ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವೂ ಆಗಬಹುದು ಪ್ರಿಂಟರ್‌!

Last Updated 26 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಆಧುನಿಕ ಜೀವನಕ್ಕೆ ಅನಿವಾರ್ಯವಾಗಿರುವ ಕೆಲಸಗಳನ್ನು ಸುಲಭ ಆಗಿಸಲು ತಂತ್ರಜ್ಞಾನ ನೆರವಾಗುತ್ತಿದೆ. ಇಂಥ ಕೆಲವು ಸಾಧನಗಳ ಬಗ್ಗೆ ಪರಿಚಯ ಇಲ್ಲಿದೆ.

ರಾಯ್ಬಿ ರೆಡ್‌ ಕ್ರಾಸ್‌ ಲೈನ್‌ ಲೇಸರ್‌

ಮನೆಯ ಅಂದ ಹೆಚ್ಚಿಸಲು, ಖಾಲಿ ಗೋಡೆಗಳನ್ನು ಆಕರ್ಷಕ ವಸ್ತುಗಳಿಂದ ಅಲಂಕರಿಸಿ, ಮನೆಗೆ ಬರುವವರ ಮನಸ್ಸಿಗೂ ಖುಷಿ ನೀಡಬೇಕು ಎಂಬ ಆಸೆ ಬಹುತೇಕರದ್ದು. ಆದರೆ ಯಾವುದಾರೂ ಫೋಟೊ ಅಥವಾ ವಸ್ತುವನ್ನು ಗೋಡೆಗೆ ಸಿಕ್ಕಿಸಬೇಕು ಎಂದರೆ ಮೊಳೆ ಹೊಡೆಯುವುದಕ್ಕೂ ಪ್ರಯಾಸ ಪಡಬೇಕು. ಸಲೀಸಾಗಿ ರಂಧ್ರ ಕೊರೆಯುವ ಯಂತ್ರಗಳು ಲಭ್ಯವಿದ್ದರೂ ನೇರಕೋನದಲ್ಲಿ ಎರಡೂ ತುದಿಗಳಲ್ಲಿ ಸಮಾನವಾಗಿ ರಂಧ್ರ ಕೊರೆಯಬೇಕೆಂದರೆ ರಾಯ್ಬಿ ರೆಡ್‌ ಕ್ರಾಸ್‌ ಲೈನ್‌ ಲೇಸರ್‌ ಉಪಕರಣ ನೆರವಾಗುತ್ತದೆ. ಅಂಗೈಯಲ್ಲಿ ಹಿಡಿಸುವಷ್ಟು ಗಾತ್ರವಿರುವ ಈ ಉಪಕರಣ ಸಹಾಯದಿಂದ ಗೋಡೆಯ ಮೇಲೆ ನೇರಕೋನದಲ್ಲಿ ಲೇಸರ್‌ ಗೆರೆ ಎಳೆದು ಗುರುತು ಮಾಡಿಕೊಂಡು, ಪಟ, ಹಲಗೆ ಸಿಕ್ಕಿಸಬಹುದು. ಇದನ್ನು ಬಳಸಿ ಸುಮಾರು 10 ಮೀಟರ್‌ ವರೆಗೆ ಬೆಳಕು ಹಾಯಿಸಬಹುದು. ವಿಶೇಷವೆಂದರೆ ಗೋಡೆಯ ಮೇಲೆ ಬೆಳಕು ಹಾಯಿಸಿದರೆ ಸಾಕು ಗೋಡೆಯ ಮಧ್ಯ ಭಾಗವನ್ನು ಸುಲಭವಾಗಿ ಗುರುತಿಸಬಹುದು. ಒಮ್ಮೆಗೆ + ಆಕಾರದಲ್ಲಿ ಎರಡು ಗೆರೆಗಳು ಮೂಡಿ ಗುರುತಿಸಲು ನೆರವಾಗುತ್ತದೆ. ಅಲ್ಲದೆ ಕೋಣೆಯ ಗಾತ್ರಕ್ಕೆ ಅನುಗುಣವಾಗಿ ಗೆರೆ ಎಳೆದು ಸುಲಭವಾಗಿ ಗುರುತು ಮಾಡಬಹುದು.

ಎಚ್‌ಪಿಆರ್‌ಟಿ ವೈರ್‌ಲೆಸ್‌ ಪ್ರಿಂಟರ್‌

ಯಾವುದಾದರೂ ಮಾಹಿತಿಯನ್ನು ಕಾಗದದ ರೂಪದಲ್ಲಿ ಪಡೆಯಬೇಕೆಂದರೆ ಪ್ರಿಂಟರ್‌ಗಳ ಅವಶ್ಯಕತೆ ಬೇಕಾಗುತ್ತದೆ. ಆದರೆ ಎಲ್ಲ ಕಡೆ ಇವು ಸುಲಭವಾಗಿ ಸಿಗುವುದಿಲ್ಲ. ಪ್ರಿಂಟರ್‌ಗಳ ಬೆಲೆ ದುಬಾರಿ. ಹೀಗಾಗಿ ವೃತ್ತಿಪರ ಮುದ್ರಣಕೇಂದ್ರಗಳಲ್ಲಿ ಮಾತ್ರ ಪ್ರಿಂಟ್‌ಔಟ್‌ ಪಡೆಯಬೇಕಾದ ಅನಿವಾರ್ಯತೆ. ಎಚ್‌ಪಿಆರ್‌ಟಿ ವೈರ್‌ಲೆಸ್‌ ಪ್ರಿಂಟರ್‌ ಇದ್ದರೆ ಬೇಕೆಂದ ಕಡೆ, ಅಗತ್ಯ ಸಂದರ್ಭದಲ್ಲಿ ಸುಲಭವಾಗಿ ಪ್ರಿಂಟ್‌ಔಟ್‌ ತೆಗೆದುಕೊಳ್ಳಬಹುದು. ಕಿಸೆಯಲ್ಲಿ ಹಿಡಿಸುವಷ್ಟು ಪುಟ್ಟಗಾತ್ರದಲ್ಲಿ ಇದನ್ನು ತಯಾರಿಸಲಾಗಿದ್ದು, ತುರ್ತು ಸಂದರ್ಭಗಳಲ್ಲಿ ಪ್ರಿಂಟ್ಔಟ್‌ ಪಡೆಯಲು ನೆರವಾಗುತ್ತದೆ. ಈ ವೈರ್‌ಲೆಸ್‌ ಪ್ರಿಂಟರ್‌ ಅನ್ನು ಅಗತ್ಯಬಿದ್ದರೆ ನಮ್ಮ ಸ್ಮಾರ್ಟ್‌ಫೋನ್‌ ಅಥವಾ ಕಂಪ್ಯೂಟರ್‌, ಲ್ಯಾಪ್‌ಟಾಪ್‌ಗಳಿಗೆ ಯುಎಸ್‌ಬಿ ಕೇಬಲ್‌ ಸಹಾಯದಿಂದ ಸುಲಭವಾಗಿ ಜೋಡಿಸಿಕೊಳ್ಳಬಹುದು. ಪ್ರಿಂಟರ್‌ನ ಒಂದು ತುದಿಗೆ ಹಾಳೆ ಇಟ್ಟು ಪ್ರಿಂಟ್‌ ಕೊಟ್ಟರೆ ಸಾಕು, ಮಾಹಿತಿ ಪ್ರಿಂಟ್‌ ಆಗಿ ಮತ್ತೊಂದು ತುದಿಗೆ ಬರುತ್ತದೆ. ಪ್ರಿಂಟಿಂಗ್‌ ಗುಣಮಟ್ಟವೂ ಉತ್ತಮವಾಗಿದ್ದು ಸಾಮಾನ್ಯರು ಸುಲಭವಾಗಿ ಬಳಸಿಕೊಳ್ಳಲು ನೆರವಾಗುವಂತೆ ತಯಾರಿಸಲಾಗಿದೆ.

ಇನ್‌ಸ್ಟಾ ರಿಂಗ್‌ ಫ್ಲ್ಯಾಶ್‌

ಗುಣಮಟ್ಟದ ಹಾಗೂ ಆಕರ್ಷಕ ಫೋಟೊಗಳನ್ನು ಸೆರೆಹಿಡಿಯಲು ಫೋಟೊಗ್ರಾಫರ್‌ಗಳು ಫ್ಲ್ಯಾಶ್‌ಲೈಟ್‌ಗಳನ್ನು ಬಳಸುವುದನ್ನು ನೋಡಿರುತ್ತೀರಿ. ಈ ಫ್ಲ್ಯಾಶ್‌ಲೈಟ್‌ಗಳು ದುಬಾರಿ ಹಾಗೂ ಗಾತ್ರದಲ್ಲಿ ದೊಡ್ಡದೂ ಆಗಿರುವುದರಿಂದ ಸಾಮಾನ್ಯರು ಬಳಸುವುದು ಸುಲಭವಲ್ಲ. ಆದರೆ ಪುಟ್ಟ ಗಾತ್ರದ ಇನ್‌ಸ್ಟಾ ರಿಂಗ್ ಫ್ಲ್ಯಾಶ್‌ ನೆರವಿನಿಂದ ಸಾಮಾನ್ಯರೂ ವೃತ್ತಿಪರರಂತೆ ಗುಣಮಟ್ಟದ ಚಿತ್ರಗಳನ್ನು ಸೆರೆ ಹಿಡಿಯಬಹುದು. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕ್ಯಾಮೆರಾಗಳನ್ನು ಈ ಉಪಕರಣಕ್ಕೆ ಸುಲಭವಾಗಿ ಜೋಡಿಸಿ ಬೆಳಕು ಹಾಯಿಸಿ ಸ್ಪಷ್ಟವಾಗಿ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಬಹುದು. ಹಗುರುವಾದ ಈ ಫ್ಲ್ಯಾಶ್‌ಲೈಟ್‌ ಅನ್ನು ಸುಲಭವಾಗಿ ಮಡಚಿ ಇಡಬಹುದು. ಹೀಗಾಗಿ ಪ್ರವಾಸದ ಸಂದರ್ಭಗಳಲ್ಲೂ ಬಳಸಿಕೊಳ್ಳಬಹುದು.

ನಿಕ್ಸ್‌ ಮಿನಿ ಕಲರ್‌ ಸೆನ್ಸರ್‌

ವೃತ್ತಿಪರರಂತೆ ವಿವಿಧ ರೀತಿಯ ಬಣ್ಣಗಳಲ್ಲಿರುವ ವ್ಯತ್ಯಾಸವನ್ನು ಸಾಮಾನ್ಯರು ಗುರುತಿಸಲು ಆಗದು. ಹಲವರಿಗೆ ಬಣ್ಣಗಳ ಹೆಸರೇ ಗೊತ್ತಿರುವುದಿಲ್ಲ. ಕೆಲವರಿಗಂತೂ ಬಣ್ಣಗಳ ಪರಿಚಯವೇ ಇರುವುದಿಲ್ಲ. ಸುತ್ತಲಿನ ಪರಿಸರದಲ್ಲಿ ಆಕರ್ಷಕ ಬಣ್ಣ ಕಾಣಿಸಿದರೂ ಅದನ್ನು ಗುರುತಿಸಲು ಕಷ್ಟವಾಗುತ್ತದೆ. ಅದೇ ರೀತಿಯ ಬಣ್ಣವನ್ನು ಮನೆಯ ಗೋಡೆಗೊ, ಕಿಟಕಿ, ಬಾಗಿಲಿಗೊ ಬಳಿಯಬೇಕೆಂದರೆ ವೃತ್ತಿಪರರ ನೆರವು ಬೇಡಬೇಕು. ಈ ಸಮಸ್ಯೆಗೆ ಪರಿಹಾರವಾಗಿ ನಿಕ್ಸ್‌ ಮಿನಿ ಕಲರ್‌ ಸೆನ್ಸರ್‌ ತಯಾರಿಸಲಾಗಿದೆ. ಸ್ಮಾರ್ಟ್‌ಫೋನ್‌ನೊಂದಿಗೆ ಜೋಡಿಸಿ ಬಳಸಿಕೊಳ್ಳಬಹುದಾದ, ಸೆನ್ಸರ್‌ಗಳ ನೆರವಿನಿಂದ ಕಾರ್ಯನಿರ್ವಹಿಸುವ ಈ ಉಪಕರಣವನ್ನು ನಿರ್ದಿಷ್ಟ ಬಣ್ಣವಿರುವ ವಸ್ತುವಿನ ಮೇಲೆ ಇಟ್ಟರೆ ಸಾಕು, ಇದಕ್ಕೆಂದೇ ತಯಾರಿಸಲಾಗಿರುವ ಆ್ಯಪ್ ಮೂಲಕ ಸುಲಭವಾಗಿ ಬಣ್ಣ ಪತ್ತೆಮಾಡಬಹುದು. ವಸ್ತುಗಳಷ್ಟೇ ಅಲ್ಲ, ಪತ್ರಿಕೆ, ನಿಯತಕಾಲಿಕೆಗಳಲ್ಲಿ ಪ್ರಕಟವಾದ ಚಿತ್ರಗಳಲ್ಲಿನ ಬಣ್ಣಗಳನ್ನೂ ಸುಲಭವಾಗಿ ತಿಳಿದುಕೊಳ್ಳಬಹುದು. ಈ ಆ್ಯಪ್‌ನಲ್ಲಿ ಹಲವು ಪೈಂಟಿಂಗ್‌ ಬ್ರ್ಯಾಂಡ್‌ಗಳ ನೆರವು ಕೂಡ ಸಿಗುತ್ತದೆ. ಇದರಿಂದ ನಿರ್ದಿಷ್ಟ ಬಣ್ಣ ಮಾರುಕಟ್ಟೆಯಲ್ಲಿ ಲಭ್ಯವಿದೆಯೊ ಇಲ್ಲವೊ ಎಂಬ ಮಾಹಿತಿಯೂ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT