ಟ್ರೈನ್, ಆ್ಯಪ್‌ ಮತ್ತು ಮೆಡಿಕಲ್ ಶಾಪ್

7

ಟ್ರೈನ್, ಆ್ಯಪ್‌ ಮತ್ತು ಮೆಡಿಕಲ್ ಶಾಪ್

Published:
Updated:

‘ನನ್ನ ಮಗಳು ಔಷಧಿ ತಗೊಂಡು ರೈಲ್ವೆ ಸ್ಟೇಷನ್‌ಗೆ ಬಂದ್ಲು ಸಾರ್. ರೈಲಿನ ಕೊನೆಬೋಗಿ ಅವಳಿಗೆ ಕಾಣಿಸ್ತಂತೆ. ಗಾರ್ಡ್‌ ಕೈಲಿ ಕೊಡೋಣ ಅಂತ ಓಡಿದ್ಲು. ಆದ್ರೆ ರೈಲು ಮುಂದಕ್ಕೆ ಹೊರಟು ಹೋಯ್ತು...’

ಮೊಬೈಲ್‌ ಕಿವಿಗೆ ಹಿಡಿದು ರೈಲಿನ ಬಾಗಿಲಿಗೆ ಆತು ನಿಂತಾಗ ‘ಕಂಬಂ ರೈಲು ನಿಲ್ದಾಣ’ ಎನ್ನುವ ಫಲಕ ನಿಧಾನವಾಗಿ ಚಿಕ್ಕದಾಗುತ್ತಿತ್ತು. ಕಂಬಂನ ವೈದ್ಯ ಡಾ. ಬಿ. ಪಿ. ರಂಗನಾಯಕುಲು ಅವರ ಮಾತುಗಳು ಮಾರ್ದನಿಸುತ್ತಿದ್ದವು. ಏನು ಮಾಡುವುದು ಎಂದು ತೋಚದಂತಾಗಿ ಮಾಡಿದ್ದ ಕೊನೆಯ ಪ್ರಯತ್ನಕ್ಕೆ ಸಿಕ್ಕ ಫಲ ‘ಮರಳಿ ಯತ್ನವ ಮಾಡು’ ಎನ್ನುವ ನಾಣ್ಣುಡಿಯನ್ನು ನೆನಪಿಗೆ ತಂದುಕೊಟ್ಟಿತ್ತು.

ಭದ್ರಾಚಲಂ ಪ್ರವಾಸದ ಸಡಗರದಿಂದ ‘ಪ್ರಶಾಂತಿ ಎಕ್ಸ್‌ಪ್ರೆಸ್‌’ ಹತ್ತಿದ್ದ ನಮ್ಮೆಲ್ಲರ ಉತ್ಸಾಹಕ್ಕೆ ತಂಗಿ ಮಗ ಸುಧನ್ವನನ್ನು ಬಾಧಿಸುತ್ತಿದ್ದ ಜ್ವರ ತಣ್ಣೀರು ಎರಚಿತ್ತು. ಮಗು ಏನೂ ತಿಂದಿರಲಿಲ್ಲ. ಬಳಲಿಕೆಯಿಂದ ಸುಸ್ತಾಗಿದ್ದ ಅವನು ಕಣ್ಣನ್ನೇ ಬಿಡುತ್ತಿರಲಿಲ್ಲ. ದೊಡ್ಡಬಳ್ಳಾಪುರದ ಮಕ್ಕಳ ವೈದ್ಯರಿಗೆ ಫೋನ್ ಮಾಡಿ ಕೇಳಿದಾಗ ತಕ್ಷಣ, ‘ಅಜೀಜ್ 200’ ಔಷಧಿ ಕೊಡುವಂತೆ ಹೇಳಿದ್ದರು. ಚಲಿಸುತ್ತಿದ್ದ ರೈಲಿನಲ್ಲಿ ಈ ಔಷಧಿ ಸಂಪಾದಿಸುವುದಾದರೂ ಹೇಗೆ?

ತುಸು ಯೋಚಿಸದ ನಂತರ ಐಡಿಯಾ ಹೊಳೆಯಿತು. ‘ವೇರ್‌ ಈಸ್ ಮೈ ಟ್ರೇನ್’ ಆ್ಯಪ್ ಮೂಲಕ ನಾವಿದ್ದ ಸ್ಥಳದ ಮಾಹಿತಿ ತಿಳಿದುಕೊಂಡೆ. ಗೂಗಲ್‌ನಲ್ಲಿ ಆ ಊರಿನಲ್ಲಿರುವ ಮೆಡಿಕಲ್ ಸ್ಟೋರ್‌ಗಳ ಸಂಪರ್ಕ ಸಂಖ್ಯೆಗಾಗಿ ಪ್ರಯತ್ನಿಸಿದೆ. ನನ್ನ ಅದೃಷ್ಟಕ್ಕೆ ಒಬ್ಬರು ವೈದ್ಯರ ಸಂಖ್ಯೆಯೇ ಸಿಕ್ಕಿತು. ಅವರೇ ಡಾ. ಬಿ. ಪಿ. ರಂಗನಾಯಕಲು. ಅವರಿಗೆ ಫೋನ್ ಮಾಡಿ ಮಗುವಿನ ಪರಿಸ್ಥಿತಿ ವಿವರಿಸಿದೆ. ನಮ್ಮ ಕಷ್ಟ ಅರ್ಥ ಮಾಡಿಕೊಂಡ ಅವರು, ತಮ್ಮ ಮಗಳ ಕೈಲೇ ಔಷಧಿಯನ್ನು ಕೊಟ್ಟು ಓಡಿಸಿದರು. ನಮ್ಮ ದುರಾದೃಷ್ಟಕ್ಕೆ ಆಕೆ ಬರುವ ಹೊತ್ತಿಗೆ ನಾವಿದ್ದ ರೈಲು ಮುಂದೋಡಿತ್ತು.

ಮುಂದಿನ ನಿಲ್ದಾಣ ಮಾರ್ಕಾಪುರ್ ರೋಡ್. ಕಂಬಂನಿಂದ ಅಲ್ಲಿಗೆ ಅರ್ಧ ಗಂಟೆ ಪ್ರಯಾಣ. ಅದರ ಬದಲು ಅದರ ಮುಂದಿನ ನಿಲ್ದಾಣವಾದ ಡೊನಕೊಂಡಕ್ಕೆ ಒಂದು ತಾಸಿನ ಹಾದಿ. ನಾನು ಡೊನಕೊಂಡ ಊರಿನ ಮೆಡಿಕಲ್ ಸ್ಟೋರ್‌ಗಳ ನಂಬರ್‌ಗಾಗಿ ಹುಡುಕಾಡಿದೆ. ‘ಸಾಯಿ ಮೆಡಿಕಲ್ಸ್‌’ನ ಸಂಖ್ಯೆ ದೊರಕಿತು. ಫೋನ್ ಮಾಡಿ ಹರಕುಮುರುಕು ತೆಲುಗಿನಲ್ಲಿ ಪರಿಸ್ಥಿತಿ ವಿವರಿಸಿದೆ. ‘ನಿಮಗೆ ಔಷಧಿಯಷ್ಟೇ ಸಾಕೆ? ಬ್ರೆಡ್, ಎಳನೀರು, ಜ್ಯೂಸ್ ಕೂಡಾ ಬೇಕೆ?’ ಎಂದು ಆ ಕಡೆಯಿಂದ ಪ್ರಶ್ನಿಸಿದರು. ‘ಎಳನೀರು ಬೇಕಿತ್ತು’ ಎಂದು ಸಂಕೋಚವಾಗಿಯೇ ಹೇಳಿದೆ.

ನಮ್ಮ ರೈಲು ಡೊನಕೊಂಡ ಸ್ಟೇಷನ್ ಸಮೀಪಿಸುವ ಹೊತ್ತಿಗೆ ನಾವಿದ್ದ ಎಸ್‌3 ಬೋಗಿಯ ಹಿಂದಿನ ಬಾಗಿಲ ಬಳಿ ಯುವಕನೊಬ್ಬ ಎರಡು ಎಳನೀರು, ಕೈಲೊಂದು ಖಾಕಿ ಕವರ್ ಹಿಡಿದು ನಿಂತಿದ್ದ. ಓಡಿ ಹೋಗಿ ಅವನ್ನು ಪಡೆದುಕೊಂಡು ಕೈಗೆ ₹500ರ ನೋಟು ಇಟ್ಟೆ. ಆತ ಶಿಸ್ತಾಗಿ ₹340 ವಾಪಸ್ ಕೊಟ್ಟು ಔಷಧಿ ಮತ್ತು ಎಳನೀರಿನ ರೇಟ್ ಹೇಳಿದ. ‘ಔಷಧಿ ಮಾರೋದು ಕೂಡ ಜೀವ ಉಳಿಸುವ ಕೆಲಸ ಸಾರ್. ಔಷಧಿ ಮತ್ತು ಎಳನೀರಿನ ದುಡ್ಡು ಕೊಟ್ಟರೆ ಸಾಕು. ನನಗೂ ಮಕ್ಕಳಿವೆ’ ಎಂದ. ಅಷ್ಟೊತ್ತಿಗೆ ರೈಲು ಕೂಗು ಹಾಕಿತ್ತು.

ತಂಗಿ ಕೈಗೆ ಔಷಧಿ ಕೊಟ್ಟೆ, ಲೋಟಕ್ಕೆ ಎಳನೀರು ಬಗ್ಗಿಸಿ ಮಗುವಿಗೆ ಕುಡಿಸಿದೆವು. ಒಂದಿಡಿ ದಿನ ಏನೂ ತಿಂದಿರದ ಮಗು ಎಳನೀರು ಕುಡಿದು ನಿದ್ದೆಗೆ ಜಾರಿತು. ಎದ್ದ ನಂತರ ಔಷಧಿ ಹಾಕಿದೆವು. ತುಸು ಗೆಲುವಾಯಿತು. ಆಪತ್ ಕಾಲದಲ್ಲಿ ಔಷಧಿ ತಂದುಕೊಟ್ಟ ಆ ಅಪರಿಚಿತ ಅಣ್ಣನ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ನನ್ನ ತಂಗಿ ಮನಸಾರೆ ಹಾರೈಸಿದಳು.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !