ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLV | ಎಸ್ಎಸ್ಎಲ್‌ವಿ: ನೂತನ ಉಡಾವಣಾ ರಾಕೆಟ್

Last Updated 15 ಫೆಬ್ರುವರಿ 2023, 0:00 IST
ಅಕ್ಷರ ಗಾತ್ರ

ಭಾರತದ ಆಗ್ನೇಯ ಕರಾವಳಿಯಲ್ಲಿರುವ ಶ್ರೀಹರಿಕೋಟಾದಲ್ಲಿ ನಮ್ಮ ದೇಶದ ಏಕೈಕ ಉಪಗ್ರಹ ಉಡಾವಣಾ ನೆಲೆಯಾದ ‘ಸತೀಶ್ ಧವನ್ ಅಂತರಿಕ್ಷ ಕೇಂದ್ರ’ವಿದೆ. ಅಲ್ಲಿರುವ ಎರಡು ಉಡಾವಣಾ ವೇದಿಕೆಗಳ ಪೈಕಿ ಮೊದಲನೆಯದರಲ್ಲಿ ಸುಮಾರು ಹನ್ನೊಂದು ಮಹಡಿಗಳಷ್ಟು ಎತ್ತರದ ರಾಕೆಟ್ ಒಂದು ಈ ಫೆಬ್ರುವರಿ 10ರಂದು ಯಾನಕ್ಕೆ ಸಿದ್ಧವಾಗಿ ನಿಂತಿತ್ತು. ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ ‘ಇಸ್ರೊ’ ನಿರ್ಮಿಸಿದ 640 ಟನ್ ತೂಕದ ರಕ್ಕಸ ರಾಕೆಟ್ಟಾದ ‘ಎಲ್.ವಿ.ಎಂ. 3 (ಜಿ.ಎಸ್.ಎಲ್. ವಿ. ಮಾರ್ಕ್3)’ಗೆ ಹೋಲಿಸಿದಲ್ಲಿ (ಎತ್ತರ 14 ಮಹಡಿಗಳು) ಕೇವಲ 120 ಟನ್ ತೂಕದ ಆ ರಾಕೆಟ್ ಸಾಕಷ್ಟು ಚಿಕ್ಕದೆನ್ನಬಹುದು. ಅದಕ್ಕೆ ತಕ್ಕಂತೆ ಆ ರಾಕೆಟ್ ನ ಹೆಸರೇ ‘ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್’ (‘ಎಸ್ಎಸ್ಎಲ್‌ವಿ’), ಅಂದರೆ ‘ಪುಟ್ಟ ಉಪಗ್ರಹಗಳ ಉಡಾವಣಾ ವಾಹನ’.

ಇಸ್ರೊದ ಈ ಪುಟ್ಟ ರಾಕೆಟ್ ವಾಹನದ ಉಡಾವಣೆಯನ್ನು ನಮ್ಮ ಹಾಗೂ ಜಾಗತಿಕ ಸುದ್ದಿಮಾಧ್ಯಮಗಳು ಕುತೂಹಲದಿಂದ ಎದುರುನೋಡುತ್ತಿದ್ದವು. ಕಳೆದ ವರ್ಷದ ಆಗಸ್ಟ್‌ನಲ್ಲಿ ನಡೆಯಲಾದ ಅದರ ಮೊದಲ ಉಡಾವಣೆ ಯಶಸ್ಸನ್ನು ಕಾಣದಿರಲಾಗಿ ಮಾಧ್ಯಮಗಳ ಕುತೂಹಲ ಮತ್ತಷ್ಟು ಹೆಚ್ಚಿತ್ತು. ಯಾವ ಕಾರಣದಿಂದಾಗಿ ಆ ಉಡಾವಣೆ ವಿಫಲವಾಯಿತೆಂಬುದನ್ನು ಗುರುತಿಸಿ ಅದನ್ನು ಸರಿಪಡಿಸಿರುವುದನ್ನು ಸಾರಿದ್ದರೂ ಈ ರಾಕೆಟ್‌ನ ಬಗ್ಗೆ ಜಗತ್ತಿನ ಗಮನ ಹೆಚ್ಚಿರುವುದನ್ನು ಗ್ರಹಿಸಿದ್ದ ಇಸ್ರೊ ವಿಜ್ಞಾನಿಗಳ ಚಡಪಡಿಕೆಯೂ ಅಂದು ಹೆಚ್ಚಿತ್ತು.

ಆದರೆ ಅಂದು ಬೆಳಗ್ಗೆ 9:18ಕ್ಕೆ ಆಗಸಕ್ಕೇರಿದ ‘ಎಸ್ ಎಸ್ ಎಲ್ ವಿ’ ನಂತರದ 16 ನಿಮಿಷಗಳಲ್ಲಿ ತನಗೆ ವಹಿಸಿದ್ದ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಸಫಲವಾಯಿತು. ಪರಿಣಾಮವಾಗಿ ಅದರ ಹೆಗಲ ಮೇಲಿದ್ದ ಮೂರು ಪುಟ್ಟ ಉಪಗ್ರಹಗಳು (ಒಟ್ಟು ತೂಕ 334 ಕಿಲೋಗ್ರಾಂ) ಯಶಸ್ವಿಯಾಗಿ 450 ಕಿಲೋಮೀಟರ್ ಎತ್ತರದ ಉದ್ದೇಶಿತ ಕಕ್ಷೆಯನ್ನು ಸೇರಿ ಭೂಮಿಯನ್ನು ಶರವೇಗದಲ್ಲಿ ಸುತ್ತಲಾರಂಭಿಸಿದವು. ಹೀಗೆ ಭಾರತದ ಆರನೇ ಪೀಳಿಗೆಯ ಉಪಗ್ರಹ ಉಡಾವಣಾ ವಾಹನವೂ ವಿಜೃಂಭಿಸಿತು. ಭಾರತದ ತಾಂತ್ರಿಕ ಸಾಮರ್ಥ್ಯದ ಬಗ್ಗೆ ಹೊರಜಗತ್ತಿಗೆ ಮತ್ತಷ್ಟು ಅರಿವು ಮೂಡಿತು.

ಈಗಾಗಲೇ ‘ಪಿ. ಎಸ್. ಎಲ್. ವಿ.’, ‘ಜಿ. ಎಸ್. ಎಲ್. ವಿ.’ ಹಾಗೂ ‘ಜಿ. ಎಸ್. ಎಲ್. ವಿ.-ಮಾರ್ಕ್ 3’ ಎಂಬ ಮೂರು ದೊಡ್ಡ ಹಾಗೂ ಸಮರ್ಥ ರಾಕೆಟ್ ವಾಹನಗಳನ್ನು ಯಶಸ್ವಿಯಾಗಿ ನಿರ್ಮಿಸಿರುವ ಇಸ್ರೊ ಈ ‘ಎಸ್. ಎಸ್. ಎಲ್. ವಿ.’ ಎಂಬ ಪುಟ್ಟ ಉಪಗ್ರಹ ಉಡಾವಣಾ ರಾಕೆಟ್ ಅನ್ನು ನಿರ್ಮಿಸಿರುವುದಕ್ಕೆ ಕಾರಣವಾದರೂ ಏನು?

ಅದಕ್ಕೆ ಬಲವಾದದ್ದೇ ಆದ ಕಾರಣವಿದೆ. ಕಳೆದ ಒಂದೆರಡು ದಶಕಗಳ ಸುಮಾರಿನಲ್ಲಿ ಎಲಕ್ಟ್ರಾನಿಕ್ಸ್ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಅಪಾರವಾಗಿ ಅಭಿವೃದ್ಧಿ ಹೊಂದಿದೆ. ಇದರಿಂದಾಗಿ ಕೃತಕ ಭೂ ಉಪಗ್ರಹಗಳ ತೂಕ, ಗಾತ್ರ ಅವುಗಳ ಕಾರ್ಯನಿರ್ವಹಣೆಗೆ ಬೇಕಾಗುವ ವಿದ್ಯುಚ್ಛಕ್ತಿ ಹಾಗೂ ನಿರ್ಮಾಣಕ್ಕೆ ಅಗತ್ಯವಾದ ಸಮಯ – ಇವು ಅಪಾರವಾದ ಇಳಿತವನ್ನು ಕಂಡಿವೆ. ಹೀಗಾಗಿ ಪರಿಮಿತ ಸಾಮರ್ಥ್ಯವುಳ್ಳ ಪುಟ್ಟ ಉಪಗ್ರಹವೊಂದನ್ನು ನಿರ್ಮಿಸಲು ಇಂದು ನೂರಾರು ಕೋಟಿ ರೂಪಾಯಿಗಳ ವೆಚ್ಚವೇನೂ ಬೇಕಾಗುವುದಿಲ್ಲ. ಇದರೊಂದಿಗೇ ಪುಟ್ಟ ಪ್ರಯೋಗಾತ್ಮಕವಾದ ಉಪಗ್ರಹಗಳನ್ನು ನಿರ್ಮಿಸುವ ಸಾಮರ್ಥ್ಯವನ್ನು ಅನೇಕ ರಾಷ್ಟ್ರಗಳೂ ಇಂದು ಗಳಿಸುತ್ತಿವೆ. ರಾಷ್ಟ್ರಗಳಿರಲಿ, ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಹಾಗೂ ಕೆಲಮಟ್ಟಿಗೆ ಶಾಲಾವಿದ್ಯಾರ್ಥಿಗಳೂ ಪುಟ್ಟ ಉಪಗ್ರಹಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸತಂತ್ರಜ್ಞಾನವನ್ನು ಭೂಕಕ್ಷೆಯಲ್ಲಿನ ಪರಿಸರದಲ್ಲಿ ಪರೀಕ್ಷಿಸುವುದು, ಪ್ರಯೋಗಗಳನ್ನು ನಿರ್ವಹಿಸುವುದು ಇಲ್ಲವೇ ತಿಂಗಳುಗಟ್ಟಲೇ ಇಲ್ಲವೇ ವರ್ಷಗಟ್ಟಲೇ ಕೆಳಗಿನ ಭೂಮಿಯನ್ನು ಕ್ರಮಬದ್ಧವಾಗಿ ವೀಕ್ಷಿಸಿ ಅಲ್ಲಿನ ವಿವಿಧ ವಿದ್ಯಮಾನಗಳ ಬಗ್ಗೆ ವರದಿ ಮಾಡುವ ಪುಟ್ಟ ಉಪಗ್ರಹಗಳ ‘ಗುಚ್ಛ’ಗಳೂ (ಕಾನ್ಸ್ಟಲೇಷನ್) ಇಂದು ಕಾರ್ಯನಿರ್ವಹಿಸುತ್ತಿವೆ. ಅಮೆರಿಕಾದ ‘ಪ್ಲಾನೆಟ್ ಲ್ಯಾಬ್ಸ್’ ಸಂಸ್ಥೆಯ ಸುಮಾರು 135 ಉಪಗ್ರಹಗಳ ‘ಡೋವ್’ ಗುಚ್ಛ ಇದಕ್ಕೊಂದು ಉತ್ತಮ ಉದಾಹರಣೆ. ಆ ಗುಚ್ಛದ ಪ್ರತಿಯೊಂದು ಉಪಗ್ರಹವೂ ಉಡಾವಣೆಯ ವೇಳೆಯಲ್ಲಿ ಕೇವಲ ನಾಲ್ಕೂವರೆ ಕಿಲೋಗ್ರಾಂ ತೂಕವಿದ್ದು ಗಾತ್ರದಲ್ಲಿ ಒಂದು ಬೂಟಿನ ಪೆಟ್ಟಿಗೆಯಷ್ಟಿತ್ತು!

ಇಂದು ಆ ಉಪಗ್ರಹಗಳು ಭೂಮಿಯ ಯಾವುದೇ ಒಂದು ಪ್ರದೇಶದ ಮೇಲಿನ ವಿದ್ಯಮಾನಗಳನ್ನು ದಿನವೂ ವೀಕ್ಷಿಸುವ ಸಾಮರ್ಥ್ಯವನ್ನು ಹೊಂದಿವೆ. ಪ್ರತಿಯೊಂದೂ ಆ ಉಪಗ್ರಹಗಳ ಪೈಕಿ 88ನ್ನು ನಮ್ಮ ‘ಪಿ. ಎಸ್. ಎಲ್. ವಿ.’ ರಾಕೆಟ್ಟು 2017ರ ಫ಼ೆಬ್ರುವರಿಯ ತನ್ನ ಯಾನದ ನಡುವೆ ನಿಖರವಾಗಿ ಕಕ್ಷೆಗೆ ಉಡಾಯಿಸಿದಾಗ ಆ ಕಂಪನಿಯ ಉದ್ಯೋಗಿಗಳು ಕುಣಿದು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದರು.

ಅಂತೂ ಪುಟ್ಟ ಉಪಗ್ರಹಗಳ ಉಡಾವಣೆಗೆ ಇಂದು ಭಾರಿ ಬೇಡಿಕೆಯಿದೆ. ಆದರೆ ಜಾಗತಿಕ ಮಟ್ಟದಲ್ಲಿಂದು ಲಭ್ಯವಿರುವ ಬಹುತೇಕ ಉಡಾವಣಾ ರಾಕೆಟ್‌ಗಳಾದರೋ ದೊಡ್ಡ ಉಪಗ್ರಹಗಳನ್ನು ಉಡಾಯಿಸಬಲ್ಲವಾಗಿವೆ. ಹೀಗಾಗಿ ದೊಡ್ಡ ಉಪಗ್ರಹಗಳನ್ನು ಉಡಾಯಿಸುವ ರಾಕೆಟ್‌ಗಳಲ್ಲಿ ಜಾಗವಿದ್ದಲ್ಲಿ ಆಗ ಈ ಪುಟ್ಟ ಉಪಗ್ರಹಗಳು ‘ಹೆಚ್ಚುವರಿ’ (ಪಿಗ್ಗಿಬ್ಯಾಕ್) ಪ್ರಯಾಣಿಕರಂತೆ ಆ ದೊಡ್ಡ ರಾಕೆಟ್ ಗಳ ಹೆಗಲೇರಿ ಪಯಣಿಸಬೇಕಾಗುತ್ತದೆ. ಒಂದುವೇಳೆ ಜಾಗವಿಲ್ಲದಿದ್ದಲ್ಲಿ ಸಾಕಷ್ಟು ದಿನ ಕಾಯಬೇಕಾಗುತ್ತದೆ.

ದುಬಾರಿಯಾದ ಹಾಗೂ ಸಂಕೀರ್ಣವಾದ ದೊಡ್ಡ ಉಪಗ್ರಹಗಳನ್ನು ಉಡಾಯಿಸುವುದಕ್ಕೆ ಪೂರ್ವಭಾವಿಯಾಗಿ ಸಾಕಷ್ಟು ಕಾಲ ಅಗತ್ಯವಾಗುತ್ತದೆ. ಆ ನಡುವೆ ಉಪಗ್ರಹ, ಇಲ್ಲವೇ ರಾಕೆಟ್‌ನಲ್ಲಿ ಸಮಸ್ಯೆಗಳೇನಾದರೂ ಎದುರಾದರೆ ಆಗ ಆ ಕಾಯುವಿಕೆ ಮತ್ತಷ್ಟು ದೀರ್ಘವಾಗಬಹುದು. ಇದಕ್ಕೆ ಬದಲಾಗಿ ಪುಟ್ಟ ಉಪಗ್ರಹಗಳನ್ನು ಬಹುಮಟ್ಟಿಗೆ ಬೇಕೆಂದಾಗ ಉಡಾಯಿಸಬಲ್ಲದಾದ ಪುಟ್ಟ ರಾಕೆಟ್‌ಗಳು ಸುಲಭವಾಗಿ ಲಭ್ಯವಾದರೆ ಆಗ ಕಾಯುವುದು ತಪ್ಪಿ ಅಂತಹ ಉಪಗ್ರಹಗಳನ್ನು ನಿರ್ಮಿಸುವವರಿಗೂ ಬಳಕೆದಾರರಿಗೂ ಸಾಕಷ್ಟು ಅನುಕೂಲವಾಗುತ್ತದೆ. ಕೆಲವು ಪ್ರಕ್ಷುಬ್ಧ ಪರಿಸ್ಥಿತಿಗಳಲ್ಲಿ, ಪುಟ್ಟದಾದ ಆದರೆ ವಿಶಿಷ್ಟ ಸಾಮರ್ಥ್ಯವುಳ್ಳ ಉಪಗ್ರಹಗಳನ್ನು ಬಹುಮಟ್ಟಿಗೆ ಬೇಕೆಂದಾಗ ಹಾರಿಬಿಡುವುದು ರಾಷ್ಟ್ರೀಯ ಸುರಕ್ಷತೆಯ ಇಲ್ಲವೇ ರಾಷ್ಟ್ರದ ಹಿತದೃಷ್ಟಿಯಿಂದ ಅಗತ್ಯವಾಗಬಹುದು. ಹೀಗೆ ವಾಣಿಜ್ಯಾತ್ಮಕ ಹಾಗೂ ಸುರಕ್ಷತಾ ದೃಷ್ಟಿಕೋನಗಳೆರಡರಿಂದಲೂ ಪುಟ್ಟ ಉಪಗ್ರಹಗಳನ್ನು ಉಡಾಯಿಸಬಲ್ಲ ಕಡಿಮೆ ಸಂಕೀರ್ಣತೆಯ ರಾಕೆಟ್‌ಗಳು ಪ್ರಾಮುಖ್ಯವನ್ನು ಪಡೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT