ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕು: ಚೆಕ್‌ಗೆ ಇಸ್ತ್ರಿ, ಕ್ಯಾಷಿಯರ್‌ ತಂತ್ರಕ್ಕೆ ಮಹೀಂದ್ರಾ ಮೆಚ್ಚುಗೆ

Last Updated 6 ಏಪ್ರಿಲ್ 2020, 10:36 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಾದ್ಯಂತ 21 ದಿನಗಳ ಲಾಕ್‌ಡೌನ್‌ ಆಚರಣೆಯಲ್ಲಿದ್ದು, ಬ್ಯಾಂಕ್‌ ಸೇರಿದಂತೆ ಅತ್ಯಗತ್ಯ ಸೇವೆಗಳು ಮಾತ್ರ ಲಭ್ಯವಿದೆ. ಕೊರೊನಾ ಸೋಂಕು ತಡೆಗೆ ಬ್ಯಾಂಕ್‌ಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿವೆ. ಬ್ಯಾಂಕ್‌ವೊಂದರ ಕ್ಯಾಷಿಯರ್‌ ಗ್ರಾಹಕರಿಂದ ಬರುವ ಚೆಕ್‌ಗಳಿಗೆಇಸ್ತ್ರಿ ಪೆಟ್ಟಿಗೆ ಶಾಖಬಳಸಿ ಸೋಂಕು ನಿವಾರಿಸುವ ತಂತ್ರ ಬಳಸಿದ್ದು, ಸಾಮಾಜಿಕ ಸಂಪರ್ಕ ಮಾಧ್ಯಮಗಳಲ್ಲಿ ವಿಡಿಯೊ ವೈರಲ್‌ ಆಗಿದೆ.

ಬ್ಯಾಂಕ್‌ ಆಫ್‌ ಬರೋಡಾದ ಗುಜರಾತ್‌ನ ಶಾಖೆಯೊಂದರಲ್ಲಿ ಹೀಗೆ ಸೋಂಕು ನಿವಾರಿಸುವ ತಂತ್ರ ಬಳಸಲಾಗಿದೆ. ಕ್ಯಾಷಿಯರ್‌ ಬಳಿ ಬರುವ ಚೆಕ್‌ನ್ನು ಇಕ್ಕಳದಂತಹ ಸ್ಟೀಲ್‌ ಸಲಕರಣೆಯಿಂದ ಹಿಡಿದು ಟೇಬಲ್‌ ಮೇಲಿಟ್ಟು, ಸ್ಟೀಮ್‌ ಐರನ್‌ ಬಾಕ್ಸ್‌ನಿಂದ ಎರಡೂ ಬದಿಯಲ್ಲಿ ಶಾಖ ನೀಡುವುದನ್ನು ವಿಡಿಯೊದಲ್ಲಿ ಕಾಣಬಹುದು. ಈ ವಿಡಿಯೊನ್ನು ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಮುಖ್ಯಸ್ಥ ಕೆಲವು ದಿನಗಳ ಹಿಂದೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದರು.

27 ಸೆಕೆಂಡ್‌ಗಳ ವಿಡಿಯೊ ಕ್ಲಿಪ್‌ನಲ್ಲಿ ಗ್ರಾಹಕರಿಂದ ಚೆಕ್‌ ಕ್ಯಾಷಿಯರ್‌ ಬಳಿ ತಲುಪಿ, ಅಲ್ಲಿಂದ ಮುಂದಿನ ಹಂತಕ್ಕೆ ಹೋಗುವ ಮುನ್ನ ನಡೆಯುವ ಪ್ರಕ್ರಿಯೆಯನ್ನು ಕಾಣಬಹುದಾಗಿದೆ. ಬ್ಯಾಂಕ್‌ನ ಹೊರಗೆ ಕಿಟಕಿ ಮೂಲಕ ಮಹಿಳೆಯೊಬ್ಬರು ನೀಡುವ ಚೆಕ್‌ನ್ನು ಬ್ಯಾಂಕ್‌ ಸಿಬ್ಬಂದಿ ಪಡೆದು, ಚೆಕ್‌ ಸಂಖ್ಯೆ ದಾಖಲಿಸಿ ಅದನ್ನು ಕ್ಯಾಷಿಯರ್‌ಗೆ ಗವಾಕ್ಷಿಯಿಂದ ತಲುಪಿಸುತ್ತಾರೆ. ಕ್ಯಾಷಿಯರ್‌ ಅದನ್ನು ನೇರವಾಗಿ ಕೈಯಲ್ಲಿ ಎತ್ತಿಕೊಳ್ಳದೆ, ಚಿಮಟ ಬಳಸಿ ಹಿಡಿದು ಅದನ್ನು ಇಸ್ತ್ರಿ ಮಾಡುತ್ತಾರೆ. ಎರಡೂ ಬದಿಯನ್ನು ಶಾಖಕ್ಕೆ ಒಳಪಡಿಸುವ ಮೂಲಕ ವೈರಸ್‌ ಸೋಂಕು ನಿವಾರಿಸುವ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಅನಂತರವೇ ಕೈಗವಸು ಹಾಕಿರುವ ಕ್ಯಾಷಿಯರ್ ಚೆಕ್‌ನ್ನು ಹಿಡಿದು ಮುಂದಿನ ಪರಿಶೀಲನೆ ನಡೆಸಿದ್ದಾರೆ.

ವಾಟ್ಸ್‌ಆ್ಯಪ್‌ ವಂಡರ್‌ ಬಾಕ್ಸ್‌ ( #whatsappwonderbox) ಹ್ಯಾಷ್‌ಟ್ಯಾಗ್‌ನೊಂದಿಗೆ ಆನಂದ್ ಮಹೀಂದ್ರಾ ಈ ವಿಡಿಯೊ ಟ್ವೀಟಿಸಿ, 'ಕ್ಯಾಷಿಯರ್‌ ಬಳಸಿರುವ ತಂತ್ರ ಪರಿಣಾಮಕಾರಿಯಾದುದೋ ಇಲ್ಲವೋ ನನಗೆ ತಿಳಿಯದು, ಆದರೆ ಅವರ ಕ್ರಿಯಾಶೀಲತೆಗೆ ವೆಚ್ಚುಗೆ ವ್ಯಕ್ತಪಡಿಸಲೇಬೇಕು' ಎಂದಿದ್ದಾರೆ.

ಇದಕ್ಕೆ ನೂರಾರು ಜನರ ಕಾಮೆಂಟ್‌ ಮಾಡಿದ್ದು, ಇದೊಂದು ದೇಸಿ ತಂತ್ರ, ಪರಿಣಾಮಕಾರಿ ವ್ಯವಸ್ಥೆ ಎಂದಿದ್ದಾರೆ. ಇನ್ನೂ ಕೆಲವರು ಇದು ನಿಜಕ್ಕೂ ಪರಿಣಾಮಕಾರಿಯೇ ಎಂದು ಪ್ರಶ್ನೆ ಇಟ್ಟಿದ್ದಾರೆ, ಇನ್ನಷ್ಟು ನೆಟಿಜನ್‌ಗಳು ಇದನ್ನು ತಮಾಷೆತುಣುಕಾಗಿ ಪರಿಗಣಿಸಿದ್ದಾರೆ. ವಿಡಿಯೊ ಈವರೆಗೂ 2.54 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, 3,800 ಹೆಚ್ಚು ಬಾರಿ ಮರು ಹಂಚಿಕೆಯಾಗಿದೆ.

'ನಮ್ಮ ಬ್ಯಾಂಕ್‌ ಶಾಖೆಯ ವಿಡಿಯೊ ಪ್ರಕಟಿಸಿ, ನಮ್ಮ ಸಿಬ್ಬಂದಿಯ ಕ್ರಿಯಾ ಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸಿರುವುದಕ್ಕೆ ಧನ್ಯವಾದಗಳು' ಎಂದು ಬ್ಯಾಂಕ್‌ ಆಫ್‌ ಬರೋಡಾ ಟ್ವಿಟರ್ ಖಾತೆ ಆನಂದ್‌ ಮಹೀಂದ್ರಾ ಅವರ ಟ್ವೀಟ್‌ಗೆಪ್ರತಿಕ್ರಿಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT