ಗುರುವಾರ , ಸೆಪ್ಟೆಂಬರ್ 24, 2020
28 °C

ಬಿಸಿಯೂಟದ ತುತ್ತಿಗಾಗಿ ಕೈಚಾಚುತ್ತಿದ್ದ ಮಗು ಈಗ ಅದೇ ಶಾಲೆಯ ವಿದ್ಯಾರ್ಥಿನಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್: ದಿನನಿತ್ಯ ಒಂದು ಹೊತ್ತಿನ ತುತ್ತು ಊಟಕ್ಕಾಗಿ ಪಾತ್ರೆ ಹಿಡಿದು ಶಾಲೆಯ ಹೊರಗೆ ಕಾಯುತ್ತಿದ್ದ ಬಡ ಬಾಲಕಿ ಈಗ ಸಂತೋಷದಿಂದ ಅದೇ ಶಾಲೆಗೆ ಸೇರ್ಪಡೆಯಾಗಿ ಬಿಸಿಯೂಟವನ್ನು ಸವಿಯುತ್ತಿದ್ದಾಳೆ. ಶಾಲಾ ಮಕ್ಕಳ ಊಟ ಮುಗಿದ ಬಳಿಕ ಸಿಗುತ್ತಿದ್ದ ಊಟವನ್ನೇ ಆಶ್ರಯಿಸಿದ್ದ ಈ ಪುಟ್ಟ ಹುಡುಗಿ, ಒಂದಲ್ಲ ಒಂದು ದಿನ ಸಮವಸ್ತ್ರ ಧರಿಸಿ ಅದೇ ಶಾಲೆಗೆ ಕಲಿಯಲು ಹೋಗುತ್ತೇನೆ ಎಂದು ಬಹುಶಃ ಎಣಿಸಿರಲಿಲ್ಲವೇನೋ.

ಹೌದು, ಗುಡಿಮಲ್ಕಾಪುರದ ದೇವಲ್ ಜಾಮ್ ಸಿಂಗ್ ಸರ್ಕಾರಿ ಪ್ರೌಢಶಾಲೆ ಬಳಿಯಲ್ಲಿ ಬಾಲಕಿಯೊಬ್ಬಳು ಅಲ್ಯೂಮಿನಿಯಂ ಪಾತ್ರೆ ಹಿಡಿದು, ಶಾಲಾ ಮಕ್ಕಳ ಊಟ ಮುಗಿಯುವುದನ್ನೇ ನೋಡುತ್ತಾ ನಿಂತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಪರಿಣಾಮವಾಗಿಯೇ ಬಾಲಕಿ ಇಂದು ಶಾಲೆಗೆ ಸೇರಿದ್ದಾಳೆ.

ಬಾಲಕಿ ಹೆಸರು ದಿವ್ಯಾ. ಅಲ್ಲೇ ಸಮೀಪದ ಸ್ಲಂನಲ್ಲಿ ವಾಸಿಸುತ್ತಿದ್ದ ದಿವ್ಯಾ ಚಿಂದಿ ಆಯುವ ಮತ್ತು ಕಸ ಗುಡಿಸುವ ಯಶೋದಾ ಮತ್ತು ಲಕ್ಷ್ಮಣ ಎಂಬುವರ ಪುತ್ರಿಯಾಗಿದ್ದಳು. ಪ್ರತಿನಿತ್ಯ ಪಾಲಕರು ಕೆಲಸಕ್ಕೆ ತೆರಳಿದ ವೇಳೆ ಇವಳು ಪಾತ್ರೆ ಹಿಡಿದುಕೊಂಡು ಶಾಲೆಯೆದುರು ಬಂದು ನಿಲ್ಲುತ್ತಿದ್ದಳು.

ತೆಲುಗು ದಿನಪತ್ರಿಕೆಯೊಂದರಲ್ಲಿ 'ಹಸಿದ ನೋಟ' ಎಂಬ ಬರಹದೊಂದಿಗೆ ಬಾಲಕಿಯ ಫೋಟೊವನ್ನು ಪ್ರಕಟಿಸಲಾಗಿತ್ತು. ಅದನ್ನು ಗಮನಿಸಿದ ಮಕ್ಕಳ ಹಕ್ಕುಗಳಿಗಾಗಿ ಹೋರಾಡುವ ಎಂವಿ ಫೌಂಡೇಶನ್‌ನ ರಾಷ್ಟ್ರೀಯ ಸಂಚಾಲಕ ವೆಂಕಟ್ ರೆಡ್ಡಿ, ಫೋಟೊವನ್ನು ಶೇರ್ ಮಾಡಿಕೊಂಡು 'ಆ ಬಾಲಕಿ ಶಿಕ್ಷಣ ಮತ್ತು ಆಹಾರದ ಹಕ್ಕನ್ನು ಕೂಡ ಪಡೆದಿಲ್ಲದಿರುವುದು ನಾಚಿಕೆಗೇಡಿನ ಸಂಗತಿ' ಎಂದು ಬರೆದಿದ್ದರು.

ರೆಡ್ಡಿ ತಮ್ಮ ಸಂಸ್ಥೆ ಮತ್ತು ಇತರೆ ಸ್ವಯಂಸೇವಕರೊಂದಿಗೆ ಮಾತನಾಡಿ, ದಿವ್ಯಾಳ ನಿವಾಸಕ್ಕೆ ತೆರಳಿ ಪೋಷಕರನ್ನು ಒಪ್ಪಿಸಿ ಅದೇ ಶಾಲೆಯಲ್ಲಿ ದಾಖಲಾಗುವಂತೆ ಮಾಡಿದ್ದಾರೆ.

ಹೊಸ ಸಮವಸ್ತ್ರ ಧರಿಸಿ ಶಾಲೆಗೆ ತೆರಳುವ ಮೊದಲ ದಿನ ದಿವ್ಯಾ ಮತ್ತು ಆಕೆಯ ಪಾಲಕರ ಫೋಟೊವನ್ನು ತೆಗೆದು ಶೇರ್ ಮಾಡಿದ್ದರು. ಬಳಿಕ ಮತ್ತೊಂದು ಫೋಟೊ ಹಾಕಿ ಕೊನೆಗೂ ಶಾಲೆಗೆ ದಾಖಲಾದ ಬಾಲಕಿ ಅತ್ಯಂತ ಸಂತೋಷದಿಂದಿದ್ದಾಳೆ ಮತ್ತು ಉತ್ತಮ ಊಟವನ್ನು ಸವಿಯುತ್ತಿದ್ದಾಳೆ ಎಂದು ಬರೆದುಕೊಂಡಿದ್ದರು.

ಒಂದು ಚಿಕ್ಕ ಶ್ರಮವು ಹೇಗೆ ಯುವ ಮನಸ್ಸುಗಳಿಗೆ ಹೇಗೆ ದಾರಿ ಮಾಡಿಕೊಡಬಹುದು ಎಂಬುದನ್ನು ಇದು ತೋರಿಸುತ್ತದೆ ಎಂದು ರೆಡ್ಡಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು