ಚಾಮರಾಜನಗರ: ಭದ್ರತೆ ನಡುವೆ ಟಿಪ್ಪು ಜಯಂತಿ ಸಾಂಗ

7
ಟಿಪ್ಪು ಸುಲ್ತಾನ್‌ ಶೈರ್ಯ, ಆಡಳಿತ ವೈಖರಿಯ ಗುಣಗಾನ ಮಾಡಿದ ಗಣ್ಯರು

ಚಾಮರಾಜನಗರ: ಭದ್ರತೆ ನಡುವೆ ಟಿಪ್ಪು ಜಯಂತಿ ಸಾಂಗ

Published:
Updated:
Deccan Herald

ಚಾಮರಾಜನಗರ: ಬಿಗಿ ಪೊಲೀಸ್‌ ಭದ್ರತೆ ನಡುವೆ ಜಿಲ್ಲೆಯಾದ್ಯಂತ ಟಿಪ್ಪು ಸುಲ್ತಾನ್‌ ಜಯಂತಿ ಕಾರ್ಯಕ್ರಮಗಳು ಯಾವುದೇ ಗೊಂದಲ ಇಲ್ಲದೇ ಸಾಂಗವಾಗಿ ಶನಿವಾರ ನಡೆಯಿತು.

ಜಿಲ್ಲಾ ಕೇಂದ್ರ ಚಾಮರಾಜನಗರದ ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮ ಖಾಕಿ ಸರ್ಪಗಾವಲಿನಲ್ಲಿ ನಡೆಯಿತು. ಡಿವೈಎಸ್‌ಪಿ, ಸರ್ಕಲ್‌ ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ಐವತ್ತೂ ಹೆಚ್ಚು ಪೊಲೀಸರು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ಭದ್ರತೆ ಒದಗಿಸಿದರು. ಪ್ರವೇಶದ್ವಾರದಲ್ಲಿ ಎರಡು ಲೋಹ ಶೋಧಕಗಳನ್ನು ಅಳವಡಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಆಂಬುಲೆನ್ಸ್‌ ಅನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.

ಗಣ್ಯರಿಂದ ಗುಣಗಾನ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ‘ಮೈಸೂರು ಹುಲಿ’ ಎಂದೇ ಗುರುತಿಸಿಕೊಂಡಿರುವ ಟಿಪ್ಪು ಸುಲ್ತಾನ್‌ನ ಗುಣಗಾನ ಮಾಡಿದರು. ವಿರೋಧ ವ್ಯಕ್ತಪಡಿಸುತ್ತಿರುವವನ್ನು ಟೀಕಿಸಿದರು.

ಸಂಸದ ಆರ್‌. ಧ್ರುವನಾರಾಯಣ ಅವರು ಮಾತನಾಡಿ, ‘ಟಿಪ್ಪು ಸುಲ್ತಾನ್‌ ಪರಾಕ್ರಮಿ, ಹೋರಾಟಗಾರ ಮತ್ತು ಉತ್ತಮ ಆಡಳಿತಗಾರ. ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ತನ್ನ ಆಡಳಿತ ವಿಸ್ತರಿಸಿದ್ದ’ ಎಂದರು.

‘ಅವನೊಬ್ಬ ಅಪ್ರತಿಮ ಹೋರಾಟಗಾರ. ಅಂದಿನ ಕಾಲ‌ದಲ್ಲೇ ಸೇನೆಯಲ್ಲಿ ಅತ್ಯುತ್ತಮ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದ. ರಾಕೆಟ್‌ ತಂತ್ರಜ್ಞಾನವನ್ನು ಜಗತ್ತಿಗೆ ಮೊದಲು ಪರಿಚಯಿಸಿದವನೇ ಟಿಪ್ಪು’ ಎಂದು ಹೇಳಿದರು.

‘ಟಿಪ್ಪು ಉತ್ತಮ ಆಡಳಿತಗಾರ ಎಂಬುದಕ್ಕೆ ಹಲವು ಸಾಕ್ಷ್ಯಗಳಿವೆ. ತನ್ನ ಆಡಳಿತದಲ್ಲಿ ವಿವಿಧ ‌ಇಲಾಖೆಗಳನ್ನು ಸೃಷ್ಟಿಸಿದ್ದ. ಭೂ ಸುಧಾರಣಾ ನೀತಿಗಳನ್ನು ಜಾರಿಗೆ ತಂದಿದ್ದ. ಆತನ ಆಡಳಿತದಲ್ಲಿ ಮೈಸೂರು ಭಾಗದ ಆರ್ಥಿಕ ಸ್ಥಿತಿ ಉತ್ತಮವಾಗಿತ್ತು. ಕಂದಾಯ ಸಂಗ್ರಹ ಹೆಚ್ಚಿತ್ತು. ಆ ಕಾಲದಲ್ಲಿ ಇಲ್ಲಿನವರ ತಲಾ ಆದಾಯ, ಬ್ರಿಟನ್‌ ಪ್ರಜೆಯ ತಲಾ ಆದಾಯಕ್ಕಿಂತ ನಾಲ್ಕು ಪಟ್ಟು ಹೆಚ್ಚಿತ್ತು. ಬಡವರಿಗೆ ಹೆಚ್ಚು ಕೂಲಿ ನೀಡುವ ನೀತಿ ಜಾರಿಗೆ ತಂದಿದ್ದ’ ಎಂದು ವಿವರಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು, ‘ರಾಜ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷರೊಂದಿಗೆ ಕೆಚ್ಚೆದೆಯಿಂದ ಹೋರಾಡಿದ ಧೀರ ಟಿಪ್ಪು ಸುಲ್ತಾನ್‌. ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ತರಲು ಟಿಪ್ಪು ಯತ್ನಿಸಿದ್ದ. ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮರಂತೆ ಟಿಪ್ಪು ಸುಲ್ತಾನ್‌ ಕೂಡ ಹೋರಾಟಗಾರ’ ಎಂದು ಅಭಿಪ್ರಾಯಪಟ್ಟರು.

‘ಟಿಪ್ಪು ಜಯಂತಿ ಆಚರಣೆ ಮಾಡುವುದಾಗಿ 2015ರಲ್ಲಿ ಸಿದ್ದರಾಮಯ್ಯ ಸರ್ಕಾರ ಘೋಷಿಸುವುದಕ್ಕಿಂತಲೂ ಮೊದಲೇ ಬಿಜೆಪಿಯವರು ಟಿಪ್ಪು ಜಯಂತಿ ಆಚರಿಸಿದ್ದರು. ನಮ್ಮ ಸಂವಿಧಾನ ವಿವಿಧತೆಯಲ್ಲಿ ಏಕತೆಯನ್ನು ನೀಡಿದೆ. ಎಲ್ಲ ಧರ್ಮವನ್ನು ಸಮಾನಾಗಿ ಕಾಣಬೇಕು‌ ಎಂದು ಹೇಳಿದೆ. ಹೀಗಿರುವಾಗ ವಿರೋಧ ಮಾಡುವುದು ಸರಿಯಲ್ಲ’ ಎಂದು ಅವರು ಅಭಿಪ್ರಾಯ‍ಪಟ್ಟರು.

₹2,377 ಕೋಟಿ ಅನುದಾನ: ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ₹2,377 ಕೋಟಿ ಅನುದಾನ ನೀಡಿದೆ ಎಂದು ಅವರು ಮಾಹಿತಿ ನೀಡಿದರು.

ಮಹಾನ್‌ ರಾಷ್ಟ್ರಪ್ರೇಮಿ: ಟಿಪ್ಪು ಕುರಿತಾಗಿ ಮಾತನಾಡಿದ ಧರ್ಮಗುರು ಮಹಮ್ಮದ್‌ ಇಸ್ಮಾಯಿಲ್‌ ಅವರು, ‘ಟಿಪ್ಪು ಸುಲ್ತಾನ್‌ ಮಹಾನ್‌ ರಾಷ್ಟ್ರಪ್ರೇಮಿ. ದೇಶಕ್ಕಾಗಿ ಮಕ್ಕಳನ್ನೇ ಅಡವಿಟ್ಟಿದ್ದ. ಬ್ರಿಟಿಷರಿಗೆ ಆತ ಸಿಂಹಸ್ವಪ್ನವಾಗಿದ್ದ. ಆತ ವೀರ ಮರಣ ಹೊಂದಿದ ಬಳಿಕ ಬ್ರಿಟಿಷರು, ಇಡೀ ರಾಷ್ಟ್ರವೇ ತಮ್ಮ ಕೈವಶವಾಯಿತು ಎಂದು ಘೋಷಿಸಿದ್ದರು’ ಎಂದು ಹೇಳಿದರು.

ಮೈಸೂರಿನ ಚಿಂತಕ ಟಿ.ಗುರುರಾಜ್‌ ಅವರು ಮುಖ್ಯ ಭಾಷಣಕಾರರಾಗಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಸದಸ್ಯ ಕೆರೆಹಳ್ಳಿ ನವೀನ್‌, ತಾಲ್ಲೂಕು ಪಂಚಾಯಿತಿ ದೊಡ್ಡಮ್ಮ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‌ ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್‌ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಮುಸ್ಲಿಂ ಸಮುದಾಯದ ಮುಖಂಡರಾದ ಜಿಯಾವುಲ್ಲಾ ಷರೀಫ್‌, ಇರ್ಷಾದುಲ್ಲಾ ಖಾನ್‌, ಸೈಯದ್‌ ರಫಿ,  ಸುಹೇಲ್‌ ಆಲಿಖಾನ್‌, ಮಹಮ್ಮದ್‌ ಅಸ್ಗರ್‌,  ಅತಿಕ್‌ ಅಹಮದ್‌, ಕಲಿವುಲ್ಲಾ, ಅಬ್ರಾರ್‌ ಅಹಮದ್‌, ಮುಖಂಡರಾದ ಮಹೇಶ್, ಭಾಗ್ಯಮ್ಮ, ಚಿನ್ನಮ್ಮ ಇದ್ದರು. 

‘ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ’

‘2011ರ ಜನಗಣತಿ ಪ್ರಕಾರ, ದೇಶದ ಜನಸಂಖ್ಯೆಯ ಪೈಕಿ ಶೇ 14ರಷ್ಟು, ರಾಜ್ಯದಲ್ಲಿ ಶೇ 12ರಷ್ಟು ಮುಸ್ಲಿಮರು ಇದ್ದಾರೆ. ಆದರೆ, ಸಮುದಾಯದ ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿ ಶೋಚನೀಯವಾಗಿದೆ. ಸರ್ಕಾರದ ಮಟ್ಟದಲ್ಲಿ ಉದ್ಯೋಗಿಗಳು ಕಡಿಮೆ ಇದ್ದಾರೆ. ಶೇ 1–2ರಷ್ಟು ಇದ್ದಾರಷ್ಟೆ. ಇಡೀ ಸಮುದಾಯ ಈ ಬಗ್ಗೆ ಯೋಚಿಸಬೇಕು’ ಎಂದು ಸಂಸದ ಆರ್‌.ಧ್ರುವನಾರಾಯಣ ಸಲಹೆ ನೀಡಿದರು. 

‘ಸಮುದಾಯದಲ್ಲಿ ಶೇ 42ರಷ್ಟು ಜನ ಅನಕ್ಷರಸ್ಥರಿದ್ದಾರೆ. ಇದರ ಬಗ್ಗೆ ಎಲ್ಲರೂ ಯೋಚನೆ ಮಾಡಬೇಕು. ತಮಗೆ ಸರ್ಕಾರ ಏನೂ ಮಾಡಿಲ್ಲ ಎಂದು ಯಾರೂ ಹೇಳುವ ಹಾಗಿಲ್ಲ. ಯಾಕೆಂದರೆ ಸರ್ಕಾರ ಅಲ್ಪಸಂಖ್ಯಾತರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಮುಸ್ಲಿಂ ಸಮುದಾಯದ ಎಲ್ಲರೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ, ವಿದ್ಯಾವಂತರನ್ನಾಗಿ ಮಾಡಬೇಕು’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !