ಬುಧವಾರ, ನವೆಂಬರ್ 20, 2019
24 °C

ಸಪ್ತರ್ಷಿಗಳು ಭೂಮಿಗೆ ಇಳಿದ ಸ್ಥಳ ‘ಚಂದ್ರಕಣಿಯ ಚಾರಣ’

Published:
Updated:

ಪಾಸ್ ಎಂದರೆ ಪರ್ವತಗಳ ಸಾಲಿನ ಮಧ್ಯೆ ಇರುವ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ತಲುಪಿಸುವ ಪರ್ವತದ ಮಾರ್ಗ. ‘ಚಂದ್ರಕಣಿ ಪಾಸ್’ ಎಂಬುದು ಸಪ್ತರ್ಷಿಗಳು ಭೂಮಿಗೆ ಇಳಿದ ಸ್ಥಳ ಎಂಬ ಪ್ರತೀತಿಯಿದೆ. ಜಮದಗ್ನಿ ಮಹರ್ಷಿಯು ಇಲ್ಲಿ ತಪಸ್ಸನ್ನು ಆಚರಿಸಿದರೆಂದೂ ಪುರಾಣಕಥನ ಹೇಳುತ್ತದೆ. ರೇಣುಕಾ-ಜಮದಗ್ನಿ ಮಹರ್ಷಿಯ ದೇವಾಲಯವೂ ಇದೆ.

ಹಿಮಾಲಯ ಪರ್ವತ ಶ್ರೇಣಿಯು ಪ್ರತಿಯೊಂದು ಪರ್ವತಕ್ಕೂ ಒಂದೊಂದು ವಿಶೇಷ ಪೌರಾಣಿಕ, ಆಧ್ಯಾತ್ಮಿಕ ಹಿನ್ನೆಲೆಯಿದೆ. ಹಾಗಾಗಿ ಇಲ್ಲಿ ಚಾರಣ ಮಾಡುವವರಿಗೆ ಸಾಹಸದ ಜೊತೆಗೆ ಇಂತಹ ಅನುಭವ ದೊರೆಯುತ್ತದೆ. ಆ ಕಾರಣಕ್ಕೆ ಚಾರಣ ಎಂದಿಗೂ ವಿಶೇಷವಾಗಿರುತ್ತದೆ.

ಪಾಸ್ ತಲುಪಲು ಹಲವು ಮಾರ್ಗಗಳಿವೆ. ರುಮ್ಸುವರೆಗೂ ಕಾರಿನಲ್ಲಿ ಸಾಗಬಹುದು. ಇಲ್ಲವಾದರೆ ನಗ್ಗರ್ ಎಂಬಲ್ಲಿಗೆ ಬಸ್ ಹೋಗುತ್ತದೆ. ಅಲ್ಲಿಂದ ರುಮ್ಸು ಸುಮಾರು 4 ಕಿಮೀ. ಈ ಮಾರ್ಗಗಗಳಲ್ಲದೇ ಚನ್ಸಾರಿ ಎಂಬ ಊರಿನವರೆಗೂ ಬಸ್ ಹೋಗುತ್ತದೆ. ಅಲ್ಲಿಂದಲೂ ಚಂದ್ರಕಣಿಗೆ ತಲುಪಬಹುದು. ಚಾರಣಗಳನ್ನು ಆಯೋಜಿಸುವ ಸಂಸ್ಥೆಗಳೊಡನೆ ಇಲ್ಲಿಗೆ ಹೋಗುವುದು ಸುಲಭ. ಅದು ಸರಿಯಾದ ಮತ್ತು ಕ್ಷೇಮವಾದ ಕ್ರಮ.

ನಾವು ಅನುಸರಿಸಿದ ಮಾರ್ಗ- ಚನ್ಸಾರಿ, ಸೋಲಾಟಂಕಿ, ಮೌಂಟಿನಾಗ್, ಉಬ್ಲಾಥಾಚ್, ಧೌರಾನಾಲಾ, ಚಂದ್ರಕಣಿ, ನಯಾಟಾಪ್ರೂ, ರುಮ್ಸು. ಇಂತಹ ಕ್ಯಾಂಪ್‍ಗಳಿಗೆ ಹೋಗುವುದಕ್ಕೆ ಸಾಕಷ್ಟು ದೈಹಿಕ ಸದೃಢತೆ ಬೇಕು. ನಾವು ನಮ್ಮ ಸುತ್ತಮುತ್ತಲ ಪರಿಸರದಲ್ಲಿರಬಹುದಾದ ಗಾಳಿ, ಹವಾಮಾನಗಳಿಗೆ ಒಗ್ಗಿ, ಒಂದೇ ಬಾರಿಗೆ ಸಂಪೂರ್ಣ ಬೇರೆ ವಾತಾವರಣಕ್ಕೆ ಹೋದಾಗ ಆ ವಾತಾವರಣಕ್ಕೆ ಹೊಂದಿಕೊಳ್ಳುವ ಸಹಜಕ್ರಿಯೆಯೇ ‘ಅಕ್ಲೈಮೆಟೈಸೇಷನ್’.

ನಾವು ಬೆಂಗಳೂರಿನಿಂದ ಮನಾಲಿಗೆ ಹೋದಾಗ ಒಂದೇ ಬಾರಿಗೆ, ತಾಪಮಾನ 28-30 ಡಿಗ್ರಿಯಿಂದ 10-12 ಡಿಗ್ರಿಗೆ ಇಳಿದಿತ್ತು. ಹಾಗಾಗಿ ಅಲ್ಲಿ ಕಾಲಿಟ್ಟ ತಕ್ಷಣ ಚಳಿಯ ಅನುಭವವಾಯಿತು. ಅಲ್ಲಿನ ಪರಿಸರಕ್ಕೆ ಒಗ್ಗಿದ ನಂತರ ಚಾರಣ ಪ್ರಾರಂಭಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ನಾವು ಅದೇ ವಿಧಾನ ಅನುಸರಿಸಿದೆವು.

ನಾವು ಮೊದಲ ದಿನ ಚನ್ಸಾರಿವರೆಗೂ ತಲುಪಿ ಅಲ್ಲಿಂದ ಚಾರಣ ಪ್ರಾರಂಭಿಸಿದೆವು. ಅಲ್ಲಿಂದ ಬಿಜಲೀ ಮಹಾದೇವ ಮಂದಿರದವರೆಗೆ ಸುಮಾರು ನಾಲ್ಕು ಕಿ.ಮೀಗಳ ಏರುಚಾರಣ.

ಇಲ್ಲಿನ ವಿಶೇಷವೆಂದರೆ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಈ ದೇವಾಲಯದಲ್ಲಿನ ಶಿವಲಿಂಗ ಸಿಡಿಲು ಬಡಿದು ಚುಪ್ಪಾಚೂರಾಗುತ್ತದೆ. ಈಶ್ವರನು ತಾನೇ ಈ ಸಿಡಿಲಿನ ಹೊಡೆತ ತಿಂದು ಜನರ ರಕ್ಷಣೆಗಾಗಿ ನಿಲ್ಲುತ್ತಾನೆ ಎಂಬುದು ಇಲ್ಲಿನ ಜನರ ನಂಬಿಕೆ. ಅಲ್ಲಿಯ ಪೂಜಾರಿಗೆ ಕನಸಿನಲ್ಲಿ ಈ ವಿದ್ಯಮಾನವು ಬರುತ್ತದೆಯಂತೆ. ನಂತರ ಒಡೆದ ಲಿಂಗವನ್ನು ಬೆಣ್ಣೆಯಿಂದ ಕೂಡಿಸಿ ಮತ್ತೆ ಪೂಜಿಸುತ್ತಾರೆ. ಲಿಂಗವು ಬೆಣ್ಣೆಯ ಲಿಂಗದಂತೆಯೇ ಕಾಣುತ್ತದೆ. ಅದೇ ಸಮಯದಲ್ಲಿ ಆ ಪರ್ವತದ ಸುತ್ತಲಿರುವ ಅತಿ ಎತ್ತರದ ದೇವದಾರು ಮರವನ್ನು ಆಯ್ಕೆ ಮಾಡಿಕೊಂಡು ಗರುಡಗಂಬ ಮಾಡುತ್ತಾರಂತೆ.

ನಾವು ಚಾರಣ ಹೋದಾಗ ಸುತ್ತಲೂ ಹಸಿರು ಬೆಟ್ಟಗಳು, ಅದರಾಚೆಗೆ ಮಂಜು ಮುಸುಕಿದ ಪರ್ವತಗಳು ಕಾಣುತ್ತಿದ್ದವು. ಅಲ್ಲಿಂದ ಮೂರು ಕಿ.ಮೀ ಪ್ರಯಾಣಿಸುತ್ತಿದ್ದಂತೆ ಸೋಲಾಟಂಕಿ ಕ್ಯಾಂಪ್ ಸಿಕ್ಕಿತು. ನೋಡಿದಷ್ಟು ದೂರಕ್ಕೂ ಬರೀ ದೇವದಾರು ಮರಗಳೇ ಇರುವ ಈ ಕಾಡಿನಲ್ಲಿ ವಿದ್ಯುತ್ ಇಲ್ಲ. ಜನಸಂಚಾರವಿಲ್ಲ, ಮೊಬೈಲ್ ಸಂಪರ್ಕವಿಲ್ಲ, ಹಾರನ್ ಗದ್ದಲವಿಲ್ಲ, ಬರಿಯ ಬೃಹತ್ ಮರಗಳು, ಅದರಲ್ಲಿ ವಾಸಿಸುವ ಪಶುಪಕ್ಷಿಗಳು. ಕ್ಯಾಂಪಿಗೆ ಟೆಂಟ್ ಹಾಕಿ ಹತ್ತಿರದ ಝರಿಯಿಂದ ನೀರಿನ ವ್ಯವಸ್ಥೆ ಮಾಡಿಕೊಂಡು ಅಲ್ಲಿ ಅಡುಗೆ ಸಿದ್ಧಮಾಡುತ್ತಾರೆ.

ಮುಂದೆರಡು ದಿನ ಮತ್ತಷ್ಟು ಚಳಿಯೆಡೆಗೆ ಚಾರಣ ಮುಂದುವರೆಯಿತು. ಸೋಲಾಟಂಕಿಯಿಂದ ಎರಡು ದಿನ ಪರ್ವತ ಶಿಖರಮಟ್ಟದಲ್ಲಿಯೇ ಕಳೆದೆವು. ನಡೆವ ದಾರಿಯ ಇಕ್ಕೆಲಗಳಲ್ಲೂ ಪ್ರಪಾತ; ಹತ್ತಾರು ಅಡಿಗಳಷ್ಟೇ ವಿಸ್ತೀರ್ಣವಾದ ದಾರಿ. ಒಂದೆಡೆ ಪಾರ್ವತಿ ಕಣಿವೆ, ಮತ್ತೊಂದೆಡೆ ಕುಲ್ಲು ಕಣಿವೆಯ ಮನಮೋಹಕ ದೃಶ್ಯ. ಮೇಲೆ ಹಸಿರಹುಲ್ಲು ಹೇರಳವಾಗಿ ಬೆಳೆಯುವುದರಿಂದ ಜಾನುವಾರುಗಳನ್ನು ಇಲ್ಲಿ ಮೇಯಿಸುತ್ತಿದ್ದರು.

ಎರಡನೆಯ ರಾತ್ರಿ ಮೌಂಟಿನಾಗ್ ಎಂಬಲ್ಲಿ ಕ್ಯಾಂಪ್. ಇಲ್ಲಿ ನಾಗದೇವತೆಗಳ ಮಂದಿರವಿದೆ. ಕೃತ್ತಿಕೆಯರು ಸುಬ್ರಹ್ಮಣ್ಯನಿಗೆ ಆರೈಕೆ ಮಾಡಿದ ಸ್ಥಳವೂ ಇಲ್ಲಿಂದ ಕಾಣುತ್ತದೆ. ಕ್ಯಾಂಪ್ ನಿವೇಶನಗಳಂತೂ ಅದ್ಭುತವಾಗಿರುತ್ತವೆ. ನಾವು ಹರಿಯುವ ಝರಿ ಪಕ್ಕದಲ್ಲಿರುವ ಟೆಂಟ್‌ಗಳಲ್ಲೇ ವಾಸ್ತವ್ಯ ಮಾಡಿದ್ದೆವು. ಮುಂಜಾನೆಯಲ್ಲಿ ಹಿಮಶಿಖರಗಳ ದಿಗ್ದರ್ಶನವಾಯಿತು. ಎರಡನೆಯ ದಿನದ ಚಾರಣದಲ್ಲಿ ನಡೆವ ದಾರಿ ಕೆಲವೆಡೆ ಕೇವಲ ಒಂದು ಅಡಿಯಷ್ಟು ಕಡಿದಾಗಿತ್ತು.

ಮುಂದೆ ಉಬ್ಲಾಥಾಚ್ ಎಂಬ ಜಾಗ ತಲುಪಿದೆವು. ಅಲ್ಲಿ ಒಂದು ತೊರೆಯು ಹುಟ್ಟಿ ಮುಂದೆ ಎಲ್ಲೋ ಬಿಯಾಸ್ ನದಿ ಸೇರುತ್ತದೆಯಂತೆ. ಅಲ್ಲೊಂದು ಜಾಗದಲ್ಲಿ ಬುಳುಬುಳು ಎಂದು ನೀರು ಆಚೆ ಬರುತ್ತಿತ್ತು. ಆ ನೀರು ಸ್ಫಟಿಕದಷ್ಟು ತಿಳಿ, ಅಮೃತದಂಥ ರುಚಿ. ಈ ಜಾಗದಲ್ಲಿ ತಾಪಮಾನ ಸುಮಾರು 5-7 ಡಿಗ್ರಿ. ಇಲ್ಲಿಂದ ಸರ್ಪಾಸ್‌ ಎಂಬ ಮತ್ತೊಂದು ಪ್ರಸಿದ್ಧ ಚಾರಣಮಾರ್ಗ ಕೂಡಾ ಕಾಣಿಸುತ್ತದೆ.

ಮುಂದೆ ಏರಿ ಸಾಗುತ್ತಿರುವಂತೆ ಕ್ರಮೇಣವಾಗಿ ಜಲಪಾತಗಳು, ಕೆರೆಗಳು ಎಲ್ಲವೂ ಹೆಪ್ಪುಗಟ್ಟಿ ಮಂಜುಗಡ್ಡೆಗಳಾಗುತ್ತಿರುವುದು ಕಂಡಿತು. ಶುಭ್ರಶ್ವೇತ ಬಣ್ಣದ ಹಿಮಾಲಯಗಳ ನಡುವೆ ಮಂಜುಗಡ್ಡೆಗಳ ಮೇಲೆಯೇ ನಡೆಯುತ್ತಾ ಮೋಡಗಳ ಒಳಗೆ ನುಗ್ಗಿ ಹತ್ತಾರು ನೀರ್ಗಲ್ಲು ಜಲಪಾತಗಳನ್ನು ಇಳಿದು ಧೊರಾನಾಲಾ ಎಂಬ ಕ್ಯಾಂಪಿಗೆ ಸೇರಿದೆವು. ಇಲ್ಲಿ ಎರಡು ತೊರೆಗಳು ಸಂಗಮವಾಗಿ ಮುಂದೆ ಸಾಗುತ್ತವೆ. ಇಲ್ಲಿನ ತಾಪಮಾನ 3-4 ಡಿಗ್ರಿಗಳಷ್ಟು. ಅಂದರೆ ಮುಟ್ಟಲಾರದಷ್ಟು ಕೊರೆವ ನೀರು.

ಇಲ್ಲಿಂದ ಮುಂದೆ ಮಂಜುಗಡ್ಡೆಯ ಜಲಪಾತಗಳು ಕಂಡವು. ಅವುಗಳ ನಡುವೆ ಸಾಗುತ್ತಿರುವಾಗ ಕ್ರಮೇಣ ಮರಗಳು ಕಡಿಮೆಯಾದವು. ಎತ್ತರ ಎತ್ತರಕ್ಕೆ ಏರುತ್ತಿದ್ದಂತೆ ಸುತ್ತ ಕಾಣುತ್ತಿದ್ದ ಗುಡ್ಡಗಳೆಲ್ಲ ಕೆಳಗೆ ಹೋಗಿ ನಮಗೆ ಕಣ್ಣು ಹಾಯಿಸಿದಷ್ಟು ದೂರ ಹಿಮಾಲಯದ ವೈಭವ ಅನಾವರಣಗೊಂಡಿತು. ಇಲ್ಲಿ ಮರಗಳಿಲ್ಲದಿದ್ದರೂ ಹುಲ್ಲು, ಸಣ್ಣಸಣ್ಣ ಹೂವುಗಳು ಮತ್ತು ಗುಬ್ಬಚ್ಚಿಗಿಂತ ಗಾತ್ರದಲ್ಲಿ ಸಣ್ಣದಾದ ಹಕ್ಕಿಗಳು ಕಂಡವು. ಸ್ಥಳೀಯರು, ಇಲ್ಲಿ ಕರಡಿಗಳು, ಚಿರತೆಗಳಿವೆ ಎಂದು ಹೇಳಿದರು. ಪರ್ವತದ ಮೇಲೆ ಹೋದ ಹಾಗೆ ಇನ್ನೇನು ಶಿಖರ ಸಿಕ್ಕಿತೇನೋ ಎನಿಸುವಷ್ಟರಲ್ಲಿ ಮತ್ತೊಂದು ಗುಡ್ಡ ಕಾಣಿಸಿ, ‘ಇನ್ನೂ ಮೇಲೆ ಹೋಗುವುದಿದೆ’ ಎಂದು ಸೂಚಿಸಿತು. ಇದು ಜೀವನದ ಪಾಠವೂ ಹೌದು! ಹಾಗೆ ಹೋಗುತ್ತಾ 12500 ಅಡಿಗಳಷ್ಟು ಎತ್ತರದಲ್ಲಿ ಹಿಮಾವೃತ ಚಂದ್ರಕಣಿ ಪಾಸ್ ಸಿಕ್ಕಿತು.

ಹಿಮದಲ್ಲಿ ನಡೆಯುವುದು ಸಾಮಾನ್ಯವಾದ ನೆಲದಲ್ಲಿ ನಡೆದಂತಲ್ಲ. ಕೆಳಗೆ ಎಷ್ಟು ಆಳ ಹಿಮವಿದೆ ಎಂದು ನಮಗೆ ತಿಳಿಯು
ವುದಿಲ್ಲ. ಊರುಗೋಲಿನಲ್ಲಿ ಚುಚ್ಚಿ ಗಟ್ಟಿಹಿಮ ಎಂದು ತಿಳಿದು ಆಮೇಲೆ ಕಾಲಿಡಬೇಕು. ಇಲ್ಲವಾದರೆ ಕಾಲು ಕುಸಿಯಬಹುದು. ಕೆಲವೆಡೆಗಳಲ್ಲಿ ಜಾರಿ ಬರುವುದೇ (ಸ್ಲೈಡ್) ಹೆಚ್ಚು ಸೂಕ್ತ. ಸ್ಕೀಯಿಂಗ್ ತಿಳಿದವರು ಹಾಗೂ ಬರುತ್ತಾರೆ.

ಹೀಗೆ ಹಿಮದಲ್ಲೇ ಒಂದೆರಡು ಗಂಟೆಗಳ ಕಾಲ ನಡೆಯುತ್ತಾ ನಯಾ ಟಾಪ್ರೂ ಎಂಬ ಜಾಗ ತಲುಪಿದೆವು. ಅಲ್ಲಿಂದ ನಾಲ್ಕು ಗಂಟೆ ಬೆಟ್ಟ ಇಳಿದ ಮೇಲೆ ರುಮ್ಸು ಸಿಕ್ಕಿತು.

ಇಷ್ಟೆಲ್ಲ ಬೆಟ್ಟ ಹತ್ತಿ, ಇಳಿಯುತ್ತಾ ಚಾರಣ ಮುಗಿಸಿಬಂದ ಮೇಲೆ ಇನ್ನೊಂದು ಬಾರಿ ಹೋಗಬೇಕು ಎನ್ನಿಸಿದ್ದಂತೂ ನಿಜ.

ಪ್ರತಿಕ್ರಿಯಿಸಿ (+)