ತಿರುಮಕೂಡಲು ಕುಂಭಮೇಳ

ಗುರುವಾರ , ಮೇ 23, 2019
31 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ತಿರುಮಕೂಡಲು ಕುಂಭಮೇಳ

Published:
Updated:

ಮೂರು ನದಿಗಳು ಸೇರುವ ಪುಣ್ಯಕ್ಷೇತ್ರಗಳಾದ ಪ್ರಯಾಗರಾಜ್‍, ನಾಸಿಕ್, ಹರಿದ್ವಾರ, ವಾರಾಣಸಿ, ವೃಂದಾವನ, ಕುಂಭಕೋಣಂಗಳಲ್ಲಿ ಕುಂಭಮೇಳ ನಡೆಯುತ್ತದೆ. ಸುಪ್ರಸಿದ್ಧ ಪ್ರಯಾಗರಾಜ್‍ನಲ್ಲಿ ಅರ್ಧ ಕುಂಭಮೇಳ ಈಗ ನಡೆಯುತ್ತಿದೆ .ಮೈಸೂರಿಗೆ 30 ಕಿ.ಮೀ. ದೂರದಲ್ಲಿರುವ ತಿರುಮಕೂಡಲು ನರಸೀಪುರದಲ್ಲಿ ಕಾವೇರಿ, ಕಪಿಲಾನದಿಗಳ ಜೊತೆಗೆ ಗುಪ್ತಗಾಮಿನಿಯಾಗಿ ಸ್ಫಟಿಕ ಸರೋವರವೂ ಸೇರುವುದರಿಂದ ಇದು ತ್ರಿವೇಣಿಸಂಗಮ. 1989ರಿಂದ ಮೂರು ವರ್ಷಗಳಿಗೊಮ್ಮೆ ಇಲ್ಲಿ ನಡೆಯುವ ಕುಂಭಮೇಳದಿಂದಾಗಿ ಈ ಪ್ರವಿತ್ರ ಯಾತ್ರಸ್ಥಳವನ್ನು ದೇಶದಾದ್ಯಂತ ಹೆಸರಾಗಿದೆ. ಈ ಬಾರಿ ಫೆಬ್ರುವರಿ 17ರಿಂದ 19ರ ವರೆಗೆ, ಮಾಘ ಶುದ್ಧ ಹುಣ್ಣಿಮೆಯ ವರೆಗೆ, ಮೂರು ದಿನಗಳ ಕಾಲ ನಡೆಯುತ್ತದೆ.

ಕುಂಭಮೇಳದ ಅಂಗವಾಗಿ ಮೂರು ದಿನಗಳ ಕಾಲ ಧಾರ್ಮಿಕ ಸಭೆ, ರುದ್ರಾಭಿಷೇಕ, ಹೋಮಹವನಗಳು, ಹಲವು ಪೂಜಾ ಕೈಂಕರ್ಯಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ಕುಂಭಮೇಳಕ್ಕೆ ಬಂದ ಸಾಧುಸಂತರು ಇಲ್ಲಿಗೂ ಬರುವುದು ವಿಶೇಷ. ದೇಶದ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ತ್ರಿವೇಣಿಸಂಗಮದ ಸ್ಥಳದಲ್ಲಿ ಹಾಗೂ ಸುತ್ತಮುತ್ತ ಆಳವಾದ ಮರಳಿಲ್ಲದ ಸ್ಥಳಗಳಲ್ಲಿ ಮರಳು ಮೂಟೆಗಳನ್ನು ಜೋಡಿಸಿ ಭಕ್ತಾದಿಗಳಿಗೆ ಪುಣ್ಯಸ್ನಾನಕ್ಕೆ ಅಗತ್ಯ ಏರ್ಪಾಡು ಮಾಡಲಾಗಿದೆ. ಬಟ್ಟೆ ಬದಲಿಸಲು ಅನುಕೂಲವಾಗುವಂತೆ ಅನೇಕ ಕಡೆ ನದಿಯ ಎರಡೂ ದಡಗಳಲ್ಲಿ ತಾತ್ಕಾಲಿಕ ಕೊಠಡಿಗಳನ್ನು ನಿರ್ಮಿಸಲಾಗಿದೆ. ಶೌಚಾಲಯ, ಆಸ್ಪತ್ರೆಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ, ಮಾಹಿತಿ ಕೇಂದ್ರ, ಸಹಾಯವಾಣಿ, ಮಿನಿ ಬಸ್ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ.

ನದಿಯ ಆಚೆಯ ದಡದಲ್ಲಿ ಗುಂಜಾ ನರಸಿಂಹ ದೇಗುಲವಿದೆ. ಇದು ಐದು ಅಂತಸ್ತುಗಳಲ್ಲಿದ್ದು ದ್ರಾವಿಡ ಶೈಲಿಯಲ್ಲಿದೆ. ಇದು ಪ್ರಾಚೀನ ದೇವಾಲಯ; ಮಧ್ಯಯುಗದ ಕಾಲದ್ದೆಂದೂ ಹೇಳಲಾಗುತ್ತದೆ. ಲಕ್ಷ್ಮಿಯನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡ ಲಕ್ಷ್ಮೀನರಸಿಂಹಸ್ವಾಮಿಯ ಸುಂದರ ವಿಗ್ರಹವನ್ನು ಗರ್ಭಗುಡಿಯಲ್ಲಿ ಕಾಣಬಹುದು. ಕಂಬದಲ್ಲಿ ಅವತರಿಸಿದ ನರಸಿಂಹ ದೇವರ ಕೈಯಲ್ಲಿ ಗುಲಗಂಜಿ ಇರುವ ಕಾರಣ ‘ಗುಂಜಾ ನರಸಿಂಹ’ ಎಂದೇ ಖ್ಯಾತವಾಗಿದೆ. ಇಲ್ಲಿನ ಕಂಬವೊಂದರ ಮೇಲ್ಭಾಗದಲ್ಲಿ ಹಲ್ಲಿಯೊಂದರ ಉಬ್ಬು ಚಿತ್ರವಿದೆ. ಇದನ್ನು ಮುಟ್ಟಿದರೆ ದೋಷ ಪರಿಹಾರವಾಗುತ್ತದೆಂಬುದು ಭಕ್ತರು ನಂಬಿಕೆ.

ತಲಕಾಡು, ಸೋಮನಾಥಪುರ, ಮುಡುಕುತೊರೆ, ಮೂಗೂರು, ಶಿವನ ಸಮುದ್ರ, ಶ್ರೀರಂಗಪಟ್ಟಣ, ನಂಜನಗೂಡು, ಸುತ್ತೂರು, ಸೋಸಲೆ, ಮೈಸೂರು, ಬಂಡಿಪುರ – ಹೀಗೆ ತಿರುಮಕೂಡಲಿನ ಸುತ್ತ ಹಲವು ಯಾತ್ರಾ ಮತ್ತು ಪ್ರವಾಸಿಸ್ಥಳಗಳಿವೆ. ಬೆಂಗಳೂರಿನಿಂದ ಮದ್ದೂರು, ಮಳವಳ್ಳಿ ಮಾರ್ಗ; ಮೈಸೂರಿನಿಂದ ವರುಣ, ಗರ್ಗೇಶ್ವರಿ ಮೂಲಕ; ಚಾಮರಾಜನಗರ, ಕೊಳ್ಳೇಗಾಲ ಮೂಲಕ ಮತ್ತು ಮಂಡ್ಯ, ಕಿರುಗಾವಲು ಮೂಲಕ ತಿ.ನರಸೀಪುರವನ್ನು ತಲುಪಬಹುದು.

**

ದಕ್ಷಿಣ ಕಾಶಿ ಎಂದು ಹೆಸರು ಪಡೆದ ತಿರುಮಕೂಡಲು ಶೈವ ಮತ್ತು ವೈಷ್ಣವ ಸಂಪ್ರದಾಯದ ಸಂಗಮ ತಾಣ. ಇಲ್ಲಿ ಗುಂಜಾ ನರಸಿಂಹ ಸ್ವಾಮಿ, ಅಗಸ್ತ್ಯೇಶ್ವರ, ಮೂಲಸ್ಥಾನೇಶ್ವರ, ಗಣಪತಿ, ಚೌಡೇಶ್ವರಿ, ಆಂಜನೇಯ ದೇಗುಲಗಳಿವೆ. ಈ ಕ್ಷೇತ್ರಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ಇಲ್ಲಿನ  ಇಲ್ಲಿರುವ ವಿಶ್ವೇಶ್ವರನ ಲಿಂಗವನ್ನು ಅಗಸ್ತ್ಯ ಮಹರ್ಷಿಗಳೇ ಪ್ರತಿಷ್ಠಾಪಿಸಿದ್ದಾರೆ ಎನ್ನುವ ನಂಬಿಕೆಯಿದೆ. ಲಿಂಗದ ಮೇಲೆ ರಂಧ್ರವೊಂದಿದ್ದು ಅಲ್ಲಿ ಸ್ಫಟಿಕ ಸರೋವರದ ನೀರು ಸದಾ ಒಸರುತ್ತಿರುತ್ತದೆ. ಇದನ್ನೇ ಭಕ್ತರಿಗೆ ತೀರ್ಥವಾಗಿ ನೀಡಲಾಗುತ್ತದೆ. ದೇಗುಲದ ಉತ್ತರ ಭಾಗಕ್ಕೆ ಬ್ರಹ್ಮಾಶ್ವತ್ಥವಿದೆ. ಈ ಬ್ರಹ್ಮಾಶ್ವತ್ಥದಲ್ಲಿ ನೂರಾರು ಜನರು ನಾಗಪ್ರತಿಷ್ಠೆಯನ್ನು ಮಾಡಿದ್ದಾರೆ. ಯುಗಾದಿಯ ವೇಳೆಯಲ್ಲಿ ಇಲ್ಲಿ ಜಾತ್ರೆ. ಆಗಲೂ ಪುಣ್ಯಸ್ನಾನಕ್ಕಾಗಿ ಭಕ್ತಸಮೂಹ ಇಲ್ಲಿ ಸೇರುತ್ತದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !