ಆಹಾ... ರುಚಿಕರ ಊಟ ಇದು ತಿಂಡಿ ಪೋತರ ಹಬ್ಬ!

7

ಆಹಾ... ರುಚಿಕರ ಊಟ ಇದು ತಿಂಡಿ ಪೋತರ ಹಬ್ಬ!

Published:
Updated:
Deccan Herald

ಹೂವುಗಳು ನಮ್ಮನ್ನು ಸ್ವಾಗತಿಸುತ್ತವೆ. ಕಾಮನಬಿಲ್ಲು ಬಣ್ಣದ ಛತ್ರಿಯ ಅಲಂಕಾರದ ಕೆಳಗೆ ಸಾಗುತ್ತಿದ್ದರೆ ಕಿವಿಗೆ ಸಣ್ಣಗೆ ಡೊಳ್ಳಿನ ಶಬ್ದ ಕೇಳಿಸಿತು. ಈ ಅನುಭವ ಅನುಭವಿಸುತ್ತಿರುವ ಹಾಗೆಯೇ, ಒಮ್ಮೆಲೆ ಘಮ ಘಮಿಸುವ ಹತ್ತಾರು ತಿಂಡಿಗಳ ಸುವಾಸನೆಯು ಮೂಗನ್ನು ಮುತ್ತಿದವು. ಅವು ಹಾಗೆ ಮುಂದೆ ಮುಂದೆ ಕರೆದುಕೊಂಡು ಹೋಗಿ ರುಚಿಯ ಜಗತ್ತಿಗೆ ತಲುಪಿಸಿದವು. 

ಟೀವಿಯಲ್ಲಿ ಮಧ್ಯಾಹ್ನದ ಹೊತ್ತಿಗೆ ತಮ್ಮ ರುಚಿಕರ ಅಡುಗೆಗಳ ಮೂಲಕ ನಮ್ಮ ಮನೆಗಳಿಗೆ ಬರುತ್ತಿದ್ದ ಪ್ರಸಿದ್ಧ ಬಾಣಸಿಗರು ಅಲ್ಲಿ ವೇದಿಕೆ ಮೇಲೆ ಇದ್ದರು. ಈ ರುಚಿಕರ ಜಗತ್ತು ಸೃಷ್ಟಿಯಾಗಿದ್ದು ಫ್ರೀಡಂ ಪಾರ್ಕ್‌ನಲ್ಲಿ. ಇಲ್ಲಿ ಮೂರು ದಿನಗಳ (ಶುಕ್ರವಾರ, ಶನಿವಾರ, ಭಾನುವಾರ) ‘ತಿಂಡಿ ಪೋತರ ಹಬ್ಬ’ ನಡೆಯುತ್ತಿದೆ. 

ಈ ಹಬ್ಬದಲ್ಲಿ ಒಟ್ಟು ನೂರು ಮಳಿಗೆಗಳಿವೆ. ಸಾಂಪ್ರದಾಯಿಕ ತಿಂಡಿಗಳಿಂದ ಹಿಡಿದು ನೂಡಲ್ಸ್‌, ಪಿಜ್ಜಾ, ದೋಸೆ, ಹೋಳಿಗೆ, ವಿವಿಧ ರೀತಿಯ ಐಸ್‌ ಕ್ರೀಂಗಳೂ ಸೇರಿ ಸುಮಾರು ಸಾವಿರ ವೈವಿಧ್ಯಮಯ ತಿಂಡಿಗಳಿವೆ. ಮುಳಬಾಗಿಲು, ದಾವಣಗೆರೆ, ಬಳ್ಳಾರಿ, ಕೋಲಾರ ಹೀಗೆ 13 ಜಿಲ್ಲೆಗಳಿಂದ ಇಲ್ಲಿ ಮಳಿಗೆ ಹಾಕಲಾಗಿದೆ. ಹಬ್ಬಕ್ಕೆ ಒಬ್ಬರಿಗೆ ₹50 ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ತಿಂಡಿಗಳ ಶುಲ್ಕವನ್ನು ₹20ರಿಂದ ₹150 ನಿಗದಿ ಮಾಡಲಾಗಿದೆ.

ಈ ಹಬ್ಬ ಆಯೋಜನೆ ಆದದ್ದೇ ಕುತೂಹಲಕಾರಿ ಕಥೆ. ಈ ಹಬ್ಬ ಆಯೋಜನೆಗೊಂಡದ್ದು ಸಾಮಾಜಿಕ ತಾಣಗಳ ಮೂಲಕ. 50 ಮಂದಿ ತಿಂಡಿ ಪ್ರಿಯರು ಸೇರಿ ಒಂದು ವಾಟ್ಸ್‌ಆ್ಯಪ್‌ ಗುಂಪನ್ನು ರೂಪಿಸಿದರು. ಗುಂಪಿನ ಗೆಳೆಯರು ಯಾವುದೇ ಹೋಟೆಲ್‌ ಹೋದರೆ, ಅಲ್ಲಿನ ರುಚಿಕರ ತಿಂಡಿಗಳ ಕುರಿತು ಆ ಗುಂಪಿನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ನಂತರ ಈ ಗುಂಪಿನ ಕಾರ್ಯ ವಿಧಾನ ವಿಸ್ತಾರಗೊಂಡು ತಿಂಡಿ ಪ್ರಿಯರಿಗಾಗಿ ಈ ಹಬ್ಬವನ್ನು ಮೊದಲ ಬಾರಿಗೆ ರೂಪಿಸಲಾಗಿದೆ. 

‘ಈ ಗುಂಪಿನಲ್ಲಿ ಎಲ್ಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಇದ್ದಾರೆ. 50 ಮಂದಿಯಿಂದ ಪ್ರಾರಂಭವಾದ ಈ ಪಯಣಕ್ಕೆ ಈಗ 20 ಸಾವಿರ ಮಂದಿ ಜೊತೆಯಾಗಿದ್ದಾರೆ. ಜತೆಗೆ, ಕೇವಲ ವಾಟ್ಸ್‌ಆ್ಯಪ್‌ಗೆ ಮಾತ್ರ ನಾವು ಸೀಮಿತವಾಗಿಲ್ಲ. ಫೇಸ್‌ಬುಕ್‌ನಲ್ಲಿ ಪೇಜ್‌ಗಳನ್ನು ಮಾಡಿಕೊಂಡಿದ್ದೇವೆ. ಹೀಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇವೆ’ ಎನ್ನುತ್ತಾರೆ ಆಯೋಜಕರಲ್ಲಿ ಒಬ್ಬರಾದ ಆದರ್ಶ ದೇವತಾ. 

‘ಈ ಹಬ್ಬದಿಂದ ಸಂಗ್ರಹವಾದ ಹಣವನ್ನು ಸಮಾಜ ಕಾರ್ಯಕ್ಕೆ ವ್ಯಯಿಸುತ್ತಿದ್ದೇವೆ. ನಗರದ ಬೇರೆ ಬೇರೆ ಕಡೆಗಳಲ್ಲಿ ‘ಪಬ್ಲಿಕ್‌ ಫುಡ್‌ ಬ್ಯಾಂಕ್’ಅನ್ನು ತೆರೆಯುತ್ತೇವೆ. ಆಹಾರ ಪವಿತ್ರವಾದುದು. ಆಹಾರವನ್ನು ಬಿಸಾಕುವ ಬದಲಾಗಿ, ಈ ಬ್ಯಾಂಕ್‌ನಲ್ಲಿ ಇಟ್ಟರೆ, ಹೊತ್ತಿನ ಊಟಕ್ಕೆ ಕಷ್ಟಪಡುವವರು ಇಲ್ಲಿಂದ ತೆಗೆದುಕೊಂಡು ತಿನ್ನಬಹುದು’ ಎಂದು ವಿವರಿಸಿದರು.

ಹಬ್ಬದ ಇನ್ನೊಂದು ವಿಶೇಷತೆ ಏನೆಂದರೆ, ಕಿರುಚಿತ್ರ ಮಾಡುವ ಆಸಕ್ತಿ ಇರುವವರನ್ನು ಉತ್ತೇಜಿಸುವ ದೃಷ್ಟಿಯಿಂದ ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗೆ ‘ಡೋಂಟ್‌ ವೇಸ್ಟ್‌ ಫುಡ್‌’ ವಿಷಯ ನೀಡಲಾಗಿತ್ತು. 10 ಕಿರುಚಿತ್ರಗಳಲ್ಲಿ ಮೂರನ್ನು ಆಯ್ಕೆ ಮಾಡಲಾಗಿದೆ. ಸಾಮಾರೋಪ ಸಮಾರಂಭದಂದು ಬಹುಮಾನ ನೀಡಲಾಗುವುದು.

ಮಳಿಗೆ ಹಾಕಿದ್ದ ರಾಯಚೂರಿನ ಶೋಭಾ ಮಾತಿಗೆ ಸಿಕ್ಕು, ‘ನಮ್ಮ ಅಳಿಯ ಮೊಬೈಲ್‌ನಲ್ಲಿ ನೋಡಿ ನಮಗೆ ಈ ರೀತಿಯ ಹಬ್ಬ ನಡಿತಾ ಇದೆ ಅಂತ ಹೇಳಿದ್ರು. ಹಾಗಾಗಿ, ಇಲ್ಲಿ ಮಳಿಗೆ ಹಾಕಿದ್ದೇವೆ. ಈಗ ಜನ ಬರ್ತಾ ಇದ್ದಾರೆ. ಬಂದೋರೆಲ್ಲ ಇಷ್ಟ ಪಡ್ತಾ ಇದ್ದಾರೆ. ನಾವು ರೊಟ್ಟಿ, ಚಟ್ನಿಪುಡಿ, ಚಪಾತಿ ಎಲ್ಲಾ ಮಾಡ್ತಾ ಇದ್ದೀವಿ’.  

‘ನಮಗೆ ಹೊಸ ಬಗೆಯ ತಿಂಡಿಗಳು ಸೇರಲ್ಲ. ಹಬ್ಬದಲ್ಲಿ ಸುಮಾರು ತಿಂಡಿಗಳ ರುಚಿ ನೋಡಿದ್ವಿ. ರುಚಿಕರವಾಗಿದೆ’ ಎನ್ನುತ್ತಾರೆ ನಾಗವಾರದ ಸುಕನ್ಯ ಮಂಜುನಾಥ, ಆರ್‌.ಟಿ. ನಗರದ ಜಯಲಕ್ಷ್ಮಿ ಕೃಷ್ಣಮೂರ್ತಿ ಹಾಗೂ ಉಷಾ ರಾಧಾಕೃಷ್ಣ.    

ಖ್ಯಾತ ಡ್ರಮ್ಮರ್ ದೇವಾ, ಖ್ಯಾತ ಪಿಟೀಲು ವಾದಕ ವಿದ್ಯಾಶಂಕರ, ಇಂಡಿಯನ್ ಪ್ಯಾರಾ ಸ್ವಿಮ್ಮರ್ ಕೆ.ಎಸ್ ವಿಶ್ವಾಸ ಹಾಗೂ ಮಿಸ್ಟರ್ ಬ್ಯಾಲನ್ಸರ್ ಖ್ಯಾತಿಯ ನಿಶ್ಚಲ್ ನಾರಾಯಣ, ಡ್ರ್ಯಾಗನ್ ಡಾನ್ಸ್, ಪಂಜಾಬಿ ಭಾಂಗಡಾ ಸೇರಿದಂತೆ ಹಲವು ಮನರಂಜನೆ ಕಾರ್ಯಕ್ರಮಗಳು ನಿತ್ಯ ಸಂಜೆ 6ರಿಂದ ರಾತ್ರಿ 10ವರೆಗೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !