ಸೋಮವಾರ, ಮಾರ್ಚ್ 1, 2021
27 °C

ಚೀನಾದ ಸ್ಮಾರ್ಟ್‌ಫೋನ್‌ ಕಂಪನಿ 'ಶವೊಮಿ' ಕಪ್ಪುಪಟ್ಟಿಗೆ: ಅಮೆರಿಕ ಪ್ರಕಟಣೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಹಾಂಕಾಂಗ್‌: ಚೀನಾದ ವಿರುದ್ಧ ವಾಣಿಜ್ಯ ಸಮರ ಮುಂದುವರಿಸಿರುವ ಅಮೆರಿಕದ ಡೊನಾಲ್ಡ್‌ ಟ್ರಂಪ್‌ ಆಡಳಿತ, ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ಶವೊಮಿ ಸೇರಿದಂತೆ ಚೀನಾದ ಕೆಲವು ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಿದೆ.

ಈ ಪ್ರಕಟಣೆ ಹೊರ ಬೀಳುತ್ತಿದ್ದಂತೆ ಶವೊಮಿ ಕಂಪನಿ ಷೇರು ಬೆಲೆ ದಿಢೀರ್‌ ಕುಸಿದಿದೆ.

ಟ್ರಂಪ್‌ ಅಧಿಕಾರ ಅವಧಿ ಮುಗಿಯಲು ಆರು ದಿನಗಳು ಇರುವಂತೆ ಅಮೆರಿಕದ ಅಧಿಕಾರಿಗಳು ಸರಣಿ ಪ್ರಕಟಣೆಗಳನ್ನು ಹೊರಡಿಸುತ್ತಿದ್ದು, ಮುಖ್ಯವಾಗಿ ಚೀನಾದ ಕಂಪನಿಗಳನ್ನು ಗುರಿಯಾಗಿಸಲಾಗಿದೆ. ಚೀನಾದ ಸರ್ಕಾರಿ ಸ್ವಾಮ್ಯದ ತೈಲ ಉತ್ಪಾದನಾ ಸಂಸ್ಥೆ 'ಸಿಎನ್‌ಒಒಸಿ', ವಿಮಾನಯಾನ ಸಂಸ್ಥೆ ಸ್ಕೈರಿಜೋನ್‌ (Skyrizon) ಹಾಗೂ ಟೆಕ್‌ ಕಂಪನಿ ಶವೊಮಿಯನ್ನು ಅಮೆರಿಕ ಕಪ್ಪುಪಟ್ಟಿಗೆ ಸೇರಿಸಿದೆ.

ಕಳೆದ ವರ್ಷ ಶವೊಮಿ, ಆ್ಯಪಲ್‌ ಕಂಪನಿಯನ್ನು ಹಿಂದಿಟ್ಟು ಜಗತ್ತಿನ 3ನೇ ಅತಿ ದೊಡ್ಡ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿಯಾಗಿ ಹೊರಹೊಮ್ಮಿತ್ತು. ಇದೀಗ ಅಮೆರಿಕದ ರಾಷ್ಟ್ರೀಯ ಭದ್ರತೆಯ ವಿಚಾರವಾಗಿ ಒಂಬತ್ತು 'ಕಮ್ಯುನಿಸ್ಟ್‌ ಚೀನಾದ ಮಿಲಿಟರಿ ಕಂಪನಿಗಳ' ಪಟ್ಟಿಗೆ ಶವೊಮಿಯನ್ನು ಸೇರಿಸಲಾಗಿದೆ. ಅಮೆರಿಕ ಸರ್ಕಾರದ ಸದ್ಯದ ನಿರ್ಧಾರದಿಂದಾಗಿ ಅಲ್ಲಿನ ಹೂಡಿಕೆದಾರರು ಕಪ್ಪುಪಟ್ಟಿಗೆ ಸೇರಿಸಿರುವ ಕಂಪನಿಗಳಲ್ಲಿ ಹೂಡಿಕೆ ಮಾಡಲಾಗುವುದಿಲ್ಲ. ಮುಂಬರುವ ಜೋ ಬೈಡನ್‌ ಆಡಳಿತ ಈ ಬಗ್ಗೆ ನಿರ್ಧಾರ ಕೈಗೊಳ್ಳುವವರೆಗೂ ಆ ಕಂಪನಿಗಳ ಮೇಲಿನ ಹೂಡಿಕೆಯಿಂದ ದೂರ ಉಳಿಯ ಬೇಕಾಗುತ್ತದೆ.

ಶುಕ್ರವಾರ ಹಾಂಕಾಂಗ್‌ ಷೇರುಪೇಟೆಯಲ್ಲಿ ಶವೊಮಿ ಷೇರು ಬೆಲೆ ಶೇ 10ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಅಮೆರಿಕದ ಚಿಪ್‌ ತಯಾರಿಕಾ ಕಂಪನಿ ಕ್ವಾಲ್‌ಕಾಮ್‌, ಶವೊಮಿಯಲ್ಲಿ ಅತಿ ಹೆಚ್ಚು ಹೂಡಿಕೆ ಮಾಡಿರುವ ಸಂಸ್ಥೆಯಾಗಿದೆ.

ಚೀನಾ ಮಿಲಿಟರಿಯೊಂದಿಗೆ ಸಂಪರ್ಕ ಹೊಂದಿರುವುದನ್ನು ಶವೊಮಿ ಅಲ್ಲಗೆಳೆದಿದೆ. ಆದರೆ, ಪ್ರಮುಖ ತಂತ್ರಜ್ಞಾನ ಮತ್ತು ಸುರಕ್ಷಿತ ದತ್ತಾಂಶವನ್ನು ಬಳಸಿಕೊಳ್ಳಲು ಮಿಲಿಟರಿಗೆ ಅವಕಾಶ ನೀಡಿರುವುದಾಗಿ ಅಮೆರಿಕ ಆರೋಪಿಸಿದೆ. 'ವಿನಾಕಾರಣ ಚೀನಾದ ಕಂಪನಿಗಳ ಮೇಲೆ ಆರೋಪ ಮಾಡಲಾಗುತ್ತಿದೆ,...' ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ವಕ್ತಾರ ಝಾವೊ ಲಿಜಿಯಾನ್‌ ಪ್ರತಿಕ್ರಿಯಿಸಿದ್ದಾರೆ.

ಮಾಹಿತಿ ಮತ್ತು ತಂತ್ರಜ್ಞಾನ ಸಾಧನಗಳಿಗೆ ಸಂಬಂಧಿಸಿದ ವಾಣಿಜ್ಯ ವಹಿವಾಟುಗಳಿಗೂ ಅಮೆರಿಕದ ವಾಣಿಜ್ಯ ಇಲಾಖೆ ಹೊಸ ನಿಯಮಗಳನ್ನು ಪ್ರಕಟಿಸಿದೆ. ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್‌ ಮೂಲಕ ರಾಷ್ಟ್ರೀಯ ಭದ್ರತೆ ಹಾಗೂ ದತ್ತಾಂಶ ಸುರಕ್ಷತೆಗೆ ಆತಂಕ ಎದುರಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಹೊಸ ನಿಯಮಗಳನ್ನು ಪ್ರಕಟಿಸಲಾಗಿದ್ದು, ಪ್ರಮುಖವಾಗಿ ಚೀನಾ, ರಷ್ಯಾ, ಇರಾನ್‌, ಉತ್ತರ ಕೊರಿಯಾ, ಕ್ಯೂಬಾ ಹಾಗೂ ವೆನಿಜುವೆಲಾ ಜೊತೆಗಿನ ವಹಿವಾಟುಗಳಲ್ಲಿ ಅನ್ವಯವಾಗಲಿವೆ.

ಅಮೆರಿಕದಲ್ಲಿ ಕಾರ್ಯಾಚರಣೆಗೆ ಟ್ರಂಪ್‌ ನಿಷೇಧ ಹೇರಿರುವ ಟಿಕ್‌ಟಾಕ್‌ಗೂ ಹೊಸ ನಿಯಮಗಳು ಅನ್ವಯವಾಗಬಹುದೆಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು