ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೋದ್ಯಮದ ಅಚ್ಚರಿಯ ಸಾಧಕ ‘ಅಲೋಕ್‌’

Last Updated 31 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಸ್ಟಾರ್ಟ್‌ಅಪ್‌ ನೆಕ್ಸ್ಟ್‌ ಬಿಗ್‌ ಇನ್ನೋವೇಷನ್‌ ಲ್ಯಾಬ್ಸ್‌ನ (Next Big Innovation Labs) ನಿರ್ದೇಶಕರಾಗಿರುವ ಅಲೋಕ್‌ ಮೆದಿಕೆಪುರ ಅನಿಲ್‌ (29) ಅವರು ಚಿತ್ರದುರ್ಗ ಬಳಿಯ ಮೆದಿಕೆಪುರದವರು. ಕಿರಿಯ ವಯಸ್ಸಿನಲ್ಲಿಯೇ ತಮ್ಮ ಸಾಧನೆ ಮೂಲಕ ಗಮನ ಸೆಳೆದಿದ್ದಾರೆ. ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್‌) ಆಶ್ರಯದಲ್ಲಿ ಕಾರ್ಯನಿರ್ವಹಿಸುವ ಯುವಜನರ ಜಾಗತಿಕ ಜಾಲದ ಬೆಂಗಳೂರು ಘಟಕದ ಮೇಲ್ವಿಚಾರಕರೂ ಆಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ತಂತ್ರಜ್ಞಾನ ಸಮ್ಮೇಳನದಲ್ಲಿ ಅತ್ಯುತ್ತಮ ಪ್ರದರ್ಶಕ ಪ್ರಶಸ್ತಿಯು ಇವರನ್ನು ಹುಡುಕಿಕೊಂಡು ಬಂದಿದೆ. ವಿಶ್ವದ ಅತ್ಯಂತ ಹಳೆಯ ಔಷಧಿ ತಯಾರಿಕಾ ಸಂಸ್ಥೆ ಮೆರ್ಕ್‌ (Merck) ಜತೆ ಸಹಯೋಗ ಹೊಂದಿದ ಹೆಗ್ಗಳಿಕೆಯೂ ಇವರದ್ದಾಗಿದೆ.

ಕಡಿಮೆ ವೆಚ್ಚದಲ್ಲಿ ಮೂರು ಆಯಾಮದ (ತ್ರೀಡಿ) ಜೈವಿಕ ಪ್ರಿಂಟರ್‌ (bio printer) ತಯಾರಿಸಿ ವೈದ್ಯಲೋಕದಲ್ಲಿ ಅದರ ಬಳಕೆ ಹೆಚ್ಚಿಸಿ, ಶಸ್ತ್ರಚಿಕಿತ್ಸೆಗಳಿಗೆ ನೆರವಾಗಿ ಮನುಕುಲಕ್ಕೆ ಒಳಿತು ಮಾಡುವ ವಿಶಿಷ್ಟ ನವೋದ್ಯಮವನ್ನು ಸಮಾನ ಮನಸ್ಕರ ಜತೆ ಸೇರಿಕೊಂಡು ಸ್ಥಾಪಿಸಿದ್ದಾರೆ. ಏರೋಸ್ಪೇಸ್‌ ಮತ್ತು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವೀಧರ ಆಗಿರುವ ಇವರು, ಅಮೆರಿಕದ ಬಾಸ್ಟನ್‌ ವಿವಿ ಮತ್ತು ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್‌ ಮತ್ತು ಬಿಸಿನೆಸ್‌ ಪದವಿ ಪಡೆದಿದ್ದಾರೆ. ‘ತ್ರೀಡಿ ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ತ್ರೀಡಿ ಬಯೊ ಪ್ರಿಂಟಿಂಗ್‌ ಸೇರಿದಂತೆ ಹಲವಾರು ಸಾಫ್ಟ್‌ವೇರ್‌ ಮತ್ತು ಪರಿಕರಗಳನ್ನು ಸೃಷ್ಟಿಸುವ ಕಾರ್ಯದಲ್ಲಿ ಈ ನವೋದ್ಯಮ ತೊಡಗಿಕೊಂಡಿದೆ.

ಭವಿಷ್ಯದಲ್ಲಿ ಜೀವರಕ್ಷಕ ಔಷಧಿಗಳು ಅಗ್ಗವಾಗುವ, ಆಕರ ಕೋಶಗಳಿಂದಲೇ ಅಂಗಾಂಗಗಳನ್ನು ಸೃಷ್ಟಿಸುವ ಮಹತ್ವಾಕಾಂಕ್ಷೆಯು ಇವರಲ್ಲಿ ಇದೆ. ಅಪಘಾತ, ಸುಟ್ಟಗಾಯ, ಬದಲಿ ಮಂಡಿಚಿಪ್ಪು ಜೋಡಣೆ, ಮುಖದ ಅಂದ ಹೆಚ್ಚಿಸುವ ಸುರೂಪಿ ಶಸ್ತ್ರಚಿಕಿತ್ಸೆಗೆ (maxillo facial) ಒಳಗಾಗುವ ಮೊದಲೇ ಆಸ್ಪತ್ರೆಗೆ ದಾಖಲಾದವರ ನಿರ್ದಿಷ್ಟ ಅಂಗಾಂಗಗಳ ಸಿಟಿ ಸ್ಕ್ಯಾನ್‌ ಆಧರಿಸಿ ಸಿದ್ಧಪಡಿಸುವ ಮಾದರಿಗಳು ಸುಲಲಿತವಾಗಿ ಶಸ್ತ್ರಚಿಕಿತ್ಸೆ ನಡೆಸಲು ನೆರವಾಗಲಿವೆ. ಸಿಟಿ ಸ್ಕ್ಯಾನ್‌ ಎಲೆಕ್ಟ್ರಾನಿಕ್‌ ಮಾದರಿ ಮತ್ತು ವಿಡಿಯೊ ಪಡೆದುಕೊಂಡು ಅದಕ್ಕೆ ಕೋಡ್‌ ಅಭಿವೃದ್ಧಿಪಡಿಸಿ ಎಳೆಎಳೆಯಾಗಿ ಪ್ರತಿಕೃತಿ ರೂಪಿಸುವ ತ್ರೀಡಿ ಪ್ರಿಂಟರ್‌ ಅನ್ನು ಅಲೋಕ್‌ ಮತ್ತವರ ತಂಡ ಅಭಿವೃದ್ಧಿಪಡಿಸಿದೆ.

ವೈಯಕ್ತಿಕ ನೆಲೆಗಟ್ಟಿನಲ್ಲಿ, ಹೊಸ ವರ್ಷದಲ್ಲಿ ಶಂಕರ್‌ ಕಣ್ಣಾಸ್ಪತ್ರೆಯ ಸಹಯೋಗದಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೇತ್ರ ಶಿಬಿರ, ಗ್ಲೋಬಲ್‌ ಷೇಪರ್ಸ್‌ ಕಮ್ಯುನಿಟಿ ಸದಸ್ಯರಿಗಾಗಿ ಬೆಂಗಳೂರಿನಲ್ಲಿ ಜಾಗತಿಕ ಸಮಾವೇಶ ಏರ್ಪಡಿಸಿ, ಬದಲಾವಣೆಯ ಯುವ ಹರಿಕಾರರಿಗೆ ಬೆಂಗಳೂರಿನ ಜಾಗತಿಕ ಮಹತ್ವ ಮನಗಾಣಿಸಲು ಉದ್ದೇಶಿಸಿದ್ದಾರೆ.

ವೃತ್ತಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಜರ್ಮನಿಯಲ್ಲಿ ತಮ್ಮ ನವೋದ್ಯಮದ ಎರಡನೆ ಪ್ರಯೋಗಾಲಯ ಆರಂಭಿಸಿರುವ ಅಲೋಕ್‌ಗೆ, ಹೊಸ ವರ್ಷದಲ್ಲಿ ಯುರೋಪ್‌ನಾದ್ಯಂತ ತಮ್ಮ ನವೋದ್ಯಮದ ಬೇರುಗಳನ್ನು ವಿಸ್ತರಿಸುವ ಮಹದಾಸೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT