ಚೌಕಟ್ಟನ್ನು ಮೀರುವ ಪಯಣ

7

ಚೌಕಟ್ಟನ್ನು ಮೀರುವ ಪಯಣ

Published:
Updated:
Deccan Herald

ಅಪ್ಪಯ್ಯ (ಮಾವ) ಹೇಳುತ್ತಿದ್ದ ಮಾತು ನನಗೆ ಇನ್ನೂ ನೆನಪಿದೆ: ‘ನಿನ್ನ ಸಂತೋಷ, ಸುಖ-ದುಃಖ ಯಾರ ಮೇಲೂ ಅವಲಂಬಿತವಾಗಿಲ್ಲ. ಆಗಬಾರದು ಕೂಡ. ನಿನ್ನ ಸಂತೋಷ ನಿನ್ನದು ಮಾತ್ರ’. ನಾನು ಹುಟ್ಟಿ ಬೆಳೆದದ್ದು ಒಂದು ಸಾಂಪ್ರದಾಯಿಕ ಕುಟುಂಬದಲ್ಲಿ. ನಾಟಕದಲ್ಲಿ ನಟಿಸುತ್ತೇನೆ ಎಂದಿದ್ದಕ್ಕೆ ಅಪ್ಪ ಒಪ್ಪಿ ನೀನಾಸಂಗೆ ತಂದು ಬಿಟ್ಟಿದ್ದು, ಈಗಲೂ ನನಗೆ ಆಶ್ವರ್ಯದ ಸಂಗತಿ. ಹೀಗೆ ಒಂದು ಚೌಕಟ್ಟಿನಲ್ಲಿ ಬೆಳೆದ ನನಗೆ ಅಪ್ಪಯ್ಯ(ಮಾವ) ಹೇಳಿದ ಆ ಮಾತು ಅರ್ಥ ಮಾಡಿಕೊಳ್ಳಲು ಹಲವು ವರ್ಷಗಳೇ ಬೇಕಾಯಿತು. ಚೌಕಟ್ಟು ಮೀರೋದು ಅಷ್ಟು ಸುಲಭ ಅಲ್ಲ!

‘ರಂಗದಲ್ಲಿ ಅಂತರಂಗ’ದಲ್ಲಿ ಸ್ತಾನಿಸ್ಲಾವ್‌ಸ್ಕಿ ಹೇಳಿದ ಹಾಗೆ ‘ರಂಗದ ಮೇಲೆ ಬದುಕೋದು’ ಅನ್ನೋ ವಿಚಾರವೇ ಬಹಳ ಅದ್ಭುತವಾದುದು. ರಂಗದ ಮೇಲೆ ಎರಡು ಮೂರು ತಾಸು ನನ್ನದನ್ನು ಬಿಟ್ಟು ಇನ್ನೇನೋ ಆಗಿ ನಟಿಸೋದು ಅಂದರೆ ಬುದ್ಧ ಹೇಳಿದ ಹಾಗೆ ‘ನಿರಾಕಾರ’ ಆಗೋದು ಎನ್ನುವುದು ನನ್ನ ಅಭಿಪ್ರಾಯ. ಇಲ್ಲೊಂದು ಸುಂದರ ಸಂವಹನ ಪ್ರಕ್ರಿಯೆ ಇದೆ – ನಾಟಕವನ್ನು ಆಯ್ಕೆ ಮಾಡಿಕೊಂಡು ಅದನ್ನು ಓದುವುದರಿಂದ ಹಿಡಿದು ಪ್ರದರ್ಶನಕ್ಕೆ ಸಿದ್ಧ ಆಗೋವರೆಗೂ ಹಲವು ಹಂತಗಳಲ್ಲಿ ಸಂವಹನ ನಡೆಯುತ್ತದೆ. ನಿರ್ದೇಶಕರ ಜೊತೆಗಿನ ಸಂವಹನ. ಮುಖ್ಯವಾಗಿ ನನ್ನ ಪಾತ್ರ ಯಾವುದು, ನನ್ನ ಯೋಚನೆ ಮತ್ತೆ ಆ ಪಾತ್ರದ ಯೋಚನೆಗಳೊಂದಿಗಿನ ಸಂವಹನ. ಕೆಲವು ಸಲ ಗುದ್ದಾಟ ಆಗಿದ್ದು ಇದೆ! ಕೊನೆಯಲ್ಲಿ ನಾಟಕಕ್ಕೆ ಒಂದು ರೂಪ ಬಂದು ಅದನ್ನು ಪ್ರೇಕ್ಷಕರ ಮುಂದೆ ಇಟ್ಟಾಗ ಅವರ ಜೊತೆಗೆ ನಾನೊಂದು ಪಾತ್ರವಾಗಿ ಸಂವಹನ ನಡೆಸೋದು. ಇವೆಲ್ಲವೂ ಅದ್ಭುತವಾದುದು ಎಂದೇ ನನಗೆ ಅನ್ನಿಸುತ್ತದೆ. ಆದ್ದರಿಂದಲೇ ನನಗೆ ರಂಗಭೂಮಿ ಬಹಳ ಮುಖ್ಯವಾದುದು ಮತ್ತು ನನ್ನ ಇಷ್ಟದ ಸಂವಹನ ಮಾಧ್ಯಮ ಕೂಡ.

ಸಿನಿಮಾ ಅಂದರೆ ನನಗೆ ಯಾವಾಗಲೂ ಮನಸ್ಸಿರಲಿಲ್ಲ. ನಿರ್ದೇಶಕರಾದ ಟಿ.ಎನ್‌. ಸೀತಾರಾಮ್ ಅವರು ಬಹಳ ಪ್ರೀತಿಯಿಂದ ಒತ್ತಾಯ ಮಾಡಿದರು. ಅವರ ಒತ್ತಾಯಕ್ಕೆ ಕಟ್ಟುಬಿದ್ದು ಅವರ ನಿರ್ದೇಶನದ ಧಾರಾವಾಹಿಯಲ್ಲಿ ನಟಿಸಿದೆ. ಆ್ಯಕ್ಷನ್‌ ಅಂದ ಕೂಡಲೇ ನಟಿಸಬೇಕಿತ್ತು. ಭಾವಗಳು ಇನ್ನೇನು ಉತ್ತುಂಗಕ್ಕೆ ಏರಬೇಕು ಎನ್ನುವಷ್ಟರಲ್ಲಿ ಕಟ್‌ ಅನ್ನುತ್ತಿದ್ದರು. ಒಳಗಿನ ಆ ಭಾವೋದ್ವೇಗವನ್ನು ಹೇಗೆ ಹೊರ ಹಾಕುವುದು ಎನ್ನುವುದೇ ನನಗೆ ಸಮಸ್ಯೆ ಆಯಿತು. ಆದ್ದರಿಂದ ಮತ್ತೆಂದೂ ಕ್ಯಾಮೆರಾ ಎದುರಿಸಲಿಲ್ಲ.  

ರಂಗಭೂಮಿ ಕಲಿಸೋ ಬದುಕಿನ ಪಾಠಗಳು ಹಲವು. ನಿಜಕ್ಕೂ ಅದು ನಮ್ಮನ್ನು ಮನುಷ್ಯನನ್ನಾಗಿ ಮಾಡುತ್ತದೆ, ಆತ್ಮಸ್ಥೈರ್ಯ ತುಂಬುತ್ತದೆ. ಒಂದು ಕಾಲಘಟ್ಟದಲ್ಲಿ ನಾನು ಸೋತು ಬಿಡುತ್ತೇನೆ ಅನ್ನಿಸಿತ್ತು. ಕಡೆಗೂ ನಾನೊಬ್ಬಳು ಹೆಣ್ಣಾಗಿದ್ದೆ. ಸಮಾಜ ಹೋಗುತ್ತಿರುವ ದಿಕ್ಕು ನೋಡಿದರೆ ನಿಜಕ್ಕೂ ಭಯವಾಗುತ್ತದೆ. ಆದರೂ, ಸಿನಿಮಾದಷ್ಟು ಹಾಳಾಗಿಲ್ಲ ರಂಗಭೂಮಿ. ಇಲ್ಲಿಯೂ ಲೇವಡಿ, ವ್ಯಂಗ್ಯ, ಅಪಹಾಸ್ಯ ಇದೆ. ಸಿನಿಮಾಗೆ ಹೋಲಿಸಿದರೆ ಇಲ್ಲಿ ನಿಭಾಯಿಸಬಹುದು. 

ಹೆಣ್ಣಿನ ಸ್ವಾತಂತ್ರ್ಯದ ಬಗ್ಗೆ ನಮಗೆ ಕೆಲವು ತಪ್ಪು ಗ್ರಹಿಕೆಗಳಿವೆ. ವೈದೇಹಿ ಅವರ ಕಥೆ ‘ಗೂಡಿನೊಳಗೆ ಒಂದು ಹಕ್ಕಿ’ ಆಧಾರಿತ ಏಕವ್ಯಕ್ತಿ ರಂಗಪ್ರಯೋಗದಲ್ಲಿ ಎರಡು–ಮೂರು ವರ್ಷಗಳ ಹಿಂದೆ ಅಭಿನಯಿಸಿದೆ. ಈ ಪ್ರಯೋಗ ಮಾಡುವವರೆಗೆ ನಾನು ಅಂದುಕೊಂಡಿದ್ದ ಸ್ವಾತಂತ್ರ್ಯದ ಅರ್ಥ ಬೇರೆಯೇ ಇತ್ತು. ಕಥಾನಾಯಕಿಯಲ್ಲಿ ನನ್ನನ್ನು ಕಂಡೆ. ನನ್ನ ಬಾಲ್ಯ ನೆನಪಾಯಿತು. ಅಲ್ಲಿಯವರೆಗೆ ನಾನು ಅರ್ಥೈಸಿಕೊಂಡಿದ್ದ ಸ್ವಾತಂತ್ರ್ಯದ ಅರ್ಥ ತಪ್ಪು ಎನ್ನುವುದು ಗೊತ್ತಾಯಿತು. ಸ್ವಾತಂತ್ರ್ಯ ಎನ್ನುವುದು ಬಹಿರಂಗದಲ್ಲಿ ಇಲ್ಲ ಎನ್ನುವುದನ್ನು ನಾನು ಕಂಡುಕೊಂಡೆ. ಸಣ್ಣವರಿದ್ದಾಗ ನಮಗೆ ಹಿರಿಯರು ಹೇಳುವುದು, ಹೀಗೇ ಇರಬೇಕು ಎಂದು ನಮಗೆ ಹಾಕಿದ ಚೌಕಟ್ಟು ಇದೆಯಲ್ಲ ಇದನ್ನು ಎಷ್ಟೋ ಬಾರಿ ನಮಗೆ ಮೀರುವುದು ಕಷ್ಟ ಎನಿಸಿಬಿಡುತ್ತದೆ. ದೊಡ್ಡ ಕುಟುಂಬದ ಹೆಣ್ಣು, ಸಾಮಾನ್ಯ ಕುಟುಂಬದ ಹೆಣ್ಣು ಎಂದೆಲ್ಲ ಭೇದವಿಲ್ಲ. ಹೆಣ್ಣು, ಹೆಣ್ಣು ಮಾತ್ರ. ಹೆಣ್ಣಿಗೆ ನಿಜವಾದ ಬಂಧನ ಇರೋದು ಆಕೆಯ ಒಳಗೆ. ಸ್ವಾತಂತ್ರ್ಯದ ನಿಜಾರ್ಥ ಈ ಚೌಕಟ್ಟುಗಳನ್ನು ನಾವೇ ಮೀರುವುದರಲ್ಲಿ ಇರುವುದು. ನಮ್ಮ ಮನಸ್ಸನ್ನು ಮಾತ್ರ ನಾವು ಕೇಳುವ ಹಾಗಾಗಬೇಕು. ಪ್ರಚಾರದ ಹಂಗು ತೊರೆದು ನಮ್ಮ ಕೆಲಸ ನಾವು ಮಾಡಬೇಕು ಅಂತ ನನಗೆ ಹೇಳಿಕೊಟ್ಟದ್ದು ರಂಗಭೂಮಿಯೇ. 

ಹೆಣ್ಣು ಎನ್ನುವ ಕಾರಣಕ್ಕೆ ಮಾಡುವ ಅಪಹಾಸ್ಯಗಳನ್ನು ಮೀರುವುದು ಹೇಗೆ ಎನ್ನುವ ಪ್ರಶ್ನೆ ನನ್ನನ್ನು ಕಾಡಿತು. ನಾನು ನಟಿಸುವ ಪ್ರತಿ ಪಾತ್ರವೂ ನನಗೆ ಏನೋ ಒಂದು ಬದುಕಿನ ಪಾಠ ಹೇಳಿಕೊಟ್ಟವು. ಪಾತ್ರ ಮತ್ತು ನನ್ನ ನಡುವಿನ ಅನುಸಂಧಾನವೂ ನನ್ನನ್ನು ಗಟ್ಟಿಗಿತ್ತಿಯನ್ನಾಗಿ ಮಾಡಿದವು. ನಾನು ನಟಿಸುವ ಪಾತ್ರಗಳೇ ನನ್ನನ್ನು ಮೇಲೆತ್ತಿದವು. ಆದ್ದರಿಂದ ಅಪ್ಪಯ್ಯ ಹೇಳುವ ಚೌಕಟ್ಟು ಮೀರುವುದು ನನಗೆ ಸಾಧ್ಯವಾಯಿತು. ನಾನು ಚೌಕಟ್ಟು ಮೀರಿದೆ! 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !