ಆದಿವಾಸಿಗಳೂ ಅಭಿವೃದ್ಧಿಯೂ

ಭಾನುವಾರ, ಮಾರ್ಚ್ 24, 2019
27 °C

ಆದಿವಾಸಿಗಳೂ ಅಭಿವೃದ್ಧಿಯೂ

Published:
Updated:

ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರ ನಡೆದ ಆದಿವಾಸಿಗಳ ಅಭಿವೃದ್ಧಿಯ ಕುರಿತ ಚರ್ಚೆಗೆ ಹಲವು ಆಯಾಮಗಳಿವೆ. ವಸಾಹತು ಆಡಳಿತದ ಸಂದರ್ಭದಲ್ಲಿ ಕೆಲವು ಮಿಷನರಿಗಳು ಆದಿವಾಸಿಗಳ ಕಲ್ಯಾಣಕ್ಕಾಗಿ ಶ್ರಮಿಸಿದ ಉದಾಹರಣೆಗಳಿವೆ. ಕಳೆದ ಶತಮಾನದ ಅರವತ್ತರ ದಶಕದಲ್ಲಿ ಭಾರತದ ಪ್ರಧಾನಿಯಾಗಿದ್ದ ನೆಹರೂ ಆದಿವಾಸಿಗಳ ಸಂಸ್ಕೃತಿ ಮತ್ತು ಅವರ ಅಭಿವೃದ್ಧಿಗೆ ಪಂಚಶೀಲ ತತ್ವಗಳನ್ನೇ ರೂಪಿಸಿದರು.

ಯುರೋಪಿನ ಅಭಿವೃದ್ಧಿಯ ಮಾದರಿಯನ್ನು ಒಪ್ಪಿಕೊಂಡ ನೆಹರೂ ಅವರಿಗೆ ಈ ಅಭಿವೃದ್ಧಿಯ ಜೊತೆಯಲ್ಲಿಯೇ ಬರುವ ಆಧುನಿಕತೆಯ ಕುರಿತು ಸಂದೇಹಗಳಿದ್ದವು. ಆಧುನಿಕತೆ ಬುಡಕಟ್ಟುಗಳ ಬದುಕನ್ನು ನಾಶ ಮಾಡಿಬಿಡುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಆದಿವಾಸಿಗಳ ಜೀವನ ವಿಧಾನ, ಸಂಸ್ಕೃತಿ, ಹಾಡು ಕುಣಿತ ಮತ್ತು ಅವರ ಪರಂಪರೆಗೆ ಘಾಸಿಯಾಗದಂತೆ ಅಭಿವೃದ್ಧಿ ನೀತಿ ರೂಪಿಸಬೇಕು ಎಂಬುದು ಅವರ ಇರಾದೆಯಾಗಿತ್ತು. ಇದನ್ನು, ಆದಿವಾಸಿಗಳ ಅಭಿವೃದ್ಧಿ ಕುರಿತ ನೆಹರೂ ಎಲ್ವಿನ್ ಪಂಥೀಯ ದೃಷ್ಟಿಕೋನ ಎನ್ನಬಹುದು. ಆದರೆ ನೆಹರೂ ಎಲ್ವಿನ್ ಚಿಂತನೆಗಳಲ್ಲಿದ್ದ ‘ಆದಿವಾಸಿಗಳ ಸಂಸೃತಿಯನ್ನು ಉಳಿಸಬೇಕು’ ಎಂಬ ಒಂದು ಸದಾಶಯವನ್ನೇ ತಿರುಚಿದ ಚರ್ಚೆ ನಂತರದಲ್ಲಿ ಅಸ್ತಿತ್ವಕ್ಕೆ ಬಂತು. ಆದಿವಾಸಿಗಳು ಅಭಿವೃದ್ಧಿ ಬಯಸಿ ‘ಮುಖ್ಯವಾಹಿನಿ’ಗೆ ಬಂದರೆ ಅವರ ಸಂಸ್ಕೃತಿಯ ಗತಿ ಏನು? ಅವರು ಮುಖ್ಯವಾಹಿನಿಗೆ ಬರಬೇಕೋ ಅಥವಾ ಕಾಡಲ್ಲಿಯೇ ಬದುಕಬೇಕೋ? ಎಂಬ ಚರ್ಚೆ ಶುರುವಾಯಿತು.

ಅಂದು ಶುರುವಾದ ಈ ಚರ್ಚೆ ಕಾಲಕಾಲಕ್ಕೆ ಹುಟ್ಟಿರಬಹುದಾದ ಹೊಸ ಕ್ಲೀಷೆಗಳ ಜೊತೆ ಇಂದಿಗೂ ಯಥೇಚ್ಛವಾಗಿ ನಡೆಯುತ್ತಲೇ ಇದೆ. ಆದಿವಾಸಿಗಳು ಎಲ್ಲರಂತೆ ಅಭಿವೃದ್ಧಿ ಹೊಂದಬೇಕು, ಕಾಲದ ಹೊಸ ಅಗತ್ಯಗಳಿಗೆ ಅನುಗುಣವಾಗಿ ಅವರ ಬದುಕಲ್ಲಿ ಹೊಸತನ ಬರಲೆಂಬ ಆಶಯ ಹಿನ್ನೆಲೆಗೆ ಸರಿದಿದೆ. ಸ್ವಾತಂತ್ರ್ಯಾನಂತರ ಆದಿವಾಸಿ, ಅಲೆಮಾರಿ ಮತ್ತು ಅಸಂಖ್ಯಾತ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಒಂದು ನೀತಿ ಎಂಬುದು ಭಾರತದಲ್ಲಿ ರೂಪುಗೊಳ್ಳಲಿಲ್ಲ.

ಇದಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಮುಖ್ಯವಾದದ್ದು ಭಾರತದ ಅರಣ್ಯ ನೀತಿ. ಆದಿವಾಸಿಗಳ ಅನಭಿವೃದ್ಧಿಗೂ ಭಾರತದ ಅರಣ್ಯ ನೀತಿಗೂ ನೇರ ಸಂಬಂಧವಿದೆ. ಶತಮಾನಗಳ ಕಾಲದ ಈ ಚಾರಿತ್ರಿಕ ಬಿಕ್ಕಟ್ಟನ್ನು ಜತನದಿಂದ ಕಾಪಾಡಿಕೊಂಡು ಬರಲಾಗಿದೆ. ಯಾವುದೇ ದೇಶದ ಆದಿವಾಸಿಗಳಿಗೂ ಅರಣ್ಯಕ್ಕೂ ಒಂದು ಸಾವಯವ ಸಂಬಂಧ ಇದ್ದೇ ಇರುತ್ತದೆ. ಅದರಲ್ಲೂ ಭಾರತದ ಸಾಮಾಜಿಕ ಸಂದರ್ಭದಲ್ಲಿ ಅರಣ್ಯ ಮತ್ತು ಸಮುದಾಯಗಳ ಸಂಬಂಧ ಅವಿಚ್ಫಿನ್ನವಾದದ್ದು. ಆದಿವಾಸಿಗಳು ಅರಣ್ಯವನ್ನು ಆಸ್ತಿ ಎಂದು ಪರಿಗಣಿಸಲಿಲ್ಲ. ಅರಣ್ಯವು ಅಧ್ಯಾತ್ಮವಾಗಿ, ತಿಳಿವಿನ ಮೂಲವಾಗಿ, ಮನುಷ್ಯನ ಯಾವತ್ತೂ ಸಂಗಾತಿಯಾಗಿ ಅವರ ಬದುಕಲ್ಲಿ ಹಾಸುಹೊಕ್ಕಾಗಿತ್ತು. ಆದರೆ ವಸಾಹತು ಆಡಳಿತದ ಸಂದರ್ಭದಲ್ಲಿ ಮಾನವ ಮತ್ತು ಅರಣ್ಯದ ನಡುವಿನ ಸಂಬಂಧದ ವ್ಯಾಖ್ಯಾನ ಬದಲಾಯಿತು. ಸಮುದಾಯಗಳ ಬದುಕಿನ ಭಾಗವಾಗಿದ್ದ ಅರಣ್ಯವು ಪ್ರಭುತ್ವದ, ಬಂಡವಾಳಶಾಹಿಗಳ ಖಾಸಗಿ ಆಸ್ತಿಯಾಗಿ ಬದಲಾಯಿತು. ಸಹಜವಾಗಿಯೇ ಆದಿವಾಸಿಗಳಿಗೆ ಅರಣ್ಯದ ಜೊತೆ ಇದ್ದ ಪಾರಂಪರಿಕ ಸಂಬಂಧಗಳಿಗೆ ಸಂಚಕಾರ ಬಂದೊದಗಿತು. ಅರಣ್ಯಗಳಲ್ಲಿ ಬದುಕುತ್ತಿದ್ದ ಆದಿವಾಸಿಗಳು ವಸಾಹತು ಆಡಳಿತದ ಅರಣ್ಯ ನೀತಿಗಳಿಂದ ಅತಂತ್ರರಾಗಿ ತಮ್ಮ ವಾಸದ ನೆಲೆಗಳಲ್ಲಿಯೇ ಅನ್ಯರಾಗುತ್ತ ಹೋದರು.

ಆದಿವಾಸಿಗಳು ವಸಾಹತು ಆಡಳಿತದ ಈ ಕ್ರಮದ ವಿರುದ್ಧ ಬಂಡೆದ್ದರು. ಅರಣ್ಯವನ್ನು ತಮ್ಮ ಬಂಡವಾಳದ ವಿಸ್ತರಣೆಯ ಭಾಗವಾಗಿ ಬಳಸುತ್ತಿದ್ದ ವಸಾಹತು ಆಡಳಿತ ಸ್ಥಳೀಯ ಬುಡಕಟ್ಟುಗಳ ಪ್ರತಿರೋಧಗಳನ್ನು ಸೈನ್ಯದ ಮೂಲಕ ಹತ್ತಿಕ್ಕಿತು. ಸೈನ್ಯದ ಕಾರ‍್ಯಾಚರಣೆಗಳನ್ನು ನ್ಯಾಯಬದ್ಧಗೊಳಿಸಲು ಅರಣ್ಯ ಕಾಯ್ದೆಗಳು ಮತ್ತು ಕ್ರಿಮಿನಲ್ ಪ್ರೊಸೀಜರ್ ಕೋಡ್‌ಗಳು ರೂಪುಗೊಂಡವು. ತನ್ನ ಖಾಸಗಿ ಆಸ್ತಿಯಾದಂತಾದ ಅರಣ್ಯವನ್ನು ರಕ್ಷಿಸಬೇಕು ಎಂದು ವಸಾಹತು ಆಡಳಿತ ನಿಶ್ಚಯಿಸಿತು. ಆದರೆ ಯಾರಿಂದ ಅರಣ್ಯವನ್ನು ರಕ್ಷಿಸಲಾಗುತ್ತದೆ ಎಂಬುದು ಅಗೋಚರ ಸಂಗತಿಯೇ ಆಗಿತ್ತು. ಅರಣ್ಯ ಯಾರದು? ಯಾರು ಅದನ್ನು ಬಳಸಬೇಕು? ಅರಣ್ಯದಲ್ಲಿ ಯಾರಿರಬೇಕು? ಯಾರಿರಬಾರದು? ಎಂಬೆಲ್ಲ ಸಂಗತಿಗಳು ಮಾತ್ರ ಈ ಅರಣ್ಯ ಕಾಯ್ದೆಯಿಂದ ಸ್ಪಷ್ಟಗೊಂಡವು. ಇಂದು ಅಸ್ತಿತ್ವದಲ್ಲಿರುವ ಸಂರಕ್ಷಿತ ಅರಣ್ಯ, ಅಭಯಾರಣ್ಯ, ವನ್ಯಮೃಗ ಸಂರಕ್ಷಣೆ, ರಾಷ್ಟ್ರೀಯ ಉದ್ಯಾನ ಎಂಬ ಕಾಡುಳಿಸುವ ಆಧುನಿಕ ತಂತ್ರಗಳ ಬೇರುಗಳು ಈ ಪುರಾತನ ಅರಣ್ಯ ನೀತಿಯಲ್ಲಿವೆ.

1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯು ರಾಷ್ಟ್ರೀಯ ಉದ್ಯಾನಗಳಿಗೆ ಆಧುನಿಕವೆನ್ನಿಸುವ ಸ್ವರೂಪವನ್ನು ಕಲ್ಪಿಸಿತು. ಆದರೂ ಈ ಸಂರಕ್ಷಿತ ಅರಣ್ಯಗಳಲ್ಲಿ ಬೃಹತ್ ಅಣೆಕಟ್ಟೆಗಳು ನಿರ್ಮಾಣಗೊಂಡವು, ಗಣಿಗಾರಿಕೆಗೆ ಅವ್ಯಾಹತ ಅವಕಾಶ ಲಭಿಸಿತು. ಸರ್ಕಾರದ ಬೃಹತ್ ಯೋಜನೆಗಳು, ಅಣುಸ್ಥಾವರಗಳು ಉಪಯುಕ್ತ ಅರಣ್ಯಗಳ ಎದೆ ಬಗೆದು ಅಸ್ತಿತ್ವಕ್ಕೆ ಬಂದವು. ಆದರೆ ಅರಣ್ಯದಲ್ಲಿ ಬದುಕುವ, ಅಲ್ಲಿನ ಉಪಉತ್ಪನ್ನಗಳನ್ನು ಸಂಗ್ರಹಿಸುವ ಮತ್ತು ಅದನ್ನು ಮಾರಾಟ ಮಾಡುವ ಆದಿವಾಸಿಗಳ ಪಾರಂಪರಿಕ ಹಕ್ಕುಗಳನ್ನು ರಾಷ್ಟ್ರೀಯ ಉದ್ಯಾನ ಕಾಯ್ದೆ ಕಿತ್ತುಕೊಂಡಿತು. ಜೊತೆಗೆ ಸಂರಕ್ಷಿತ ಅರಣ್ಯಗಳಲ್ಲಿ ಜನವಸತಿ ಇರಕೂಡದು ಎಂದು ಆದಿವಾಸಿಗಳನ್ನು ಒಕ್ಕಲೆಬ್ಬಿಸಲಾಯಿತು. ಸ್ವಾತಂತ್ರ್ಯಾನಂತರ ಒಟ್ಟು 8.54 ಮಿಲಿಯನ್ ಆದಿವಾಸಿಗಳನ್ನು ಹೀಗೆ ಒಕ್ಕಲೆಬ್ಬಿಸಲಾಯಿತು. ಇಂತಹ ಸಂದರ್ಭದಲ್ಲಿ ಜಾರಿಗೆ ಬಂದ 2006ರ ‘ಬುಡಕಟ್ಟು ಮತ್ತು ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕು’ ಕಾಯ್ದೆ ಆದಿವಾಸಿಗಳು ಉಸಿರಾಡುವಂತೆ ಮಾಡಿತ್ತು. ಈ ಕಾಯ್ದೆ ಆದಿವಾಸಿಗಳ ಬದುಕಲ್ಲಿ ನಿರ್ದಿಷ್ಟ ಬದಲಾವಣೆಗಳನ್ನು ತರಬಲ್ಲದು ಎಂಬ ಭರವಸೆಯನ್ನೂ ಹುಟ್ಟಿಸಿತ್ತು. ಆದರೆ ಕಾಯ್ದೆಯಲ್ಲಿರುವ ಕೆಲವು ಗೊಂದಲಗಳು ಆದಿವಾಸಿಗಳಲ್ಲಿ ನಿರಾಶೆ ಹುಟ್ಟಿಸಿವೆ. ಅದರಲ್ಲೂ ಸುಪ್ರೀಂ ಕೋರ್ಟ್ ಕಳೆದ ತಿಂಗಳು 11.6 ಲಕ್ಷ ಆದಿವಾಸಿಗಳನ್ನು ಕಾಡಿನಿಂದ ಒಕ್ಕಲೆಬ್ಬಿಸಬೇಕು ಎಂಬ ತೀರ್ಪು ನೀಡಿದ ನಂತರ (ತೀರ್ಪಿಗೆ ಈಗ ತಡೆಯಾಜ್ಞೆ ಬಂದಿದೆ) ಆದಿವಾಸಿಗಳ ಅಸ್ತಿತ್ವದ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.

ತಲೆತಲಾಂತರಗಳಿಂದ ರಕ್ಷಿಸಿಕೊಂಡು ಬಂದ ಕಾರಣಕ್ಕೆ ಆದಿವಾಸಿಗಳಿಗೆ ಅರಣ್ಯದ ಮೇಲೆ ಸಹಜ ಹಕ್ಕುಗಳಿವೆ. ಆದರೆ ಸಾಮ್ರಾಜ್ಯಶಾಹಿ ರಾಜಕಾರಣ ಈ ಹಕ್ಕುಗಳನ್ನು ನಿರಾಕರಿಸುತ್ತಲೇ ಬಂದಿದೆ. ಜನಾಂಗವೊಂದರ ಜೀವಿಸುವ, ನೆಲೆಕಂಡುಕೊಳ್ಳುವ ಸಹಜ ಹಕ್ಕುಗಳನ್ನು ನಿರಾಕರಿಸುವ ಮೂಲಕ ಅದನ್ನು ನಿರ್ಗತಿಕ ಸ್ಥಿತಿಗೆ ತಳ್ಳಲಾಗುತ್ತದೆ. ಇದು ಜನಾಂಗ ನಾಶಕ್ಕೆ ಸಾಮ್ರಾಜ್ಯಶಾಹಿಗಳು ಇಡುವ ಮೊದಲ ಹೆಜ್ಜೆ. ತಾನು ಹುಟ್ಟಿದ ನೆಲದಲ್ಲಿಯೇ ಜನಾಂಗವೊಂದನ್ನು ಅನ್ಯವಾಗಿಸುವುದು ಮತ್ತು ಆತ್ಮದ್ವೇಷ ಹುಟ್ಟಿಸುವುದು ಜನಾಂಗ ನಾಶದ ಕಾರ‍್ಯಾಚರಣೆಯ ಎರಡನೇ ಹಂತ. ಅಮೆರಿಕದ ರೆಡ್‌ಇಂಡಿಯನ್ನರನ್ನು, ಆಸ್ಟ್ರೇಲಿಯಾದ ಬುಡಕಟ್ಟುಗಳನ್ನು, ಲ್ಯಾಟಿನ್ ಅಮೆರಿಕದ ಆದಿವಾಸಿಗಳನ್ನು ಸಾಮ್ರಾಜ್ಯಶಾಹಿಗಳು ಹೀಗೇ ಅಕ್ಷರಶಃ ನಾಶ ಮಾಡಿದ್ದಾರೆ. ಆಫ್ರಿಕಾದ ಮೂಲನಿವಾಸಿಗಳನ್ನು ಯುರೋಪಿನ ಧನದಾಹಿ ದೇಶಗಳು ನಡೆಸಿಕೊಂಡ ರೀತಿ ಚರಿತ್ರೆಯ ಪುಟಗಳಲ್ಲಿ ಇನ್ನೂ ನಿಗಿನಿಗಿಸುತ್ತಿದೆ.

ಭಾರತದ ಡಂಡಕಾರಣ್ಯದ ಆದಿವಾಸಿಗಳನ್ನು ವಸಾಹತು ಆಡಳಿತ ನಡೆಸಿಕೊಂಡ ರೀತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಸ್ವಾತಂತ್ರ್ಯ ಬಂದ ಮೇಲೂ ಛತ್ತೀಸಗಡ, ಒಡಿಶಾದ ನಿಯಾಮಗಿರಿ ಮತ್ತು ಕಂದಮಾಲ್‌ಗಳಲ್ಲಿ ಆದಿವಾಸಿಗಳು ಶಿಬಿರಗಳಲ್ಲಿ ಬದುಕುತ್ತಿದ್ದಾರೆ. ಕರ್ನಾಟಕದ ಕುದುರೆಮುಖ, ನಾಗರಹೊಳೆ ಮತ್ತು ಬಂಡಿಪುರ ಅರಣ್ಯಗಳಿಂದ ಆದಿವಾಸಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಛತ್ತೀಸಗಡ, ಒಡಿಶಾ ರಾಜ್ಯಗಳ ಷೆಡ್ಯೂಲ್ಡ್ ಏರಿಯಾಗಳಲ್ಲಿ ಆದಿವಾಸಿಗಳ ಸ್ವಯಂಆಡಳಿತ ಜಾರಿಯಲ್ಲಿದ್ದರೂ ಅದನ್ನು ಬದಿಗೆ ಸರಿಸಲಾಗಿದೆ.

ಇಂತಹ ಸಂದರ್ಭದಲ್ಲಿ ಆದಿವಾಸಿಗಳ ಅಭಿವೃದ್ಧಿ, ಸಂಸ್ಕೃತಿ, ಪರಂಪರೆಗಳ ಬಗ್ಗೆ ಒಂದು ಕಲ್ಯಾಣ ರಾಜ್ಯ ಹೇಗೆ ಯೋಚಿಸಬೇಕು? ಆದಿವಾಸಿಗಳ ಅಭಿವೃದ್ಧಿಗೆ ನೆಹರೂ ಕಲ್ಪಿತ ‘ಸುವರ್ಣ ಮಾಧ್ಯಮ ಸೂತ್ರ’ ಕಂಡುಕೊಳ್ಳಲು ಸಾಧ್ಯವೆ? ಸಾಧ್ಯವಿದೆ. ನಮ್ಮ ಆದಿಮ ಪರಂಪರೆಯ ಬೇರುಗಳಂತಿರುವ ಬುಡಕಟ್ಟುಗಳನ್ನು ಅರಣ್ಯದ ನಿಜ ವಾರಸುದಾರರೆಂದು ಪರಿಗಣಿಸಬೇಕು, ಇಲ್ಲವೇ ರಕ್ಷಿತ ಅರಣ್ಯದ ಒಡೆತನದಲ್ಲಿ ಅವರು ‘ಹಕ್ಕುಳ್ಳ ಪಾಲುದಾರ’ರಾಗಿರಬೇಕು. ತಾವು ಅರಣ್ಯದಲ್ಲಿರಬೇಕೋ, ಅರಣ್ಯದ ಅಂಚಿನಲ್ಲಿರಬೇಕೋ ಅಥವಾ ಅರಣ್ಯ ತೊರೆದು ಬದುಕಬೇಕೋ ಎಂಬುದನ್ನು ಅವರೇ ನಿರ್ಧರಿಸಬೇಕು. ಅರಣ್ಯದ ಜೊತೆಗಿನ ಅನುಸಂಧಾನದಿಂದಾಗಿಯೇ ಅವರ ಭಾಷೆ, ಕಸುಬು, ಸಂಸ್ಕೃತಿ ಪರಂಪರೆ ಅಸ್ತಿತ್ವದಲ್ಲಿವೆ. ಇದರ ಜೊತೆಗೆ ಬುಡಕಟ್ಟುಗಳು ಮುಖ್ಯವಾಹಿನಿಯ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳುವಂತಾಗಬೇಕು.

1960ರ ಧೇಬರ್ ಆಯೋಗದಿಂದ ಹಿಡಿದು ಇತ್ತೀಚಿನ ಭೂರಿಯಾ ಆಯೋಗದವರೆಗೆ ಸರಿಸುಮಾರು ಆರು ಆಯೋಗಗಳು ಈ ಕುರಿತು ಶಿಫಾರಸುಗಳನ್ನು ಮಾಡಿವೆ. ಆದಿವಾಸಿಗಳ ಮತ್ತು ಅರಣ್ಯದ ನಡುವಿನ ಸಂಬಂಧದ ಕುರಿತು ಸರ್ಕಾರ ಈಗಾಗಲೇ ಅಂಗೀಕರಿಸಿರುವ ಅರಣ್ಯ ನೀತಿಯಲ್ಲಿ ಇರಬಹುದಾದ ಅಡೆತಡೆಗಳನ್ನು ಸರಿಪಡಿಸಲು ಈ ಆಯೋಗಗಳು ಸಲಹೆ, ಸೂಚನೆಗಳನ್ನು ನೀಡಿವೆ. ಅರಣ್ಯ ಮತ್ತು ಆದಿವಾಸಿಗಳ ನಿತ್ಯದ ಸಂಬಂಧಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಆಯೋಗಗಳು ಮಾಡಿದ ಶಿಫಾರಸುಗಳು ನಿಜಕ್ಕೂ ಮಹತ್ವದವು. ಆದರೆ ಈ ಆಯೋಗಗಳ ಶಿಫಾರಸುಗಳನ್ನು ಯಾವ ಸರ್ಕಾರಗಳೂ ಜಾರಿಗೆ ತರುವ ಕಾಳಜಿ ತೋರಿಸಲಿಲ್ಲ. (ಭೂರಿಯಾ ಕಮಿಟಿ ವರದಿಯ ಶಿಫಾರಸುಗಳನ್ನು ಷೆಡ್ಯೂಲ್ಡ್ ಏರಿಯಾದಲ್ಲಿ ಮಾತ್ರ ಜಾರಿಗೆ ತರಲಾಗಿದೆ.)

ಒಂದು ಕಲ್ಯಾಣ ರಾಜ್ಯ ತನ್ನ ನಾಗರಿಕರ ಲೌಕಿಕದ ಇಷ್ಟಾನಿಷ್ಟಗಳನ್ನು ಗೌರವಿಸಿದರೆ ಮಾತ್ರ ಮಾನವ ಹಕ್ಕುಗಳನ್ನು ರಕ್ಷಿಸಿದಂತಾಗುತ್ತದೆ. ಆಧುನಿಕ ಜಗತ್ತಿನ ವಿರೂಪಗಳಿಂದ ಆದಿವಾಸಿಗಳು ಘಾಸಿಗೊಳ್ಳುವುದು ಬೇಡ. ಅವರ ಪಾರಂಪರಿಕ ಹಕ್ಕುಗಳಿಗೆ ಗೌರವ ದೊರೆತರೆ ಆದಿವಾಸಿಗಳು ಹಂತ ಹಂತವಾಗಿ ಆಧುನಿಕ ಬದುಕಿಗೆ ಸಹಜವಾಗಿಯೇ ಮುಖಾಮುಖಿಯಾಗುತ್ತಾರೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !