹೀಗಿದ್ದರೂ ಪ್ರೈಮರಿ ಕ್ಯಾಮೆರಾದ ಗುಣಮಟ್ಟ ಸುಮಾರಾಗಿದೆ. ಬೆಳಕು ಸರಿಯಾಗಿದ್ದರೆ ಮಾತ್ರವೇ ಒಂದು ಮಟ್ಟಿಗೆ ತೃಪ್ತಿ ಎನಿಸುವಂತಹ ಫೋಟೊ ತೆಗೆಯಬಹುದು. ಕಡಿಮೆ ಬೆಳಕಿದ್ದರೆ ಚಿತ್ರಗಳು ಸರಿಯಾಗಿ ಬರುವುದಿಲ್ಲ. ಕ್ಯಾಮೆರಾ ಉದ್ದೇಶಕ್ಕಾಗಿಯೇ ಖರೀದಿಸುವುದಾದರೆ ಈ ಫೋನ್‌ ತಕ್ಕದ್ದಲ್ಲ.

ಮಂದ ಬೆಳಕಿನಲ್ಲಿ ವಿಡಿಯೊ ಚಾಟ್‌ ಮಾಡುವಾಗ ಮುಖ ಕಾಣುವಂತೆ ಮಾಡಲು ವಿಡಿಯೊ ಚಾಟ್‌ ಫ್ಲ್ಯಾಷ್‌ ಆಯ್ಕೆ ನೀಡಲಾಗಿದೆ. ಇದು ಕೆಲ ಮಟ್ಟಿಗೆ ಉಪಯುಕ್ತವಾಗಿದೆ.ಎಲ್ಲಾ ಗೇಮ್‌ಗಳೂ ಇದಕ್ಕೆ ಒಗ್ಗುವುದಿಲ್ಲ. ಕಡಿಮೆ ಗಾತ್ರದ ಗೇಮ್‌ಗಳನ್ನು ಯಾವುದೇ ಅಡ್ಡಿಯಿಲ್ಲದೆ ಆಡಬಹುದು. ಗೇಮಿಂಗ್‌ ಮೋಡ್‌ ಆಯ್ಕೆ ಇರುವುದರಿಂದ ಆಟಕ್ಕೆ ಅಡ್ಡಿಯಾಗದಂತೆ ನೋಟಿಫಿಕೇಷನ್‌ಗಳನ್ನು ನಿರ್ವಹಣೆ ಮಾಡಿಕೊಳ್ಳಬಹುದು. 4ಕೆ ವಿಡಿಯೊಗಳು ಪ್ಲೇ ಆಗುವುದಿಲ್ಲ.

ಐಕಾನ್‌ಗಳ ಬದಲಾಗಿ ಫೋಟೊಗಳನ್ನೇ ಉಳಿಸಿಕೊಳ್ಳುವುದು, ಎಲ್ಲಾ ಆ್ಯಪ್‌ಗಳನ್ನು ಒಂದೇ ಕೀ ಮೂಲಕ ಪ್ರವೇಶಿಸುವುದು ಹೀಗೆ ಇನ್ನೂ ಕೆಲವು ಬಳಕೆದಾರಸ್ನೇಹಿ ಆಯ್ಕೆಗಳಿವೆ. 3050 ಎಂಎಎಚ್‌ ಬ್ಯಾಟರಿ ಇದ್ದು, ಒಮ್ಮೆ ಪೂರ್ತಿ ಚಾರ್ಜ್‌ ಮಾಡಿದರೆ ಒಂದು ದಿನ ಬಳಸಬಹುದು.

100 ದಿನಗಳ ಒಳಗೆ ಏನೇ ತೊಂದರೆ ಕಂಡು ಬಂದರೂ ಫೋನನ್ನೇ ಬದಲಿಸಿ ಹೊಸ ಫೋನ್ ಕೊಡುವ ವಾಗ್ದಾನ ಕಂಪನಿ ನೀಡಿದೆ. ಪರದೆ ಒಡೆದು ಹೋದರೆ ಒಂದು ಸಲ ಉಚಿತವಾಗಿ ಬದಲಿಸಿ ಕೊಡುತ್ತಾರೆ.ಒಂದು ತಿಂಗಳ ವಿಸ್ತರಿತ ವಾರಂಟಿ ಕೂಡಾ ನೀಡಲಿದೆ.

**

ವೈಶಿಷ್ಟ್ಯ
ಪರದೆ:
5.5 ಇಂಚು ಎಚ್‌ಡಿ+
ಒಸ್‌: ಆಂಡ್ರಾಯ್ಡ್‌ 8.1 ಓರಿಯೊ
ಪ್ರೊಸೆಸರ್‌: ಕ್ವಾಡ್‌ ಕೋರ್‌ 2 ಗಿಗಾಹರ್ಟ್ಸ್‌
ರೆಸಲ್ಯೂಷನ್‌: 720X1,440 ಪಿಕ್ಸಲ್
ರ್‍ಯಾಮ್: 3 ಜಿಬಿ. 32 ಜಿಬಿ
ಸಂಗ್ರಹಣಾ ಸಾಮರ್ಥ್ಯ: 32 ಜಿಬಿ, 128 ಜಿಬಿ ವರೆಗೆ ವಿಸ್ತರಣೆ ಸಾಧ್ಯ.
ಕ್ಯಾಮೆರಾ: 13 ಎಂಪಿ + 8 ಎಂಪಿ
ಬ್ಯಾಟರಿ: 3,050 ಎಂಎಎಚ್‌
ಇಯರ್‌ ಫೋನ್‌: ಇಲ್ಲ
ಫೇಸ್‌ ಅನ್‌ಲಾಕ್‌, ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌: ಇದೆ.
ಫಿಂಗರ್‌ ಪ್ರಿಂಟ್‌ ಸ್ಕ್ಯಾನ್‌ ಬಳಿಸಿಯೂ ಕಾಲ್‌ ರೆಕಾರ್ಡ್‌: ಮಾಡಬಹುದು.
ಸಿಮ್‌: ಡ್ಯುಯಲ್‌ ಸಿಮ್‌ ವೋಲ್ಟ್‌. ಮೈಕ್ರೊ ಎಸ್‌ಡಿ ಕಾರ್ಡ್‌ ಸ್ಲಾಟ್‌ ಪ್ರತ್ಯೇಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT