ಮಂಗಳವಾರ, ನವೆಂಬರ್ 12, 2019
28 °C
‘ನನ್ನ ಮಾವ ಪೊಲೀಸ್’ ಎಂದು ಕೂಗಾಡಿದ್ದ ಆರೋಪಿ ಬಂಧನ

ದಂಡ ಕೇಳಿದ್ದಕ್ಕೆ ಎಎಸ್‌ಐ ಮುಖಕ್ಕೆ ಪಂಚ್‌

Published:
Updated:

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ದಂಡ ಪಾವತಿಸುವಂತೆ ಹೇಳಿದ್ದಕ್ಕೆ ಬನಶಂಕರಿ ಸಂಚಾರ ಠಾಣೆಯ ಎಎಸ್‌ಐ ಬಿ.ಲಿಂಗಯ್ಯ ಎಂಬುವರ ಮೇಲೆ ಹಲ್ಲೆ ಮಾಡಲಾಗಿದ್ದು, ಆ ಸಂಬಂಧ ಸವಾರ ಲಿಂಗರಾಜು (40) ಎಂಬಾತನನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ.

‘ಇದೇ 3ರಂದು ನಡೆದಿರುವ ಘಟನೆಯಲ್ಲಿ ಗಾಯಗೊಂಡಿದ್ದ ಲಿಂಗಯ್ಯ ಅವರಿಗೆ ಗಿರಿನಗರದ ಪಲ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಅವರು ನೀಡಿದ್ದ ದೂರು ಆಧರಿಸಿ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬನಶಂಕರಿ 3ನೇ ಹಂತದ ಇಟ್ಟಮಡು ಜಂಕ್ಷನ್ ಸಮೀಪದಲ್ಲಿ ಲಿಂಗಯ್ಯ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಭುವನೇಶ್ವರಿ ನಗರದ ಲಿಂಗರಾಜು ಹಾಗೂ ಆತನ ಇಬ್ಬರು ಸ್ನೇಹಿತರು, ಒಂದೇ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಹೆಲ್ಮೆಟ್ ಸಹ ಧರಿಸಿರಲಿಲ್ಲ. ಅವರನ್ನು ತಡೆದಿದ್ದ ಎಎಸ್‌ಐ, ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ದಂಡ ಪಾವತಿಸುವಂತೆ ಹೇಳಿದ್ದರು.’

‘ಎಎಸ್‌ಐ ಜೊತೆ ಜಗಳಕ್ಕೆ ಇಳಿದಿದ್ದ ಆರೋಪಿ, ‘ನನ್ನ ಮಾವ ಹೈಗ್ರೌಂಡ್ಸ್ ಠಾಣೆಯಲ್ಲಿ ಪೊಲೀಸ್ ಆಗಿದ್ದಾರೆ. ದಂಡ ಕಟ್ಟುವುದಿಲ್ಲ. ಏನು ಮಾಡ್ತಿಯೋ ಮಾಡ್ಕೊ’ ಎಂದು ಕೂಗಾಡಿದ್ದ. ಅದೇ ವೇಳೆ ಎಎಸ್‌ಐ ಅವರ ಮುಖಕ್ಕೆ ಕೈಯಿಂದ ಪಂಚ್ ಮಾಡಿದ್ದ. ಎಎಸ್‌ಐ ಮೂಗಿನಿಂದ ರಕ್ತ ಸೋರಲಾರಂಭಿಸಿತ್ತು. ರಕ್ಷಣೆಗೆ ಹೋದ ಕಾನ್‌ಸ್ಟೆಬಲ್‌ಗಳು, ಆರೋಪಿಯನ್ನು ಹಿಡಿದು ಠಾಣೆಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಲಿಂಗಯ್ಯ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ವಿವರಿಸಿದರು. 

ಪ್ರತಿಕ್ರಿಯಿಸಿ (+)