ಗುರುವಾರ , ನವೆಂಬರ್ 14, 2019
19 °C

#EduTok ಮೂಲಕ ಶೈಕ್ಷಣಿಕ ಅಭಿಯಾನ ಆರಂಭಿಸಿದ ಟಿಕ್‌ಟಾಕ್

Published:
Updated:
Prajavani

ನವದೆಹಲಿ: ಭಾರತದ ಯುವಕ ಯುವತಿಯರನ್ನು ಬಹುಬೇಗ ತನ್ನತ್ತ ಸೆಳೆದುಕೊಂಡ ಟಿಕ್ ಟಾಕ್ ಮೊಬೈಲ್ ಅಪ್ಲಿಕೇಷನ್ ಈಗ 'ಎಜುಟಾಕ್' ಅಭಿಯಾನದ ಮೂಲಕ ಅಧಿಕೃತವಾಗಿ ಕಲಿಕಾ ರಂಗಕ್ಕೂ ವೇದಿಕೆಯಾಗಿದೆ.

ಸಂಭಾಷಣೆ ಅಥವಾ ಹಾಡಿಗೆ ತಕ್ಕಂತೆ ಭಾವಾಭಿನಯ ಮಾಡಿ, ತನ್ನಲ್ಲಿರುವ ಕಲೆಯನ್ನು ರೆಕಾರ್ಡ್ ಮಾಡಿ ಕಿರು ವಿಡಿಯೊ ಮೂಲಕ ಹಂಚಿಕೊಳ್ಳಬಹುದಾದ ಸಾಮಾಜಿಕ ಮಾಧ್ಯಮ ವಿಡಿಯೊ ಆ್ಯಪ್ 'ಟಿಕ್ ಟಾಕ್'. ಇದೇ ಆ್ಯಪ್‌ನಲ್ಲಿ ಕಳೆದು ಆರು ತಿಂಗಳಿಂದ ನಡೆಯುತ್ತಿರುವ ಎಜುಟಾಕ್(#EduTok) ಅಭಿಯಾನವನ್ನು ಅಧಿಕೃತ ಕಾರ್ಯಕ್ರಮವಾಗಿ ಘೋಷಿಸಲಾಯಿತು.

ಸ್ಮಾರ್ಟ್ ಫೋನ್ ಮೂಲಕ ಆನ್‌ಲೈನ್ ಕಲಿಕಾ ಜಗತ್ತಿಗೆ ತೆರೆದುಕೊಂಡಿರುವ ಭಾರತೀಯರನ್ನು 20-30 ಸೆಕೆಂಡ್ ಕಿರು ವಿಡಿಯೊಗಳಲ್ಲಿ ಉತ್ತಮ ಮಾಹಿತಿ ಹಂಚಿಕೊಳ್ಳುವಂತೆ ಈ ಅಭಿಯಾನ ಪ್ರೇರೇಪಿಸಿದೆ. ಆರು ತಿಂಗಳಿಂದ ಕನ್ನಡ ಸೇರಿದಂತೆ ಆರಕ್ಕೂ ಹೆಚ್ಚು ಪ್ರಾದೇಶಿಕ ಭಾಷೆಗಳಲ್ಲಿ ಸುಮಾರು 1 ಕೋಟಿ ವಿಡಿಯೊ ತುಣುಕುಗಳು ಎಜುಟಾಕ್ ಹ್ಯಾಷ್ ಟ್ಯಾಗ್ ನೊಂದಿಗೆ ಪ್ರಕಟಗೊಂಡು ಹಂಚಿಕೆಯಾಗಿವೆ. ಆ ವಿಡಿಯೊಗಳು 48 ಶತಕೋಟಿ ವೀಕ್ಷಣೆ ಕಂಡಿದ್ದು, 108 ಕೋಟಿ ಬಾರಿ ಹಂಚಿಕೆಯಾಗಿವೆ.

5000 ಜನರಿಗೆ ಟಿಕ್ ಟಾಕ್ ತರಬೇತಿ: ಹೊಸದಾಗಿ ಅಂತರ್ಜಾಲ ಬಳಕೆಗೆ ಒಡ್ಡಿಕೊಳ್ಳುತ್ತಿರುವವರ ಪೈಕಿ ಆಯ್ದ ಐದು ಸಾವಿರ ಜನರಿಗೆ ಟಿಕ್ ಟಾಕ್ ಆ್ಯಪ್‌ನಲ್ಲಿ ಪ್ರಕಟಗೊಂಡಿರುವ ಉತ್ತಮ ಮಾಹಿತಿ ಆಧಾರಿತ ವಿಡಿಯೊಗಳ ವೀಕ್ಷಣೆಗೆ ಅವಕಾಶ ಕಲ್ಪಿಸುವುದು ಹಾಗೂ ಶಿಕ್ಷಣ ಸಂಸ್ಥೆಗಳ ಮೂಲಕ ಟಿಕ್ ಟಾಕ್ ಬಳಕೆದಾರರಿಗೆ ಸಿದ್ಧಪಡಿಸಲಾದ ವಿಡಿಯೊಗಳ ಮೂಲಕ ತಿಳಿವಳಿಕೆ ಮೂಡಿಸುವ ಪ್ರಯತ್ನ‌ ಕೈಗೊಳ್ಳಲಾಗುತ್ತಿದೆ.

ಡಿಜಿಟಲ್ ವೇದಿಕೆಯಡಿ ಮಾರ್ಗದರ್ಶನ ನೀಡುವ ಈ ಕಾರ್ಯಕ್ರಮಕ್ಕೆ 'ಜೋಷ್ ಟಾಕ್ಸ್' ಮತ್ತು ದಿ/ನಡ್ಜ್ ಫೌಂಡೇಶನ್ ಸಹಭಾಗಿತ್ವವನ್ನು ಟಿಕ್ ಟಾಕ್ ಮಾಡಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರ (ಕೇಂದ್ರಾಡಳಿತ ಪ್ರದೇಶ), ಆಂಧ್ರಪ್ರದೇಶ ಸೇರಿದಂತೆ ಆರು ರಾಜ್ಯಗಳಲ್ಲಿ ಒಟ್ಟು 5 ಸಾವಿರ ಜನರಿಗೆ 25 ಕಾರ್ಯಾಗಾರಗಳಲ್ಲಿ ತರಬೇತಿ ನೀಡಲಾಗುತ್ತದೆ.

ಕೌಶಲಾಭಿವೃದ್ಧಿ, ವ್ಯಕ್ತಿತ್ವ ಬೆಳವಣಿಗೆ, ವೃತ್ತಿಗಾಗಿ ಅಗತ್ಯ‌ ಸಿದ್ಧತೆ, ಸಾಫ್ಟ್ ಸ್ಕಿಲ್ ಸೇರಿದಂತೆ ಹಲವು ವಿಷಯಗಳ ಕುರಿತು ಅಕ್ಟೋಬರ್ 2019 ರಿಂದ ಮಾರ್ಚ್ 2020ರ ವರೆಗೂ ಪ್ರಾದೇಶಿಕ ಭಾಷೆಗಳಲ್ಲೇ ಕಾರ್ಯಾಗಾರಗಳು ನಡೆಯಲಿವೆ. ಈಗಾಗಲೇ ಎಜುಟಾಕ್ ವಿಡಿಯೊಗಳಲ್ಲಿ ಗುರುತಿಸಿಕೊಂಡಿರುವವರ ಮೂಲಕವೇ ತರಬೇತಿ ನಡೆಸುವ ಯೋಜನೆ ರೂಪಿಸಲಾಗಿದೆ. ಇದರಿಂದ ಸುಮಾರು 20 ಕೋಟಿ ಟಿಕ್‌ಟಾಕ್ ಬಳಕೆದಾರರಿಗೆ ಉತ್ತಮ ಮಾಹಿತಿ ಒಳಗೊಂಡ ವಿಡಿಯೊಗಳು ದೊರೆಯಲಿವೆ ಎಂಬುದು ಟಿಕ್‌ಟಾಕ್ ಭರವಸೆ.

ಕಾರ್ಯಕ್ರಮದಲ್ಲಿ 'ಎಜುಟಾಕ್' ವಿಡಿಯೊಗಳಲ್ಲಿ ಗುರುತಿಸಿಕೊಂಡಿರುವ ಗೀತ್, ನಟಿ ಸೋಫಿಯಾ ಚೌಧರಿ,‌ ಡಾ.ಅನಿಮೇಶ್ , ಟಿಕ್‌ಟಾಕ್ ಇಂಡಿಯಾದ ನಿತಿನ್, ಜೋಷ್ ಟಾಕ್ಸ್‌ನ ಸುಪ್ರಿಯಾ ಪೌಲ್, ದಿ/ನಡ್ಜ್ ಫೌಂಡೇಶನ್‌ನ ಅತುಲ್ ಸೇರಿ ಹಲವರು ಭಾಗಿಯಾದರು.

ಚೀನಾ ಮೂಲದ ಈ ಆ್ಯಪ್ ಐಒಎಸ್ ಮತ್ತು ಆಂಡ್ರಾಯ್ಡ್ ಎರಡೂ ವೇದಿಕೆಗಳಿಂದ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಿದೆ.

ಖಾಸಗಿತನಕ್ಕೆ ಧಕ್ಕೆಯಾಗುವಂತಹ, ಅಶ್ಲೀಲ, ಮಕ್ಕಳ ಮೇಲಿನ ದೌರ್ಜನ್ಯದಂತಹ ಸಂಗತಿಗಳು ಟಿಕ್‌ಟಾಕ್ ವಿಡಿಯೊಗಳು ಒಳಗೊಂಡಿರುವುದಾಗಿ ದಾಖಲಾಗಿದ್ದ ಮೊಕದ್ದಮೆ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್, ಏಪ್ರಿಲ್‌ನಲ್ಲಿ ಆ್ಯಪ್ ನಿಷೇಧಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಿತ್ತು. ಮತ್ತೆ ಕೋರ್ಟ್ ನಿಷೇಧ ತೆರವುಗೊಳಿಸಿತ್ತು. ರಾಜ್ಯದಲ್ಲಿ ಟಿಕ್‌ಟಾಕ್ ವಿಡಿಯೊ ರೆಕಾರ್ಡ್ ಮಾಡುವ ಸಂದರ್ಭಗಳಲ್ಲಿ ಇಬ್ಬರು ಸಾವಿಗೀಡಾಗಿರುವ ಘಟನೆಗಳೂ ವರದಿಯಾಗಿರುವುದು ಇಲ್ಲಿ ಉಲ್ಲೇಖನೀಯ. ಈಗ ಇದೇ ಕಂಪನಿಯ ವತಿಯಿಂದ ಜನರಿಗೆ ಉತ್ತಮ ಮಾಹಿತಿ ಒದಗಿಸುವ ಅಭಿಯಾನ ನಡೆಯುತ್ತಿದೆ.

ಪ್ರತಿಕ್ರಿಯಿಸಿ (+)