ಕೊಳ್ಳೋರೇ ಇಲ್ಲ; ಮಾರೋರೇ ಎಲ್ಲ..!

7
ಕಟುಕರಿಗೆ ಮಾರಬಾರ್ದು ಅಂತ ಇಲ್ಲಿ ತನ್ಕ ಬಂದೀವಿ... ಇಲ್ಲೀನೂ ಕಾಸಿಗೆ ಕಡೆಯಾಗಿ ಕೇಳ್ತ್ವಾರೆ...!

ಕೊಳ್ಳೋರೇ ಇಲ್ಲ; ಮಾರೋರೇ ಎಲ್ಲ..!

Published:
Updated:
Prajavani

ವಿಜಯಪುರ: ಉತ್ತರ ಕರ್ನಾಟಕದ ಬೃಹತ್‌ ಜಾನುವಾರು ಜಾತ್ರೆ ಎಂಬ ಖ್ಯಾತಿ ಹೊಂದಿರುವ, ವಿಜಯಪುರದ ಸಿದ್ಧೇಶ್ವರರ ಜಾನುವಾರು ಜಾತ್ರೆಯ ಸ್ವರೂಪವೇ ಈ ಬಾರಿ ಬದಲಾಗಿದೆ. ಎತ್ತ ಹೋದರೂ ಖರೀದಿದಾರರೇ ಗೋಚರಿಸದಾಗಿದ್ದಾರೆ. ನೆರೆದಿರುವವರೆಲ್ಲರೂ ತಮ್ಮ ಜಾನುವಾರು ಮಾರಾಟಕ್ಕೆ ಮುಗಿ ಬೀಳುತ್ತಿದ್ದಾರೆ.

ರೈತರಲ್ಲಿ ಹುರುಪಿಲ್ಲ. ರಾಸುಗಳನ್ನು ಖರೀದಿಸುವ ಹುಮ್ಮಸ್ಸು ಇಲ್ಲವಾಗಿದೆ. ದಾವಣಗೆರೆ, ರಾಯಚೂರು, ಕೊಪ್ಪಳ ಭಾಗದ ರೈತ ಸಮುದಾಯ ಖರೀದಿಗೆಂದು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬಾರದಿರುವುದು; ಮಾರಾಟಗಾರರಲ್ಲಿ ತೀವ್ರ ನಿರಾಸೆ ಮೂಡಿಸಿದೆ.

ನೆರೆಯ ಮಹಾರಾಷ್ಟ್ರದ ರೈತ ವ್ಯಾಪಾರಿಗಳು ಖರೀದಿಗಾಗಿ ಮನಸ್ಸು ಮಾಡಿದರೂ; ಜಾನುವಾರು ಮೌಲ್ಯಕ್ಕಿಂತ ಅರ್ಧದಷ್ಟು ಕಡಿಮೆಗೆ ಬೇಡುತ್ತಿದ್ದಾರೆ. ಅವರು ಕೇಳಿದ ರೊಕ್ಕಕ್ಕೆ ಕೊಡಲಾಗದೆ, ವಾಪಸ್‌ ಮನೆಗೂ ಹೊಡೆದುಕೊಂಡು ಹೋಗಲಾಗದಂಥ ವಿಚಿತ್ರ ಸನ್ನಿವೇಶವನ್ನು ಜಾನುವಾರು ಮಾಲೀಕರು ಎದುರಿಸುತ್ತಿದ್ದಾರೆ.

ಮೇವಿನ ಬರ: ‘ದೊಡ್ಡ ಜಾತ್ರೆಯಿದು. ಮೇವಿನ ಬರ ನೀಗಿಸಿಕೊಳ್ಳಲಾಗದೆ ಇಲ್ಲಿಗೆ ಬಂದೀವಿ. ಒಂಬತ್ತು ತಿಂಗಳ ಹಿಂದೆ 9 ತಿಂಗಳ ಪ್ರಾಯದ ಜೋಡಿಯನ್ನು ₹ 80,000ಕ್ಕೆ ಖರೀದಿಸಿದ್ದೆ. ತಿಂಗಳಿಗೆ ಒಂದ್ ಕ್ವಿಂಟಲ್‌ ಶೇಂಗಾಹಿಂಡಿ, ಮೆಕ್ಕೆಜೋಳ ತಿನ್ತಾವೆ. ಇದಕ್ಕೆ ₹ 6000 ಬೇಕಿದೆ.

ಇನ್ನೂ ಮೇವು ಕೊಂಡು ತರಲಾಗದ ಸ್ಥಿತಿ ನನ್ನದಾಗಿದೆ. ಜೋಡಿಗೆ ₹ 1.30 ಲಕ್ಷ ಹೇಳ್ತ್ವೀನಿ. ಖರೀದಿಗೆ ಬರೋರು ಭಾರಿ ರಾಸು ಅನ್ತಾರೆ. ₹ 50,000ಕ್ಕೆ ಬೇಡ್ತ್ವಾರೆ. ಹೊಲ ನೋಂದು ಮಾಡಿ ಸಾಲ ಪಡೆದ್ವೀನಿ. ಇತ್ತ ಅದನ್ನು ತೀರಿಸಲಾಗುತ್ತಿಲ್ಲ. ಬೆಳೆಯೂ ಕೈ ಸೇರಲಿಲ್ಲ. ಬರದ ಹೊಡೆತಕ್ಕೆ ತತ್ತರಿಸಿರುವೆ. ಬಡ್ಡಿ ಕಟ್ಟದಿದ್ದಕ್ಕೆ ಸಾಹುಕಾರ್ರು ಅಸಹ್ಯ ಮಾಡ್ತ್ವಾರೆ.

ಜೋಡಿ ರಾಸು ಮಾರೋಣ ಅಂದ್ರೂ; ತಗೊಳ್ಳೋರೆ ಮುಂದೆ ಬರ್ತಿಲ್ಲ. ದಿಕ್ಕೇ ತೋಚದಂಗಾಗೈತಿ’ ಎಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಕಟನೂರು ಮಜರೆಯ ಸುಟ್ಟೊಟ್ಟಿ ಗ್ರಾಮದ ಮುತ್ತಪ್ಪ ಗಂಗಪ್ಪ ಮಾಳಿ ‘ಪ್ರಜಾವಾಣಿ’ ಬಳಿ ತಮ್ಮ ಅಸಹಾಯಕತೆ ಬಿಚ್ಚಿಟ್ಟರು. ಇದಕ್ಕೆ ಜತೆಯಲ್ಲಿದ್ದ ಮಲ್ಲಪ್ಪ ಗಂಗಪ್ಪ ಬೀಳೂರು, ಸದಾಶಿವ ಭೀಮಪ್ಪ ರಬಕವಿ, ಇಲಾಹಿ ಅಹಮದ್‌ ಬಾಗೋಡಿ ದನಿಗೂಡಿಸಿದರು.

ಕೇಳಿದ್ರೂ ಖರೀದಿಸ್ತಿಲ್ಲ: ‘ಊರಲ್ಲೇ ವ್ಯಾಪಾರಕ್ಕೆಂದು ಬಂದ ಕಟುಕರಿಗೆ ಕೊಡ್ಬಾರ್ದು. ನಮ್ಗ ಪಾಪ ಸುತ್ಕೊಳ್ಳುತ್ತೆ ಅಂಥ ಸಾಕೋರ್‌ಗೆ ಮಾರೋಣ ಅಂದ್ಕೊಂಡು ಜಾತ್ರೆಗೆ ಬಂದ್ವೀನಿ. ₹ 40,000 ಬೆಲೆ ಬಾಳೋ ಹೋರಿಗ ₹ 11,000ಕ್ಕೆ ಕೇಳ್ಯಾರ. ಆದ್ರ ಇನ್ನೂ ತಗಂಡಿಲ್ಲ. ಹೊಳ್ಳಿ ಮನಿಗ ಹೊಡ್ಕೊಂಡ್‌ ಹೋಗ್ಲಿಕ್ಕೂ ಆಗ್ತಿಲ್ಲ. ಎಲ್ಲೀ ತನ್ಕ ನಂಗ ನೀಗುತ್ತೆ, ಅಲ್ಲೀವರ್ಗೂ ಸಾಕ್ತ್ವೀನಿ. ಆ ಮ್ಯಾಲ ಭಗವಂತನಿಗೆ ಬಿಟ್ಟಿದ್ದು’ ಎಂದು ತಿಕೋಟಾ ತಾಲ್ಲೂಕಿನ ಹುಬನೂರಿನ ಬಸವರಾಜ ಪಾರೆ ತಿಳಿಸಿದರು.

‘ಜಾತ್ರೀಗ ಬುಧವಾರವೇ ಬಂದೀವಿ. ₹ 30,000ದ ಆಕಳಿಗ ಇಲ್ಲಿ ತನ್ಕ ₹ 15,000ದ ಕಣಕಿ ಕೊಂಡು ಹಾಕ್ವೀನಿ. ನನ್ನಿಂದ ಇನ್‌ ಆಗ್ತಿಲ್ಲ. ಮಾರೋಣ ಅಂಥ ಇಲ್ಲಿಗೆ ಬಂದ್ರಾ ಕೇಳೋರೇ ಇಲ್ಲ’ ಎಂದು ಭೀಮನಗೌಡ ಬಿರಾದಾರ ಅಸಹಾಯಕತೆ ವ್ಯಕ್ತಪಡಿಸಿದರು.

‘ನಮ್ದು ಒಣಭೂಮಿ. ನೀರಿಗೆ ತ್ರಾಸೈತಿ. ಮೇವಿನ ಮಾತು ದೂರಾಯ್ತು. ಏನ್‌ ಮಾಡಲಾಗದೆ ಇಲ್ಲಿಗೆ ಮಾರಾಟಕ್ಕೆ ಬಂದ್ವೀ. ದನ ಕೇಳೋರೇ ಇಲ್ಲವಾಗ್ಯಾರೆ. ಊರಿಂದ ಬುತ್ತಿ ಕಟ್ಕೊಂಡು ಬಂದೀವಿ. ಈ ಬಾರಿ ನಮ್ಮೂರ ಸುತ್ತಮುತ್ತಲಿನ ಹಳ್ಳಿ ಜನರು ತಮ್ಮ ದನ ಹೊಡ್ಕೊಂಡು ಜಾತ್ರೆಗೆ ಬಂದ್ವಾರೆ. ಆದ್ರೆ ವ್ಯಾಪಾರನೇ ಆಗ್ತಿಲ್ಲ’ ಎಂದು ಅಥಣಿ ತಾಲ್ಲೂಕಿನ ಮದಬಾವಿಯ ಗಜೇಂದ್ರ ಗೋಪಾಲ ಚೌಗುಲ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !