ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಗದ ಮನಸ್ಸಿಗೆ ಗುರುವಿನ ಸಾಣೆ

Last Updated 13 ಮೇ 2018, 19:30 IST
ಅಕ್ಷರ ಗಾತ್ರ

ಎರಡು ವರ್ಷಗಳ ಹಿಂದೆ ಡೆಲ್ಲಿ ಡೇರ್ ಡೆವಿಲ್ಸ್ ಐಪಿಎಲ್ ಕ್ರಿಕೆಟ್ ತಂಡಕ್ಕೆ ರಿಷಬ್ ಪಂತ್ 1.9 ಕೋಟಿ ರೂಪಾಯಿಗೆ ಹರಾಜಾದರು. ಅದೇ ದಿನ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದ 19 ವರ್ಷದೊಳಗಿನವರ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ನಮೀಬಿಯಾ ತಂಡದ ಎದುರು ಪಟಪಟನೆ ರನ್ ಪೇರಿಸಿ ಈ ಹುಡುಗ ಶತಕ ಗಳಿಸಿದ್ದು.

ಈ ಐಪಿಎಲ್ ಋತುವಿನಲ್ಲೂ ರನ್‌ ಗಳಿಕೆ ಪಟ್ಟಿಯ ಮೊದಲ ಐದಾರು ಹೆಸರುಗಳಲ್ಲಿ ರಿಷಭ್ ಎಂದೂ ಕಾಣುತ್ತಿದೆ. ಅದಕ್ಕಿಂತ ಮುಖ್ಯವಾಗಿ ಆ ಸಾಧಕರಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ಇರುವುದು ಇವರದ್ದು (ಸರಾಸರಿ 174ಕ್ಕೂ ಹೆಚ್ಚು). ಉತ್ತರಾಖಂಡದ ರೂರ್ಕಿಯ ಹುಡುಗ ರಿಷಭ್ ನಗರದಿಂದ ನಗರಕ್ಕೆ ಜಿಗಿಯುತ್ತಾ ಭವಿಷ್ಯ ಕಟ್ಟಿಕೊಳ್ಳಲು ಹೆಣಗಾಡಿದರು. ಮೊದಲು ದೆಹಲಿಗೆ ಹೋದರು.

ಅಲ್ಲಿ ಕ್ರಿಕೆಟ್ ಅಕಾಡೆಮಿಯೊಂದು ಹೊರದಬ್ಬಿತು. ಆಮೇಲೆ ರಾಜಸ್ಥಾನದ ನೆಲದಲ್ಲಿ ಭವಿಷ್ಯ ಸಿಕ್ಕೀತೇನೋ ಎಂದು ಹುಡುಕಿದರು. ಮತ್ತೆ ದೆಹಲಿಗೆ ಬಂದರು.

ಅಲ್ಲಿ ಅವರಿಗೆ ಗುರುವಾಗಿ ಸಿಕ್ಕವರು ತಾರಕ್ ಸಿನ್ಹ. ಶಿಖರ್ ಧವನ್, ಆಕಾಶ್ ಚೋಪ್ರಾ ತರಹದ ಅನುಭವಿ ಬ್ಯಾಟ್ಸ್‌ಮನ್‌ಗಳಿಗೆ ಪಾಠ ಹೇಳಿರುವ ತಾರಕ್ ಮೊದಲ ದಿನಗಳಲ್ಲೇ ರಿಷಭ್ ಪಂತ್ ಪ್ರತಿಭೆಯನ್ನು ಗುರುತಿಸಿದರು.

‘ಟೆಸ್ಟ್ ಕ್ರಿಕೆಟ್ ಆಡಿದರೆ ಮಾತ್ರ ಅಂತರರಾಷ್ಟ್ರೀಯ ಕ್ರಿಕೆಟಿಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಆ ಸಾಧನೆಯನ್ನು ಮಾಡು’ ಎಂದು ಶಿಷ್ಯನ ಕಿವಿಗೆ ಪದೇ ಪದೇ ಆತ್ಮವಿಶ್ವಾಸದ ನುಡಿಯನ್ನು ಅವರು ಹಾಕುತ್ತಿರುತ್ತಾರೆ. ಅವರೆಂದೂ ಆಟಗಾರನ ಮೂಲ ಶೈಲಿಯನ್ನು ಮುಕ್ಕಾಗಿಸುವುದಿಲ್ಲ.

ರಿಷಬ್ ಮೊದಲಿನಿಂದಲೂ ಆಕ್ರಮಣಕಾರಿ. ಮೈದಾನದ ಹೊರಗೂ ಅವರ ಮಾತಿನಲ್ಲಿ ಆತ್ಮವಿಶ್ವಾಸ ತುಂಬಿ ತುಳುಕುತ್ತದೆ.

ಟಿ-ಶರ್ಟ್‌ನ ಕಾಲರ್ ಬಿಡಿಸಿ ಮೇಲೆ ಮಾಡಿಕೊಂಡು ಅಂಗಳಕ್ಕಿಳಿದರೆ, ಎದುರಾಳಿ ತಂಡದ ಬೌಲರ್ ಗಳ ಕೈ ಪದೇ ಪದೇ ಹಣೆಮೇಲೆ ಹರಿದಾಡುವಂತೆ ಮಾಡುವುದರಲ್ಲಿ ನಿಸ್ಸೀಮ.

ದೆಹಲಿಯ ಸಾನೆಟ್ ಕ್ರಿಕೆಟ್ ಕ್ಲಬ್‌ನಲ್ಲಿ ಕಲಿತ ಹಳೆಯ ಶೈಲಿಯ ಬ್ಯಾಟಿಂಗ್‌ಗೆ ತನ್ನದೇ ಆಕ್ರಮಣವನ್ನು ಹದವಾಗಿ ಬೆರೆಸಿದ ರಿಷಬ್ 2016ರಲ್ಲಿ ಹಣೆಬರಹವನ್ನು ಚೆನ್ನಾಗಿ ಬರೆದುಕೊಂಡರು.

19 ವರ್ಷದೊಳಗಿನವರ ಕ್ರಿಕೆಟ್‌ನಲ್ಲಿ ನೇಪಾಳ ತಂಡದ ಎದುರು 18 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅದೇ ವರ್ಷ ರಣಜಿ ಕ್ರಿಕೆಟ್ ನಲ್ಲೂ ಅವರದ್ದು ಮಿಂಚಿನ ಸಂಚಾರ. ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಬರೀ 326 ಎಸೆತಗಳಲ್ಲಿ 308 ರನ್ ದಾಖಲಿಸಿದಾಗ ರಣಜಿ ಕ್ರಿಕೆಟ್ ಅಭಿಮಾನಿಗಳ ಕಣ್ಣು ಅವರ ಮೇಲೆ ನೆಟ್ಟಿತು.

ಜಾರ್ಖಂಡ್ ಎದುರು 48 ಎಸೆತಗಳಲ್ಲಿ ಶತಕ ಗಳಿಸಿ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ವೇಗದ ಪರಿಣಾಮ ಎಂಥದ್ದು ಎನ್ನುವುದನ್ನು ರುಜುವಾತು ಪಡಿಸಿದ್ದು ವಿಶೇಷ. ಆಗ ರಣಜಿ ಕ್ರಿಕೆಟ್ ನಲ್ಲಿ ಒಂಬತ್ತು ಇನಿಂಗ್ಸ್ ಗಳಿಂದ 874 ರನ್ ಜಮೆಮಾಡಿದ್ದರು. ರನ್ ಗಳಿಕೆಯ ಸರಾಸರಿ 97! ಅದಕ್ಕಿಂತ ಮುಖ್ಯವಾಗಿ ಸಿಡಿಸಿದ ಸಿಕ್ಸರ್‌ಗಳ ಸಂಖ್ಯೆ 47.

ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಕೋಚ್ ಪ್ರವೀಣ್ ಆಮ್ರೆ ಕೂಡ ರಿಷಬ್ ಬ್ಯಾಟ್ ಚಲನೆಯ ವೇಗ ನೋಡಿದಂಗಾದವರೇ.

ಚೆಂಡು ಬೀಳುವ ಜಾಗವನ್ನು ಚಕ್ಕನೆ ಅಂದಾಜು ಮಾಡುವ ಅವರ ಕಣ್ಣು, ಅದಕ್ಕೆ ಸೂಕ್ತವಾಗಿ ಸ್ಪಂದಿಸುವ ಭುಜದ ಚಲನೆ ಕಂಡು ಅವರು ಮೂಕವಿಸ್ಮಿತರಾದ ಸಂದರ್ಭಗಳಿವೆ.

ಹನ್ನೆರಡನೇ ವಯಸ್ಸಿನಲ್ಲಿ ‘ಗುರುವಿನ ಗುಲಾಮ’ ಆದದ್ದಕ್ಕೆ ರಿಷಬ್ ಸತ್ಫಲವನ್ನೇ ಉಣ್ಣುತ್ತಿದ್ದಾರೆ.

ಸುಗಂಧದ್ರವ್ಯ ಇಷ್ಟಪಡುವ ಅವರು ತಮಗೊಂದು, ಅಪ್ಪ-ಅಮ್ಮನಿಗೆ ಇನ್ನೊಂದು ಕಾರು ಕೊಂಡಿದ್ದಾರಷ್ಟೆ. ಮಿಕ್ಕಂತೆ ಕ್ರಿಕೆಟ್ ಧ್ಯಾನವಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT