‘ಗಟ್ಟಿಯಾಗಿ ಓದಿದರಷ್ಟೇ ಅರ್ಥವಾಗುವುದು‘

7

‘ಗಟ್ಟಿಯಾಗಿ ಓದಿದರಷ್ಟೇ ಅರ್ಥವಾಗುವುದು‘

Published:
Updated:

* ನಾನು ಓದುವ ವೇಳೆ ಯಾರೂ ನನ್ನ ಕೋಣೆಗೆ ಬರಬಾರದು. ಗಲಾಟೆ ಮಾಡಬಾರದು. ಇದು ನನಗೆ ಬಾಲ್ಯದಿಂದಲೂ ಅಭ್ಯಾಸವಾಗಿ ಹೋಗಿದೆ. ಅಷ್ಟೇ ಅಲ್ಲದೇ ಬಾಯಿ ಬಿಟ್ಟು ಗಟ್ಟಿಯಾಗಿ ಓದಿದರೆ ಮಾತ್ರ ನನಗೆ ಅರ್ಥವಾಗುವುದು. ದಿನಪತ್ರಿಕೆಗಳನ್ನು ಮನಸ್ಸಿನಲ್ಲೇ ಓದುತ್ತೇನೆ. ಆದರೆ ಪರೀಕ್ಷೆಯ ಸಮಯದಲ್ಲಿ ಬೇಗ ಮುಗಿಯಲಿ ಎಂಬ ಕಾರಣಕ್ಕೆ ಗಟ್ಟಿಯಾಗಿ ಓದುತ್ತೇನೆ. ಈಗ ನಾನು ಹಾಸ್ಟೆಲ್‌ನಲ್ಲಿ ಓದುತ್ತಿದ್ದು ಮೊದಲಿನ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಬೇಕಾಗಿದೆ. ಆದರೆ ನನ್ನಿಂದ ಸಾಧ್ಯವಾಗುತ್ತಿಲ್ಲ.

ಅನುಷಾ ಎಚ್‌. ಜಿ., ಮೈಸೂರು

ಹೆಚ್ಚಿನ ವಿದ್ಯಾರ್ಥಿಗಳು ಇದೇ ರೀತಿ ಅಭ್ಯಾಸ ಮಾಡುತ್ತಾರೆ. ಹಾಗಾಗಿ ಇದು ಸಾಮಾನ್ಯ ಸಂಗತಿ ಮತ್ತು ನೀವು ಮನೆಯಲ್ಲಿ ಇದ್ದಾಗ ಇದನ್ನು ಪಾಲಿಸುವುದು ತುಂಬಾ ಸುಲಭ ಅಥವಾ ಹಾಸ್ಟೆಲ್‌ನಲ್ಲಿ ನಿಮಗೆಂದೇ ಪ್ರತ್ಯೇಕ ರೂಮ್ ಇದ್ದಾಗಲೂ ಇದನ್ನು ಪಾಲಿಸಬಹುದು. ನೀವು ಈಗ ಹಾಸ್ಟೆಲ್‌ನಲ್ಲಿದ್ದೀರಿ ಮತ್ತು ಅಲ್ಲಿ ಬೇರೆಯವರೊಂದಿಗೆ ರೂಮ್ ಹಂಚಿಕೊಳ್ಳಬೇಕು. ಹಾಗಾಗಿ ನೀವು ಗಟ್ಟಿಯಾಗಿ ಓದಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ನಿಧಾನಕ್ಕೆ ಮನಸ್ಸಿನಲ್ಲೇ ಓದಿಕೊಳ್ಳಲು ಅಭ್ಯಾಸ ಮಾಡಿ. ಪ್ರಾರಂಭದಲ್ಲಿ ಹಾಸ್ಟೆಲ್‌ನ ಬಾಲ್ಕನಿ, ಗಾರ್ಡನ್ ಏರಿಯಾ ಅಥವಾ ಸಾಮಾನ್ಯ ಸ್ಥಳದಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸಿ. ಸ್ವಲ್ಪ ಹೊತ್ತು ಮೌನವಾಗಿ, ಸ್ವಲ್ಪ ಹೊತ್ತು ಗಟ್ಟಿಯಾಗಿ ಓದಿಕೊಳ್ಳಿ. ನಂತರ ನಿಧಾನಕ್ಕೆ ಗಟ್ಟಿಯಾಗಿ ಓದುವ ಅಭ್ಯಾಸವನ್ನು ನಿಲ್ಲಿಸಿ. ಇದಕ್ಕೆ ಕೆಲ ಸಮಯ ಬೇಕು. ಆದರೆ ಖಂಡಿತ ನಿಮ್ಮಿಂದ ಸಾಧ್ಯ. ನಿಮಗೆ ಮನಸ್ಸಿನಲ್ಲೇ ಓದಿಕೊಳ್ಳಲು ಸಾಧ್ಯವಾಗುವವರೆಗೂ ನಿಮ್ಮ ರೂಮ್‌ಮೇಟ್ಸ್‌ಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ತಿಳಿಸಿ. ಗಟ್ಟಿಯಾಗಿ ಓದುವ ಅಭ್ಯಾಸವನ್ನು ನಿಲ್ಲಿಸಲು ಬರೆದುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ, ವಿಷಯವನ್ನು ಮನಸ್ಸಿನಲ್ಲೇ ಓದಿಕೊಳ್ಳಿ ಮತ್ತು ಬರೆಯಿರಿ. ನಿಮಗೆ ಯಾವ ಮಾರ್ಗ ಸೂಕ್ತ ಎನ್ನಿಸುವುದೋ ಅದನ್ನು ಅಭ್ಯಾಸ ಮಾಡಿ.

* ನನಗೆ 26 ವರ್ಷ. ಮದುವೆಯಾಗಿ ಮೂರು ವರ್ಷ ಆಯ್ತು. 2 ವರ್ಷದ ಮಗನಿದ್ದಾನೆ. ನನಗೆ ಅವನೆಂದರೆ ಪಂಚಪ್ರಾಣ. ಆದರೆ ನನಗೂ ನನ್ನ ಗಂಡನಿಗೂ ಸಣ್ಣ ಪುಟ್ಟ ವಿಷಯಕ್ಕೂ ಸದಾ ಜಗಳವಾಗುತ್ತಿರುತ್ತದೆ. ನನ್ನನ್ನು ತುಂಬಾ ಅಳಿಸುತ್ತಾರೆ. ಹತ್ತಿರಕ್ಕೂ ಸೇರಿಸುವುದಿಲ್ಲ. ಮಾತು ಆಡುವುದಿಲ್ಲ. ನನ್ನ ತಪ್ಪು ಇಲ್ಲದಿದ್ದರೂ ನಾನೇ ಕ್ಷಮೆ ಕೇಳುತ್ತೇನೆ. ನನ್ನನ್ನು ಅಳಿಸಿದ ನಂತರ ಕ್ಷಮಿಸುತ್ತಾರೆ. ನನಗೆ ಗಂಡ ಎಂದರೆ ಇಷ್ಟ, ಅವರಿಗೂ ನಾನು ಇಷ್ಟ. ಆದರೂ ಜಗಳ ಆಡುತ್ತೇವೆ. ನನಗೆ ಯಾವಾಗಲೂ ಸಾಯುವ ಯೋಚನೆ ಬರುತ್ತದೆ. ನಾನು ಜೀವನದಲ್ಲಿ ತುಂಬಾ ನೊಂದಿದ್ದೇನೆ. ನಾನು ಸತ್ತರೆ ನನ್ನ ಮಗನಿಗೆ ಯಾರೂ ಇಲ್ಲ. ಅವನ ಮುಖ ನೋಡಿ ಸುಮ್ಮನಾಗಿದ್ದೇನೆ. ಜೀವನದಲ್ಲಿ ಹೇಗೆ ಸುಖವಾಗಿರಬೇಕು ಎಂಬುದು ತಿಳಿಯುತ್ತಿಲ್ಲ. ‌

ಹೆಸರು, ಊರು ಬೇಡ

ನೀವೇ ತಿಳಿಸಿದಂತೆ ನಿಮ್ಮ ಮಗನೇ ನಿಮ್ಮ ಪ್ರಪಂಚ. ಅಂದ ಮೇಲೆ ಅವನೇ ಮುಖ್ಯ. ಹಾಗಾಗಿ ಅವನ ಚಟುವಟಿಕೆಗಳನ್ನೂ ಬೆಳವಣಿಗೆಯನ್ನೂ ಗಮನಿಸುತ್ತಿರಿ. ಕುಟುಂಬದಲ್ಲಿ ಎಲ್ಲಾ ಭಾವನೆಗಳು ಸಾಮಾನ್ಯ ಮತ್ತು ಮುಖ್ಯ. ಸಂತೋಷ, ಕೋಪ, ಜಗಳ, ಅಳು ಹಾಗೂ ನಗು ಎಲ್ಲವೂ ಸಾಮಾನ್ಯ ಎನ್ನಿಸುತ್ತವೆ. ಆದರೆ ಯಾವುದೂ ಮಿತಿ ಮೀರದಂತೆ ನೋಡಿಕೊಳ್ಳಿ. ನಿಮ್ಮ ಗಂಡನೊಂದಿಗೆ ಮಾತನಾಡಿ. ಅವರು ನಿಮ್ಮಿಂದ ಏನ್ನನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ ಅಥವಾ ನಿಮ್ಮ ನಿರೀಕ್ಷೆಗಳನ್ನು ಅವರಿಗೆ ತಿಳಿಸಿ. ಸಾಂಸರಿಕ ಜೀವನದಲ್ಲಿ ಆರೋಗ್ಯಕರ ಸಂವಹನ ತುಂಬಾ ಮುಖ್ಯ ಎನ್ನಿಸಿಕೊಳ್ಳುತ್ತದೆ. ಆಗಲೂ ಮನಸ್ಸು ಖಿನ್ನತೆಯಲ್ಲೇ ಇದ್ದರೆ ನೀವಿಬ್ಬರೂ ಆಪ್ತಸಮಾಲೋಚಕರನ್ನು ಕಾಣುವುದು ಒಳ್ಳೆಯದು.

* ನಾನು ಸದಾ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸುತ್ತೇನೆ. ಆದರೆ ನನಗೆ ಕೋಪ ಜಾಸ್ತಿ. ಅದನ್ನು ನನ್ನ ಸ್ನೇಹಿತೆಯರು ಅರ್ಥ ಮಾಡಿಕೊಳ್ಳದೆ ನೋವಾಗುವ ರೀತಿ ಮಾತನಾಡುತ್ತಾರೆ. ನನ್ನ ಅರ್ಥ ಮಾಡಿಕೊಳ್ಳುವ ಒಬ್ಬ ಸ್ನೇಹಿತೆ ಇಲ್ಲ ಎನ್ನುವುದೇ ಬೇಸರ.

ಮೇಘನಾ, ಊರು ಬೇಡ

ವೈಯಕ್ತಿಕವಾಗಿ ಹಾಗೂ ಆರೋಗ್ಯದ ದೃಷ್ಟಿಯಿಂದ ಕೋಪ ನಿಮಗೆ ಒಳ್ಳೆಯದಲ್ಲ. ಹಾಗಾಗಿ ಮೊದಲು ನಿಮ್ಮ ಕೋಪವನ್ನು ನಿಯಂತ್ರಣಕ್ಕೆ ತಂದುಕೊಳ್ಳಿ. ನಿಮ್ಮನ್ನು ಪ್ರಚೋದಿಸಿ ಕೋಪಕ್ಕೆ ಎಡೆ ಮಾಡುವ ವಿಷಯಗಳಿಗೆ ಪ್ರತಿಕ್ರಿಯೆ ನೀಡಬೇಡಿ. ನಿಮಗೆ ಕೋಪ ತರಿಸುವ ವಿಷಯಗಳನ್ನು ನಿರ್ಲಕ್ಷ್ಯ ಮಾಡಿ. ಹೆಚ್ಚಿನ ಸಮಯದಲ್ಲಿ ನಾವು ಅಂದುಕೊಳ್ಳದ ಅಥವಾ ನಿರೀಕ್ಷಿಸಿಸದ ವಿಷಯಗಳು ನಮ್ಮಲ್ಲಿ ಕೋಪ ತರಿಸುತ್ತವೆ. ಹಾಗಾಗಿ ನಿಮ್ಮ ನಿರೀಕ್ಷೆಯನ್ನು ಕಡಿಮೆ ಮಾಡಿಕೊಳ್ಳಿ. ಅದೇನೆ ಇರಲಿ ನೀವು ನಿಮ್ಮ ಸುತ್ತಲಿನ ಜನರಿಗೆ ಒಳ್ಳೆಯದಾಗಲಿ ಎಂದು ಬಯಸುತ್ತೀರಿ. ಸಿಟ್ಟನ್ನು ನಿಯಂತ್ರಿಸಿಕೊಂಡ ನಂತರ ನೀವು ನಿಮ್ಮಲ್ಲಿ ಬದಲಾವಣೆಯನ್ನು ಗುರುತಿಸುತ್ತೀರಿ. ಧ್ಯಾನವೂ ನಿಮಗೆ ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿದಿನ 30 ನಿಮಿಷ ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !