ಸಂಪ್ರದಾಯವೂ ಚರ್ಮದ ಆರೋಗ್ಯವೂ

7

ಸಂಪ್ರದಾಯವೂ ಚರ್ಮದ ಆರೋಗ್ಯವೂ

Published:
Updated:
Deccan Herald

ನಮ್ಮ ಪಕ್ಕದ ಮನೆಗೆ ಒಬ್ಬರು ಅಜ್ಜಿ ಬಂದಿದ್ದರು. ಅವರು ನಮ್ಮೆಲ್ಲರೊಡನೆ ಮಾತಾಡುತ್ತಾ ತಮ್ಮ ನೆನಪಿನ ಬುತ್ತಿ ಬಿಚ್ಚಿಟ್ಟರು. ಆಗ ಆಕೆಯ ಮೈಕಾಂತಿಯನ್ನು, ಉದ್ದವಾದ ಕೂದಲನ್ನು ಕಂಡ ನನ್ನ ಮಗಳು, ‘ಅಜ್ಜಿ ನಿಮ್ಮ ಕೂದಲಿನ ರಹಸ್ಯ ಏನು? ಯಾವ ಶ್ಯಾಂಪೂ ಹಾಕುತ್ತೀರಿ?’ ಎಂದಳು. ತಟ್ಟನೆ ಆಕೆ ‘ಶ್ಯಾಂಪೂ, ಗೀಂಪೂ ಹಾಕೋದೆಲ್ಲಾ ನಿಮ್ಮಂಥ ಹೆಣ್ಮಕ್ಕಳು, ನಾವೆಲ್ಲಾ ಏನಿದ್ರೂ, ಸೀಗೆಪುಡಿ, ಚಿಗರೆಪುಡಿ, ಅಂಟುವಾಳದ ಕಾಯಿ, ದಾಸವಾಳದ ಪುಡಿ, ಹೆಸರಿಟ್ಟು – ಇವುಗಳನ್ನು ಬಳಸೋದೆ ಹೊರತು, ಇನ್ನೇನೂ ಹಾಕಲ್ಲ.’ ಎಂದರು. ಹಾಗೆ ‘ನಿಮ್ಮ ಚರ್ಮ ಇಷ್ಟೊಂದು ಚೆನ್ನಾಗಿದೆಯಲ್ಲಾ ಅದಕ್ಕೆ ಏನು ಹಾಕುತ್ತೀರಿ?’ ಎಂದಳು. ಅದಕ್ಕವರು, ‘ನಿತ್ಯ ಎಣ್ಣೆ ಹಚ್ಚಿ ಸ್ನಾನ ಮಾಡೋದು ಬಿಟ್ಟರೆ, ಇನ್ನೇನು ಹಚ್ಚಲ್ಲ.’ ಎಂದರು. ‘ಎಣ್ಣೆ ಹಚ್ಚಿ ಸ್ನಾನಾನಾ?’ ಎಂದು ಮೂಗೆಳೆದಿದ್ದಕ್ಕೆ ಎಣ್ಣೆಸ್ನಾನದ ಬಗ್ಗೆ ಒಂದು ಉಪನ್ಯಾಸವನ್ನೇ ಕೊಟ್ಟರು.

‘ನಾವು ಚಿಕ್ಕವರಾಗಿದ್ದಾಗಿಂದಲೂ ಪ್ರತಿ ಶುಕ್ರವಾರ, ಮಂಗಳವಾರ, ತಲೆಗೆ ಎಣ್ಣೆಯನ್ನು ಹಚ್ಚಿ ಸ್ನಾನ ಮಾಡಲೇ ಬೇಕು; ನಿತ್ಯವೂ ಮೈಗೆ ಎಣ್ಣೆ ಹಚ್ಚಿ ಅರಿಸಿನ ಹಚ್ಚಿ ಸ್ನಾನ ಮಾಡಲೇಬೇಕು. ಇಲ್ಲದಿದ್ದರೆ ಮನೆಯಲ್ಲೆಲ್ಲಾ ಬೈಯ್ತಾ ಇದ್ರು. ಆದ್ರೆ ಇದು ಯಾಕೆ ಈ ಪದ್ಧತಿ ಯಾಕೆ ಮಾಡಿಕ್ಕೊಂಡಿದ್ದಾರೋ ಅಂತ ನಮಗೆಲ್ಲಾ ಬೇಜಾರಾಗ್ತಾ ಇತ್ತು. ಆದರೆ ಈಗ ಆರೋಗ್ಯಪುರವಣಿಗಳನ್ನು ಓದೋವಾಗ ಗೊತ್ತಾಗತ್ತೆ ಇದರ ಉಪಯೋಗ ಏನೂಂತ. ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡೋದ್ರಿಂದ ಚರ್ಮ ಸುಕ್ಕುಗಟ್ಟುವುದು, ಒಣಗುವುದು, ಉರಿ, ತುರಿಕೆ, ಚರ್ಮ ಒಡೆಯುವುದನ್ನು ತಡೆಯಬಹುದಲ್ಲದೆ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಹಗಲಿನಲ್ಲಿ ಎಣ್ಣೆಯನ್ನು ಹಚ್ಚಿ ಸ್ನಾನ ಮಾಡುವುದರಿಂದ ಮೆದುಳು ಹಾಗೂ ನರಗಳಿಗೆ ಸಂಬಂಧಪಟ್ಟ ತೊಂದರೆಗಳೂ ನಿವಾರಣೆ ಆಗುತ್ತವೆ ಹಾಗೂ ರಾತ್ರಿ ಸಕಾಲದಲ್ಲಿ ಸುಖವಾಗಿ ನಿದ್ರೆ ಬರುತ್ತದೆ. ನಮ್ಮ ಸಂಪ್ರದಾಯಗಳೂ ಇದಕ್ಕೆ ಪೂರಕವಾಗಿಯೇ ಇದೆ. ನೋಡಿ ನಮಗೆಲ್ಲಾ ಗೊತ್ತಿರುವ ಹಾಗೆ ಚಳಿಗಾಲದಲ್ಲಿ ಮೈ ಚರ್ಮ ಒಡೆಯುತ್ತದೆ, ಅದಕ್ಕೆ...’

ತಕ್ಷಣ ನನ್ನ ಮಗಳು ‘Moisturiser ಹಚ್ಚಬೇಕು’ ಎಂದಳು. ಅದಕ್ಕವರು ‘ನಿನ್ನ ತಲೆ, ಅದನ್ನೆಲ್ಲಾ ಹಚ್ಚಿ ಚರ್ಮದ ಆರೋಗ್ಯವನ್ನು ಹಾಳು ಮಾಡ್ಕೋಬೇಕಷ್ಟೆ. ಅದು ಚರ್ಮದ ಉಸಿರಾಟವನ್ನೇ ಕಡಿಮೆ ಮಾಡುತ್ತದೆ. ಅದಕ್ಕೆ ನವರಾತ್ರಿ, ದೀಪಾವಳಿ, ಅಂತಾ ಹಬ್ಬಗಳ ಆಚರಣೆಯಲ್ಲಿ ಮೈಗೆ ಚೆನ್ನಾಗಿ ಎಣ್ಣೆ ಹಚ್ಚಿ ನೆಂದು, ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು. ಅದು ಚರ್ಮವನ್ನು ಮೃದುಗೊಳಿಸುವುದಲ್ಲದೆ, ಚರ್ಮದಲ್ಲಿ ಸೇರುವ ಅಧಿಕವಾದ ಪಿತ್ತದ ಅಂಶವನ್ನು ಬೆವರಿನ ಮೂಲಕ ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ. ಆಗ ಚಳಿಗಾಲದಲ್ಲಿ ಚರ್ಮ ಒರಟಾಗುವುದು, ಒಡೆಯುವುದು ಇವುಗಳನ್ನು ತಡೆಗಟ್ಟಬಹುದು. ಸಂಪ್ರದಾಯಕ್ಕೆ ಸಂಪ್ರದಾಯದ ಪಾಲನೆಯೂ ಆಯ್ತು, ಆರೋಗ್ಯಕ್ಕೆ ಆರೋಗ್ಯವೂ ಬಂತು. ಬರೇ ಆರೋಗ್ಯಕ್ಕಾಗಿ ಎಣ್ಣೆ ಸ್ನಾನ ಮಾಡಿ ಅಂದ್ರೆ ಯಾರೂ ಮಾಡಲ್ಲ, ಅದೇ ದೇವರ ಹೆಸರಿನಲ್ಲಿ ಸಂಪ್ರದಾಯ ಅಂತಾ ಹೇಳಿದ್ರೆ ಭಯಭಕ್ತಿಯಿಂದ ಮಾಡ್ತಾರೆ. ಇದರಿಂದ ವೈಯಕ್ತಿಕ ಹಾಗೂ ಸಾಮಾಜದ ಆರೋಗ್ಯ ತಂತಾನೆ ವೃದ್ಧಿ ಆಗತ್ತೆ. ಅದಕ್ಕೆ ಹಿರಿಯರು ಹೇಳೋದು ವರ್ಷಕ್ಕೆರಡು ಸಲವಾದರೂ, ದೀಪಾವಳಿ, ಯುಗಾದಿಗಾದ್ರೂ ಎಣ್ಣೆಸ್ನಾನ ಮಾಡಲೇಬೇಕು ಎಂದು.’

ನವರಾತ್ರಿಯಲ್ಲಿ ದೇವೀಪೂಜೆಗೆ ಪ್ರಾಮುಖ್ಯ. ಅದಕ್ಕಾಗಿ ಅಷ್ಟಗಂಧವನ್ನು ಎಂದರೆ, ದೇವದಾರು, ಅಗರು, ಗಂಧ, ರಕ್ತಚಂದನ, ಲಾವಂಚ ಮುಂತಾದ ಸುಗಂಧದ್ರವ್ಯಗಳನ್ನು ಅರೆದು ಸೇರಿಸಿ ತಯಾರಿಸುತ್ತಾರೆ. ಇದನ್ನೇ ದೇವೀಪೂಜೆಗೆ ಉಪಯೋಗಿಸುತ್ತಾರೆ. ವೈದ್ಯಕೀಯವಾಗಿ ಹೇಳಬೇಕೆಂದರೆ, ನಮ್ಮ ಅಜ್ಜ ಹೇಳುತ್ತಿದ್ದರು, ಶರತ್ಕಾಲದಲ್ಲಿ ಪಿತ್ತ ಹೆಚ್ಚಾಗಿ ಚರ್ಮರೋಗಗಳು ಹೆಚ್ಚಾಗುತ್ತವೆ. ಅದಕ್ಕೆ ಉರಿ, ತುರಿಕೆ, ಗಂದೆ, ಅಲ್ಲದೆ ಚರ್ಮಕ್ಕೆ ಸಂಬಂಧಪಟ್ಟ ತೊಂದರೆಗಳನ್ನು ಸರಿಪಡಿಸಿಕೊಳ್ಳಲು, ಅವು ಬಾರದಂತೆ ತಡೆಗಟ್ಟಲು ಶ್ರೀಗಂಧ, ಲಾವಂಚ, ಮಡಿವಾಳ, ಪಚ್ಚಕರ್ಪೂರ ಮುಂತಾದ ವಸ್ತುಗಳ ಮಿಶ್ರಣವನ್ನು ಮೈಗೆ ಹಚ್ಚಿ ತಿಕ್ಕಿ ಸ್ನಾನ ಮಾಡುವುದರಿಂದ ಮೈಚರ್ಮ ಕಾಂತಿಯುಕ್ತವಾಗುತ್ತದೆ. ಅಲ್ಲದೇ ಮೊಡವೆ, ತುರಿಕೆ, ಮೈ ಕಪ್ಪಾಗುವುದೇ ಮೊದಲಾದ ಪಿತ್ತದ ಬಾಧೆಗಳಿರುವುದಿಲ್ಲ. ಅಲ್ಲದೆ ಚರ್ಮದ ಆರೋಗ್ಯಕ್ಕಾಗಿ ನಿತ್ಯವೂ ಶುದ್ಧವಾದ ಎಳ್ಳೆಣ್ಣೆ ಅಥವಾ ಎಳ್ಳೆಣ್ಣೆ ಮತ್ತು ತುಪ್ಪದ ಸಮಪ್ರಮಾಣ ಮಿಶ್ರಣವನ್ನು ಮೈಗೆ ತೆಳುವಾಗಿ ಹಚ್ಚಿ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬೇಕು. ಇಡೀ ದೇಹಕ್ಕೆ ಎಣ್ಣೆ ಹಚ್ಚಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಅಂಗೈ, ಅಂಗಾಲು, ನೆತ್ತಿ, ಕಿವಿ, ಹೊಕ್ಕಳಿಗಾದರೂ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಬೇಕು. (ನೆತ್ತಿಗೆ) ತಲೆಗೆ ಎಣ್ಣೆ ಹಚ್ಚುವುದರಿಂದ ಕೂದಲಿನ ಆರೋಗ್ಯ ವರ್ಧಿಸುವುದರ ಜೊತೆಗೆ, ತಲೆನೋವಿನ ಬಾಧೆಯನ್ನು ಕಡಿಮೆ ಮಾಡಬಹುದು. ಇದರಿಂದ ಇಂದ್ರಿಯಗಳು ಪ್ರಸನ್ನವಾಗಿ ಸುಖನಿದ್ರೆಗೆ ಕಾರಣವಾಗುತ್ತದೆ. ಚರ್ಮಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ರೋಗಗಳು ಬೆವರುವಿಕೆಯ ವ್ಯತ್ಯಾಸದಿಂದ ಬರುತ್ತದೆ. ಹೀಗಾಗಿ ಮೈಗೆ ಎಣ್ಣೆಯನ್ನು ಹಚ್ಚಿ, ಸ್ವಲ್ಪ ವ್ಯಾಯಮ ಮಾಡಿ, ನಂತರ ಅಳಲೆಕಾಯಿ, ತಾರೆಕಾಯಿ, ನೆಲ್ಲಿಕಾಯಿ ಇವುಗಳ ಮಿಶ್ರಣ ಎಂದರೆ ತ್ರಿಫಲಾಚೂರ್ಣ, ಜೊತೆಗೆ ಹೆಸರಿಟ್ಟು, ಕಡಲೆಹಿಟ್ಟು, ಮುಂತಾದವುಗಳನ್ನು ಮಿಶ್ರಣ ಮಾಡಿಕೊಂಡು, ಮೈಗೆ ಚೆನ್ನಾಗಿ ತಿಕ್ಕಿ ನಂತರ ಹದವಾದ ಬಿಸಿನೀರಿನಲ್ಲಿ ಸ್ನಾನ ಮಾಡುವುದು ಚರ್ಮದ ಆರೋಗ್ಯವನ್ನು ಕಾಪಾಡುವುದಕ್ಕೆ ಸಹಕಾರಿ. ಅನಿವಾರ್ಯವಾದಲ್ಲಿ ಕಡಿಮೆ ರಾಸಾಯನಿಕಗಳಿರುವ ಯಾವುದಾದರೂ ಒಂದೇ ಬಗೆಯ ಸೋಪನ್ನು ಬಳಸಬಹುದು. ಅದನ್ನು ಆಗಾಗ ಬದಲಾಯಿಸುತ್ತಿರಬಾರದು.

ವ್ಯಾಯಾಮದ ನಂತರ ಹದವಾದ ಬಿಸಿನೀರಿನಲ್ಲಿ ಸ್ನಾನ ಮಾಡಬೇಕು. ತಣ್ಣೀರಿನ ಸ್ನಾನ ಮಾಡುವವರು, ಬಾವಿ, ನದಿ, ಕೆರೆ, ಮುಂತಾದವುಗಳ ನೀರಿನಲ್ಲಿ (ನೀರು ಶುಭ್ರವಾಗಿದ್ದರೆ) ಸ್ನಾನ ಮಾಡಬೇಕು. ಹಿಡಿದಿಟ್ಟ ನೀರು ಅಥವಾ overhead tank or sumpನ ತಣ್ಣಗಿರುವ ನೀರಿನಲ್ಲಿ ಸ್ನಾನ ಮಾಡಬಾರದು. ಇದು ಆರೋಗ್ಯವನ್ನು ಹಾಳು ಮಾಡುತ್ತದೆ. ಕೆಲವು ದಿನಗಳು ತಣ್ಣೀರಿನ ಸ್ನಾನ, ಕೆಲವು ದಿನ ಬಿಸಿನೀರಿನ ಸ್ನಾನ – ಹೀಗೆ ವ್ಯತ್ಯಾಸ ಮಾಡುವುದರಿಂದ ಚರ್ಮದ ಕಾಂತಿ ಹಾಳಾಗುವುದರ ಜೊತೆಗೆ, ನೆವೆ, ಉರಿಯೂತ, ನೆಗಡಿ, ಕೆಮ್ಮು, ದಮ್ಮು – ಮೊದಲಾದ ತೊಂದರೆಗಳು ಉತ್ಪತ್ತಿಯಾಗುತ್ತವೆ. ಆದ್ದರಿಂದ ಹದವಾದ ಬಿಸಿನೀರಿನಲ್ಲಿ ಸ್ನಾನ ಮಾಡುವುದು ಆರೋಗ್ಯಕರ. ತಲೆಗೆ ವಿಪರೀತ ಬಿಸಿನೀರು ಹಾಕಿ ಸ್ನಾನ ಮಾಡಬಾರದು; ಇದು ಕೂದಲು ಉದುರುವಿಕೆಯನ್ನೂ ಬಿಳಿಕೂದಲನ್ನೂ ಹೆಚ್ಚಿಸುತ್ತದೆ. ಕಫ ಹೆಚ್ಚಾಗಿರುವಾಗ, ಅಜೀರ್ಣವಿರುವಾಗ, ಜ್ವರವಿರುವಾಗ, ಜ್ವರ ಬಿಟ್ಟು 24ಗಂಟೆಯವರೆಗೂ ಎಣ್ಣೆ ಹಚ್ಚುವುದಾಗಲೀ ಸ್ನಾನ ಮಾಡುವುದಾಗಲೀ ಮಾಡಬಾರದು. ನಿತ್ಯ ಸ್ನಾನ ಮಾಡುವಾಗಲೂ ಹಿಂದೆ ತಿಂದ ಆಹಾರವು ಜೀರ್ಣವಾದ ನಂತರವಷ್ಟೇ ಸ್ನಾನ ಮಾಡಬಹುದು.’ ಆಗ ನನ್ನ ಮಗಳು ‘ಅಜ್ಜಿ, ಹಾಗಾದರೆ ಮೊಡವೆ, ಕಾಲು ಒಡೆಯುವುದು ಇದೆಲ್ಲಾನೂ ಎಣ್ಣೆ ಹಚ್ಚಿ ಸ್ನಾನ ಮಾಡೋದ್ರಿಂದ ಹೋಗತ್ತಾ?’ ಎಂದಳು.

ಅದಕ್ಕವರು ‘ಈವಾಗ ಹೇಳಿದ್ದನ್ನೆಲ್ಲಾ ಪಾಲಿಸುವುದರ ಜೊತೆಗೆ, ಮಸಾಲೆ, ಕರಿದ ಪದಾರ್ಥಗಳ ಅತಿಯಾದ ಸೇವನೆಯನ್ನು ನಿಲ್ಲಿಸಬೇಕು. ಮೊಡವೆ ಬಂದಾಗ ರಾಸಾಯನಿಕಗಳ ಉಪಯೋಗವನ್ನು ಆದಷ್ಟೂ ಕಡಿಮೆ ಮಾಡಬೇಕು. ಮುಖಕ್ಕೆ ಹಬೆ ತೆಗೆದುಕೊಳ್ಳುವುದು, ತ್ರಿಫಲಾ, ಲಾವಂಚ, ಅಗರು ಮುಂತಾದ ಚೂರ್ಣಗಳನ್ನು ಗುಲಾಬಿಜಲ(ರೋಸ್ ವಾಟರ್)ನಲ್ಲಿ ಮಿಶ್ರಮಾಡಿ ಮುಖಕ್ಕೆ ಲೇಪಿಸಿ, 20ನಿಮಿಷಗಳ ನಂತರ ಹದವಾದ ಬಿಸಿನೀರು ಅಥವಾ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಬೇಕು. ಇದರಿಂದ ಮೊಡವೆ ಕಡಿಮೆಯಾಗುವುದರ ಜೊತೆಗೆ ಮುಖದ ಕಾಂತಿಯೂ ಹೆಚ್ಚುತ್ತದೆ, ಕಲೆಯೂ ಉಳಿಯುವುದಿಲ್ಲ. ಮೈಮೇಲೆ ಗಂದೆ ಏಳುವುದು, ಅಲರ್ಜಿಯಾಗಿ ತುರುಸುವುದು, ಬರೆ ಬಂದಂತಾಗುವುದು, ಚರ್ಮ ಒಡೆದು, ಒಣಗಿ ಪುಡಿ ಉದುರುವುದು – ಮುಂತಾದ ತೊಂದರೆಗಳಿದ್ದವರು ಸೋಗದೇಬೇರಿನ ಶರಬತ್ತು ಅಥವಾ ಸೊಗದೇಬೇರನ್ನು ಹಾಲಿನಲ್ಲಿ ಕುದಿಸಿ ಸೇವಿಸುವುದು ಅಥವಾ ಕಷಾಯ ಮಾಡಿ ಕುಡಿಯುವುದನ್ನು ನಿತ್ಯ ಅಭ್ಯಾಸವಾಗಿ ಇಟ್ಟುಕೊಳ್ಳುವುದು ಒಳ್ಳೆಯದು.

‘ಇನ್ನು ಚಳಿಗಾಲದಲ್ಲಿ ಕಾಲು ಒಡೆಯುವುದು, ರಕ್ತ ಬರುವುದು ಮುಂತಾದ ತೊಂದರೆಗಳಾಗುತ್ತಿದ್ದರೆ, ಮನೆಯಲ್ಲೇ ಮಾಡಬಹುದಾದ ಸುಲಭ ಉಪಾಯ ಎಂದರೆ, ಜೇನುಮೇಣ ಮತ್ತು ಕೊಬ್ಬರಿ ಎಣ್ಣೆಯನ್ನು ಸಮಪ್ರಮಾಣದಲ್ಲಿ ಬೆರೆಸಿ ಬಿಸಿ ಮಾಡುವುದು. ಎರಡೂ ಕರಗಿ ಮಿಶ್ರವಾದ ನಂತರ ಅದನ್ನು ತಣ್ಣಗಾಗಲು ಬಿಡುವುದು. ಆಗ ಇದು ಮುಲಾಮಿನಂತೆ ಆಗಿರುತ್ತದೆ. ಆ ಮುಲಾಮನ್ನು ನಿತ್ಯವೂ ಕಾಲು ಒಡೆದ ಜಾಗಕ್ಕೆ ಹಚ್ಚಿಕೊಂಡು ಮಸಾಜ್‌ ಮಾಡಿ, ನಂತರ ಹತ್ತು ನಿಮಿಷ ಕಾಲನ್ನು ತಡೆಯುವಷ್ಟು ಬಿಸಿನೀರಿನಲ್ಲಿ ಮುಳುಗಿಸಿ ಇಟ್ಟುಕೊಳ್ಳುವುದು. ನಂತರ ಕಾಲನ್ನು ಒರೆಸಿಕೊಂಡು, ಬೆಚ್ಚಗಿನ ಬಟ್ಟೆ ಅಥವಾ ಸಾಕ್ಸ ಧರಿಸುವುದು. ಇದರಿಂದ ಕಾಲು ಒಡೆಯುವುದು ಗುಣವಾಗುತ್ತದೆ’ ಎಂದರು. 

Tags: 

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !