ಐವರು ಯುವಕರ ಬಂಧನ, ₹2.7 ಲಕ್ಷ ಮೌಲ್ಯದ ವಸ್ತುಗಳು ವಶ

7
11 ದೇವಾಲಯಗಳಲ್ಲಿ ಕಳವು ಪ್ರಕರಣ ಭೇದಿಸಿದ ಗುಂಡ್ಲುಪೇಟೆ ಪೊಲೀಸರು‌

ಐವರು ಯುವಕರ ಬಂಧನ, ₹2.7 ಲಕ್ಷ ಮೌಲ್ಯದ ವಸ್ತುಗಳು ವಶ

Published:
Updated:
Prajavani

ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ ಹಾಗೂ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕುಗಳ 11 ದೇವಸ್ಥಾನಗಳಲ್ಲಿ ನಡೆದಿರುವ ಕಳವು ಪ್ರಕರಣವನ್ನು ಭೇದಿಸಿರುವ ಗುಂಡ್ಲುಪೇಟೆ ಪೊಲೀಸರು, ಐವರು ಯುವಕರನ್ನು ಬಂಧಿಸಿದ್ದಾರೆ. 

ಅವರ ಬಳಿಯಿಂದ ₹2.7 ಲಕ್ಷ ಮೌಲ್ಯದ 2 ಕೆಜಿಯಷ್ಟು ಭಾರತದ ಬೆಳ್ಳಿ ಮುಖವಾಡಗಳು, ಹಿತ್ತಾಳೆ ದೀಪಗಳು ಸೇರಿದಂತೆ ಇನ್ನಿತರ ದೇವಾಲಯದ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸಿರುವ ಐದು ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ. 

ಚಾಮರಾಜನಗರ ತಾಲ್ಲೂಕಿನ ತೆಂಕಲ ಮೋಳೆ ಗ್ರಾಮದ ಮನುಕುಮಾರ ಅಲಿಯಾಸ್‌ ಮನು (21) ಮತ್ತು ಸುರೇಶ್‌ (19), ನಂಜನಗೂಡು ತಾಲ್ಲೂಕಿನ ತೊರವಳ್ಳಿ ಮೋಳೆಯ ಗ್ರಾಮದವರಾದ ಮಹೇಶ (21), ಮಹದೇವಸ್ವಾಮಿ ಅಲಿಯಾಸ್‌ ನಾಗೇಂದ್ರ ಅಲಿಯಾಸ್‌ ನಾಗು (26) ಮತ್ತು ಅದೇ ತಾಲ್ಲೂಕಿನ ಕಡಕೋಳ ಗ್ರಾಮದ ಅಶೋಕ (19) ಬಂಧಿತರು. ಪೊಲೀಸರು ಸೋಮವಾರ ಐವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಎರಡು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ 3, ಗುಂಡ್ಲುಪೇಟೆ ಠಾಣೆಯಲ್ಲಿ 1, ಚಾಮಾರಾಜನಗರ ಗ್ರಾಮಾಂತರ ಠಾಣೆಯಲ್ಲಿ 2, ರಾಮಸಮುದ್ರ, ಸಂತೇಮರಹಳ್ಳಿ ಹಾಗೂ ಕುದೇರು ಠಾಣೆಗಳಲ್ಲಿ ತಲಾ 1 ಹಾಗೂ ನಂಜನಗೂಡು ತಾಲ್ಲೂಕಿನ ಕವಲಂದೆ ಠಾಣೆಯಲ್ಲಿ 2 ದೇವಸ್ಥಾನ ಕಳವು ಪ್ರಕರಣಗಳು ದಾಖಲಾಗಿದ್ದವು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ಧರ್ಮೇಂದರ್‌ ಕುಮಾರ್‌ ಮೀನಾ ಅವರು ಮಂಗಳವಾರ ಪೊಲೀಸರು ನಡೆಸಿದ ಕಾರ್ಯಾಚರಣೆ ಬಗ್ಗೆ ವಿವರ ನೀಡಿದರು.

‘ಕಳೆದ ವರ್ಷಾಂತ್ಯದಲ್ಲಿ, ಅದರಲ್ಲೂ ಅಕ್ಟೋಬರ್‌ನಿಂದೀಚೆಗೆ ಚಾಮರಾಜನಗರ ಉಪ ವಿಭಾಗ ವ್ಯಾಪ್ತಿಯಲ್ಲಿ ಹಲವು ದೇವಾಲಯಗಳಲ್ಲಿ ಕಳ್ಳತನ ನಡೆದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳ ಪತ್ತೆಗೆ ಗುಂಡ್ಲುಪೇಟೆಯ ಸರ್ಕಲ್‌ ಇನ್‌ಸ್ಪೆಕ್ಟರ್‌ ಎಚ್‌.ಎನ್‌. ಬಾಲಕೃಷ್ಣ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. 15 ದಿನಗಳಿಂದ ತೀವ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

‘ಐವರು ಆರೋಪಿಗಳು 11 ಪ್ರಕರಣಗಳಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ದೇವಸ್ಥಾನದ ಹುಂಡಿಗಳಿಂದ ₹47 ಸಾವಿರ ನಗದು ಕದ್ದಿದ್ದಾರೆ. ಅದನ್ನು ಖರ್ಚು ಮಾಡಿದ್ದಾರೆ. 2 ಕೆಜಿ ತೂಕದ ಬೆಳ್ಳಿಯ ಮುಖವಾಡಗಳು, 6 ಹಿತ್ತಾಳೆ ದೀಪಾಲೆ ಕಂಬಗಳು, 2 ಪೂಜಾತಟ್ಟೆಗಳು, 2 ಕಂಚಿನ ಗಂಟೆಗಳು, 2 ಯುಪಿಎಸ್‌ ಬ್ಯಾಟರಿಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳನ್ನೆಲ್ಲ ಅಡವು ಇಟ್ಟಿದ್ದರು. ಇವುಗಳ ಮೌಲ್ಯ ₹2.70 ಲಕ್ಷ. ಆರೋಪಿಗಳು ಕೃತ್ಯಕ್ಕೆ ಬಳಸಿರುವ ಐದು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳನ್ನು ಲೋಹ ವಸ್ತುಗಳನ್ನು ಮಾರಿ ಖರೀದಿಸಿದ್ದರೇ ಎಂಬ ಬಗ್ಗೆ ತನಿಖೆ ನಡೆಸಿಲ್ಲ’ ಎಂದು ಎಸ್‌ಪಿ ಹೇಳಿದರು.

‘ಗುಂಡ್ಲುಪೇಟೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಎಚ್‌.ಎನ್‌. ಬಾಲಕೃಷ್ಣ ಅವರ ನೇತೃತ್ವದಲ್ಲಿ  ತೆರಕಣಾಂಬಿ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಸಿ.ವೀರಭದ್ರಪ್ಪ, ಚಿಕ್ಕರಾಜಶೆಟ್ಟಿ, ಎಎಸ್‌ಐಗಳಾದ ಕೆ.ನಾಗರಾಜು, ಹೆಡ್ ಕಾನ್‌ಸ್ಟೆಬಲ್‌ಗಳಾದ ಪಿ.ಜಿ. ಉಮೇಶ್‌, ಎಲ್‌. ರಾಜೀವ, ಎಂ.ಮಹೇಶ್, ಕಾನ್‌ಸ್ಟೆಬಲ್‌ಗಳಾದ ಅಜಿತ್‌ ಕುಮಾರ್‌, ಜಿ.ಮಲ್ಲೇಶ್‌, ಚಾಲಕರಾದ ಜಗದೀಶ್‌, ನಾಗೇಶ್‌ ಹಾಗೂ ಇತರ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.

ಪ್ರಕರಣ ಭೇದಿಸಿರುವ ತಂಡಕ್ಕೆ ಸೂಕ್ತ ಬಹುಮಾನ ನೀಡುತ್ತೇವೆ ಎಂದು ಧರ್ಮೇಂದರ್‌ ಕುಮಾರ್‌ ಮೀನಾ ತಿಳಿಸಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಡಿವೈಎಸ್‌ಪಿ ಸಿ.ಟಿ. ಜಯಕುಮಾರ್ ಇದ್ದರು.

‘ಶೋಕಿಗಾಗಿ ಕಳ್ಳತನ’
‘ಬಂಧಿತ ಐವರು ಕೂಡ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದವರು. ಆರೋಪಿಗಳಲ್ಲಿ ಕೆಲವರು ಒಂದೇ ಗ್ರಾಮದವರಾಗಿದ್ದು, ಪರಸ್ಪರ ಪರಿಚಯ ಇದ್ದವರು. ಮೋಜು ಮಸ್ತಿ ಮಾಡಲು ಹಣಕ್ಕಾಗಿ ದೇವಸ್ಥಾನದಲ್ಲಿ ಕಳವು ಮಾಡುತ್ತಿದ್ದರು. ಹೆಚ್ಚು ಭದ್ರತೆ ಇಲ್ಲದ ಮತ್ತು ಊರಿನಿಂದ ಹೊರಗಿರುವ ದೇವಾಲಯಗಳನ್ನೇ ಗುರಿಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದರು’ ಎಂದು ಧರ್ಮೇಂದರ್‌ ಕುಮಾರ್‌ ಮೀನಾ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.  

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !