ಅಡ್ಡಾದಿಡ್ಡಿ ಕಾರು ಚಲಾಯಿಸಿದ ಮಹಿಳೆ: ಶಾಸಕ ಗರಂ

7

ಅಡ್ಡಾದಿಡ್ಡಿ ಕಾರು ಚಲಾಯಿಸಿದ ಮಹಿಳೆ: ಶಾಸಕ ಗರಂ

Published:
Updated:

ಬೆಂಗಳೂರು: ನಗರದ ಕ್ರೆಸೆಂಟ್ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಸಂಚಾರ ದಟ್ಟಣೆಗೆ ಕಾರಣವಾದ ಮಹಿಳೆಯ ವಿರುದ್ಧ ಶಾಸಕ ಅಶೋಕ ಖೇಣಿ ಗರಂ ಆದರು.

ಕುಮಾರಕೃಪಾ ರಸ್ತೆಗೆ ಹೊಂದಿಕೊಂಡಿರುವ ಕ್ರೆಸೆಂಟ್ ರಸ್ತೆಯಲ್ಲಿ ಶುಕ್ರವಾರ ವಾಹನಗಳ ಓಡಾಟ ಹೆಚ್ಚಿತ್ತು. ಅದೇ ವೇಳೆ, ಮಹಿಳೆಯೊಬ್ಬರು ತಮ್ಮ ಕಾರನ್ನು ಅಡ್ಡಾದಿಡ್ಡಿಯಾಗಿ ಓಡಿಸಿ ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು. ನಂತರ, ಕಾರನ್ನು ಮುಂದಕ್ಕೆ ಚಲಾಯಿಸಲು ಸಹ ಮಹಿಳೆಯಿಂದ ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

ರಸ್ತೆಯಲ್ಲಿ ದಟ್ಟಣೆ ಉಂಟಾಗಿ, ವಾಹನಗಳೆಲ್ಲವೂ ಸಾಲಾಗಿ ನಿಲ್ಲುವಂತಾಯಿತು. ಅದೇ ರಸ್ತೆಯಲ್ಲಿ ಹೊರಟಿದ್ದ ಅಶೋಕ ಖೇಣಿ ಸಹ ದಟ್ಟಣೆಯಲ್ಲಿ ಸಿಲುಕಿ ಅರ್ಧ ಗಂಟೆ ಕಾರಿನಲ್ಲೇ ಕಾಯುವಂತಾಯಿತು. ದಟ್ಟಣೆ ಕಡಿಮೆಯಾಗದಿದ್ದಾಗ ಕಾರಿನಿಂದ ಇಳಿದ ಖೇಣಿ, ಮಹಿಳೆಯ ಬಳಿ ಹೋಗಿ ತರಾಟೆಗೆ ತೆಗೆದುಕೊಂಡರು. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಮಧ್ಯಪ್ರವೇಶಿಸಿದ ಸ್ಥಳೀಯರು, ಪರಿಸ್ಥಿತಿ ತಿಳಿಗೊಳಿಸಿ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು ಎಂದರು.

ಹೈಗ್ರೌಂಡ್ಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯಾವುದೇ ದೂರು ದಾಖಲಾಗಿಲ್ಲ. ಮಹಿಳೆ ಯಾರು ಎಂಬುದು ಗೊತ್ತಾಗಿಲ್ಲ.

ಮಹಿಳೆಯಿಂದಲೇ ನಿಯಮ ಉಲ್ಲಂಘನೆ: ‘ಮಹಿಳೆಯು ಸಂಚಾರ ನಿಯಮ ಉಲ್ಲಂಘಿಸಿ ಕಾರು ಚಲಾಯಿಸಿದ್ದರಿಂದ ದಟ್ಟಣೆ ಉಂಟಾಯಿತು. ಶಾಲಾ ಮಕ್ಕಳು ಹಾಗೂ ಇತರೆ ಸಾರ್ವಜನಿಕರೆಲ್ಲರೂ ರಸ್ತೆಯಲ್ಲೇ ಕಾಯುವಂತಾಯಿತು. ಆಗ ನಾನೇ ಹೋಗಿ ಮಹಿಳೆಯನ್ನು ಪ್ರಶ್ನಿಸಿ ಬುದ್ದಿವಾದ ಹೇಳಿದೆ’ ಎಂದರು.

‘ಹೆಡ್‌ಪೋನ್ ಹಾಕಿಕೊಂಡಿದ್ದ ಮಹಿಳೆ, ಕಾರಿನ ಗಾಜುಗಳನ್ನು ಬಂದ್‌ ಮಾಡಿಕೊಂಡು ಹಾಡು ಕೇಳುತ್ತ ಕುಳಿತಿದ್ದರು. ಕಾರು ತೆಗೆಯಿರಿ ಎಂದು ಹೇಳಿದರೂ ತೆಗೆಯಲಿಲ್ಲ. ‘ಸಂಚಾರ ನಿಯಮ ಗೊತ್ತಿಲ್ಲವೇ? ಯಾರು ನಿಮಗೆ ಲೈಸೆನ್ಸ್‌ ಕೊಟ್ಟಿದ್ದು’ ಎಂದು ಮಹಿಳೆಯನ್ನು ಪ್ರಶ್ನಿಸಿದೆ. ನಂತರ, ಸ್ಥಳದಲ್ಲಿದ್ದ ಜನರ ಜೊತೆ ಸೇರಿ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟು ದಟ್ಟಣೆ ನಿಯಂತ್ರಿಸಿದೆ’ ಎಂದು ಹೇಳಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !