ಶುಕ್ರವಾರ, ಸೆಪ್ಟೆಂಬರ್ 20, 2019
21 °C
ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಗತಿ ಪರಿಶೀಲನೆ

ಮೂಲಸೌಕರ್ಯ, ಖಾಸಗಿ ಸಹಭಾಗಿತ್ವಕ್ಕೆ ಒತ್ತು: ಸಿ.ಟಿ.ರವಿ ಸೂಚನೆ

Published:
Updated:
Prajavani

ಚಾಮರಾಜನರ: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಕನಿಷ್ಠ ಮೂಲಸೌಕರ್ಯಗಳನ್ನು ಕಲ್ಪಿಸಲು ಅಧಿಕಾರಿಗಳು ಗಮನ ನೀಡಬೇಕು ಎಂದು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರು ಸೂಚಿಸಿದರು. 

ಎರಡೂ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ‘ಪ್ರವಾಸಿ ತಾಣಗಳಿಗೆ ಸಂಪರ್ಕ ವ್ಯವಸ್ಥೆ, ಆತಿಥ್ಯ, ಶೌಚಾಲಯ, ಕುಡಿಯುವ ನೀರು ಹಾಗೂ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು. ಪ್ರವಾಸಿಗಳಿಗೆ ತಾಣಗಳ ಬಗ್ಗೆ ಮಾಹಿತಿ ನೀಡುವ ಮಾರ್ಗದರ್ಶಿಗಳನ್ನು ನೇಮಿಸಬೇಕು. ಇದಕ್ಕೆ ಸ್ಥಳೀಯರ ಸಹಕಾರ ಪಡೆಬಹುದು’ ಎಂದು ಹೇಳಿದರು. 

‘ಪ್ರವಾಸಿ ತಾಣಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಸ್ಥಳೀಯರಿಗೆ ನೀಡಬೇಕು‌. ಅವರೇ ಸಮಿತಿ ರಚಿಸಿಕೊಂಡು ತಾಣದ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವುದಾದರೂ ಸಂಘ, ಸಂಸ್ಥೆ ಅಥವಾ ವ್ಯಕ್ತಿ ನಿರ್ವಹಣೆಗೆ ಮುಂದೆ ಬಂದರೆ ಅವಕಾಶ ನೀಡಬಹುದು’ ಎಂದು ಅವರು ಹೇಳಿದರು. 

ಪ್ರವಾಸೋದ್ಯಮ ಮಾಹಿತಿ ಕೇಂದ್ರ ತೆರೆಯಲು ಸೂಚನೆ: ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದಕ್ಕಾಗಿ ಮಾಹಿತಿ ಕೇಂದ್ರವೊಂದನ್ನು ತೆರೆಯುವಂತೆಯೂ ಅಧಿಕಾರಿಗಳಿಗೆ ಅವರು ಸೂಚಿಸಿದರು. 

ತರಾಟೆ: ಚಾಮರಾಜನಗರ ನಗರದ ಕರಿವರದರಾಜನಬೆಟ್ಟದ ಮೆಟ್ಟಿಲು ಕಾಮಗಾರಿ ವಿಳಂಬವಾಗಿರುವುದಕ್ಕೆ ‌ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್‌) ಸಹಾಯಕ ನಿರ್ದೇಶಕ ಸುಂದರೇಶ್‌ ಮೂರ್ತಿ ಅವರನ್ನು ತರಾಟೆಗೆ ತೆಗೆದುಕೊಂಡರು.

‘ಬಹುತೇಕ ಎಲ್ಲ ಕಾಮಗಾರಿ ಮುಕ್ತಾಯವಾಗಿದೆ. ಕಾಮಗಾರಿಗೆ ₹14 ಲಕ್ಷ ಹೆಚ್ಚುವರಿ ಹಣ ಬೇಕಿತ್ತು. ಈಗ ಮಂಜೂರಾಗಿದೆ. ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಸುಂದರೇಶ್‌ ಮೂರ್ತಿ ಅವರು ಸಚಿವರಿಗೆ ತಿಳಿಸಿದರು.

ಬಿಳಿಗಿರಿರಂಗನ ಬೆಟ್ಟದ ಮೆಟ್ಟಿಲುಗಳ ನಿರ್ಮಾಣಕ್ಕೆ ಹಾಗೂ ಮಹದೇಶ್ವರ ಬೆಟ್ಟದಲ್ಲಿ ಪ್ರವಾಸಿ ಮಂದಿರದ ಎದುರಾಗಿ ಹಾದುಹೋಗುವ ರಸ್ತೆ ಹಾಗೂ ಚರಂಡಿಯ ಅಭಿವೃದ್ಧಿಗೆ ಅಗತ್ಯವಾದ ಹಣವನ್ನು ಮಂಜೂರು ಮಾಡುವುದಾಗಿ ‌ಸಚಿವರು ಭರವಸೆ ನೀಡಿದರು. 

ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು ಮಾತನಾಡಿ, ‘ಜಿಲ್ಲೆಯಲ್ಲಿ ಪುರಾತನ ಕಾಲದ ದೇವಸ್ಥಾನಗಳು ಹಲವು ಇವೆ. ಅವುಗಳನ್ನು ಜೀರ್ಣೋದ್ಧಾರ ಮಾಡಿದರೆ ಪ್ರವಾಸಿಗರು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ’ ಎಂದರು. 

ಅನುದಾನಕ್ಕೆ ಮನವಿ: ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ಮಾತನಾಡಿ, ‘ಪ್ರಾಣಿಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಸಫಾರಿ ಕೌಂಟರ್‌ಗಳನ್ನು ಕಾಡಿನಿಂದ ಹೊರಗಡೆ ಮಾಡಿದ್ದೇವೆ. ಬರುವ ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಬೇಕು. ₹8 ಕೋಟಿ ಯೋಜನೆ ರೂಪಿಸಿದ್ದೇವೆ. ಮೊದಲ ಹಂತವಾಗಿ ₹3.5 ಕೋಟಿ ಅಗತ್ಯವಿದೆ. ಅದನ್ನು ಬೇಗ ಬಿಡುಗಡೆ ಮಾಡಬೇಕು’ ಎಂದು ಮನವಿ ಮಾಡಿದರು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.  

ಜಿಲ್ಲೆಯ ವಿವಿಧ ಕಡೆಗಳಲ್ಲಿ ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆಗಳು ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯ ಬಗ್ಗೆ ಅಧಿಕಾರಿಗಳಿಂದ ಸಿ.ಟಿ.ರವಿ ಮಾಹಿತಿ ಪಡೆದರು ಮಾಹಿತಿ ಪಡೆದರು. 

ಶಾಸಕರಾದ ಆರ್‌.ನರೇಂದ್ರ, ಸಿ.ಎಸ್‌.ನಿರಂಜನ್‌ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌, ಉಪವಿಭಾಗಾಧಿಕಾರಿ ನಿಖಿತ ಎಸ್‌.ಚಿನ್ನಸ್ವಾಮಿ, ಚಾಮರಾಜನಗರ ಪ್ರಾದೇಶಿಕ ವೃತ್ತದ ಪ್ರಭಾರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ಶಂಕರ್‌, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಜನಾರ್ದನ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. 

ಭರಚುಕ್ಕಿ ಅಭಿವೃದ್ಧಿ ನೀಲ ನಕ್ಷೆ

ಭರಚುಕ್ಕಿ ಜಲಪಾತ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಅಂತರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವನ್ನಾಗಿ ರೂಪಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಪ್ರಸ್ತುತ ಪಡಿಸಿದ ಯೋಜನಾ ನಕ್ಷೆ ಗಮನಸೆಳೆಯಿತು.

ಮಲೆ ಮಹದೇಶ್ವರ ವನ್ಯಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು ಯೋಜನಾ ನಕ್ಷೆಯನ್ನು ಸಚಿವರ ಮುಂದೆ ಪ್ರದರ್ಶಿಸಿದರು. 

‘21 ಪರಿಕಲ್ಪನೆಗಳನ್ನು ಹೊಂದಿರುವ ‘ಜೀವವೈವಿಧ್ಯ ಭರಚುಕ್ಕಿ’ ಯೋಜನೆ 150 ಎಕರೆ ಪ್ರದೇಶದಲ್ಲಿ ಮೈದಳೆಯಲಿದೆ. ಯೋಜನಾ ವೆಚ್ಚ ಅಂದಾಜು ₹100 ಕೋಟಿಯಾಬಹುದು’ ಎಂದು ಏಡುಕುಂಡಲು ಅವರು ತಿಳಿಸಿದರು. 

‘ಅತ್ಯಂತ ಆಕರ್ಷಕ ಮಹಾದ್ವಾರ, ನವಿಲಿನ ಎರಡು ಬೃಹತ್‌ ಶಿಲ್ಪಗಳು, ನೀರ ಕಾರಂಜಿ, ಬಯಲು ರಂಗ ಮಂದಿರ, ಬಿದಿರು, ಕಳ್ಳಿ, ಚಿಟ್ಟೆ ಉದ್ಯಾನಗಳು ಸೇರಿದಂತೆ 16 ಉದ್ಯಾನಗಳು, ಗಿಡಮೂಲಿಕೆಗಳನ್ನು ಒಳಗೊಂಡ ನಕ್ಷತ್ರವನ, ಡೊಡ್ಡ ಕೆರೆ. ಮ್ಯೂಸಿಯಂ, ಫುಡ್‌ ಕೋರ್ಟ್‌, ವಿದ್ಯುತ್‌ ಚಾಲಿತ ವಾಹನಗಳು ಸೇರಿದಂತೆ ಪರಿಸ್ನೇಹಿ ಎಲ್ಲ ವ್ಯವಸ್ಥೆಗಳು ಇಲ್ಲಿರಲಿವೆ. ಹಂತ ಹಂತವಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಬಹುದು’ ಎಂದು ಅವರು ಹೇಳಿದರು. ಸಚಿವರು ಕೂಡ ಯೋಜನೆಯನ್ನು ಮೆಚ್ಚಿಕೊಂಡರು.

‘ಗ್ರಾಮಗಳ ಮಾಹಿತಿ ಸಂಗ್ರಹಿಸಿ’

ಜಿಲ್ಲೆಯಲ್ಲಿರುವ ಎಲ್ಲ ಕಂದಾಯ ಗ್ರಾಮಗಳ ಇತಿಹಾಸವನ್ನು ದಾಖಲು ಮಾಡಲು ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಿ.ಟಿ.ರವಿ ಅವರು ಸೂಚಿಸಿದರು.

‘ಮೈಸೂರು ವಿಶ್ವವಿದ್ಯಾಲಯದ ನೆರವು ಪಡೆದು ಜಿಲ್ಲೆಯ ಪದವಿ ಕಾಲೇಜುಗಳ ಕನ್ನಡ, ಸಮಾಜಶಾಸ್ತ್ರ, ರಾಜ್ಯ ಶಾಸ್ತ್ರ ವಿದ್ಯಾರ್ಥಿಗಳ ಸಹಾಯದಿಂದ ಪ್ರತಿ ಕಂದಾಯ ಗ್ರಾಮಗಳಿಗೂ ಭೇಟಿ ಕೊಟ್ಟು, ಗ್ರಾಮಗಳ ಇತಿಹಾಸ, ಅಲ್ಲಿನ ಸಂಸ್ಕೃತಿ ಹಾಗೂ ಇನ್ನಿತರ ವಿಷಯಗಳನ್ನು ಸಂಗ್ರಹಿಸಿಬೇಕು. ಜಿಲ್ಲಾ ಮಟ್ಟದಲ್ಲಿ ಸಮಿತಿಯೊಂದನ್ನು ರಚಿಸಿ ಮಾಹಿತಿಯನ್ನು ಪರಿಶೀಲನೆಗೆ ಒಳಪಡಿಸಬೇಕು. ವಿವರಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ. ಈ ಬಗ್ಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಸೂಚನೆ ನೀಡಲಾಗುತ್ತದೆ’ ಎಂದು ಸಚಿವರು ಹೇಳಿದರು.

ಗಡಿಭವನ: ಮೂರನೇ ಸಂಸ್ಥೆಯಿಂದ ಪರಿಶೀಲನೆಗೆ ಸೂಚನೆ

ಕೊಳ್ಳೇಗಾಲದಲ್ಲಿ ನಿರ್ಮಿಸಲಾಗುತ್ತಿರುವ ಗಡಿಭವನದ ಕಾಮಗಾರಿ 11 ವರ್ಷಗಳಿಂದ ಪೂರ್ಣಗೊಳ್ಳದಿರುವುದರಕ್ಕೆ ಕೆಆರ್‌ಐಡಿಎಲ್‌ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಕಾಮಗಾರಿಯ ಬಗ್ಗೆ ಮೂರನೇ ಸಂಸ್ಥೆಯಿಂದ ಪರಿಶೀಲನೆ ನಡೆಸಿ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರಿಗೆ ನಿರ್ದೇಶಿಸಿದರು.

‘ಯೋಜನೆಯ ವೆಚ್ಚವಾದ ₹1.86 ಕೋಟಿಯಲ್ಲಿ ಇನ್ನು ₹ 11 ಲಕ್ಷ ಮಾತ್ರ ಕೊಡುವುದಕ್ಕೆ ಬಾಕಿ ಇದೆ. ಹಾಗಿದ್ದರೂ ಕಾಮಗಾರಿ ಮುಗಿದಿಲ್ಲ ಎಂದರೆ ಏನರ್ಥ’ ಎಂದು ಕೆಆರ್‌ಐಡಿಎಲ್‌ ಸಹಾಯಕ ನಿರ್ದೇಶಕ ಸುಂದರೇಶ್‌ ಮೂರ್ತಿ ಅವರನ್ನು ಪ್ರಶ್ನಿಸಿದರು.

‘ಆಡಿಟೋರಿಯಂ ಕೆಲಸ ಸ್ವಲ್ಪ ಬಾಕಿ ಇದೆ. ಉಳಿದ ಕಾಮಗಾರಿ ಪೂರ್ಣಗೊಂಡಿದೆ’ ಎಂದು ಸುಂದರೇಶ್‌ ಮೂರ್ತಿ ಸಮಜಾಯಿಷಿ ನೀಡಿದರು. 

8 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಚಾಮರಾಜನಗರ ಕಲಾಮಂದಿರಕ್ಕೆ ಭೇಟಿ ನೀಡಿದ ಸಚಿವರು ಬಾಕಿ ಉಳಿದಿರುವ ಕಾಮಗಾರಿ ಬಗ್ಗೆ ಮಾಹಿತಿ ಪಡೆದು, ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು.

Post Comments (+)