ಶುಕ್ರವಾರ, ನವೆಂಬರ್ 15, 2019
27 °C

ಗಮನ ಸೆಳೆಯುತ್ತಿದೆ ಅಪರೂಪದ ವಿಶೇಷ ವಿನ್ಯಾಸದ ಮಿರ್ಜಾನ ಕೋಟೆ

Published:
Updated:
Prajavani

ಕರ್ನಾಟಕ ಇತಿಹಾಸದಲ್ಲಿ ಕೋಟೆಗಳ ಶ್ರೇಣಿ ಸಾಲಿನಲ್ಲಿ ಎದ್ದು ನಿಲ್ಲುವ ಅಪರೂಪದ ಕೋಟೆ ಮಿರ್ಜಾನ ಕೋಟೆ. ಅಪರೂಪದ ವಿಶೇಷ ವಿನ್ಯಾಸದ ಈ ಕೋಟೆ ಉತ್ತರ ಕನ್ನಡ ಜಿಲ್ಲೆಯ ಕುಮುಟಾ ತಾಲ್ಲೂಕಿನ ಅಘನಾಶಿನಿ ನದಿಯ ದಂಡೆಯಲ್ಲಿದೆ.

ಕುಮಟಾದಿಂದ ಎಂಟು ಕಿ.ಮೀ. ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಸಪೂರ ರಸ್ತೆಯಲ್ಲಿ ಒಂದು ಕಿ.ಮೀ.ದೂರ ನಡೆದರೆ ಎದುರಿಗೆ ಕಾಣುತ್ತದೆ.

ವಿಶೇಷ ವಿನ್ಯಾಸದ ಕಾರಣದಿಂದ ದೂರದಿಂದಲೇ ಕೋಟೆಯ ಆವರಣದ ಸೊಬಗು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಈ ಕೋಟೆ ಇತರೆ ಕೋಟೆಗಳಿಗಿಂತ ಭಿನ್ನವಾಗಿದೆ. ಈಗಲೂ ಉತ್ತಮ ಸ್ಥಿತಿಯಲ್ಲಿದೆ. ಸ್ಥಳೀಯ ಹಾಗೂ ಹೇರಳವಾಗಿ ಸಿಗುವ ಕೆಂಪುಕಲ್ಲುಗಳು (ಲ್ಯಾಟ್ರೈಟ್) ಈ ಕೋಟೆಯ ಅಂದ ಹೆಚ್ಚಿಸಿವೆ. 

ಕಾರವಾರ – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಈ ಭವ್ಯ ಕೋಟೆ ಸಂಕೀರ್ಣ ಸದಾ ಮಲೆನಾಡಿನ ಮಳೆಗೆ ತೊಯ್ದಂತೆ ಕಾಣುತ್ತದೆ. ಕೋಟೆ ಕಲ್ಲುಗಳು ಅದರ ಮೇಲೆ ಬೆಳೆಯುವ ಹಸಿರು ಪಾಚಿ ಸಸ್ಯ ಇದಕ್ಕೆ ಶೃಂಗಾರವಾಗಿ ನಿಂತಿವೆ.

ಕೋಟೆ ರಾಜಕೀಯವಾಗಿ ವಾಣಿಜ್ಯ ವ್ಯವಹಾರಕ್ಕೆ ಬಳಸಿರುವ ಕುರುಹುಗಳು ಕಾಣುತ್ತವೆ. ಕೋಟೆಯ ವಿಸ್ತೀರ್ಣ 11.5 ಎಕರೆ. 16ನೇ ಶತಮಾನದಲ್ಲಿ ನಿರ್ಮಿಸಿದ್ದಾರೆ. ಗೇರುಸೊಪ್ಪ ಮಹಾರಾಣಿ ಚೆನ್ನಭೈರಾದೇವಿ ಇಲ್ಲಿ ಆಳ್ವಿಕೆ ನಡೆಸುತ್ತಿದ್ದಳು ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ. ಮೊದಲು ವಿಜಯನಗರ ಅರಸರ ಅಧೀನದಲ್ಲಿದ್ದು. ವಿಜಯನಗರ ‘ರಕ್ಕಸದಂಗಡಿ’ ಯುದ್ಧ ಮುಗಿದ ನಂತರ ಶರಾವತಿ ದ್ವೀಪ ಒಂದರಲ್ಲಿ ನೆಲೆಸಿದ್ದಳು. ಇವಳು ಸಾಳ್ವ ವಂಶಸ್ಥಳೆಂದು ನಂತರ ಈ ಕೋಟೆ ಭದ್ರಪಡಿಸಿ ಸುದೀರ್ಘ 54 ವರ್ಷ ರಾಜ್ಯಭಾರ ಮಾಡಿದ ದಾಖಲೆಗಳು ಹೇಳುತ್ತವೆ (1553-1600).

ಸುತ್ತುಕೋಟೆ ರಕ್ಷಣೆಗಾಗಿ ನಾಲ್ಕು ದ್ವಾರಗಳು, ಓಡಾಡಲು ಅಗಲವಾದ ಮೆಟ್ಟಿಲುಗಳಿವೆ. ಒಂದು ಮುಖ್ಯದ್ವಾರ, ಒಂದು ಗುಪ್ತದ್ವಾರವಿದೆ. ಒಂಬತ್ತು ವೃತ್ತಾಕಾರದ ಬಾವಿಗಳಿವೆ.12 ಬುರುಜುಗಳಿವೆ, ಪಾಳುಬಿದ್ದ ದೊಡ್ಡ ದರ್ಬಾರ್ ಹಾಲ್‌ ಇದೆ. ವಿಶಾಲವಾದ ಮಾರುಕಟ್ಟೆ ಪ್ರಾಂಗಣಗಳಿವೆ. ಇಲ್ಲಿಂದ ಮಲೆನಾಡಿನ ವಾಣಿಜ್ಯ ಬೆಳೆಗಳಾದ ಕಾಳುಮೆಣಸು, ಅಡಿಕೆ, ಏಲಕ್ಕಿ, ಶುಂಠಿ, ಗೇರು ಬೀಜ ಇತ್ಯಾದಿ ಹೊರ ದೇಶಕ್ಕೆ ರಪ್ತು ಆಗುತ್ತಿದ್ದವು, ರಾಣಿ ಚೆನ್ನಭೈರಾದೇವಿಗೆ ಪೋರ್ಚುಗೀಸರು ‘ಕಾಳುಮೆಣಸಿನ ರಾಣಿ’ ಎಂದು ಕರೆಯುತ್ತಿದ್ದರು.ಇಲ್ಲಿಂದ ಸೂರತ್ ಇತರೆ ಯೂರೋಪ್ ದೇಶಕ್ಕೆ ಸಂಬಾರ ಪದಾರ್ಥಗಳು ರಪ್ತು ಆಗುತ್ತಿದ್ದವು.

ಕೇಂದ್ರ ಪುರಾತತ್ವ ಸರ್ವೇಕ್ಷಣ ಇಲಾಖೆ ಇದರ ರಕ್ಷಣೆ ಭಾರ ಹೊತ್ತಿದೆ. 2000ನೇ ಇಸವಿಯಲ್ಲಿ ಉತ್ಖನನ ನಡೆದಾಗ ಅಲ್ಲಿ ಪೋರ್ಚುಗೀಸರ ಕಾಲದ ನಾಣ್ಯಗಳು ಸಿಕ್ಕವೆಂದು ಸ್ಥಳೀಯರು ಹೇಳುತ್ತಾರೆ.

ಪ್ರವಾಸಕ್ಕೆ ಪ್ರಾಶಸ್ತ್ಯವಾದ ಸ್ಥಳ ಆದರೂ ಇತಿಹಾಸ ನಿರ್ದಿಷ್ಟ ದಾಖಲೆಗಳು ಲಭ್ಯವಿಲ್ಲ. ಸ್ಥಳ ನಾಮದ ಬಗ್ಗೆ ತಿಳಿದು ಬರಲಿಲ್ಲ, ಗೋಜಲು, ಗೋಜಲಾಗಿದೆ. ಇತಿಹಾಸ ವಿದ್ಯಾರ್ಥಿಗಳು, ಸಂಶೋಧಕರು ಹೆಚ್ಚಿನ ಪರಿಶ್ರಮವಹಿಸಿ ಇತಿಹಾಸಕ್ಕೆ ಬೆಳಕು ಚೆಲ್ಲಬೇಕಾಗಿದೆ.

ಪ್ರತಿಕ್ರಿಯಿಸಿ (+)