ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್ ಆ್ಯಪ್‌‌ನಲ್ಲಿ ಬರಲಿವೆ ಹೊಸ ಫೀಚರ್‌ಗಳು

Last Updated 9 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಸಂವಹನವನ್ನು ತೀರಾ ಸರಳೀಕರಣಗೊಳಿಸುವಲ್ಲಿ ವಾಟ್ಸ್‌ಆ್ಯಪ್‌ನ ಪಾತ್ರ ಮಹತ್ವದ್ದು. ಕೋಟ್ಯಂತರ ಮಂದಿಯ ಬಳಕೆಯಲ್ಲಿರುವ ಈ ಆ್ಯಪ್‌ ಅನ್ನು ಮತ್ತಷ್ಟು ಸರಳಗೊಳಿಸುವ ಪ್ರಕ್ರಿಯೆಯಲ್ಲಿ ಕಂಪನಿ ಸಕ್ರಿಯವಾಗಿದೆ. ಈಚೆಗಷ್ಟೇ ಹಲವಾರು ಫೀಚರ್‌ಗಳನ್ನು ಬಿಡುಗಡೆ ಮಾಡಿರುವ ವಾಟ್ಸ್‌ಆ್ಯಪ್‌, ಮತ್ತೂ ಕೆಲ ‘ಗ್ರಾಹಕ ಸ್ನೇಹಿ ಫೀಚರ್‌’ಗಳನ್ನು ಅಭಿವೃದ್ಧಿಪಡಿಸಲು ಕಾರ್ಯೋನ್ಮುಖವಾಗಿದೆ. ಶೀಘ್ರವೇ ಅವುಗಳು ಬಳಕೆಗೆ ಮುಕ್ತವಾಗಲಿವೆ. ಅವುಗಳ ವಿವರ ಇಲ್ಲಿದೆ.

ಮಲ್ಟಿ–ಪ್ಲಾಟ್‌ಫಾರ್ಮ್

ಮಲ್ಟಿ–ಪ್ಲಾಟ್‌ಫಾರ್ಮ್‌ಗಳಲ್ಲಿ ಸಹಕರಿಸಲು ಅನುಕೂಲವಾಗುವಂತೆ ವಾಟ್ಸ್‌ಆ್ಯಪ್‌ನಲ್ಲಿ ಬದಲಾವಣೆ ತರಲು ಕಂಪನಿ ಮುಂದಾಗಿದೆ. ಬೇರೆ ಬೇರೆ ಕಡೆಗಳಲ್ಲಿ ವಾಟ್ಸ್‌ಆ್ಯಪ್‌ ಅನ್ನು ಒಂದೇ ಬಾರಿ ಬಳಸಲು ಈ ಫೀಚರ್ ನೆರವಾಗಲಿದೆ. ಉದಾಹರಣೆ, ಈಗ ಚಾಲ್ತಿಯಲ್ಲಿರುವ ವಾಟ್ಸ್‌ಆ್ಯಪ್ ವೆಬ್ ವರ್ಶನ್‌ ಅನ್ನು ಏಕ ಕಾಲದಲ್ಲಿ ಮಾತ್ರ ಒಂದೇ ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿ ಬಳಸಬಹುದು. ಆದರೆ, ಹೊಸ ಫೀಚರ್‌ ಏಕ ಕಾಲಕ್ಕೆ ಬೇರೆ ಬೇರೆ ಕಡೆ ವಾಟ್ಸ್ಆ್ಯಪ್ ಬಳಸಲು ಸಹಾಯ ಮಾಡುತ್ತದೆ. ಈ ಫೀಚರ್ ಪ್ರಾರಂಭಿಕವಾಗಿ ಆ್ಯಪಲ್ ಕಂಪನಿಯ ಐಪಾಡ್‌ನಲ್ಲಿ ಮಾತ್ರ ಲಭ್ಯವಾಗಲಿದೆ.

ಗೂಗಲ್ ಅಸಿಸ್ಟೆಂಟ್ ಮೂಲಕ
ವಾಟ್ಸ್‌ಆ್ಯಪ್ ಕರೆ ಮಾಡಿ

‘ಹೇ ಗೂಗಲ್’ ಎಂದರೆ ಸಾಕು ಆ್ಯಂಡ್ರಾಯ್ಡ್ ಆಧಾರಿತ ಸ್ಮಾರ್ಟ್‌ಫೋನ್‌ಗಳು ಎಚ್ಚರಗೊಳ್ಳುತ್ತವೆ. ಮುಟ್ಟದೆಯೇ ಧ್ವನಿ ಸಂದೇಶದಿಂದ ಅವುಗಳನ್ನು ನಿರ್ವಹಿಸುವಷ್ಟರಮಟ್ಟಿಗೆ ‘ಗೂಗಲ್ ಅಸಿಸ್ಟೆಂಟ್’ ನೆರವಿಗೆ ಬರುತ್ತದೆ. ಥರ್ಡ್ ಪಾರ್ಟಿ ಆ್ಯಪ್‌ಗಳ ನಿರ್ವಹಣೆಗೆ ಅಷ್ಟಾಗಿ ಸ್ಪಂದಿಸದ ‘ಗೂಗಲ್ ಅಸಿಸ್ಟೆಂಟ್’ ಸದ್ಯ ವಾಟ್ಸ್‌ಆ್ಯಪ್ ತೆರೆಯಲು ಹಾಗೂ ಟೆಕ್ಸ್ಟ್ ಮೆಸೇಜ್‌ಗಳನ್ನು ಶೇರ್ ಮಾಡಲು ಮಾತ್ರ ಸಹಕರಿಸುತ್ತಿದೆ. ಇನ್ನು ಮುಂದೆ ಇದು ವಿಡಿಯೊ ಹಾಗೂ ಆಡಿಯೊ ಕರೆ ಮಾಡಲೂ ಸಹ ಸಹಕರಿಸುತ್ತದೆ. ಅದಕ್ಕಾಗಿ ಈ ಫೀಚರ್ ಬಿಡುಗಡೆಯಾದ ಬಳಿಕ ಬಳಕೆದಾರರು ವಾಟ್ಸ್‌ಆ್ಯಪ್ ಹಾಗೂ ಗೂಗಲ್ ಅಸಿಸ್ಟೆಂಟ್ ಆ್ಯಪ್‌ಗಳನ್ನು ಅಪ್‌ಡೇಟ್ ಮಾಡಿ, ‘ಹೇ ಗೂಲ್, ವಾಟ್ಸ್‌ಆ್ಯಪ್ ವಿಡಿಯೊ/ಆಡಿಯೊ ಕಾಲ್–ಕಾಂಟ್ಯಾಕ್ಟ್ ನೇಮ್’ ಎಂದು ಕರೆ ಮಾಡಬಹುದು. ಇದೂ ಸಹ ಪ್ರಾರಂಭಿಕವಾಗಿ ಆ್ಯಪಲ್ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಲಭ್ಯವಾಗಲಿದೆ.

ನೋಟಿಫಿಕೇಷನ್‌ ಜಾಗದಲ್ಲಿ ಆಡಿಯೊ ಪ್ಲೇ ಮಾಡಿ

ನೋಟಿಫಿಕೇಷನ್ ಆಯ್ಕೆ ಆನ್ ಮಾಡಿದ್ದರೆ, ಬಳಕೆದಾರರು ಸ್ವೀಕರಿಸುವ ಸಂದೇಶಗಳನ್ನು ವಾಟ್ಸ್‌ಆ್ಯಪ್‌ ತೆರೆಯದೆಯೇ ನೋಟಿಫಿಕೇಷನ್‌ ಮೂಲಕ ಮೊಬೈಲ್‌ನಲ್ಲಿ ನೋಡಬಹುದು. ಧ್ವನಿ ಸಂದೇಶ ಕೇಳಬೇಕೆಂದರೆ ಬಳಕೆದಾರರು ಕಡ್ಡಾಯವಾಗಿ ಆ್ಯಪ್ ತೆರೆದು ಪ್ಲೇ ಮಾಡಬೇಕಿದೆ. ಇದು ಹೆಚ್ಚಾಗಿ ಧ್ವನಿ ಸಂದೇಶ ಕಳುಹಿಸುವವರಿಗೆ ಕಿರಿಕಿರಿಯುಂಟು ಮಾಡುತ್ತಿದೆ. ಹೀಗಾಗಿ, ವಾಟ್ಸ್‌ಆ್ಯಪ್‌ ಆಡಿಯೊ ಪ್ಲೇಬ್ಯಾಕ್ ಫೀಚರ್ ಅನ್ನು ತರಲು ಮುಂದಾಗಿದ್ದು, ಇದು ಟೆಕ್ಸ್ಟ್ ಮೆಸೇಜ್‌ನಂತೆಯೇ ನೋಟಿಫಿಕೇಷನ್‌ನಲ್ಲಿಯೇ ಧ್ವನಿ ಸಂದೇಶವನ್ನು ಪ್ಲೇ ಮಾಡಿ ಕೇಳುವ ಅವಕಾಶ ಒದಗಿಸುತ್ತದೆ. ಇದಕ್ಕಾಗಿ ಪ್ರತ್ಯೇಕವಾಗಿ ಆ್ಯಪ್ ತೆರೆಯಬೇಕಿಲ್ಲ. ಪ್ರಾರಂಭಿಕವಾಗಿ ಈ ಫೀಚರ್ ಐಒಎಸ್‌ಗೆ (ಐಫೋನ್ ಆಪರೇಟಿಂಗ್‌ ಸಿಸ್ಟಂ) ಸ್ಪಂದಿಸಲಿದೆ.

ವಾಟ್ಸ್‌ಆ್ಯಪ್ ವೆಬ್‌ ಆಲ್ಬಮ್

ಮೊಬೈಲ್‌ನಲ್ಲಿ ಬಳಕೆಯಲ್ಲಿರುವ ವಾಟ್ಸ್‌ಆ್ಯಪ್‌ನಲ್ಲಿ ಫೋಟೊಗಳು ಹಾಗೂ ವಿಡಿಯೊಗಳನ್ನು ಆಲ್ಬಮ್ ಮಾದರಿಯಲ್ಲಿ ಕಳುಹಿಸಬಹುದು. ಆದರೆ, ಕಂಪ್ಯೂಟರ್‌ನಲ್ಲಿ ವಾಟ್ಸ್ಆ್ಯಪ್ ಬಳಸುವಾಗ ಇದು ಸಾಧ್ಯವಾಗದು. ಕೆಲವರಿಗೆ ಇದು ಕಿರಿಕಿರಿಯುಂಟು ಮಾಡುತ್ತದೆ. ಹೀಗಾಗಿಯೇ ವೆಬ್‌ ವರ್ಶನ್‌ನಲ್ಲೂ ಆಲ್ಬಮ್ ಮಾದರಿಯಲ್ಲಿ, ಫೋಟೊಗಳು ಹಾಗೂ ವಿಡಿಯೊಗಳನ್ನು ಕಳುಹಿಸಲು ಅನುಕೂಲವಾಗುವ ಅಪ್‌ಡೇಟೆಡ್ ವರ್ಶನ್‌ ಅನ್ನು ವಾಟ್ಸ್‌ಆ್ಯಪ್ ಬಿಡುಗಡೆ ಮಾಡಲಿದೆ.

ವಾಟ್ಸ್‌ಆ್ಯಪ್‌ಗೂ ಬರಲಿದೆ ಬೂಮೆರಾಂಗ್ ವಿಡಿಯೊಸ್

ಇನ್‌ಸ್ಟಾಗ್ರಾಂನಲ್ಲಿ ಈಚೆಗೆ ಟ್ರೆಂಡ್ ಸೃಷ್ಟಿ ಮಾಡಿರುವುದು ಬೂಮೆರಾಂಗ್ ವಿಡಿಯೊ ಫೀಚರ್. ಈ ಫೀಚರ್‌ನಿಂದಾಗಿ ವಿಡಿಯೊಗಳನ್ನು ಹಾಗೂ ಫೋಟೊಗಳನ್ನು ಮತ್ತಷ್ಟು ತಮಾಷೆಯಾಗಿ ಮಾಡಬಹುದು. ಅವುಗಳನ್ನು ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಅಪ್‌ಲೋಡ್ ಮಾಡಿ ಆಕರ್ಷಣೆ ಗಿಟ್ಟಿಸುತ್ತಿದ್ದಾರೆ ಬಳಕೆದಾರರು. ಇದೇ ಫೀಚರ್‌ ಕೊಂಚ ಬದಲಾವಣೆಗೊಂಡು ಶೀಘ್ರವೇ ವಾಟ್ಸ್‌ಆ್ಯಪ್‌ಗೂ ಕಾಲಿಡಲಿದೆ. ಇದರಲ್ಲಿ ಜಿಐಎಫ್ ಫೀಚರ್‌ ಜೊತೆಗೆ ವಿಡಿಯೊ ಟೈಪ್ ಪ್ಯಾನೆಲ್‌ನೊಂದಿಗೆ ಕಾಣಿಸಿಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT