ವಿಜಯಪುರಕ್ಕೆ ಜಿಗಜಿಣಗಿ ಕೊಡುಗೆ ಅಪಾರ: ತಾರಾ

ಮಂಗಳವಾರ, ಏಪ್ರಿಲ್ 23, 2019
27 °C

ವಿಜಯಪುರಕ್ಕೆ ಜಿಗಜಿಣಗಿ ಕೊಡುಗೆ ಅಪಾರ: ತಾರಾ

Published:
Updated:

ವಿಜಯಪುರ: ‘ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ವಿಜಯಪುರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಚಲನಚಿತ್ರ ನಟಿ ತಾರಾ ಹೇಳಿದರು.

‘ವಿಜಯಪುರ ಯಾವಾಗಲೂ ಬಿಜೆಪಿಗೆ ವಿಜಯವನ್ನು ಕೊಡುವ ಕ್ಷೇತ್ರ. ಈ ನೆಲದಲ್ಲಿ ವಿಜಯಲಕ್ಷ್ಮೀ ಬಿಜೆಪಿಗೆ ಒಲಿದಿದ್ದಾಳೆ’ ಎಂದು ಗುರುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವಿಜಯಪುರದಲ್ಲಿ ಬಿಸಿಲ ಝಳ ಎಷ್ಟು ಹೆಚ್ಚಿದೆ, ಅಷ್ಟೇ ಪ್ರೀತಿಯೂ ಇಲ್ಲಿನ ಜನರಲ್ಲಿದೆ. ಒಳ್ಳೆಯ ಮನಸ್ಸಿನ ಜನ ಇಲ್ಲಿದ್ದಾರೆ’ ಎಂದರು.

‘ಜಿಗಜಿಣಗಿ ಸಮರ್ಥ ನಾಯಕ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಸ್ಥಳೀಯ ಶಾಸಕರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು ಮಾಡುವ ಕೆಲಸವನ್ನು ಸಂಸದರು ಮಾಡಲಿಲ್ಲ ಎಂಬ ಆಕ್ಷೇಪಣೆಗಳಿಗೆ ಯಾರೂ ಉತ್ತರಿಸಲು ಸಾಧ್ಯವಿಲ್ಲ’ ಎನ್ನುವ ಮೂಲಕ ಕೇಂದ್ರ ಸಚಿವರ ಟೀಕಾಕಾರರ ಕಾಲೆಳೆದರು.

‘ಎಲ್ಲೆಡೆಯೂ ಜನರೇ ಸ್ವಯಂಪ್ರೇರಿತವಾಗಿ ಮತ್ತೊಮ್ಮೆ ಮೋದಿ ಎಂಬ ಆಶಯ ವ್ಯಕ್ತಪಡಿಸುತ್ತಿದ್ದಾರೆ. ಮತ ನೀಡಿ ಎಂದು ಕೇಳುವ ಮೊದಲೇ, ಜನರೇ ಈ ಬಾರಿ ಬಿಜೆಪಿ ಎಂದು ಹೇಳುತ್ತಿದ್ದಾರೆ’ ಎಂದು ತಾರಾ ಹೇಳಿದರು.

‘ಮುನಿಸು ಸಹಜ. ಮನೆ ಎಂದ ಮೇಲೆ ಇದೆಲ್ಲಾ ಇದ್ದಿದ್ದೇ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಯತ್ನಾಳ ಸಹ ಕೆಲಸ ಮಾಡಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ತಾರಾ ಉತ್ತರಿಸಿದರು.

‘ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿದ್ದು ಬಿಜೆಪಿ. ಜಿಲ್ಲಾ ಪಂಚಾಯ್ತಿ ಮೊದಲಾದ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ್ದು ಬಿಜೆಪಿ. ರಕ್ಷಣೆ, ವಿದೇಶಾಂಗ ಖಾತೆ ಸೇರಿದಂತೆ ಮೊದಲಾದ ಮಹತ್ವದ ಖಾತೆಗಳನ್ನು ಮಹಿಳೆಯರಿಗೆ ನೀಡಿದ್ದು ಬಿಜೆಪಿ. ಮುಂದಿನ ದಿನಗಳಲ್ಲಿ ವಿಧಾನಸಭೆ, ಲೋಕಸಭೆಯಲ್ಲೂ ಮೀಸಲಾತಿ ನೀಡಲಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಮ್ಮ ಜೋಗೂರ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಸೌಮ್ಯಾ ಕಲ್ಲೂರ, ಮುಖಂಡರಾದ ಅಶ್ವಿನಿ ಪಟ್ಟಣಶೆಟ್ಟಿ, ಮಂಜುಳಾ ಅಂಗಡಿ, ಅನುರಾಧಾ ಕಲಾಲ, ರಜನಿ ಸಂಬಣ್ಣಿ, ಗೀತಾ ಕುಗನೂರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !