ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಚುನಾವಣೆ: ಅರವಿಂದ ಕೇಜ್ರಿವಾಲ್ ಬಗ್ಗೆ ಬಿಜೆಪಿ ಲೇವಡಿ, ವಿಡಿಯೊ ವೈರಲ್

‘ಪಾಪ್‌ ಕಿ ಅದಾಲತ್‌’ಗೆ ಎಎಪಿ ತಿರುಗೇಟು
Last Updated 10 ಜನವರಿ 2020, 14:10 IST
ಅಕ್ಷರ ಗಾತ್ರ

ನವದೆಹಲಿ:ದೆಹಲಿ ವಿಧಾನಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಕುರಿತು ಲೇವಡಿ ಮಾಡಿ ವಿಡಿಯೊವೊಂದನ್ನು ಬಿಜೆಪಿ ಟ್ವೀಟ್ ಮಾಡಿದ್ದು, ವೈರಲ್ ಆಗಿದೆ. ಇದರಲ್ಲಿ ಕೇಜ್ರಿವಾಲ್ ಅವರನ್ನು ಅನನುಭವಿ ಮತ್ತು ಭರವಸೆಗಳನ್ನು ಈಡೇರಿಸದ ವ್ಯಕ್ತಿ ಎಂಬಂತೆ ಬಿಂಬಿಸಲಾಗಿದೆ.

‘ಪಾಪ್‌ ಕಿ ಅದಾಲತ್ ’ ಎಂಬ ಶೀರ್ಷಿಕೆಯುಳ್ಳ ವಿಡಿಯೊವನ್ನು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಮಾದರಿಯಲ್ಲಿ ಚಿತ್ರೀಕರಿಸಲಾಗಿದೆ.

ವಿಡಿಯೊದಲ್ಲೇನಿದೆ?:‘ಅಣ್ಣಾ ಹಜಾರೆ ಅವರ ಉಪವಾಸದಿಂದ ರಾಜಕೀಯ ಅಸ್ತಿತ್ವ ಪಡೆದುಕೊಂಡ ವ್ಯಕ್ತಿ, ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಮತದಾರರನ್ನು ಮೋಸಗೊಳಿಸಿದ ನಾಯಕ, ಜನರಿಂದ ಮತ ಪಡೆದು ಅವರ ಹೃದಯವನ್ನು ಚೂರುಮಾಡಿದ ವ್ಯಕ್ತಿ, ಅನನುಭವಿಯಂತೆ ವರ್ತಿಸುವಾತ, ಎಲ್ಲದಕ್ಕೂ ಯು–ಟರ್ನ್‌ ತೆಗೆದುಕೊಳ್ಳುವ, ಗಿಮಿಕ್ ಮಾಡುವ ವ್ಯಕ್ತಿ ನಿಮ್ಮ ಮುಂದೆ ಬರುತ್ತಿದ್ದಾರೆ’ ಎಂದು ವಕೀಲನ ಪಾತ್ರದಲ್ಲಿರುವ ನಟ ಹೇಳುತ್ತಿರುವ ದೃಶ್ಯ ಮೊದಲಿಗೆ ಬರುತ್ತದೆ. ಅಷ್ಟರಲ್ಲಿ ಕೇಜ್ರಿವಾಲ್‌ರನ್ನು ಅನುಕರಣೆ ಮಾಡುತ್ತಾ ವ್ಯಕ್ತಿಯೊಬ್ಬ ಕಟಕಟೆಗೆ ಬರುತ್ತಾನೆ.

ಬಳಿಕ ‘ಇಲ್ಲಿ ನ್ಯಾಯಾಧೀಶರ ಸ್ಥಾನದಲ್ಲಿ ಒಬ್ಬರನ್ನು ಕುಳ್ಳಿರಿಸಲಾಗಿದೆ. ಆದರೂ ನೀವೇ ತೀರ್ಪುಗಾರರು. ಈಗ ಬಂದಿರುವವ್ಯಕ್ತಿ ಜನರನ್ನು ‘ವೋಟ್ ಬ್ಯಾಂಕ್’ ಎಂದು ಪರಿಗಣಿಸುತ್ತಾನೆ ಎಂದೂ ನಟ ಹೇಳುತ್ತಾನೆ. ಬಳಿಕಕೇಜ್ರಿವಾಲ್‌ರಂತೆ ಅನುಕರಣೆ ಮಾಡುತ್ತಾ ಬಂದ ವ್ಯಕ್ತಿಯು ಪೊರಕೆ (ಎಎಪಿ ಚುನಾವಣಾ ಚಿಹ್ನೆ) ಮೇಲೆ ಆಣೆ ಮಾಡಿ, ‘ನಾನು ಸತ್ಯವನ್ನೇ ಹೇಳುತ್ತೇನೆ. ಒಂದು ವೇಳೆ, ಸುಳ್ಳು ಹೇಳಿದರೂ ಪರವಾಗಿಲ್ಲ. ಅದನ್ನು ಯು–ಟರ್ನ್‌ ತೆಗೆದುಕೊಳ್ಳುವ ಮೂಲಕ ಸರಿಪಡಿಸಬಹುದು’ ಎಂದು ಹೇಳುತ್ತಿರುವ ದೃಶ್ಯವಿದೆ. ಹೀಗೆ ಸಾಗುವ ವಿಡಿಯೊದುದ್ದಕ್ಕೂ ಕೇಜ್ರಿವಾಲ್ ಅವರನ್ನು ವ್ಯಂಗ್ಯವಾಡಲಾಗಿದೆ.

ಬಿಜೆಪಿ ದೆಹಲಿ ಘಟಕ ಟ್ವೀಟ್ ಮಾಡಿರುವ7 ನಿಮಿಷದ ಈ ವಿಡಿಯೊವನ್ನು ಸುಮಾರು 72 ಸಾವಿರ ಜನ ವೀಕ್ಷಿಸಿದ್ದು, ಸುಮಾರು 2,900 ರಿಟ್ವೀಟ್ ಆಗಿದೆ.

ಎಎಪಿ ಕಿಡಿ:ಬಿಜೆಪಿ ವಿಡಿಯೊಗೆ ಎಎಪಿ ತಿರುಗೇಟು ನೀಡಿದ್ದು, ಒಬ್ಬ ವ್ಯಕ್ತಿಯನ್ನು ಅಪಹಾಸ್ಯ ಮಾಡಲು ಇಷ್ಟೊಂದು ಪ್ರಯತ್ನವೇ? ಎಂದು ಪ್ರಶ್ನಿಸಿದೆ. ಜತೆಗೆ, ‘ವಿಡಿಯೊ ನೀರಸವಾಗಿದೆ. ಯಾವುದೇ ವಿಷಯ ಅಥವಾ ವಿಡಂಬನೆ ಕುರಿತು ಸಲಹೆ ಬೇಕಿದ್ದಲ್ಲಿ ನಮ್ಮೊಂದಿಗೆ ಸಂಪರ್ಕದಲ್ಲಿರಿ’ ಎಂದು ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT