ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ದುರಾಡಳಿತ: ಬಿಎಸ್‌ವೈ ಕಿಡಿ

Last Updated 3 ಮಾರ್ಚ್ 2018, 19:49 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಸಿದ್ದರಾಮಯ್ಯನ ದುರಾಡಳಿತಕ್ಕೆ ಮುಕ್ತಿ ಹಾಡಿ 150 ಕ್ಷೇತ್ರಗಳಲ್ಲಿ ಬಿಜೆಪಿ ಪತಾಕೆ ಹಾರಿಸುವ ಪಣತೊಟ್ಟು ಬೆಂಗಳೂರು ರಕ್ಷಿಸಿ ಯಾತ್ರೆ ಕೈಗೊಂಡಿದ್ದೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ರಾಮಮೂರ್ತಿನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಬೆಂಗಳೂರು ರಕ್ಷಿಸಿ ಯಾತ್ರೆ’ಗೆ ಚಾಲನೆ ನೀಡಿ ಮಾತನಾಡಿದರು.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿಗಿಂತ ಲೂಟಿ ನಡೆಸುವುದರಲ್ಲಿ ನಿರತವಾಗಿದೆ. ಗೂಂಡಾಗಿರಿಗೆ ಪ್ರೋತ್ಸಾಹಿಸುವ ಕುಕೃತ್ಯಗಳನ್ನೇ ನಡೆಸಿಕೊಂಡು ಬಂದಿದ್ದು, ಜನ ರೋಸಿ ಹೋಗಿದ್ದಾರೆ’ ಎಂದರು.

ಕೇಂದ್ರ ಸಚಿವ ಅನಂತಕುಮಾರ್, ‘ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿ ನಗರಸಭೆ, ಪುರಸಭೆ, ಉದ್ಯಾನ, ರಸ್ತೆ ಚರಂಡಿ ಕೊಡುಗೆ ನೀಡಲು ಯೋಗ್ಯತೆ ಇಲ್ಲದವರು ಪಾಲಿಕೆ ಕಚೇರಿಗೆ ಬೆಂಕಿ ಇಡುತ್ತಾರೆ. ಇಂತಹ ಸಂಸ್ಕೃತಿಯ ಆಡಳಿತ ನಮಗೆ ಬೇಕಿಲ್ಲ. ಬೆಂಗಳೂರನ್ನು ಅಪರಾಧದ ರಾಜಧಾನಿಯನ್ನಾಗಿ ಸಿದ್ದರಾಮಯ್ಯ ಮಾಡಿದ್ದಾರೆ. ಅವರ ಶಿಷ್ಯ ಬೈರತಿ ಬಸವರಾಜ್ ಕೃಷ್ಣರಾಜಪುರವನ್ನು ಗಾಂಜಾ ರಾಜಧಾನಿಯನ್ನಾಗಿ ಮಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ರಾಹುಲ್‌ ಗಾಂಧಿ ಕಾಲಿಟ್ಟ ಕಡೆಯಲ್ಲೆಲ್ಲ ಕಾಂಗ್ರೆಸ್‌ ಸೋಲು ಕಂಡಿದೆ. ಪ್ರಧಾನಿ ಮೋದಿ ಹಾಗೂ ಮೋದಿ ಮತ್ತು ಯಡಿಯೂರಪ್ಪ ಪ್ರಚಾರ ನಡೆಸಿದ ಕಡೆಗಳಲ್ಲಿ ಹ್ಯಾಟ್ರಿಕ್‌ ಗೆಲುವು ಲಭಿಸಿದೆ. ಈಶಾನ್ಯ ರಾಜ್ಯಗಳಲ್ಲೂ ಬಿಜೆಪಿ ಗೆದ್ದಿದೆ. ಕರ್ನಾಟಕದಲ್ಲೂ ಕಮಲ ಅರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಆರ್.ಅಶೋಕ, ‘ರಾಜ್ಯ ಸರ್ಕಾರ ಕುತಂತ್ರ ರಾಜಕಾರಣ ಮಾಡುತ್ತಿದ್ದು ಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದೆ. ಮಠ ಮಾನ್ಯಗಳನ್ನು ತಮ್ಮ ಹದ್ದುಬಸ್ತಿಗೆ ಪಡೆಯುವ ಹುನ್ನಾರ ನಡೆಸುತ್ತಿದೆ. ನಾಲ್ಕು ವರ್ಷಗಳಿಂದ ನಿದ್ದೆಯಲ್ಲಿದ್ದ ಸಿದ್ದರಾಮಯ್ಯ ಎಚ್ಚೆತ್ತಿದ್ದಾರೆ. ಮುಂದೆ ಮುಖ್ಯಮಂತ್ರಿ ಆಗುವುದಿಲ್ಲ ಎಂಬುದನ್ನು ಅರಿತು ತರಾತುರಿಯಲ್ಲಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

ಶಾಸಕ ಅರವಿಂದ ಲಿಂಬಾವಳಿ, ‘ರಾಜ್ಯ ಸರ್ಕಾರವು ನಗರದ ಹೊರವಲಯದ ಪ್ರದೇಶಗಳಿಗೆ ಮೂಲಸೌಕರ್ಯ ಕಲ್ಪಿಸಿಲ್ಲ. ನಗರದ ಉಪನಗರ ರೈಲು ಯೋಜನೆಗೆ ₹17 ಸಾವಿರ ಕೋಟಿ ನೀಡುವುದಾಗಿ ಕೇಂದ್ರ ಪ್ರಕಟಿಸಿದೆ. ಯೋಜನೆಯ ಅರ್ಧ ಪಾಲು ಭರಿಸಬೇಕಿದ್ದ ರಾಜ್ಯ ಸರ್ಕಾರ, ₹300 ಕೋಟಿಯಷ್ಟೇ ನೀಡಿದೆ’ ಎಂದು ಟೀಕಿಸಿದರು.

ವಿಜಿನಾಪುರದ ಕುವೆಂಪು ಕ್ರೀಡಾಂಗಣದಿಂದ ವಿಜಿನಾಪುರ ಮುಖ್ಯರಸ್ತೆ, ರಾಮಮೂರ್ತಿನಗರ, ವಡ್ಡರಪಾಳ್ಯ, ಅಕ್ಷಯನಗರ, ಕೆ.ಆರ್.ಪುರದರೆಗೆ ಪಾದಯಾತ್ರೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT