ರೌಡಿ ಪರೇಡ್‌ಗೆ ಗೈರಾದರು, ಕಳ್ಳತನ ಮಾಡಿ ಸಿಕ್ಕಿಬಿದ್ದರು

7

ರೌಡಿ ಪರೇಡ್‌ಗೆ ಗೈರಾದರು, ಕಳ್ಳತನ ಮಾಡಿ ಸಿಕ್ಕಿಬಿದ್ದರು

Published:
Updated:
Deccan Herald

ಬೆಂಗಳೂರು: ಸುಲಿಗೆ ಹಾಗೂ ಮನೆಯಲ್ಲಿ ಕಳವು ಮಾಡಿದ್ದ ಆರೋಪದಡಿ ರೌಡಿ ಮಹಮ್ಮದ್ ಯೂನಸ್ ಹಾಗೂ ಆತನ ಸಹಚರ ಮಹಮ್ಮದ್ ರಿಯಾಜ್‌ ಶೇಖ್‌ ಅಲಿಯಾಸ್‌ ಬಾಂಬೆನನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.

‘ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್, ಸಿಸಿಬಿ ಕಚೇರಿಯಲ್ಲಿ ಇತ್ತೀಚೆಗೆ ರೌಡಿಗಳ ಪರೇಡ್ ನಡೆಸಿದ್ದರು. ರೌಡಿಪಟ್ಟಿಯಲ್ಲಿ ಹೆಸರಿದ್ದರೂ ಪರೇಡ್‌ಗೆ ಗೈರಾಗಿದ್ದ ಆರೋಪಿಗಳು, ತಲೆಮರೆಸಿಕೊಂಡು ಓಡಾಡುತ್ತಿದ್ದರು. ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ವೇಳೆಯಲ್ಲೇ ಅವರಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೃತ್ಯಗಳನ್ನು ಬಾಯ್ಬಿಟ್ಟರು’ ಎಂದು ಪೊಲೀಸರು ಹೇಳಿದರು.   

‘ಸುಲಿಗೆ, ಮನೆಯಲ್ಲಿ ಕಳವು ಹಾಗೂ ದ್ವಿಚಕ್ರ ವಾಹನ ಕಳವು ಸಂಬಂಧ ಆರೋಪಿಗಳ ವಿರುದ್ಧ ಚಾಮರಾಜಪೇಟೆ, ಚಂದ್ರಾ ಲೇಔಟ್, ಬ್ಯಾಟರಾಯನಪುರ, ಸಿದ್ದಾಪುರ ಠಾಣೆಗಳಲ್ಲಿ 9 ಪ್ರಕರಣಗಳು ದಾಖಲಾಗಿದ್ದವು. ಬಂಧಿತ ಆರೋಪಿಗಳಿಂದ ₹4 ಲಕ್ಷ ಮೌಲ್ಯದ 63 ಗ್ರಾಂ ಚಿನ್ನಾಭರಣ, 5 ದ್ವಿಚಕ್ರ ವಾಹನ ಹಾಗೂ ₹6,500 ನಗದು ಜಪ್ತಿ ಮಾಡಲಾಗಿದೆ’ ಎಂದರು.

‘ಸುಲಿಗೆಗೆಂದೇ ಆರೋಪಿಗಳು, ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದರು. ಅವುಗಳಲ್ಲೇ ಸಂಚರಿಸಿ ಕೃತ್ಯ ಎಸಗುತ್ತಿದ್ದರು. ಸೇಲ್ಸ್‌ಮನ್‌ಗಳು ಹಾಗೂ ಡೆಲಿವರಿ ಬಾಯ್‌ಗಳನ್ನು ಗುರಿಯಾಗಿಸಿಕೊಂಡು ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದರು. ಒಂಟಿಯಾಗಿ ಓಡಾಡುತ್ತಿದ್ದ ಮಹಿಳೆಯರನ್ನು ಬೆದರಿಸಿ ಚಿನ್ನದ ಸರ ದೋಚುತ್ತಿದ್ದರು’ ಎಂದರು.

‘ಪಾರ್ವತಿಪುರದ ನಿವಾಸಿಯಾದ ಮಹಮ್ಮದ್ ಯೂನಸ್‌ನನ್ನು 2017ರಲ್ಲಿ ಕಳ್ಳತನ ಪ್ರಕರಣ ಸಂಬಂಧ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಜಾಮೀನು ಮೇಲೆ ಹೊರಬಂದಿದ್ದ ಆತ, ಸಹಚರರ ಜೊತೆ ಸೇರಿ ಅಪರಾಧ ಕೃತ್ಯ ಎಸಗುವುದನ್ನು ಮುಂದುವರಿಸಿದ್ದ. ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕರಣಗಳ ವಿಚಾರಣೆಗೂ ಗೈರಾಗುತ್ತಿದ್ದ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !