ಮಕ್ಕಳಿಗೆ ಸ್ವಾತಂತ್ರ್ಯದ ರೆಕ್ಕೆ ಕಟ್ಟಿ

ಮಂಗಳವಾರ, ಏಪ್ರಿಲ್ 23, 2019
31 °C

ಮಕ್ಕಳಿಗೆ ಸ್ವಾತಂತ್ರ್ಯದ ರೆಕ್ಕೆ ಕಟ್ಟಿ

Published:
Updated:
Prajavani

ಆಕೆ ಇನ್ನೂ 10 ವರ್ಷದ ಮುಗ್ಧೆ. ಮನೆಯ ಮುಂದಿರುವ ಬಯಲಿನಲ್ಲಿ ಇತರ ಮಕ್ಕಳ ಜೊತೆ ಫುಟ್ಬಾಲ್‌ ಆಡುವ ಆಸೆ. ಆದರೆ ಆಕೆಯ ಅಮ್ಮನಿಗೆ ಮಗಳು ಎಲ್ಲಾದರೂ ಬಿದ್ದು ಎಳೆಯ ಮೈಗೆ ತರಚು ಗಾಯಗಳಾದರೆ ಎಂಬ ಆತಂಕ. ಹೀಗಾಗಿ ಮಗುವಿನ ಆಸೆ ಅಲ್ಲೇ ಕಮರಿ ಹೋಗುತ್ತದೆ. ಆ ವಯಸ್ಸಿಗೆ ಫುಟ್ಬಾಲ್‌ ಆಡುವ ಆತ್ಮವಿಶ್ವಾಸವನ್ನು ಆ ಕ್ಷಣಕ್ಕೆ ಚಿವುಟಲಾಗುತ್ತದೆ.

ಮಕ್ಕಳ ಸಣ್ಣಪುಟ್ಟ ಬಯಕೆಗಳಿಂದ ಹಿಡಿದು ಭವಿಷ್ಯದ ನಿರ್ಧಾರದವರೆಗೂ ಪೋಷಕರು ಕೆಲವೊಮ್ಮೆ ಕಾಳಜಿ, ಕೆಲವೊಮ್ಮೆ ತಮ್ಮದೇ ಮಾತು ನಡೆಯಬೇಕೆಂಬ ಹಟದಿಂದ ಈ ರೀತಿಯ ಅಡೆತಡೆ ಒಡ್ಡುತ್ತಲೇ ಇರುವುದು ಬಹುತೇಕ ಕುಟುಂಬಗಳಲ್ಲಿ ನಡೆಯುತ್ತಿದೆ. ಮಕ್ಕಳೆಡೆಗೆ ಈ ರೀತಿಯ ಅತಿ ಕಾಳಜಿ, ಅತಿ ಗಮನ, ಅತಿ ಶಿಸ್ತು ಇವೆಲ್ಲವೂ ‘ಹೆಲಿಕಾಪ್ಟರ್ ಪೇರೆಂಟಿಂಗ್‌’ನ ಸ್ಪಷ್ಟ ಲಕ್ಷಣಗಳು.

ಏನಿದು ಹೆಲಿಕಾಪ್ಟರ್ ಪೇರೆಂಟಿಂಗ್?

ಹೆಲಿಕಾಪ್ಟರೊಂದು ಎತ್ತರದಲ್ಲಿ ಹಾರಾಡಿಕೊಂಡು ಎಲ್ಲವನ್ನು ಗಮನಿಸುವಂತೆ ಪೋಷಕರು ಅದರಲ್ಲೂ ಅಮ್ಮಂದಿರು ಮಕ್ಕಳ ಮೇಲೆ ತುಸು ಜಾಸ್ತಿಯೇ ನಿಗಾ ವಹಿಸುವ ಪ್ರವೃತ್ತಿಯಿದು. ಉಂಡರೆ ಇಷ್ಟೇ ಉಣ್ಣಬೇಕು, ಉಂಡಾದ ಮೇಲೆ ಇಂತಹುದೆ ಹಣ್ಣು ತಿನ್ನಬೇಕು. ನೆನಪಿನ ವೃದ್ಧಿಗೆ ಬಾದಾಮಿ ಸೇವನೆ ಕಡ್ಡಾಯ, ಇಷ್ಟು ಗಂಟೆಯಷ್ಟೇ ಟಿ.ವಿ ನೋಡಬೇಕು, ಅರ್ಧ ಗಂಟೆ ಆಟವಾಡಿದರೂ ಅದು ಮಣ್ಣಿನಲ್ಲಿ ಆಗಿರಬಾರದು, ನೀರಿನಲ್ಲಿ ಆಟವಾಡು
ವಂತೆಯೇ ಇಲ್ಲ....ಹೀಗೆ ಆರಂಭವಾಗುವ ಪೋಷಕರ ಅತಿ ಕಾಳಜಿಯ ಷರತ್ತುಗಳು ಮಗುವಿನ ಸ್ವಾತಂತ್ರ್ಯವನ್ನಷ್ಟೆ ಅಲ್ಲ ಯೋಚಿಸುವ ಶಕ್ತಿಯನ್ನೇ ಕುಗ್ಗಿಸುತ್ತದೆ.

10ನೇ ತರಗತಿಯಲ್ಲಿ ಓದುವ ಹುಡುಗ ಮನೆಗೆ ಬರುವುದು ಐದು ನಿಮಿಷ ತಡವಾದರೆ ಹೆದರಿಕೊಳ್ಳುವ ಅಮ್ಮಂದಿರಿದ್ದಾರೆ. ಪರಿಚಿತ ದಾರಿ ಬಿಟ್ಟು ಕಿರುಹಾದಿಗಳತ್ತ ಮುಖ ಮಾಡದಂತೆ ತಾಕೀತು ಮಾಡುವ ಅಪ್ಪಂದಿರಿದ್ದಾರೆ. ಪ್ರತಿ ಕೆಲಸಕ್ಕೂ ಗಂಟೆ, ನಿಮಿಷಗಳ ವೇಳಾಪಟ್ಟಿಯನ್ನು ಮಗುವಿನ ಕೈಗಿಡುತ್ತಾರೆ‌. ಶಾಲೆ, ಟ್ಯೂಷನ್, ಸಂಗೀತ, ನೃತ್ಯ ತರಗತಿಗಳ ನಡುವೆ ಹೈರಾಣಾಗುವ ಮಗುವಿಗೆ ಮನೆಯಲ್ಲಿ ಸಿಗುವ ಅತ್ಯಮೂಲ್ಯ ಸಮಯವೂ ಪೋಷಕರು ವಿಧಿಸುವ ವೇಳಾಪಟ್ಟಿಯಲ್ಲಿ ಕರಗಿ ಹೋಗುತ್ತದೆ.

ಯಾರಲ್ಲಿ ಜಾಸ್ತಿ?

ಒಂದು ಮಗುವಿನ ಸಮಗ್ರ ಬೆಳವಣಿಗೆಯಲ್ಲಿ ತಂದೆ–ತಾಯಿ ಇಬ್ಬರದ್ದೂ ಸಮಪಾಲು. ಆದರೆ, ಮಗುವಿನ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ತಾಯಂದಿರಲ್ಲಿಯೇ ಹೆಲಿಕಾಪ್ಟರ್ ಪೇರೆಂಟಿಂಗ್ ಮನಸ್ಥಿತಿ ಹೆಚ್ಚು. ಇಷ್ಟೆಲ್ಲ ಖರ್ಚು ಮಾಡಿ, ಕಷ್ಟಪಟ್ಟರೂ ಹಾದಿ ತಪ್ಪಿ ಬಿಡಬಹುದೆಂದು ಭಯದಲ್ಲೇ ಮಕ್ಕಳ ಸ್ನೇಹಿತರ ಪೂರ್ವಾಪರವನ್ನು ಮತ್ತು ಅವರ ಮೊಬೈಲ್ ಅನ್ನು ಆಗಾಗ ಚೆಕ್ ಮಾಡುವ ಅಪ್ಪಂದಿರಿಗೇನೂ ಕಡಿಮೆಯಿಲ್ಲ.

ಮಕ್ಕಳ ಮನಸ್ಥಿತಿ ಏನಾಗುತ್ತದೆ?

ಹೆಲಿಕಾಪ್ಟರ್ ಪೇರೆಂಟಿಂಗ್ ಪ್ರಭಾವಕ್ಕೆ ಒಳಗಾದ ಮಕ್ಕಳು ಪ್ರತಿಯೊಂದಕ್ಕೂ ಇನ್ನೊಬ್ಬರ ಮೇಲೆ ಅವಲಂಬಿತರಾಗುತ್ತಾರೆ. ಸ್ವ ಆಲೋಚನಾ ಶಕ್ತಿ ಹಾಗೂ ಸಾಮಾಜಿಕ ಬುದ್ಧಿಮತ್ತೆ ಇತರ ಮಕ್ಕಳಿ
ಗಿಂತಲೂ ಕಡಿಮೆ ಇರುತ್ತದೆ. ವ್ಯಾವಹಾರಿಕ ಜ್ಞಾನವೂ ಅಷ್ಟಕ್ಕಷ್ಟೆ, ಎನ್ನುತ್ತಾರೆ ದಾವಣಗೆರೆಯ ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆಯ ಮನೋವೈದ್ಯೆ ಡಾ. ಎಚ್.ಎನ್.ಆಶಾ.

ಅಪ್ಪ ಅಮ್ಮ ಹೇಳಿದ್ದನ್ನಷ್ಟೇ ಮಾಡುವ ಮಕ್ಕಳಿಗೆ ಹೊಸ ಸಾಧ್ಯತೆಗಳು ಹೊಳೆಯುವುದಿಲ್ಲ. ಇತರೆ ಮಕ್ಕಳಂತೆ ಸ್ವತಂತ್ರ ನಡೆ ಅನುಸರಿಸಲು ಸಾಧ್ಯವಾಗದೇ ಕೀಳರಿಮೆ ಹೊಂದಬಹುದು. ಇದನ್ನು ಮರೆಮಾಚಲು ಅಧಿಕಾರತ್ವದ ಮನೋಭಾವ ಬೆಳೆಸಿಕೊಳ್ಳಬಹುದು.

ಅವರ ಸಂವಹನ ಮತ್ತು ಭಾಷಾ ಕಲಿಕೆಗೂ ಅಡ್ಡಿಯಾಗಬಹುದು. ಜನರೊಂದಿಗೆ ಬೆರೆಯಲು, ನಿರರ್ಗಳವಾಗಿ ಮಾತನಾಡುವ, ಅಭಿಪ್ರಾಯ ಮಂಡಿಸುವ ವಿಚಾರದಲ್ಲಿ ಹಿಂದೆ ಉಳಿಯಬಹುದು. ಜನರೊಂದಿಗೆ ಬೆರೆತು, ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಜೀವನದ ಪ್ರತಿ ಹಂತದಲ್ಲೂ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಕೆ ಇರುವುದರಿಂದ ಬೇರೆಯವರ ಮರ್ಜಿಗಾಗಿ ಕಾಯಬಹುದು.‌ 

ಪೋಷಕರು ಮಾಡಬೇಕಾದ್ದು..

ಪೋಷಕರಾಗುವುದಕ್ಕೆ ಮಾನಸಿಕ ಸಿದ್ಧತೆ ಬೇಕು. ಮಕ್ಕಳನ್ನು ಬೆಳೆಸುವುದು ಕೌಶಲ. ಅದನ್ನು ಅನುಭವದಿಂದಲೇ ರೂಢಿಸಿಕೊಳ್ಳಿ. ಮಗುವು ನಿಮ್ಮ ಸ್ವತ್ತು ಎಂದು ಭಾವಿಸದೇ ಅದರ ಪ್ರತಿ ಬೆಳವಣಿಗೆಗೆ ಖುಷಿ ಪಡಿ ಮತ್ತು ಅದಕ್ಕೆ ಪೂರಕವಾಗುವಂತೆ ವರ್ತಿಸಿ.  ಕಾಳಜಿ ವಹಿಸುವ ವಿಚಾರದಲ್ಲಿ ಇತರರೊಂದಿಗೆ ಹೋಲಿಸಿಕೊಳ್ಳಬೇಡಿ.

ಪ್ರತಿ ಹಂತದಲ್ಲೂ ಮಾರ್ಗದರ್ಶನ ಮಾಡಿ, ಮಕ್ಕಳ ಚಟುವಟಿಕೆಗಳನ್ನು ಗಮನಿಸಿ. ಆದರೆ, ಮೂಗು ತೂರಿಸಬೇಡಿ. ಆಯಾ ವಯಸ್ಸಿಗೆ ಅನುಗುಣವಾಗಿ ಸ್ವಾವಲಂಬನೆಯ ಮನೋಧರ್ಮ ಬೆಳೆಸಿ. ಶಿಸ್ತು, ಸ್ವಾತಂತ್ರ್ಯ ಎರಡನ್ನೂ ಸಮಾನವಾಗಿ ನೀಡಿ.

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !