ಭಾನುವಾರ, ಸೆಪ್ಟೆಂಬರ್ 20, 2020
21 °C
ತೂಬರಹಳ್ಳಿ: ಅನ್ಯರಾಜ್ಯಗಳ ವಲಸಿಗರ ಒಕ್ಕಲೆಬ್ಬಿಸಲು ಮುಂದಾದ ಪಾಲಿಕೆ * ಆತಂಕದಲ್ಲಿ ನಿವಾಸಿಗಳು

ಜೋಪಡಿ ತೆರವು ಕಾರ್ಯಾಚರಣೆ: 3 ದಿನ ಗಡುವು ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಮಹದೇವಪುರ ವಲಯದ ತೂಬರಹಳ್ಳಿ ಹಾಗೂ ಕುಂದಲಹಳ್ಳಿ ಬಳಿ ವಾಸಿಸುತ್ತಿರುವ ವಲಸೆ ಕಾರ್ಮಿಕರ ಜೋಪಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಬಿಬಿಎಂಪಿ ಸದ್ಯಕ್ಕೆ ಮೂರು ದಿನಗಳ ಕಾಲ ಮುಂದೂಡಿದೆ.

ತೆರವು ಕೈಬಿಡುವ ಬಗ್ಗೆ ಪಾಲಿಕೆಯಿಂದ ಇನ್ನೂ ಭರವಸೆ ಸಿಗದ ಕಾರಣ ಇಲ್ಲಿ ನೆಲೆಸಿರುವ ಸಾವಿರಾರು ಕುಟುಂಬಗಳು ಭವಿಷ್ಯ ತೂಗುಯ್ಯಾಲೆಯಲ್ಲಿದೆ.

ಈ ಪ್ರದೇಶದ ಖಾಸಗಿ ಜಮೀನಿನಲ್ಲಿ ವಲಸಿಗರ 5 ಸಾವಿರಕ್ಕೂ ಹೆಚ್ಚು ಮಂದಿ ಅನೇಕ ವರ್ಷಗಳಿಂದ ಜೋಪಡಿಗಳಲ್ಲಿ ನೆಲೆಸಿವೆ. ಈ ಪೈಕಿ ಹೆಚ್ಚಿನವರು ಚಿಂದಿ ಆಯುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಗ್ರಹಿಸುವ ಚಿಂದಿಯಲ್ಲಿ ಬೇಡವಾಗಿದ್ದನ್ನು ಸುಡುತ್ತಾರೆ. ಪ್ಲಾಸ್ಟಿಕ್‌ ವಸ್ತುಗಳನ್ನು ಭಾರಿ ಪ್ರಮಾಣದಲ್ಲಿ ಸುಡುವುದರಿಂದ ಆಸುಪಾಸಿನ ನಿವಾಸಿಗಳಿಗೆ ತೊಂದರೆ ಆಗುತ್ತಿದೆ ಎಂಬುದು ಈ ಪರಿಸರದಲ್ಲಿ ನೆಲೆಸಿರುವ ಕೆಲವರ ಆರೋಪ. ಈ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ, ಪಾಲಿಕೆಯ ಜಂಟಿ ಆಯುಕ್ತ (ಆರೋಗ್ಯ ಮತ್ತು ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್‌ ಖಾನ್‌ ಇತ್ತೀಚೆಗೆ ಸ್ಥಳ ಪರಿಶೀಲನೆ ನಡೆಸಿದ್ದರು. ಜೋಪಡಿಗಳನ್ನು ಸೋಮವಾರದೊಳಗೆ ತೆರವು ಮಾಡುವಂತೆ ಗಡುವು ವಿಧಿಸಿದ್ದರು.

ಪಾಲಿಕೆಯ ಮಹದೇವಪುರ ವಲಯದ ಅಧಿಕಾರಿಗಳು  ಇಲ್ಲಿನ ಜೋಪಡಿಗಳನ್ನು ತೆರವುಗೊಳಿಸಲು ಸೊಮವಾರ ಬೆಳಿಗ್ಗೆ ನೂರಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿ ಹಾಗೂ ಮೂರು ಜೆಸಿಬಿಗಳೊಂದಿಗೆ ಸ್ಥಳಕ್ಕೆ ಬಂದಿದ್ದರು. ಮಹಿಳೆಯರೂ ಸೇರಿದಂತೆ ಸಾವಿರಾರು ಕಾರ್ಮಿಕರು ಸ್ಥಳದಲ್ಲೇ ಧರಣಿ ಕುಳಿತುಕೊಳ್ಳುವ ಮೂಲಕ ತೆರವು ಕಾರ್ಯಾಚರಣೆ ನಡೆಸಲು ಅವಕಾಶ ನೀಡಲಿಲ್ಲ. ಮಾನವ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸುವ ಸರ್ಕಾರೇತರ ಸಂಘಟನೆಗಳ ಪ್ರಮುಖರು ಸ್ಥಳಕ್ಕಾಗಮಿಸಿ ಜೋಪಡಿ ನಿವಾಸಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿದರು. 

ಅಧಿಕಾರಿಗಳು ಪ್ರತಿಭಟನೆ ನಡುವೆಯೂ ಜೋಪಡಿಗಳನ್ನು ತೆರವುಗೊಳಿಸಲು ಮುಂದಾದರು. ಆದರೆ, ನಿವಾಸಿಗಳಿಂದ ಪ್ರತಿರೋಧ ವ್ಯಕ್ತವಾಗಿದ್ದರಿಂದ ಗುಡಿಸಲು ತೆರವುಗೊಳಿಸಲು ನೀಡಿದ್ದ ಗಡುವನ್ನು ಮತ್ತೆ ಮೂರು ದಿನ ವಿಸ್ತರಿಸಿ ಸ್ಥಳದಿಂದ ನಿರ್ಗಮಿಸಿದರು. 

‘ಮನೆ ಖಾಲಿ ಮಾಡಲು ನಿವಾಸಿಗಳು ಕಾಲಾವಕಾಶ ಕೇಳಿದ್ದಾರೆ. ಮೂರು ದಿನ ಕಾಲಾವಕಾಶ ನೀಡಿದ್ದೇವೆ. ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಮಹದೇವಪುರ ವಲಯದ ಜಂಟಿ ಆಯುಕ್ತ ಎನ್‌.ಸಿ.ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪರಿಶೀಲಿಸಿ ಕ್ರಮ: ‘ಇಲ್ಲಿ ನೆಲೆಸಿರುವವರು ಬಾಂಗ್ಲಾ ದೇಶದಿಂದ ಬಂದ ಅಕ್ರಮ ವಲಸಿಗರು ಎಂದು ಕೆಲವರು ಆರೋಪ ಮಾಡಿದ್ದಾರೆ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡದೇ ಸಾವಿರಾರು ಮಂದಿಯನ್ನು ಬೀದಿಗೆ ತಳ್ಳಲು ಸಾಧ್ಯವಿಲ್ಲ. ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಹಾಗೂ ಪಾಲಿಕೆ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಊರಲ್ಲಿ ಇಲ್ಲ. ಅವರು ಬಂದ ಬಳಿಕ ನಾವು ಮೂವರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಅಕ್ರಮ ಕಂಡು ಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ’ ಎಂದು ಮೇಯರ್‌ ಗಂಗಾಂಬಿಕೆ ತಿಳಿಸಿದರು.

ಅಕ್ರಮ ವಲಸಿಗರೇ?

‘ಇಲ್ಲಿನ ಜೋಪಡಿಗಳಲ್ಲಿ ನೆಲೆಸಿರುವವರ ಪೈಕಿ ಶೇ 30ರಷ್ಟು ಬಾಂಗ್ಲಾದೇಶದಿಂದ ನುಸುಳಿರುವ ಅಕ್ರಮ ವಲಸಿಗರು ಇದ್ದಾರೆ. ಕಳೆದ ಎರಡು ವರ್ಷಗಳಿಂದ ಅವರ ಸಂಖ್ಯೆ ಹೆಚ್ಚುತ್ತಲೇ ಇದೆ’ ಎಂದು ಆರೋಪಿಸುತ್ತಾರೆ ದೊಡ್ಡ ನೆಕ್ಕುಂದಿ ವಾರ್ಡ್‌ನ ಪಾಲಿಕೆ ಸದಸ್ಯೆ ಶ್ವೇತಾ ವಿಜಯ್‌ ಕುಮಾರ್‌.

‘ಇವರು ನಗರದ ಬೇರೆ ಬೇರೆ ಭಾಗಗಳಿಂದ ಸಂಗ್ರಹಿಸುವ ಚಿಂದಿಯನ್ನು ಇಲ್ಲಿಗೆ ತಂದು ರಾಶಿ ಹಾಕುತ್ತಾರೆ. ಅವರಿಗೆ ಬೇಡವಾದ ಕಸವನ್ನು ಇಲ್ಲೇ ಬಿಸಾಡುತ್ತಾರೆ. ಇವರಿಂದಾಗಿ ಈ ಪರಿಸರದ ಸ್ವಚ್ಛತೆಯೂ ಹಾಳಾಗುತ್ತಿದೆ’ ಎಂದು ಅವರು ದೂರಿದರು.

’ಇಲ್ಲಿನ ಬಹುತೇಕ ಕಾರ್ಮಿಕರು ಹೊಟ್ಟೆಪಾಡಿಗಾಗಿ ಚಿಂದಿ ಆಯುವ ಕೆಲಸ ಮಾಡುತ್ತಿದ್ದಾರೆ. ಅವರು ಕಸ ಬಿಸಾಡುತ್ತಾರೆ, ಪ್ಲಾಸ್ಟಿಕ್‌ ಸುಡುತ್ತಾರೆ ಎಂಬ ಆರೋಪದಲ್ಲಿ ನಿಜಾಂಶವಿರಬಹುದು. ಅವರನ್ನು ಒಕ್ಕಲೆಬ್ಬಿಸಿ ಅವರ ಬದುಕನ್ನು ಕಿತ್ತುಕೊಳ್ಳುವುದು ಇದಕ್ಕೆ ಪರಿಹಾರ ಅಲ್ಲ. ಪ್ಲಾಸ್ಟಿಕ್‌ ಸುಡದಂತೆ, ಕಸ ಬಿಸಾಡದಂತೆ ಅವರಿಗೆ ಬುದ್ಧಿ ಹೇಳಬಹುದು. ಖಾಸಗಿ ಜಾಗದಲ್ಲಿ ನೆಲೆಸಿರುವ ಸಾವಿರಾರು ಜನರನ್ನು ಒಕ್ಕಲೆಬ್ಬಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಏನು ಅಧಿಕಾರ ಇದೆ. ಅವರಿಗೆ ನೆಲೆ ಕಲ್ಪಿಸಲು ಪಾಲಿಕೆಗೆ ಸಾಧ್ಯವೇ? ಅವರಿಗೆ ಪರ್ಯಾಯ ನೆಲೆ ಕಲ್ಪಿಸದೆ ಒಕ್ಕಲೆಬ್ಬಿಸುವುದು ಅಮಾನವೀಯ’ ಎಂಬುದು ಕರ್ನಾಟಕ ಜನ ಆರೋಗ್ಯ ಚಳವಳಿಯ ವಿಜಯ್‌ ಕುಮಾರ್‌ ವಾದ.

‘ಇಲ್ಲಿನ ಜೋಪಡಿಗಳಲ್ಲಿ ನೆಲೆಸಿರುವವರಲ್ಲಿ ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರು ಬೆರಳೆಣಿಕೆಯಷ್ಟು ಮಂದಿ ಇರಬಹುದು. ಆದರೆ, ಬಹುತೇಕ ಮಂದಿ ಪಶ್ಚಿಮ ಬಂಗಾಳದ ಕಾರ್ಮಿಕರು. ಅವರು ಕೂಡಾ ಬಂಗಾಳಿ ಭಾಷೆ ಮಾತನಾಡುತ್ತಾರೆ. ಹಾಗಾಗಿ ಅವರನ್ನು ಬಾಂಗ್ಲಾದವರು ಎಂದು ತಪ್ಪಾಗಿ ಭಾವಿಸಲಾಗುತ್ತಿದೆ’ ಎಂದು ಮೂವ್‌ಮೆಂಟ್‌ ಫಾರ್‌ ಜಸ್ಟೀಸ್‌ನ ಆರ್‌.ಖಲೀಂಮುಲ್ಲಾ ಅಭಿಪ್ರಾಯಪಟ್ಟರು.

‘ಈ ಕಾರ್ಮಿಕರು ಹತ್ತಾರು ವರ್ಷಗಳಿಂದ ಇಲ್ಲಿ ನೆಲೆಸಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತಯೇ ಇವರಿಗೆ ಬಾಂಗ್ಲಾದ ಅಕ್ರಮ ವಲಸಿಗರೆಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ. ಇವರಿಗೆ ನಾನಾ ರೀತಿಯ ಕಿರುಕುಳ ನೀಡಲಾಗುತ್ತಿದೆ. ಇದರ ಹಿಂದೆ ಬೇರೇನೋ ಪಿತೂರಿ ಇದೆ’  ಎಂದು ಅವರು ಸಂಶಯ ವ್ಯಕ್ತಪಡಿಸಿದರು.

ಹೋಗುವುದಾದರೂ ಎಲ್ಲಿಗೆ?

‘ನಾವು ಜೀವನೋಪಾಯಕ್ಕಾಗಿ ಈ ನಗರಕ್ಕೆ ಬಂದಿದ್ದೇವೆ. ಈಗ ಏಕಾಏಕಿ ಜಾಗ ಖಾಲಿ ಮಾಡಿ ಎಂದರೆ ನಾವೆಲ್ಲಿಗೆ ಹೋಗಬೇಕು’ ಎಂದು ಪ್ರಶ್ನಿಸುತ್ತಾರೆ ಇಲ್ಲಿನ ಜೋಪಡಿ ನಿವಾಸಿಗಳು.

ಕಟ್ಟಡ ಕಾರ್ಮಿಕರು ಹಾಗೂ ಚಿಂದಿ ಆಯುಕ ಕಾಯಕದಲ್ಲಿ ತೊಡಗಿದವರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸುಮಾರು 40 ಮಂದಿ ಶಾಲಾ ವಾಹನಗಳ ಚಾಲಕರು ಇಲ್ಲಿದ್ದಾರೆ. ಹೆಚ್ಚಿನವರ ದುಡಿಮೆ ತಿಂಗಳಿಗೆ 
₹5 ಸಾವಿರದಿಂದ ₹10 ಸಾವಿರದಷ್ಟಿದೆ.

‘ಈ ನಗರದಲ್ಲಿ ಮನೆ ಬಾಡಿಗೆಗೆ ಪಡೆಯಬೇಕಾದರೆ ಸಾವಿರಾರು ರೂಪಾಯಿ ನೀಡಬೇಕು. ಇಲ್ಲಿನ ಭೂಮಾಲೀಕರು ನೆಲ ಬಾಡಿಗೆ ಪಡೆದು ಜೋಪಡಿ ನಿರ್ಮಿಸಲು ಅವಕಾಶ ಕಲ್ಪಿಸಿದ್ದಾರೆ. ಬಾಡಿಗೆ ಮನೆಯಲ್ಲಿ ನೆಲೆಸುವಷ್ಟು ಆದಾಯ ನಮಗಿಲ್ಲ’ ಎಂದು ಜೋಪಡಿ ನಿವಾಸಿಯೊಬ್ಬರು ಅಳಲು ತೋಡಿಕೊಂಡರು.‌

ಮನೆಕೆಲಸಕ್ಕೆ ಗೈರು– ಮಹಿಳೆಯರ ಅಸಹಕಾರ

ತೂಬರಹಳ್ಳಿ ಹಾಗೂ ಕುಂದಲಹಳ್ಳಿ ಜೋಪಡಿಯಲ್ಲಿ ನೆಲೆಸಿರುವ ಬಹುತೇಕ ಮಹಿಳೆಯರು ಆಸುಪಾಸಿನ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಮನೆ ಕೆಲಸಕ್ಕೆ ಹೋಗುತ್ತಾರೆ. ಸಮಸ್ಯೆ ಬಗೆಹರಿಯುವವರೆಗೆ ಮನೆ ಕೆಲಸಕ್ಕೆ ಹೋಗದಿರಲು ಅವರು ತೀರ್ಮಾನಿಸಿದ್ದಾರೆ.

‘ನಾವು ಕೆಲಸಕ್ಕೆ ಹೋಗಬೇಕಾದರೆ, ಆ ಮನೆಯವರು ನಮ್ಮನ್ನು ಒಕ್ಕಲೆಬ್ಬಿಸಬಾರದು ಎಂದು ಪೊಲೀಸರನ್ನು ಒತ್ತಾಯಿಸಲಿ. ನಮ್ಮ ಬದುಕೇ ಅತಂತ್ರದಲ್ಲಿರುವಾಗ ಬೇರೆಯವರ ಮನೆಯಲ್ಲಿ ಕೆಲಸ ಮಾಡುವುದಾದರೂ ಹೇಗೆ’ ಎಂದು ಮಹಿಳೆಯೊಬ್ಬರು ತಿಳಿಸಿದರು.

* ಖಾಸಗಿ ಜಾಗದಲ್ಲಿ ನೆಲೆಸಿರುವವರನ್ನು ಒಕ್ಕಲೆಬ್ಬಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಏನು ಅಧಿಕಾರ ಇದೆ. ಅಷ್ಟಕ್ಕೂ ಇಲ್ಲಿ ನೆಲೆಸಿರುವ ಸಾವಿರಾರು ಮಂದಿಗೆ ನೆಲೆ ಕಲ್ಪಿಸಲು ಪಾಲಿಕೆಗೆ ಸಾಧ್ಯವೇ? 
 ವಿಜಯ್‌ ಕುಮಾರ್‌, ಕರ್ನಾಟಕ ಜನ ಆರೋಗ್ಯ ಚಳವಳಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು