ಮಂಗಳವಾರ, ಏಪ್ರಿಲ್ 7, 2020
19 °C

ಕಾಫಿ ಕಪ್‌ ಒಳಗೇನಿದೆ?

ರಶ್ಮಿ ಎಸ್‌ Updated:

ಅಕ್ಷರ ಗಾತ್ರ : | |

Prajavani

ನೀವು ಹೀರುವ ಕಾಫಿ, ಟರ್ಕಿಶ್ ಕಾಫಿಯಾಗಿದ್ದಲ್ಲಿ ನಿಮ್ಮ ಭೂತ, ವರ್ತಮಾನ, ಭವಿಷ್ಯ ಎಲ್ಲವೂ ಅದರಲ್ಲಿ ಅಡಗಿರುತ್ತದೆ..!

ಹೌಹಾರದಿರಿ.. ಇದು ಸತ್ಯ. ನಮ್ಮಲ್ಲಿ ಕವಡೆ ಹಾಕಿ, ಪ್ರಶ್ನೆ ಕೇಳುವಂತೆ ಟರ್ಕಿ, ಲೆಬನಾನ್‌, ಇಸ್ತಾನ್‌ಬುಲ್‌ನಲ್ಲಿ ಕಾಫಿ ಹೀರಲು ನೀಡಿ, ಪರಿಹಾರ ನೀಡುತ್ತಾರೆ. ಕಾಫಿ ಕಪ್ಪಿನೊಳಗೇನಿದೆ? ಟರ್ಕಿಶ್‌ ಕಾಫಿಗೂ ಬೆಂಗಳೂರಿಗೂ ಏನು ಸಂಬಂಧ?

ಕಾಫಿ ಗುಟಕರಿಸುವ ಮಾತು ಬಂದಾಗ ಪಾದಗಳು ಎಲ್ಲೆಲ್ಲಿಯೂ ಹೋಗುತ್ತವೆ. ಕರಿಕಾಫಿಯ ಘಮದ ಹಿಂದೆ ಓಡುವ ಮನಸು ವಿವಿಧ ಬಗೆಯ ಕಾಫಿಗಳನ್ನು ಹುಡುಕುವಾಗ ನಗರದ ‘ಜಸ್ಟ್‌ ಬಿ’ ಕೆಫೆ ನನ್ನ ಗಮನ ಸೆಳೆದಿತ್ತು. ಬದಾಮಿ ಹಾಲಿನಿಂದ ಕಾಫಿ ತಯಾರಿಸುವ ಈ ಕೆಫೆಯಲ್ಲಿ ಯಾವುದೂ ಡೈರಿ ಉತ್ಪನ್ನದಿಂದಾಗುವುದಿಲ್ಲ. ಇಲ್ಲಿಯೇ ಈ ಟರ್ಕಿಶ್‌ ಕಾಫಿ ರೀಡರ್‌ ಶಿಪೆ ಮೌಲುಷಿ ಬಂದಿದ್ದರು!

ಕುತೂಹಲದ ಈ ಭೇಟಿ ವಿಶ್ವದ ಒಂದು ಸೋಜಿಗದ ಮುಂದೆ ಕೂರಿಸುವಂತೆ ಮಾಡಿತ್ತು. ಅರಳುಕಂಗಳ ಶಿಪೆ ಸಕಾರಾತ್ಮಕ ಭಾವಗಳ ಸಾಕಾರ ಮೂರ್ತಿ. ಹೋದೊಡನೆ ಪುಟ್ಟ ಕಪ್‌ನಲ್ಲಿ ಟರ್ಕಿಶ್‌ ಕಾಫಿ ನೀಡಿದರು. ಅತಿ ಗಾಢವಾದ ಆ ಕಾಫಿಗೆ ಹಾಲು ಬೇಕೆನಿಸುವುದೇ ಇಲ್ಲ. ಕಾಫಿ ಗುಟಕರಿಸುತ್ತ ಕಪ್‌ ಖಾಲಿಯಾಗುವಂತಾಗುತ್ತದೆ. ಆಗ ಆ ಕಪ್‌ ಅನ್ನು ಸಾಸರ್‌ಗೆ ಬೋರಲಿಡುತ್ತಾರೆ.

ಆ ಸಾಸರ್‌ನ ಒಳಾಕಾರದಲ್ಲಿ ಉಳಿದ ಕಾಫಿ ಒಂದು ರೂಪು ತಾಳುತ್ತದೆ. ನಂತರ ಅದೇ ಕಾಫಿ ಕಪ್‌ ಅನ್ನು ಒಂದು ಟಿಶ್ಯು ಪೇಪರ್ ಮೇಲೆ ಬೋರಲಿಡುತ್ತಾರೆ. ಕಾಫಿ ಕಪ್‌ನ ಹೊರ ಮೈ ಆವರಣ ಅಲ್ಲಿ ರೂಪುಗೊಳ್ಳುತ್ತದೆ. ಕಾಫಿಯ ಕಪ್ಪಿನ ಒಳ ಮಗ್ಗುಲಲ್ಲಿ ಒಂದು ಚಿತ್ರವೂ ಮೂಡಿರುತ್ತದೆ.
ಸಾಸರ್‌ ಮೇಲಿನ ವರ್ತುಲಾಕಾರದ ಸ್ವರೂಪ ನಮ್ಮ ಜೀವನಪಥವನ್ನು ಸೂಚಿಸುತ್ತದೆ. ನಮ್ಮ ಗುಣಸ್ವಭಾವವನ್ನು ಇದರಿಂದ ವಿಶ್ಲೇಷಿಸಬಹುದಾಗಿದೆ.

ಟಿಶ್ಯು ಪೇಪರ್ ಮೇಲೆ ನಮ್ಮ ಆತ್ಮದ ಸ್ವರೂಪವನ್ನು ವಿಶ್ಲೇಷಿಸಲಾಗುತ್ತದೆ. ಜೊತೆಗೆ ಜೀವನ ಪಯಣದ ಬಗೆಗೆ ವರ್ಷಾನುಸಾರ ವಿಶ್ಲೇಷಿಸುತ್ತಾರೆ. ಬಾಲ್ಯಾವಸ್ಥೆ, ಕಾಲೇಜು ಜೀವನ, ದಾಂಪತ್ಯ ಜೀವನ, ವೃತ್ತಿ ಜೀವನ ಇವೆಲ್ಲವೂ ಈ ಹೊರಮೈನಲ್ಲಿ ನಮ್ಮ ಉಸಿರಾಟದ ಮೂಲಕ ವರ್ತುಲಾಕಾರವನ್ನು ಸೃಷ್ಟಿಸಿರುತ್ತದೆ.
ಒಳ ಮೈನಲ್ಲಿ ನಮ್ಮ ಸಂಗಾತಿಯ ಗುಣಸ್ವಭಾವ, ಬಾಂಧವ್ಯದ ಸ್ವರೂಪ, ದಾಂಪತ್ಯ ಜೀವನದ ಬಗೆಗಿನ ವಿವರಗಳನ್ನು ಬಿಟ್ಟುಕೊಡುತ್ತದೆ ನಮ್ಮ ಉಸಿರು.

ಇಡೀ ರೀಡಿಂಗ್‌ ಒಂದು ಗಂಟೆ ಅವಧಿಯದ್ದು. ಕಾಫಿ ಗುಟುಕರಿಸಿದ ನಂತರ ಈ ವಿಶ್ಲೇಷಣೆ ಮುಗಿಸುತ್ತಾರೆ. ನಡುನಡುವೆ ನಮ್ಮ ಸಮಸ್ಯೆಗಳ ಸುಳಿಯಿಂದಾಚೆ ಬಂದು, ನಮ್ಮತನವನ್ನು ಸಂಭ್ರಮಿಸುವುದು ಹೇಗೆ ಎಂಬ ಬಗ್ಗೆ ಶಿಪೆ ಮಾತನಾಡುತ್ತಾರೆ. ಅವರ ಇನಿಧ್ವನಿ, ಕಂಗಳೊಳಗಿನ ಮಿಂಚು ಸಮಸ್ಯೆಗಳಿಗೆ ಪರಿಹಾರವಿದೆ ಎಂಬ ಭರವಸೆಯಂತೂ ಮೂಡಿಸುತ್ತದೆ. ಕಾಫಿ ಕಪ್‌ ರೀಡರ್‌ ಶಿಪೆ (Shiqpe Moulushi) ಸಕಾರಾತ್ಮಕ ಚಿಂತನೆ ನಿಧಾನವಾಗಿ ಆವರಿಸಿಕೊಳ್ಳುತ್ತದೆ. ಬೆಂಗಳೂರಿನ ‘ಜಸ್ಟ್‌ ಬಿ’ ಕೆಫೆಯಲ್ಲಿ ಶಿಪೆ ಮೌಲುಷಿ ಮತ್ತೆ ಅಕ್ಟೋಬರ್‌ನಲ್ಲಿ ಭೇಟಿ ನೀಡಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು