ಮೋರಿ ಪಾಲಾದ ಮೂರು ಹೆಣ್ಣು ಶಿಶು !

7
ಎಸ್‌.ಜೆ. ಪಾರ್ಕ್‌ ರಸ್ತೆ ಪಕ್ಕದ ಕಾಲುವೆಯಲ್ಲಿ ಪತ್ತೆ

ಮೋರಿ ಪಾಲಾದ ಮೂರು ಹೆಣ್ಣು ಶಿಶು !

Published:
Updated:

ಬೆಂಗಳೂರು: ಸಿಲ್ವರ್ ಜ್ಯುಬಿಲಿ (ಎಸ್‌.ಜೆ.) ಪಾರ್ಕ್‌ನ ಮೋರಿಯಲ್ಲಿ ಮೂರು ನವಜಾತ ಹೆಣ್ಣು ಶಿಶುಗಳು ಮೃತಪಟ್ಟ ಸ್ಥಿತಿಯಲ್ಲಿ ಗುರುವಾರ (ಜ. 10) ಪತ್ತೆಯಾಗಿವೆ.

‘ಮ್ಯಾಕ್ಸ್‌ ಗ್ಲೋಬಲ್ ಏಜೆನ್ಸಿ’ ಅಂಗಡಿಯ ಎದುರಿನಲ್ಲಿರುವ ಮೋರಿಯಲ್ಲಿ ಬಿಳಿ ಹಾಗೂ ನೀಲಿ ಬಣ್ಣದ ಬಟ್ಟೆಯಲ್ಲಿ ಶಿಶುಗಳನ್ನು ಸುತ್ತಿಡಲಾಗಿತ್ತು. ಒಂದು ಶಿಶುವಿನ ಮುಖ ಬಟ್ಟೆಯಿಂದ ಹೊರಗೆ ಬಂದಿತ್ತು. ಅದನ್ನು ಗಮನಿಸಿದ್ದ ಸಾರ್ವಜನಿಕರೊಬ್ಬರು, ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು.

ಹೊಯ್ಸಳ ವಾಹನದಲ್ಲಿ ಗಸ್ತು ತಿರುಗುತ್ತಿದ್ದ ಕಾನ್‌ಸ್ಟೆಬಲ್‌ಗಳಾದ ಮಲ್ಲಿಕಾರ್ಜುನ ಸಿದ್ನಾಳ ಹಾಗೂ ಅಭಿಷೇಕ್, ಬೆಳಿಗ್ಗೆ 9.30ಕ್ಕೆ ಮೋರಿ ಬಳಿ ಹೋಗಿ ಪರಿಶೀಲನೆ ನಡೆಸಿದ್ದರು. ಬಟ್ಟೆಯನ್ನು ಬಿಚ್ಚಿ ನೋಡಿದಾಗ ಮೂರು ಶಿಶುಗಳು ಕಂಡಿದ್ದವು. ನಂತರ, ಆ ಶಿಶುಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ತೆಗೆದುಕೊಂಡು ಹೋದರು.

ಶಿಶುಗಳು ಪತ್ತೆಯಾದ ಬಗ್ಗೆ ದೂರು ನೀಡಿರುವ ಕಾನ್‌ಸ್ಟೆಬಲ್ ಮಲ್ಲಿಕಾರ್ಜುನ್, ‘ಜ. 10ರಂದು ಬೆಳಿಗ್ಗೆ 8ಕ್ಕೆ ಕರ್ತವ್ಯಕ್ಕೆ ಹಾಜರಾಗಿ ಹೊಯ್ಸಳ ವಾಹನ
ದಲ್ಲಿ ಗಸ್ತು ತಿರುಗುತ್ತಿದೆ. ಮೋರಿಯಲ್ಲಿ ನವಜಾತ ಶಿಶು ಇರುವ ಬಗ್ಗೆ ನಿಯಂತ್ರಣ ಕೊಠಡಿಯಿಂದ ಮಾಹಿತಿ ಬರುತ್ತಿದ್ದಂತೆ ಸಹೋದ್ಯೋಗಿ ಅಭಿಷೇಕ್‌ ಜೊತೆ ಸ್ಥಳಕ್ಕೆ ಹೋಗಿದ್ದೆ’ ಎಂದು ವಿವರಿಸಿದ್ದಾರೆ.

‘ಸ್ಥಳೀಯರಲ್ಲೇ ಯಾರಾದರೂ ಶಿಶುಗಳನ್ನು ಎಸೆದಿರಬಹುದೆಂದು ಅಕ್ಕ–ಪಕ್ಕದಲ್ಲೆಲ್ಲ ವಿಚಾರಿಸಲಾಯಿತು. ಯಾವುದೇ ಮಾಹಿತಿ ಸಿಗಲಿಲ್ಲ. ಯಾರೋ ಅಪರಿಚಿತರು, ಶಿಶುಗಳ ಜನನವನ್ನು ಮುಚ್ಚಿಡುವ ಉದ್ದೇಶದಿಂದ ಮೋರಿಗೆ ತಂದು ಎಸೆದಿರಬಹುದು’ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ. 

ನೀರು ಕಡಿಮೆ ಇದ್ದಿದ್ದಕ್ಕೆ ಕಂಡ ಶಿಶುಗಳು: ‘ಎಸ್‌.ಜೆ ಪಾರ್ಕ್‌ ಮೋರಿಯಲ್ಲಿ ಸದ್ಯ ನೀರು ಹರಿಯುವಿಕೆ ಕಡಿಮೆ ಇದೆ. ಅದೇ ಕಾರಣಕ್ಕೆ ಶಿಶುಗಳು ಸ್ಥಳೀಯರಿಗೆ ಕಂಡಿವೆ. ನೀರು ಜಾಸ್ತಿ ಇದ್ದಿದ್ದರೇ ಆ ನೀರಿನೊಂದಿಗೆ ಶಿಶುಗಳು ರಾಜಕಾಲುವೆ ಸೇರುತ್ತಿದ್ದವು’ ಎಂದು ಸ್ಥಳೀಯರೊಬ್ಬರು ತಿಳಿಸಿದರು.

‘ಮೋರಿ ಬಳಿ ಬೆಳಿಗ್ಗೆ ಹೋಗಿದ್ದ ವ್ಯಕ್ತಿಯೇ ಮೊದಲಿಗೆ ಶಿಶು ನೋಡಿದ್ದ. ಬಟ್ಟೆಯಿಂದ ಸ್ವಲ್ಪ ರಕ್ತ ಬರುತ್ತಿತ್ತು. ಮುಖ ಕಂಡ ಬಳಿಕವೇ ಆ ಬಟ್ಟೆಯಲ್ಲಿ ಶಿಶುಗಳು ಇರುವುದು ಖಾತ್ರಿಯಾಯಿತು. ಆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜನ ಜಮಾಯಿಸಿದ್ದರು’ ಎಂದು ಹೇಳಿದರು. 

ಒಂದೇ ಮಹಿಳೆಗೆ ಜನಿಸಿದ್ದ ಶಿಶುಗಳು?

‘ಮೂರು ಹೆಣ್ಣು ಶಿಶುಗಳು ಒಂದೇ ಮಹಿಳೆಗೆ ಜನಿಸಿರುವುದಾಗಿ ವೈದ್ಯರು ಹೇಳಿದ್ದಾರೆ. ಆ ಮಹಿಳೆ ಯಾರು ಎಂಬುದನ್ನು ಹುಡುಕುತ್ತಿದ್ದೇವೆ’ ಎಂದು ಎಸ್‌.ಜೆ.ಪಾರ್ಕ್ ಪೊಲೀಸರು ಹೇಳಿದರು.

’ಹೊರ ಜಿಲ್ಲೆ ನಿವಾಸಿಯಾದ ಗರ್ಭಿಣಿಯೊಬ್ಬರು, ಪತಿ ಜೊತೆಯಲ್ಲಿ ನಗರದ ಆಸ್ಪತ್ರೆಗೆ ಬಂದಿದ್ದರು. ಅವರಿಗೆ ಅವಧಿಪೂರ್ವದಲ್ಲೇ ಶಿಶುಗಳು ಜನಿಸಿದ್ದು, ಅವುಗಳು ಹುಟ್ಟಿದ ಕೂಡಲೇ ಮೃತಪಟ್ಟಿವೆ ಎನ್ನಲಾಗಿದೆ. ಅದೇ ಶಿಶುಗಳನ್ನೇ ದಂಪತಿ, ಮೋರಿಗೆ ತಂದು ಎಸೆದು ಹೋಗಿರುವ ಮಾಹಿತಿ ಇದೆ. ಸದ್ಯದಲ್ಲೇ ದಂಪತಿಯನ್ನು ಪತ್ತೆ ಹಚ್ಚಲಿದ್ದೇವೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !