ಸೋಮವಾರ, ಮಾರ್ಚ್ 8, 2021
27 °C

ತಂಬಾಕು ಸೇವನೆ ಎಷ್ಟು ಅಪಾಯಕಾರಿ?

ಡಾ. ಸಂದೀಪ್ ನಾಯಕ್ Updated:

ಅಕ್ಷರ ಗಾತ್ರ : | |

Prajavani

ಸಿಗರೇಟ್‌ನಿಂದ ಎಳೆದ ಒಂದು ಪಫ್ ನಿಮಗೆ ಕೆಲ ಕ್ಷಣಗಳವರೆಗೆ ಉಲ್ಲಾಸ ನೀಡಬಹುದು. ಆದರೆ ಇದು ಅತ್ಯಂತ ಮಾರಕ ರೋಗಗಳಲ್ಲಿ ಒಂದಾದ ಕ್ಯಾನ್ಸರ್‌ಗೆ ದಾರಿ ಮಾಡಿಕೊಟ್ಟಂತಾಗಬಹುದು ಗೊತ್ತೇ?

ಭಾರತ ಅತಿ ಹೆಚ್ಚು ತಂಬಾಕು ಸೇವನೆ ಮಾಡುವ ರಾಷ್ಟ್ರವಾಗಿದ್ದು, ಸುಮಾರು 26 ಕೋಟಿ ತಂಬಾಕು ಬಳಕೆದಾರರು ಭಾರತದಲ್ಲಿದ್ದಾರೆ. ಇವರಲ್ಲಿ ಸಿಗರೇಟ್, ಹುಕ್ಕಾ, ತಾಂಬೂಲ, ಗುಟ್ಕಾ ಮತ್ತು ಖೈನಿ.. ಹೀಗೆ ಎಲ್ಲ ರೀತಿಯ ತಂಬಾಕು ಬಳಕೆದಾರರು ಸೇರಿದ್ದಾರೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ (ಐಸಿಎಮ್‌ಆರ್) ವರದಿ ಪ್ರಕಾರ ಭಾರತದಲ್ಲಿ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ (ಪುರುಷ ಮತ್ತು ಮಹಿಳೆಯರನ್ನು ಒಳಗೊಂಡಂತೆ) ಶೇ 30 ರಷ್ಟು ಪ್ರಕರಣಗಳಿಗೆ ತಂಬಾಕು ಸೇವನೆ ಮುಖ್ಯ ಕಾರಣವಾಗಿದೆ.

ಜನಸಾಮಾನ್ಯರಲ್ಲಿರುವ ತಿಳಿವಳಿಕೆ ಏನೆಂದರೆ ತಂಬಾಕು ಸೇವನೆಯಿಂದ ಕೇವಲ ಬಾಯಿ ಕ್ಯಾನ್ಸರ್ ಅಥವಾ ಶ್ವಾಸಕೋಶದ ಕ್ಯಾನ್ಸರ್ ಮಾತ್ರವೇ ಬರುತ್ತದೆ ಎಂಬುದು. ಆದರೆ, ತಂಬಾಕು ಸೇವನೆಯಿಂದ ಯಕೃತ್ತು, ದೊಡ್ಡಕರುಳು, ಗುದನಾಳ, ಶ್ವಾಸಕೋಶ, ಬಾಯಿಯ ಕ್ಯಾವಿಟಿ, ಗಂಟಲು, ಮೇದೊಜೀರಕಾಂಗ ಮತ್ತು ಇಡೀ ಶರೀರದ ಯಾವುದೇ ಭಾಗದಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಜಗಿದು ತಿನ್ನುವ ತಂಬಾಕು ಹೆಚ್ಚು ಅಪಾಯಕಾರಿ

ತಂಬಾಕನ್ನು ಎರಡು ರೀತಿಯಲ್ಲಿ ಸೇವಿಸಲಾಗುವುದು. ಒಂದು ಧೂಮಪಾನ ಮಾಡುವ ಮೂಲಕ. ಮತ್ತೊಂದು ಬಾಯಿಯ ಮೂಲಕ (ಜಗಿದು) ಸೇವಿಸಲಾಗುವ ತಂಬಾಕು. ಧೂಮಪಾನದಿಂದ ಗಂಟಲಿನ ಮೇಲ್ಭಾಗದ, ಮೂಗಿನ ನಾಳದ, ಸೈನಸ್, ತುಟಿ, ಧ್ವನಿಪೆಟ್ಟಿಗೆ, ಬಾಯಿ, ಗಂಟಲು, ಅನ್ನನಾಳ ಮತ್ತು ಕರುಳು ಈ ಎಲ್ಲಾ ಭಾಗಗಳಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು. ಇದರಿಂದ ಮೇದೊಜೀರಕಾಂಗದಲ್ಲಿ, ಗರ್ಭಕಂಠದಲ್ಲಿ, ಅಂಡಾಶಯ, ಕೊಲೆರೆಕ್ಟಮ್‌ನಲ್ಲಿ, ಮೂತ್ರಪಿಂಡಗಳಲ್ಲಿ, ಹೊಟ್ಟೆ ಭಾಗದಲ್ಲಿ ಹಾಗೂ ರಕ್ತಕಣಗಳಲ್ಲಿಯೂ (ಲ್ಯುಕೆಮಿಯಾ) ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ನು ಜಗಿದು ತಿನ್ನುವ ಅಥವಾ ಧೂಮಪಾನವಲ್ಲದ ತಂಬಾಕು ಸೇವನೆಯಿಂದ ಅನ್ನನಾಳ, ಬಾಯಿ, ಗಂಟಲು ಮತ್ತು ಮೇದೊಜೀರಕಾಂಗದಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಸಂಶೋಧನೆಗಳ ಪ್ರಕಾರ ಧೂಮಪಾನಕ್ಕಿಂತಲೂ ಜಗಿದು ತಿನ್ನುವ ತಂಬಾಕು ಅತ್ಯಂತ ಅಪಾಯಕಾರಿ.

ತಂಬಾಕು ಬಿಡುಗಡೆ ಮಾಡುವ ಹಾನಿಕಾರಕ ರಾಸಾಯನಿಕಗಳು ನಮ್ಮ ಜೀವಕೋಶಗಳ ಡಿಎನ್‌ಎಗಳನ್ನೇ ನಾಶಪಡಿಸುತ್ತವೆ. ಈ ಮೂಲಕ ನಮ್ಮ ಶರೀರದ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸಿಬಿಡುತ್ತವೆ. ಈ ಹಾನಿಕಾರಕ ರಾಸಾಯನಿಕಗಳು ನಮ್ಮ ಶರೀರದ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುವುದರಿಂದ ಕ್ಯಾನ್ಸರ್ ಕಣಗಳನ್ನು ಕೊಲ್ಲುವ ಜೀವಕಣಗಳಿಗೆ ಶಕ್ತಿ ಇಲ್ಲದಂತಾಗುತ್ತದೆ. ಒಂದು ಜೀವಕಣದ ಸಾಮಾನ್ಯ ಬೆಳವಣಿಗೆಗೆ ಡಿಎನ್‌ಎ ನೆರವಾಗುತ್ತದೆ. ತಂಬಾಕಿನ ಹಾನಿಕಾರಕ ರಾಸಾಯನಿಕಗಳಿಂದ ಅದಕ್ಕೆ ಹಾನಿಯುಂಟಾದಲ್ಲಿ ಆ ಜೀವ ಕಣವು ನಿಯಂತ್ರಿಸಲಾಗದ ರೀತಿಯಲ್ಲಿ ಬೆಳೆಯುತ್ತಾ ಹೋಗುವ ಮೂಲಕ ಕ್ಯಾನ್ಸರ್‌ಗೆ ಕಾರಣವಾಗುತ್ತದೆ.

ಸೆಕೆಂಡ್‌ ಹ್ಯಾಂಡ್‌ ಧೂಮಪಾನ

ಕೇವಲ ತಂಬಾಕು ಸೇವಿಸುವವರು ಮತ್ತು ಧೂಮಪಾನಿಗಳಷ್ಟೇ ಕ್ಯಾನ್ಸರ್ ಭೀತಿಯನ್ನು ಎದುರಿಸುತ್ತಿಲ್ಲ, ಧೂಮಪಾನಿಗಳಲ್ಲದವರು ಕೂಡ ಅಷ್ಟೇ ಅಪಾಯದಲ್ಲಿದ್ದಾರೆ. ಧೂಮಪಾನ ಮಾಡದೇ ಇರುವವರು ಹಲವು ಬಾರಿ ಸೆಕೆಂಡ್ ಹ್ಯಾಂಡ್ ಅಥವಾ ಥರ್ಡ್ ಹ್ಯಾಂಡ್ ಧೂಮಪಾನಿಗಳಾಗಿರುತ್ತಾರೆ. ಇದು ಧೂಮಪಾನಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಆಗಿರುವ ಅನಾಹುತ. ಧೂಮಪಾನಿಯೊಬ್ಬ ಬಿಟ್ಟ ಹೊಗೆಯನ್ನು ಧೂಮಪಾನ ಮಾಡದೇ ಇರುವ ವ್ಯಕ್ತಿ ಸೇವಿಸಿದರೆ ಆತನ ಶರೀರಕ್ಕೂ ಕೂಡ ಧೂಮಪಾನ ಮಾಡಿದ ವ್ಯಕ್ತಿಯ ಶರೀರಕ್ಕೆ ಸೇರುವಷ್ಟೇ ಪ್ರಮಾಣದ ಹಾನಿಕಾರಕ ರಾಸಾಯನಿಕಗಳು ಸೇರ್ಪಡೆಯಾಗುತ್ತವೆ. ಈ ರೀತಿ ಧೂಮಪಾನಿಯಲ್ಲದ ವ್ಯಕ್ತಿಯ ಶರೀರಕ್ಕೆ ಹೊಕ್ಕ ಹಾನಿಕಾರಕ ರಾಸಾಯನಿಕಗಳು ಕ್ಯಾನ್ಸರ್ ಉತ್ಪತ್ತಿ ಮಾಡುತ್ತವೆ.

ಥರ್ಡ್ ಹ್ಯಾಂಡ್ ಸ್ಮೋಕರ್ ಎಂದರೆ ಒಬ್ಬ ಧೂಮಪಾನಿಯು ಹೊಗೆ ಸೇವಿಸಿ ಬಿಟ್ಟಾಗ ಅದರಿಂದ ಆಚೆ ಬರುವ ಹಾನಿಕಾರಕ ರಾಸಾಯನಿಕಗಳು ಕುರ್ಚಿ, ಸೋಫಾ ಹಾಗೂ ಬಟ್ಟೆ ಇನ್ನಿತರ ವಸ್ತುಗಳ ಮೇಲೆ ಉಳಿದಿರುತ್ತವೆ. ಈ ರೀತಿಯ ರಾಸಾಯನಿಕಗಳು ಆಯಾ ಜಾಗಗಳಲ್ಲಿ ವರ್ಷಗಳ ಕಾಲ ಉಳಿಯಬಲ್ಲವು. ಇಂತಹ ರಾಸಾಯನಿಕಗಳ ಸಂಪರ್ಕಕ್ಕೆ ಬಂದರೂ ಕೂಡ ಕ್ಯಾನ್ಸರ್‌ಗೆ ಕಾರಣವಾಗುವ ರಾಸಾಯನಿಕಗಳು ನಮ್ಮ ಶರೀರವನ್ನು ಹೊಕ್ಕಿರುತ್ತವೆ. ಕ್ಯಾನ್ಸರ್ ಅಲ್ಲದೆ ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಕೂಡ ತಂದೊಡ್ಡಬಲ್ಲವು. ಇನ್ನು ಚಿಕ್ಕ ಮಕ್ಕಳು ನೆಲ, ಕಿಟಕಿ, ಬಾಗಿಲು ಮತ್ತು ಪೀಠೋಪಕರಣಗಳನ್ನು ಮುಟ್ಟುತ್ತವೆ. ಈ ಮೂಲಕ ಹಾನಿಕಾರಕ ರಾಸಾಯನಿಕಗಳ ಸಂಪರ್ಕಕ್ಕೆ ಬರುವ ಸಾಧ್ಯತೆ ಹೆಚ್ಚಿರುತ್ತದೆ.

ಧೂಮಪಾನ ಮಾಡುವಂತಹ ಮಹಿಳೆಯು ಸಾಮಾನ್ಯವಾಗಿ ಗರ್ಭಕಂಠಕದ ಮತ್ತು ಸ್ತನಗಳ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಹೆಚ್ಚು. ತಂಬಾಕಿನಿಂದ ಬಿಡುಗಡೆಯಾಗುವ ಹಾನಿಕಾರಕ ರಾಸಾಯನಿಕಗಳು ಗರ್ಭಕೋಶದ ಜೀವಕಣಗಳನ್ನು ಹಾಳುಮಾಡುತ್ತವೆ. ಇದರಿಂದ ಗರ್ಭಕಂಠಕದ ಕ್ಯಾನ್ಸರ್ ಎದುರಾಗಬಹುದು. ಯುವ ಪೀಳಿಗೆಯಲ್ಲಿ ಸ್ತನ ಕ್ಯಾನ್ಸರ್‌ಗೆ ಧೂಮಪಾನ ನೇರ ಸಂಪರ್ಕ ಹೊಂದಿದೆ. ಇದರಿಂದ ಸ್ತನ ಕ್ಯಾನ್ಸರ್ ಚಿಕಿತ್ಸೆ ಸಂದರ್ಭದಲ್ಲೂ ತೊಂದರೆ ಎದುರಾಗುತ್ತದೆ.

(ಲೇಖಕರು ಸರ್ಜಿಕಲ್ ಅಂಕಾಲಜಿಸ್ಟ್, ರೊಬೋಟಿಕ್ ಲ್ಯಾಪ್ರೊಸ್ಕೋಪಿಕ್ ಅಂಕೊ ಸರ್ಜನ್ ಎಂಎಸಿಎಸ್ ಕ್ಲಿನಿಕ್, ಬೆಂಗಳೂರು)

ಕ್ಯಾನ್ಸರ್‌ ಚಿಕಿತ್ಸೆಗೂ ತೊಂದರೆ

ಕ್ಯಾನ್ಸರ್ ಚಿಕಿತ್ಸೆ ನಂತರ ಮತ್ತು ಚಿಕಿತ್ಸೆಗೆ ಮೊದಲೇ ಒಬ್ಬ ವ್ಯಕ್ತಿ ಧೂಮಪಾನ ಮಾಡಿದರೆ, ಅದು ಸಮಸ್ಯೆಯನ್ನು ಮತ್ತಷ್ಟು ಜಟಿಲವಾಗಿಸುತ್ತದೆ. ಶಸ್ತ್ರಚಿಕಿತ್ಸೆ ಬಳಿಕ ಧೂಮಪಾನ ಮಾಡಿದರೆ ಚಿಕಿತ್ಸೆಯಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ರೇಡಿಯೇಷನ್ ಥೆರಪಿಗೆ ಒಳ್ಳಪಟ್ಟಿರುವಾಗಲೂ ಧೂಮಪಾನ ಮಾಡಿದರೆ ಶ್ವಾಸಕೋಶಗಳು ಹಾನಿಗೊಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾರ್ಮೋನ್‌ ಥೆರಪಿ ಔಷಧಿಗಳನ್ನು ಸೇವಿಸುತ್ತಿದ್ದರೆ ರಕ್ತದ ಹೆಪ್ಪುಗಟ್ಟುವಿಕೆ ತಲೆದೋರುತ್ತದೆ. ಒಬ್ಬ ವ್ಯಕ್ತಿಯು ಕ್ಯಾನ್ಸರ್ ನಿರ್ಮೂಲನೆಗಾಗಿ ಶಸ್ತ್ರಚಿಕಿತ್ಸೆಗೆ ಒಳಪಡುತ್ತಿದ್ದಾನೆಂದರೆ, ಆ ವ್ಯಕ್ತಿಯು ಚಿಕಿತ್ಸೆಗೂ 2–3 ವಾರಗಳ ಮೊದಲೇ ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸಿರಬೇಕು. ಇದರಿಂದ ಉತ್ತಮ ಫಲಿತಾಂಶ ಕಾಣಲು ಸಾಧ್ಯವಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು