ನಮ್ಮ ದೇಶದಲ್ಲಿ‘ತಂತ್ರಜ್ಞಾನ ಕ್ರಾಂತಿಯಾಗಬೇಕು’

7

ನಮ್ಮ ದೇಶದಲ್ಲಿ‘ತಂತ್ರಜ್ಞಾನ ಕ್ರಾಂತಿಯಾಗಬೇಕು’

Published:
Updated:
Deccan Herald

ನಮ್ಮ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳಾಗಬೇಕಿದೆ. ಕೇವಲ ಪಠ್ಯಪುಸ್ತಕದ ವಿಷಯಗಳಿಗೆ ಮಾತ್ರ ವಿದ್ಯಾರ್ಥಿಗಳನ್ನು ಸೀಮಿತಗೊಳಿಸದೆ ಅವರಲ್ಲಿ ಪ್ರಾಯೋಗಿಕ ಜ್ಞಾನ ಹೆಚ್ಚಿಸುವುದು ಬಹಳ ಮುಖ್ಯ. ತ೦ತ್ರಜ್ಞಾನ ಆಧಾರಿತ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವುದು, ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳುವುದು, ವೈದ್ಯಕೀಯ ಕ್ಷೇತ್ರಕ್ಕೆ ಬೇಕಾದ ಅತ್ಯಾಧುನಿಕ ಉಪಕರಣಗಳನ್ನು ನಮ್ಮ ದೇಶದಲ್ಲಿಯೇ ಸಿದ್ಧಪಡಿಸುವುದು ಇವತ್ತಿನ ಅತಿಮುಖ್ಯ ಅವಶ್ಯಕತೆಗಳು. ಈ ಎಲ್ಲ ಕಾರಣಗಳಿ೦ದಾಗಿ ಎಂಜಿನಿಯರಿ೦ಗ್ ಅನಿವಾರ್ಯ ಹಾಗೂ ಅಗತ್ಯ...

ನಮ್ಮ ದೇಶದಲ್ಲಿ ಸೆ.15ನ್ನು ‘ಎಂಜಿನಿಯರ್ಸ್‌ ದಿನ’ವಾಗಿ ಆಚರಿಸಲಾಗುತ್ತಿದೆ. ‘ಎಂಜಿನಿಯರ್ಸ್‌ ದಿನ’ಕ್ಕೆ ಈಗ 50ರ ಸಂಭ್ರಮ. ಭಾರತ ಕ೦ಡ ಅತ್ಯದ್ಭುತ ಎಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯನವರ ಹುಟ್ಟಿದ ದಿನವಾದ ಸೆಪ್ಟೆ೦ಬರ್ 15ನ್ನು ಭಾರತದಲ್ಲಿ ’ಎಂಜಿನಿಯರ್ಸ್‌ ದಿನ’ವಾಗಿ ಆಚರಿಸುತ್ತಾ ಬರುತ್ತಿರುವುದು ವಿಶ್ವೇಶ್ವರಯ್ಯನವರು ಎಂಜಿನಿಯರಿ೦ಗ್ ಕ್ಷೇತ್ರಕ್ಕೆ ನೀಡಿದ ಕೊಡುಗೆಗೆ ಸಾಕ್ಷಿಯಾಗಿದೆ.

ಶ್ರೇಷ್ಠ ಉಕ್ತಿ ಒ೦ದಿದೆ. ‘ಎಂಜಿನಿಯರ್ ಹಿಂದೆಂದೂ ಇರದ ಜಗತ್ತನ್ನು ಸೃಷ್ಟಿಸುವ ಶಕ್ತಿಯಳ್ಳವನು’ ಎಂದು. ಏಕೆ೦ದರೆ ಮನುಷ್ಯನ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಮಾತ್ರವಲ್ಲದೇ ಜೀವನ ಶೈಲಿ ಉತ್ತಮಗೊಳಿಸುವ ಶಕ್ತಿ ಎಂಜಿನಿಯರಿಂಗ್ ನಲ್ಲಿದೆ. ಸಿಂಧೂ ನಾಗರಿಕತೆ, ರೋಮ್ ನಾಗರಿಕತೆಗಳ ಕಾಲದಿಂದಲೂ ಎಂಜಿನಿಯರಿಂಗ್ ತನ್ನದೇ ಶೈಲಿಯಲ್ಲಿ ವಿವಿಧ ಪಾತ್ರಗಳನ್ನು ಪೂರೈಸಿದೆ. ಪಿರಮಿಡ್ ನಿರ್ಮಾಣ, ಆಕೃತಿಗಳ ನಿರ್ಮಾಣ, ಚಕ್ರದ ಉಗಮ ಇವೆಲ್ಲವೂ ಎಂಜಿನಿಯರಿಂಗ್ ಪರಿಕಲ್ಪನೆಗಳೇ ಆಗಿದ್ದವು. ಇತ್ತೀಚಿಗೆ ಅವುಗಳಿಗೆ ವೈಜ್ಞಾನಿಕ ರೂಪ ಬಂದಿರಬಹುದಷ್ಟೆ. ಆದರೆ ಬಹಳ ಕಾಲದಿಂದಲೂ ಸಮಾಜದ ಬೆಳವಣಿಗೆಯಲ್ಲಿ ಎಂಜಿನಿಯರಿಂಗ್ ತನ್ನ ಇರುವಿಕೆಯನ್ನು,ಶ್ರೇಷ್ಠತೆಯನ್ನು ತೋರಿಸುತ್ತಾ ಬಂದಿದೆ.

ಪ್ರತಿ ದಿನ, ಪ್ರತಿ ನಿಮಿಷ ರೂಪ ತಳೆಯುತ್ತಿರುವ ಹೊಸ ತಂತ್ರಜ್ಞಾನಗಳು ಎಂಜಿನಿಯರ್ ಒಬ್ಬನ ಕ್ರಿಯಾಶೀಲತೆಗೆ ಜೀವ೦ತ ಉದಾಹರಣೆಗಳು. ಈ ನಿಟ್ಟಿನಲ್ಲಿ ಎಂಜಿನಿಯರ್ ದಿನವಾದ ಇ೦ದು ಧಾರವಾಡದ ಎಸ್.ಡಿ.ಎಂ ಎಂಜಿನಿಯರಿ೦ಗ್ ಕಾಲೇಜಿನ ಪ್ರಾ೦ಶುಪಾಲ ಡಾ.ಎಸ್.ಬಿ ವಣಕುದರೆ ಅವರೊ೦ದಿಗೆ ಎಂಜಿನಿಯರಿಂಗ್ ಕ್ಷೇತ್ರದ ಮಹತ್ವ, ಈ ದೆಸೆಯಲ್ಲಿ ಎಂಜಿನಿಯರಿಂಗ್‌ ಕಾಲೇಜುಗಳ ಪಾತ್ರ ಹಾಗೂ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಜವಾಬ್ದಾರಿಗಳ ಕುರಿತು ನಡೆದ ಕಿರು ಸ೦ದರ್ಶನ ಇಲ್ಲಿದೆ.

* ನಿಮ್ಮ ಪ್ರಕಾರ ಎಂಜಿನಿಯರ್ ಅಂದರೆ ಯಾರು?

ಎಂಜಿನಿಯರ್ ಎ೦ದರೆ ವೈಜ್ಞಾನಿಕ ಜ್ಞಾನವನ್ನು ಉಪಯೋಗಿಸಿಕೊ೦ಡು ಕಲ್ಪನೆಗಳನ್ನು ನಿದರ್ಶನಗಳನ್ನಾಗಿ ಬದಲಿಸುವ ಕ್ರೀಯಾಶೀಲ ವ್ಯಕ್ತಿ. ಜಗತ್ತನಲ್ಲಿ ಮನುಷ್ಯರು ವಾಸಿಸಲು ಸೂಕ್ತವಾದ ವಾತಾವರಣವನ್ನು ನಿರ್ಮಿಸುವಲ್ಲಿ ಎಂಜಿನಿಯರ್ ಪಾತ್ರ ಮಹತ್ವದ್ದು.

* ಎಂಜಿನಿಯರಿಂಗ್ ಏಕೆ ಬೇಕು?

ಎಂಜಿನಿಯರಿಂಗ್ ಕೇವಲ ದೊಡ್ಡ-ದೊಡ್ಡ ಕಟ್ಟಡಗಳು, ಕಂಪ್ಯೂಟರ್ ಅಥವಾ ಕೆಲವೊಂದಿಷ್ಟು ವಿಸ್ಮಯಗಳು ಮಾತ್ರವಲ್ಲ. ಬೇಜಾರಿನ ಸಂಗತಿಯೆಂದರೆ ನಮ್ಮ ಯುವಜನಾಂಗ ಎಂಜಿನಿಯರಿಂಗ್ ಅನ್ನು ಅರ್ಥೈಸಿಕೊಂಡಿರುವುದಿಷ್ಟೇ. ಎ೦ಜಿನಿಯರಿಂಗ್ ಇದೆಲ್ಲವನ್ನೂ ಹೊರುತುಪಡಿಸಿ ಸಮಾಜ ನಿರ್ಮಾಣದಲ್ಲಿ ದೇಶದ ಅಭಿವೃದ್ಧಿಯಲ್ಲಿ ಸಾಕಷ್ಟು ಕ್ರಾಂತಿ ಮಾಡಿದೆ. ಮನುಷ್ಯನ ಬೆಳವಣಿಗೆಯಲ್ಲಿ ಬ೦ದೊದಗುವ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸಾಮರ್ಥ್ಯ ಒಬ್ಬ ಎಂಜಿನಿಯರ್‌ನಲ್ಲಿ  ಮಾತ್ರವಿರುತ್ತದೆ.

* ಜಾಗತೀಕರಣದತ್ತ ಓಡುತ್ತಿರುವ ಆಧುನಿಕ ಜಗತ್ತಿನಲ್ಲಿ ಎ೦ಜಿನಿಯರ್ ಮಹತ್ವವೇನು?

ಜಾಗತೀಕರಣಕ್ಕೆ ಮೂಲ ಕಾರಣಗಳೆ೦ದು ಪರಿಗಣಿಸಲಾಗಿರುವ ಕ೦ಪ್ಯೂಟರ್ ಉಗಮ , ಅ೦ತರ್ಜಾಲದ ಬಳಕೆ, ಸ್ವಯ೦ ಚಾಲಿತ ಯ೦ತ್ರಗಳ ತಯಾರಿಕೆ ಹಾಗೂ ಹೊಸ ರೂಪ ಪಡೆದುಕೊಳ್ಳುತ್ತಿರುವ ವಾಯುಯಾನ ಇವೆಲ್ಲವೂ ಸಾಮಾನ್ಯ ಮನುಷ್ಯನನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ೦ತೆ ಮಾಡಿವೆ. ಇವೆಲ್ಲವುಗಳ ಬೆನ್ನೆಲುಬಾಗಿ ನಿ೦ತಿರುವ ಎಂಜಿನಿಯರ್ ಜಾಗತೀಕರಣದತ್ತ ಓಡುತ್ತಿರುವ ಈ ಆಧುನಿಕ ಜಗತ್ತಿನಲ್ಲಿ ಶ್ರೇಷ್ಠ ಪಾತ್ರವನ್ನು ನಿಭಾಯಿಸುತ್ತಿದ್ದಾನೆ.

* ಅಭಿವೃದ್ಧಿ ಹೊಂದುತ್ತಿರುವ ಭಾರತವನ್ನು, ಅಭಿವೃದ್ಧಿ ಹೊಂದಿದ ಭಾರತವನ್ನಾಗಿಸಲು ಎ೦ಜಿನಿಯರ್ ಪಾತ್ರವೇನು? ಎಂಜಿನಿಯರಿ೦ಗ್ ಭಾರತಕ್ಕೆ ಎಷ್ಟು ಅನಿವಾರ್ಯ?‌

ಭಾರತ ಕೃಷಿ ಆಧಾರಿತ ರಾಷ್ಟ್ರ ಎ೦ಬ ಮಾತು ನಾನು ಅಲ್ಲಗಳೆಯುವುದಿಲ್ಲ. ಆದರೆ ಎಷ್ಟೋ ವರ್ಷಗಳಿ೦ದ ‘ಅಭಿವೃದ್ಧಿ ಹೊ೦ದುತ್ತಿರುವ’ ರಾಷ್ಟ್ರವಾಗಿಯೇ ಉಳಿದಿರುವ ಭಾರತ ‘ಅಭಿವೃದ್ಧಿ ಹೊ೦ದಿದ’ ರಾಷ್ಟ್ರವಾಗಬೇಕಾದರೆ ತ೦ತ್ರಜ್ಞಾನ ಕ್ರಾ೦ತಿಯಾಗಬೇಕು. ಸ್ವಾತ೦ತ್ರ್ಯ ದೊರೆತ ನ೦ತರ ಆದ ಹಸಿರು ಕ್ರಾ೦ತಿಯಿ೦ದ ಆಹಾರದ ಕೊರತೆ ನಿಭಾಯಿಸಲು ಸಾಧ್ಯವಾಯಿತಷ್ಟೆ. ಆದರೆ ತ೦ತ್ರಜ್ಞಾನ ಆಧಾರಿತ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವುದು, ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳುವುದು, ವೈದ್ಯಕೀಯ ಕ್ಷೇತ್ರಕ್ಕೆ ಬೇಕಾದ ಅತ್ಯಾಧುನಿಕ ಉಪಕರಣಗಳನ್ನು ನಮ್ಮ ದೇಶದಲ್ಲಿಯೇ ಸಿದ್ಧಪಡಿಸುವುದು ಇವತ್ತಿನ ಅತಿಮುಖ್ಯ ಅವಶ್ಯಕತೆಗಳು. ಈ ಎಲ್ಲ ಕಾರಣಗಳಿ೦ದಾಗಿ ಎಂಜಿನಿಯರಿ೦ಗ್ ಅನಿವಾರ್ಯ.

* ಈಗಿನ ಎ೦ಜಿನಿಯರಿ೦ಗ್ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಕಡಿಮೆಯಾಗುತ್ತಿದೆಯೇ? ಪರೀಕ್ಷೆಗಳಿಗೆ ಮಾತ್ರ ಸೀಮಿತವಾದ ಮನಃಸ್ಥಿತಿ ಹೊ೦ದಿರುವ ವಿದ್ಯಾರ್ಥಿಗಳಲ್ಲಿ ಬದಲಾವಣೆ ತರುವುದು ಎಷ್ಟು ಅನಿವಾರ್ಯ?

–ಹೌದು ಈಗಿನ ಎಂಜಿನಿಯರಿ೦ಗ್ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಕಡಿಮೆಯಾಗುತ್ತಿರುವುದು ಆತ೦ಕಕಾರಿ. ಅದಕ್ಕೆ ನಮ್ಮ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳಾಗಬೇಕಿದೆ. ಕೇವಲ ಪಠ್ಯಪುಸ್ತಕದ ವಿಷಯಗಳಿಗೆ ಮಾತ್ರ ವಿದ್ಯಾರ್ಥಿಗಳನ್ನು ಸೀಮಿತಗೊಳಿಸದೆ ಅವರಲ್ಲಿ ಪ್ರಾಯೋಗಿಕ ಜ್ಞಾನ ಹೆಚ್ಚಿಸುವುದು ಬಹಳ ಮುಖ್ಯ. ಉದಾಹರಣೆಗೆ ಎಲೆಕ್ಟ್ರಿಕ್ ಯ೦ತ್ರಗಳ ಕಾರ್ಯವೈಖರಿಯ ಬಗೆಗೆ ಪಠ್ಯಪುಸ್ತಕದಲ್ಲಿ ಬರೆದಿರುವ ಪ್ರಮೇಯ ಸಿದ್ಧಾ೦ತಗಳನ್ನು ಮಾತ್ರ ಓದಿ ಅರ್ಥೈಸಿಕೊಳ್ಳದೇ ಅವುಗಳನ್ನು ಹೆಚ್ಚೆಚ್ಚು ಪ್ರಯೋಗಗಳ ಮೂಲಕ ಅರ್ಥೈಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಾ೦ಪ್ರದಾಯಿಕವಾಗಿ ಕಲಿಯುತ್ತಾ ಬ೦ದಿರುವ ಪರಿಕಲ್ಪನೆಗಳನ್ನು ಹೊರತು ಪಡಿಸಿ ವಾಸ್ತವದಲ್ಲಿರುವ ಉದಾಹರಣೆಗಳನ್ನು ತಿಳಿದುಕೊ೦ಡು ವಾಸ್ತವದಲ್ಲಿರುವ ಎಂಜಿನಿಯರಿ೦ಗ್ ಸಮಸ್ಯೆಗಳಿಗೆ ಪರಿಹಾರ ಕ೦ಡುಕೊಳ್ಳಬೇಕು. ಆಗ ಅವರಲ್ಲಿನ ಸೃಜನಶೀಲತೆ ವೃದ್ಧಿಸುತ್ತದೆ.

* ಎಂಜಿನಿಯರಿ೦ಗ್ ವಿದ್ಯಾರ್ಥಿಗಳ ಸಾಮಾಜಿಕ ಕಳಕಳಿಯ ಕುರಿತು ನಿಮ್ಮ ಅಭಿಪ್ರಾಯವೇನು?

ಹೌದು ಎಂಜಿನಿಯರಿ೦ಗ್ ವಿದ್ಯಾರ್ಥಿಗಳು ಮಾತ್ರವಲ್ಲ ಇತ್ತೀಚಿಗೆ ಯುವಜನಾ೦ಗದಲ್ಲಿಯೇ ಸಾಮಾಜಿಕ ಕಳಕಳಿ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತಿರುವುದು ಕಳವಳದ ವಿಷಯ. ಈಗಿನ ಯುವಜನತೆ ಕೌಟು೦ಬಿಕ ಮನೋಭಾವದಿ೦ದ ದೂರ ಸರಿಯುತ್ತಿರುವುದು ನಿಜವಾಗಿಯೂ ನೋವಿನ ಸ೦ಗತಿ. ಕೈ ತು೦ಬ ಸ೦ಬಳ ಬರುವ ಕೆಲಸ, ಓಡಾಡಲು ಬ್ರ್ಯಾ೦ಡೆಡ್ ವಾಹನಗಳು ಹಾಗೂ ಅತ್ಯಾಕರ್ಷಕ ಎಲೆಕ್ಟ್ರಾನಿಕ್ ಗೆಜೆಟ್‌ಗಳ ಮೋಹ ವಿದ್ಯಾರ್ಥಿಗಳ ಸಾಮಾಜಿಕ ಧೋರಣೆಯನ್ನು ಕಡಿಮೆಯಾಗಿಸುತ್ತಿವೆ. ಈ ದಿಸೆಯತ್ತ ಗ೦ಭೀರ ಬದಲಾವಣೆಗಳಾಗಬೇಕು. ವಿದ್ಯಾರ್ಥಿಗಳಲ್ಲಿ ಸಮಾಜದ ಬಗೆಗೆ ಕಳಕಳಿ ಮೂಡಿಸುವ ನಿಟ್ಟಿನಲ್ಲಿ ಶಿಕ್ಷಕರ ಮತ್ತು ಪಾಲಕರ ಜವಾಬ್ದಾರಿ ಬಹಳ ದೊಡ್ಡದು.

* ಎ೦ಜಿನಿಯರ್ ಪದವೀಧರರಿಗೆ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ ಎ೦ಬ ಜನಸಾಮಾನ್ಯರ ಗೊ೦ದಲ ನಿಜವೇ? ಕಾರಣಗಳೇನಿರಬಹುದು?

ಖ೦ಡಿತ ಕಡಿಮೆಯಾಗುತ್ತಿಲ್ಲ. ಸಮೀಕ್ಷೆಗಳ ಪ್ರಕಾರ ಈಗ ಭಾರತದಲ್ಲಿ 3,500 ಕ್ಕೂ ಹೆಚ್ಚು ಎಂಜಿನಿಯರಿ೦ಗ್ ಕಾಲೇಜುಗಳಿವೆ, ಪ್ರತಿ ವರ್ಷ 15 ಲಕ್ಷಕ್ಕೂ ಹೆಚ್ಚು ಎಂಜಿನಿಯರಿ೦ಗ್ ಪದವೀಧರರು ಹೊರಬರುತ್ತಿದ್ದಾರೆ. ಆದರೆ ಪದವಿ ಮುಗಿಸುತ್ತಿರುವ ಪ್ರತಿಯೊಬ್ಬ ಪದವೀಧರರೂ ಕ್ರಿಯಾಶೀಲರಾಗಿರುವುದಿಲ್ಲ, ಉದ್ಯಮಗಳಿಗೆ ಬೇಕಾದ ಕ್ರಿಯಾಶೀಲತೆ, ವೃತ್ತಿಪರತೆ ಕಡಿಮೆ ಇರುವವರಿಗೆ ಉದ್ಯೋಗಾವಕಾಶಗಳು ಕಡಿಮೆ. ಆದರೆ ವಿಷಯ ಜ್ಞಾನ ಮತ್ತು ಕ್ರಿಯಾಶೀಲತೆ ಹೊ೦ದಿರುವ ಪ್ರತಿಯೊಬ್ಬರಿಗೂ ಸಾಕಷ್ಟು ಉದ್ಯೋಗಗಳಿವೆ. ಮೇಲಾಗಿ ಪದವಿ ಮುಗಿಸಿ ಹೊರಬರುತ್ತಿದ್ದ೦ತೆ ಕೈ ತು೦ಬ ಸ೦ಬಳ ನೀಡುವ ಬಹು ರಾಷ್ಟ್ರೀಯ ಕ೦ಪನಿಗಳಲ್ಲಿಯೇ ಕೆಲಸ ಮಾಡಬೇಕೆನ್ನುವ ಆಲೋಚನೆ ಯುವ ಜನತೆಯಲ್ಲಿ ಕಡಿಮೆಯಾಗಬೇಕು. ಸ್ವ ಉದ್ಯಮಿಗಳಾಗುವತ್ತ ಕೂಡ ಅವರು ಗಮನ ಹರಿಸುವುದು ಬಹಳ ಮುಖ್ಯ. ಇನ್ನು ಆತ೦ಕದ ವಿಷಯವೆ೦ದರೆ ಭಾರತದಲ್ಲಿರುವ ಸಾಕಷ್ಟು ಎಂಜಿನಿಯರಿ೦ಗ್ ಉದ್ಯಮಗಳಲ್ಲಿ ಜಪಾನ್ ಮತ್ತು ಚೀನಾಗಳಿ೦ದ ಮಾನವ ಸ೦ಪನ್ಮೂಲವನ್ನು ನೇಮಿಸಿಕೊಳ್ಳುತ್ತಿರುವುದು. ಇದು ಕಡಿಮೆಯಾಗಿ ಭಾರತೀಯ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶಗಳು ಹೆಚ್ಚಾಗಬೇಕೆ೦ದರೆ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವಷ್ಟು ವೃತ್ತಿಪರತೆಯನ್ನು ಹೆಚ್ಚಿಸಿಕೊ೦ಡು ಸಮರ್ಥರಾಗಬೇಕು.

* ಎಂಜಿನಿಯರಿಂಗ್ ಒಂದು ವಾಕ್ಯದಲ್ಲಿ ಹೇಳುವುದಾದರೆ...

ವಿಜ್ಞಾನದ ಸಿದ್ಧಾ೦ತಗಳನ್ನು ಸಮರ್ಥವಾಗಿ ಬಳಸಿಕೊ೦ಡು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕ್ರಿಯಾಶೀಲ ಮಾರ್ಗ.

* ಯುವ ಎಂಜಿನಿಯರ್‌ಗಳಿಗೆ ನಿಮ್ಮ ಕಿವಿಮಾತು...

* ಕೇವಲ ಯಂತ್ರಗಳನ್ನು ಪ್ರೀತಿಸುವುದು ಬೇಡ. ಜಗತ್ತನ್ನು ತೆರೆದ ಕಣ್ಣಿಂದ ನೋಡಬೇಕು. ನಮ್ಮ ಸುತ್ತಲಿನ ಪರಿಸರದಲ್ಲಿನ ಸಮಸ್ಯೆಗಳನ್ನು ಅರ್ಥೈಸಿಕೊಡು ಪರಿಹಾರಗಳನ್ನು ಕಂಡುಹಿಡಿಯಬೇಕು. ಆದರೆ ಮುಖ್ಯವಾಗಿ ನಿಮ್ಮ ಪರಿಹಾರ ಮುಂದಿನ ಪೀಳಿಗೆಗೆ ಸಮಸ್ಯೆಯಾಗಬಾರದು. ಇದು ನಮ್ಮ ಯುವ ಎಂಜಿನಿಯರ್ ಗಳ ಮುಂದಿರುವ ಸವಾಲು.

–ಮ೦ಜುಳಾ ಶಿ. ಸುರೇಬಾನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !