ದಂಡದ ಮೊತ್ತ ಹೆಚ್ಚಳ: ಇದೇ 20ರಿಂದ ಜಾರಿ

ಶುಕ್ರವಾರ, ಜೂಲೈ 19, 2019
26 °C

ದಂಡದ ಮೊತ್ತ ಹೆಚ್ಚಳ: ಇದೇ 20ರಿಂದ ಜಾರಿ

Published:
Updated:

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ವಿಧಿಸಲಾಗುವ ದಂಡದ ಮೊತ್ತವನ್ನು ಹೆಚ್ಚಳ ಮಾಡಿ ಸಾರಿಗೆ ಇಲಾಖೆ ಇತ್ತೀಚೆಗಷ್ಟೇ ಆದೇಶ ಹೊರಡಿಸಿದ್ದು, ಪರಿಷ್ಕೃತ ದಂಡ ವಸೂಲಿ ಪ್ರಕ್ರಿಯೆ ಇದೇ 20ರಿಂದ ಜಾರಿಗೆ ಬರಲಿದೆ.

ಆದೇಶ ಹೊರಬರುತ್ತಿದ್ದಂತೆ ಪತ್ರಿಕಾ ಪ್ರಕಟಣೆ ನೀಡಿದ್ದ ಪೊಲೀಸರು, ಇದೀಗ ನಗರದ ಪ್ರಮುಖ ರಸ್ತೆಗಳಲ್ಲಿ ನಾಮಫಲಕಗಳನ್ನು ಹಾಕಿ ದಂಡದ ಮೊತ್ತ ಹೆಚ್ಚಳದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದಾರೆ. ನಿಯಮ ಉಲ್ಲಂಘನೆ ಮಾಡದಂತೆ ಮನವಿ ಮಾಡಿ ಜಾಗೃತಿ ಮೂಡಿಸುತ್ತಿದ್ದಾರೆ. 

‘ಸಂಚಾರ ನಿಯಮ ಉಲ್ಲಂಘನೆಯಿಂದಲೇ ನಗರದಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ದಂಡದ ಮೊತ್ತ ಹೆಚ್ಚಳ ಮಾಡಲಾಗಿದೆ. ಆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು ನಮ್ಮ ಕರ್ತವ್ಯ. ಹೀಗಾಗಿ, ದಂಡದ ಮೊತ್ತ ಹೆಚ್ಚಳವಾದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ಡಿಸಿಪಿ, ಎಸಿಪಿ ಹಾಗೂ ಇನ್‌ಸ್ಪೆಕ್ಟರ್‌ಗಳಿಗೆ ನಿರ್ದೇಶನ ನೀಡಿದ್ದೇನೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ) ಪಿ. ಹರಿಶೇಖರನ್‌ ಹೇಳಿದರು.

‘ಆಟೊ, ಬಸ್, ಲಾರಿ, ಸರಕು ಸಾಗಣೆ ವಾಹನ, ಶಾಲಾ ವಾಹನ, ಕ್ಯಾಬ್, ಟ್ಯಾಕ್ಸಿ ಚಾಲಕರಿಗೆ ಹಾಗೂ ದ್ವಿಚಕ್ರ ವಾಹನ ಸವಾರರು, ನಾಗರಿಕ ಹಿತರಕ್ಷಣಾ ಸಂಘ–ಸಂಸ್ಥೆಗಳ ಸದಸ್ಯರ ಸಭೆ ನಡೆಸಿ ಅರಿವು ಮೂಡಿಸುವಂತೆಯೂ ಸೂಚನೆ ನೀಡಲಾಗಿದೆ’ ಎಂದರು.

‘ಅತಿ ವೇಗದ ಚಾಲನೆ, ಚಾಲನೆ ವೇಳೆ ಮೊಬೈಲ್ ಬಳಕೆ, ವಿಮೆ ಇಲ್ಲದೆ ವಾಹನಗಳ ಚಾಲನೆ ಹಾಗೂ ಅಪಾಯಕಾರಿ ನಿಲುಗಡೆ ಮತ್ತು ನೋಪಾರ್ಕಿಂಗ್‌ ಸ್ಥಳದಲ್ಲಿ ವಾಹನ ನಿಲುಗಡೆ ದಂಡವನ್ನು ಮಾತ್ರ ಹೆಚ್ಚಳ ಮಾಡಲಾಗಿದೆ. ಇನ್ನುಳಿದ ಸಂಚಾರ ನಿಯಮಗಳ ಉಲ್ಲಂಘನೆ ದಂಡದ ಮೊತ್ತ ಹೆಚ್ಚಳ ಪ್ರಸ್ತಾವ ಗೃಹ ಇಲಾಖೆ ಮುಂದಿದೆ’ ಎಂದು ಹೇಳಿದರು. 

‘ದಂಡದ ಮೊತ್ತ ಹೆಚ್ಚಳ ಸಂಬಂಧ ಸಲಹೆಗಳಿದ್ದರೆ ತಿಳಿಸಬಹುದು. ಆದೇಶ ಜಾರಿಯಾದ ಬಳಿಕ ಪೊಲೀಸರ ಜೊತೆ ಸಾರ್ವಜನಿಕರು ಸಹಕರಿಸಬೇಕು’ ಎಂದು ಹರಿಶೇಖರನ್ ಕೋರಿದ್ದಾರೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !