ಜೀವಾವಧಿ ಶಿಕ್ಷೆ ಕೊಡಿಸಿದ ‘ಕೂದಲು’

ಬುಧವಾರ, ಮಾರ್ಚ್ 27, 2019
22 °C
10 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಆದೇಶ

ಜೀವಾವಧಿ ಶಿಕ್ಷೆ ಕೊಡಿಸಿದ ‘ಕೂದಲು’

Published:
Updated:

ಬೆಂಗಳೂರು: ಉದ್ಯೋಗ ಹುಡುಕಿಕೊಂಡು ನಗರಕ್ಕೆ ಬಂದು ನೆಲೆಸಿದ್ದ ಅಸ್ಸಾಂನ ದಂಪತಿಯನ್ನು ಅವರ ಎಂಟು ವರ್ಷದ ಮಗಳ ಸಮೇತ ಹತ್ಯೆ ಮಾಡಿದ್ದ ಹಂತಕರಿಗೆ, ಘಟನಾ ಸ್ಥಳದಲ್ಲಿ ಸಿಕ್ಕ ‘ಕೂದಲು‘ ಹಾಗೂ ‘ಬೆರಳಚ್ಚು’ಗಳೇ ಜೀವಾವಧಿ ಶಿಕ್ಷೆ ಕೊಡಿಸಿವೆ.

ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಒಳಾಂಗಣ ವಿನ್ಯಾಸಕಾರ ರಾಹುಲದಾಸ್, ಅವರ ಪತ್ನಿ ಪುಷ್ಪಲತಾ ಹಾಗೂ ಮಗಳು ಅಗ್ನಿಶಾ ಕೊಲೆ ಪ್ರಕರಣದ ವಿಚಾರಣೆ ನಡೆಸಿದ್ದ 66ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯದ (67ನೇ ಸಿಸಿಎಚ್) ನ್ಯಾಯಾಧೀಶ ಎ.ವಿಜಯನ್ ಅವರು ನಾಲ್ವರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ್ದಾರೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ಎಂ. ಬೆಳಲದವರ ವಾದಿಸಿದ್ದರು. ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್, ಆತನ ಸಹಚರರಾದ ಲೋಕೇಶ್, ಮುರುಳಿ ಹಾಗೂ ಭಾಸ್ಕರ್ ಅಲಿಯಾಸ್ ರಾಜು ಶಿಕ್ಷೆಗೆ ಗುರಿಯಾದವರು. 

ಕೊಲೆಯ ರೂವಾರಿ ರಮೇಶ್: ರಾಹುಲ ದಾಸ್‌ ಅವರು ಅಪರಾಧಿ ರಮೇಶ್‌ನ ಮನೆಯಲ್ಲಿ ಬಾಡಿಗೆಗಿದ್ದರು. ರಾಹುಲ ಪ‍ತ್ನಿ ಪುಷ್ಪಲತಾ ಮೇಲೆ ಕಣ್ಣು ಹಾಕಿದ್ದ ಅಪರಾಧಿ, ಅವರ ಜೊತೆ ಸಲುಗೆ ಬೆಳೆಸಿಕೊಂಡಿದ್ದ. ಅದು ಗೊತ್ತಾಗುತ್ತಿದ್ದಂತೆ ದಂಪತಿ, ಮನೆ ಖಾಲಿ ಮಾಡಿ ಬೇರೆಡೆ ಹೋಗಿ ನೆಲೆಸಿದ್ದರು. ಪತಿ ಇಲ್ಲದ ವೇಳೆಯಲ್ಲಿ ಆ ಮನೆಗೂ ಹೋಗುತ್ತಿದ್ದ ಅಪರಾಧಿ, ಪುಷ್ಪಲತಾ ಜೊತೆ ಸಲುಗೆ ಬೆಳೆಸಲು ಪ್ರಯತ್ನಿಸುತ್ತಿದ್ದ. ಆದರೆ, ಅದು ಸಾಧ್ಯವಾಗಿರಲಿಲ್ಲ.

ರಾಹುಲ ಅವರನ್ನು ಕೊಂದರೆ, ಪುಷ್ಪಲತಾ ತನ್ನವಳಾಗುತ್ತಾಳೆಂದು ತಿಳಿದಿದ್ದ ರಮೇಶ್, ಕೊಲೆಗೆ ಸಂಚು ರೂಪಿಸಿದ್ದ. ಸಹಚರರಾದ ಲೋಕೇಶ್, ಮುರುಳಿ ಹಾಗೂ ಭಾಸ್ಕರ್ ಅಲಿಯಾಸ್ ರಾಜುಗೆ ವಿಷಯ ತಿಳಿಸಿ ಕೊಲೆ ಮಾಡಲು ಒಪ್ಪಿಸಿದ್ದ.

ದರೋಡೆಕೋರರ ಸೋಗಿನಲ್ಲಿ ಹತ್ಯೆ: ರಾಹುಲದಾಸ್ ಬೆಳಿಗ್ಗೆ ಕೆಲಸಕ್ಕೆ ಹೋದರೆ ಸಂಜೆಯೇ ಮನೆಗೆ ವಾಪಸು ಬರುತ್ತಿದ್ದರು. ಅವರು ಬಂದ ನಂತರ ಪುಷ್ಪಲತಾ, ಮಗಳನ್ನು ಶಾಲೆಯಿಂದ ಕರೆದುಕೊಂಡು ಬರಲು ಹೋಗುತ್ತಿದ್ದರು. ಆ ಸಮಯದಲ್ಲೇ ರಾಹುಲದಾಸ್‌ರನ್ನು ಹತ್ಯೆ ಮಾಡುವಂತೆ ರಮೇಶ್, ಸಹಚರರಿಗೆ ತಿಳಿಸಿದ್ದ.

2009ರ ಅಕ್ಟೋಬರ್ 20ರಂದು ಸಂಜೆ ದರೋಡೆಕೋರರ ಸೋಗಿನಲ್ಲಿ ಮನೆಗೆ ನುಗ್ಗಿದ್ದ ಅಪರಾಧಿಗಳು, ರಾಹುಲ ಅವರ ಉಸಿರುಗಟ್ಟಿಸಿ, ನೀರು ತುಂಬಿದ್ದ ಬಕೆಟ್‌ನಲ್ಲಿ ಮುಖ ಮುಳುಗಿಸಿ ಕೊಂದಿದ್ದರು.

ಮನೆಯಲ್ಲಿದ್ದ ಹಣ, ಚಿನ್ನಾಭರಣ ದೋಚಿಕೊಂಡು ಹೊರಗೆ ಹೋಗುವಾಗ ಪುಷ್ಪಲತಾ ಹಾಗೂ ಮಗಳು ಅಗ್ನಿಶಾ ಎದುರಿಗೆ ಬಂದಿದ್ದರು. ತಮ್ಮನ್ನು ನೋಡಿದರೆಂಬ ಕಾರಣಕ್ಕೆ ಅವರಿಬ್ಬರನ್ನು ಹಿಡಿದುಕೊಂಡಿದ್ದ ಅಪರಾಧಿಗಳು, ಉಸಿರುಗಟ್ಟಿಸಿ ಕೊಂದಿದ್ದರು.  ಶವಗಳನ್ನು ಶೌಚಾಲಯದಲ್ಲಿದ್ದ ಟಬ್‌ನಲ್ಲಿ ಹಾಕಿ ಪರಾರಿಯಾಗಿದ್ದರು.

ಕೂದಲು, ಬೆರಳಚ್ಚುಗಳೇ ಪುರಾವೆ: ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ರಾಮಮೂರ್ತಿನಗರ ಠಾಣೆ ಪೊಲೀಸರು,  ಘಟನಾ ಸ್ಥಳದಲ್ಲಿ ಸಿಕ್ಕ ಕೂದಲು, ಬೆರಳಚ್ಚು ಹಾಗೂ ಇತರೆ ಸಾಮಗ್ರಿಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.

ಪುಷ್ಪಲತಾ ಜೊತೆ ರಮೇಶ್ ಸಲುಗೆ ಹೊಂದಿದ್ದನೆಂಬ ಸಂಗತಿ ಸಂಬಂಧಿಕರೊಬ್ಬರಿಂದ ಗೊತ್ತಾಗಿತ್ತು. ರಮೇಶ್ ಹಾಗೂ ಆತನ ಸಹಚರರನ್ನು ವಶಕ್ಕೆ ಪಡೆದಾಗ, ತಪ್ಪೊಪ್ಪಿಕೊಂಡಿದ್ದರು. 

ವಿಚಾರಣೆ ನಡೆಸಿದ ನ್ಯಾಯಾಲಯ, ಘಟನಾ ಸ್ಥಳದಲ್ಲಿ ಸಿಕ್ಕ ಅಪರಾಧಿಗಳ ಕೂದಲು, ಬೆರಳಚ್ಚು ಮಾದರಿ ಸೇರಿ
ಹಲವು ಸಾಂದರ್ಭಿಕ ಪುರಾವೆಗಳನ್ನು ಪರಿಗಣಿಸಿ ಜೀವಾವಧಿ ಶಿಕ್ಷೆ  ವಿಧಿಸಿದೆ.

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !