ಅನುಕೂಲತೆ ಹೆಚ್ಚಿಸುವ ಹೊಸ ಬಗೆಯ ಸಾಧನಗಳು

7

ಅನುಕೂಲತೆ ಹೆಚ್ಚಿಸುವ ಹೊಸ ಬಗೆಯ ಸಾಧನಗಳು

Published:
Updated:

ಹೊ ಸ ಪ್ರಯೋಗಗಳಲ್ಲಿ ಸದಾ ನಿರತರಾಗಿರಬೇಕು, ಹೊಸತನ್ನು ಆವಿಷ್ಕರಿಸಬೇಕು, ಈ ಮೂಲಕ ಜೀವನ ನಿರ್ವಹಣೆ ಮತ್ತಷ್ಟು ಸುಲಭವಾಗಿಸಬೇಕು ಎಂಬ ಬಯಕೆ ಮಾನವನಲ್ಲಿ ತುಡಿಯುತ್ತಲೇ ಇರುತ್ತದೆ. ಈ ಪ್ರಯತ್ನಗಳ ಫಲವಾಗಿಯೇ ಹಲವು ಯಂತ್ರೋಪಕರಣಗಳು ಬಳಕೆಗೆ ಬಂದಿವೆ. ಈ ಯೋಚನೆಯಲ್ಲೇ ರೂಪ ತಳೆದ ಹೊಸ ಉಪಕರಣಗಳು, ಸಾಧನಗಳು ಬಳಕೆಗೆ ಮುಕ್ತವಾಗಲು ತುದಿಗಾಲಲ್ಲಿ ನಿಂತಿವೆ.

ಇಂಡಿಲಿಫ್ಟ್

ಮೆಟ್ಟಿಲು ಹತ್ತುವುದು ಕಷ್ಟ ಎಂದು, ಲಿಫ್ಟ್ ತಯಾರಿಸಿ ಬಳಸುತ್ತಿದ್ದೇವೆ. ಈ ಲಿಫ್ಟ್‌ನಿಂದಲೇ ಪ್ರೇರಣೆ ಪಡೆದಿರುವ ಅಮೆರಿಕದ ಇಂಡಿಲಿಫ್ಟ್ ಸಂಸ್ಥೆಯು ‘ಇಂಡಿಲಿಫ್ಟ್ ಫಾರ್ ಹ್ಯೂಮನ್‌ ಲಿಫ್ಟ್’ ಎಂಬ ಪರಿಕರವನ್ನು ತಯಾರಿಸಿದೆ.

ಸ್ಥೂಲಕಾಯದ ವ್ಯಕ್ತಿಗಳು ಕೆಳಗೆ ಕುಳಿತರೆ ಏಳುವುದು ಕಷ್ಟವಾಗುತ್ತದೆ. ಇನ್ನು ಕಾಲು ಜಾರಿ ಬಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಅಂತಹವರಿಗೆ ಈ ಉಪಕರಣ ಹೆಚ್ಚು ನೆರವಾಗುತ್ತದೆ.

ಕೆಳಗೆ ಕುಳಿತರೆ ಮತ್ತೆ ಎದ್ದು ನಿಲ್ಲುವುದಕ್ಕೆ ಕಷ್ಟಪಡುವವರು, ಈ ಯಂತ್ರದ ಮೇಲೆ ಕುಳಿತುಕೊಂಡು, ಹಿಂಬದಿ ರಾಡ್‌ಗೆ ಅಳವಡಿಸಿರುವ ಗುಂಡಿಯನ್ನು ಒತ್ತಿದರೆ, ನಿಧಾನವಾಗಿ ಯಂತ್ರ ಮೇಲಕ್ಕೆ ಏಳುತ್ತದೆ. ಕುರ್ಚಿಯಷ್ಟು ಎತ್ತರಕ್ಕೆ ಎದ್ದಾಗ, ನಿಲ್ಲುವುದು ಸುಲಭವಾಗುತ್ತದೆ. ಆಸ್ಪತ್ರೆಗಳಲ್ಲಾದರೆ ರೋಗಿಗಳನ್ನು ಸಾಗಿಸಲು ಸುಲಭವಾಗುತ್ತದೆ. ಇದರ ತಳಭಾಗದಲ್ಲಿ ಚಕ್ರಗಳೂ ಇರುವುದರಿಂದ ವ್ಹೀಲ್‌ಚೇರ್‌ನಂತೆ ಬಳಸಿಕೊಳ್ಳಬಹುದು.

ಸೆಲ್ಫ್ ಡ್ರೈವಿಂಗ್ ಸೂಟ್‌ಕೇಸ್

ಪ್ರಯಾಣದ ಸಂದರ್ಭಗಳಲ್ಲಿ ದೂರದ ಊರುಗಳಿಗೆ ಹೋಗುವಾಗ ಲಗೇಜ್ ಹೊತ್ತೊಯ್ಯಲು ಕಷ್ಟವಾಗುತ್ತದೆ. ಈ ಸಮಸ್ಯೆಗೆ ಪರಿಹಾರವೆಂಬಂತೆ, ಗಾಲಿಗಳನ್ನು ಅಳವಡಿಸಿರುವ ಸೂಟ್‌ಕೇಸ್‌ಗಳನ್ನು ತಯಾರಿಸಿ ಬಳಸುತ್ತಿದ್ದೇವೆ. ಆದರೆ ಇವುಗಳನ್ನು ಎಳೆದುಕೊಂಡು ಹೋಗಬೇಕಲ್ಲ ಎಂಬ ಚಿಂತೆಯೂ ಹಲವರನ್ನು ಕಾಡುತ್ತಿದೆ. ಈ ಸಮಸ್ಯೆಗೂ ಪರಿಹಾರ ಕಂಡುಹಿದಿರುವ ಅಮೆರಿಕದ ಫಾರ್ವರ್ಡ್ಎಕ್ಸ್ ಸಂಸ್ಥೆ, ಸ್ವಯಂಚಾಲಿತ ಸೆಲ್ಫ್ ಡ್ರೈವಿಂಗ್ ಸೂಟ್‌ಕೇಸ್ ತಯಾರಿಸಿದೆ.

ಇದನ್ನು ಎಳೆದುಕೊಂಡು ಹೋಗುವ ಅವಶ್ಯಕತೆ ಇಲ್ಲ. ನಾವು ನಡೆಯುತ್ತಿದ್ದರೆ, ನಾಯಿಯಂತೆ ನಮ್ಮನ್ನು ಹಿಂಬಾಲಿಸುತ್ತದೆ. ವಿಮಾನ ನಿಲ್ದಾಣಗಳಲ್ಲಿ ಇದರ ಉಪಯೋಗ ಹೆಚ್ಚು. ಗಂಟೆಗೆ 11 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಇದರ ನಿರ್ವಹಣೆಗಾಗಿಯೇ ಕಿರು ತಂತ್ರಾಂಶವೊಂದನ್ನು ಅಭಿವೃದ್ಧಿಪಡಿಸಲಾಗಿದ್ದು, ಸ್ಮಾರ್ಟ್‌ಫೋನ್‌ನೊಂದಿಗೆ ಜೋಡಿಸಿ ಬಳಸಬಹುದು. ಇದಕ್ಕೆ ಸೆನ್ಸರ್‌ಗಳನ್ನು ಅಳವಡಿಸಿರುವುದರಿಂದ ಏನಾದರೂ ವಸ್ತುಗಳು ಅಡ್ಡ ಬಂದರೆ, ಪಕ್ಕಕ್ಕೆ ಸರಿದು ಚಲಿಸುತ್ತದೆ.

ಈಚೆಗಷ್ಟೇ ಇದು ಅಮೆರಿಕದಲ್ಲಿ ಬಳಕೆಗೆ ಬಂದಿದೆ. ಮುಂದಿನ ದಿನಗಳಲ್ಲಿ ಯುರೋಪ್ ಮತ್ತು ಜಪಾನ್ ದೇಶಗಳ ಮಾರುಕಟ್ಟೆಗೂ ಲಗ್ಗೆ ಇಡಲಿದೆ.

ಸ್ಟೇರ್ ಕ್ಲೈಂಬರ್

ದೇಹದ ತೂಕ ಹೆಚ್ಚಾಗಬಾರದು, ಫಿಟ್ ಆಗಿರಬೇಕು ಎನ್ನುವವರಿಗೆ ನಿತ್ಯ ವ್ಯಾಯಾಮ ಮಾಡುವುದು ಹವ್ಯಾಸವಾಗಿರುತ್ತದೆ. ಹಲವು ವಿಧದಲ್ಲಿ ವ್ಯಾಯಾಮ ಮಾಡಬಹುದು. ಮೆಟ್ಟಿಲು ಹತ್ತಿ ಇಳಿಯುವುದೂ ವ್ಯಾಯಾಮದ ಒಂದು ಭಾಗ. 

ಈ ಯೋಚನೆಯಲ್ಲೇ ರೂಪ ತಳೆದಿದೆ ಸ್ಟೇರ್ ಕ್ಲೈಂಬರ್. ಇದ್ದಲ್ಲಿಯೇ ಇದ್ದರೂ ಓಡುತ್ತಿರುವಂತೆ ನೈಜ ಅನುಭವ ನೀಡುವ  ಟ್ರೆಡ್‌ಮಿಲ್‌ನಂತೆಯೇ ಈ ಉಪಕರಣವನ್ನೂ ತಯಾರಿಸಲಾಗಿದೆ. ವ್ಯತ್ಯಾಸವೇನೆಂದರೆ ಇದಕ್ಕೆ ಮೆಟ್ಟಿಲುಗಳು ಇರುತ್ತವೆ. ಷಾಪಿಂಗ್ ಮಾಲ್ಸ್‌ಗಳಲ್ಲಿ ಅಳವಡಿಸಿರುವ ಎಸ್ಕಲೇಟರ್‌ಗಳಲ್ಲಿ ಇರುವಂತೆ ಇದು ಇದೆ. ಇದರಲ್ಲಿ ಮೂರು ಮೆಟ್ಟಿಲುಗಳು ಇವೆ. 

ಇದರಲ್ಲಿ ಕಂಪ್ಯೂಟರ್ ಪರದೆಯನ್ನೂ ಅಳವಡಿಸಲಾಗಿದ್ದು, ಕೆಲವು ಕಿರು ತಂತ್ರಾಂಶಗಳು ಇವೆ. ಇವುಗಳ ಸಹಾಯದಿಂದ ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಬಹುದು. ಅವರೊಂದಿಗೆ ಮಾತನಾಡಿಸುತ್ತ, ಚರ್ಚಿಸುತ್ತ ವ್ಯಾಯಾಮ ಮಾಡಬಹುದು. ಅಮೆರಿಕದಲ್ಲಿ ತಯಾರಾಗಿರುವ ಈ ಉಪಕರಣ ಇತರ ದೇಶಗಳ ಮಾರುಕಟ್ಟೆಗೂ ಸದ್ಯದಲ್ಲೇ ಲಗ್ಗೆ ಇಡಲಿದೆ. ಇದರ ಬೆಲೆ ₹8 ಲಕ್ಷ.

ಸ್ಮಾರ್ಟ್ ಸಾಕ್ಸ್

ಮಧುಮೇಹಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಧುಮೇಹಿಗಳಿಗೆ ಪಾದಗಳಲ್ಲಿ ಉರಿ, ಪಾದಗಳ ಅಲ್ಸರ್ಸ್‌ನಂತಹ ಸಮಸ್ಯೆಗಳು ಕಾಡುತ್ತಿರುತ್ತಿವೆ.

ಈ ಸಮಸ್ಯೆ ದೇಹವನ್ನು ಪ್ರವೇಶಿಸಿದ ನಂತರ ಗುಣಪಡಿಸುವುದಕ್ಕಿಂತ, ಬರುವುದಕ್ಕೂ ಮೊದಲೇ ಎಚ್ಚರ ವಹಿಸುವುದು ಒಳ್ಳೆಯದು. ಹೀಗಾಗಿಯೇ ಪಾದಗಳ ಅಲ್ಸರ್ಸ್ ಸಮಸ್ಯೆಗಳ ಬಗ್ಗೆ ಮೊದಲೇ ಮುನ್ಸೂಚನೆ ನೀಡುವ ಸಾಕ್ಸ್‌ಗಳು ಬಂದಿವೆ. ನ್ಯೂರೊ ಫ್ಯಾಬ್ರಿಕ್ ವಸ್ತುಗಳನ್ನು ಬಳಸಿ ಅಮೆರಿಕದ ಸಂಸ್ಥೆಯೊಂದು ಇದನ್ನು ತಯಾರಿಸಿದೆ.

ಈ ಸಾಕ್ಸ್‌ಗಳಲ್ಲಿ ಪುಟ್ಟ ಸೆನ್ಸರ್‌ಗಳನ್ನು ಅಳವಡಿಸಲಾಗಿದ್ದು, ಇವು ಆಗಾಗ್ಗೆ ಪಾದಗಳ ಉಷ್ಣಾಂಶವನ್ನು ಪರೀಕ್ಷಿಸುತ್ತಿರುತ್ತವೆ.  ಉಷ್ಣಾಂಶ ಸ್ವಲ್ಪ ಹೆಚ್ಚಾದರೂ, ಅಲ್ಸರ್ಸ್‌ ಬರುವ ಲಕ್ಷಣಗಳು ಕಾಣಿಸಿಕೊಂಡರೂ ಕೂಡಲೇ ಮೊಬೈಲ್‌ಗೆ ಸಂದೇಶ ಬರುತ್ತದೆ. ಆದರೆ ಆರು ತಿಂಗಳಿಗೊಮ್ಮೆ ಈ ಸಾಕ್ಸ್‌ಗಳನ್ನು ಬದಲಾಯಿಸುವುದು ಅನಿವಾರ್ಯ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !